ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ನೇತಾಜಿ ಬೋಸ್ ಸಾವು ಅಪಘಾತವಲ್ಲ, ಸಹಜ'

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಏ. 16 : 'ನೇತಾಜಿ' ಸುಭಾಶ್ ಚಂದ್ರ ಬೋಸ್ ಸತ್ತದ್ದು ಹೇಗೆ, ಎಲ್ಲಿ, ಯಾವ ಇಸ್ವಿಯಲ್ಲಿ? ಅವರು ವಿಮಾನ ಅಪಘಾತದಲ್ಲಿ ಮೃತರಾದರಾ, ಅವರನ್ನು ಯಾರಾದರೂ ಹತ್ಯೆ ಮಾಡಿದರಾ ಅಥವಾ ಸಹಜ ಸಾವನ್ನು ಕಂಡರಾ? ಬಹುಶಃ ಈ ಬಗೆಹರಿಯದ, ಚಿದಂಬರ ರಹಸ್ಯಗಳನ್ನು ತುಂಬಿಕೊಂಡಿರುವ ಪ್ರಶ್ನೆಗಳ ಕುರಿತು ಆದಷ್ಟು ಚರ್ಚೆ ಬೇರೆ ಯಾವ ವಿಷಯಕ್ಕೂ ಆಗಿರಲಿಕ್ಕಿಲ್ಲ.

ನೇತಾಜಿ ಸಾವಿನ ರಹಸ್ಯ ಬಯಲಾಗಲೇಬೇಕು ಎಂಬ ಕೂಗು ಪಾತಾಳವನ್ನೂ ತಲುಪಿರುವ ಹಿನ್ನೆಲೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ, ಬ್ರಿಟಿಷರು 1923ರಲ್ಲಿ ರೂಪಿಸಿದ್ದ ಅಧಿಕೃತ ರಹಸ್ಯ ಕಾಯ್ದೆಯ ನಿಮಯಗಳ ಅಡಿಯಲ್ಲಿ ಅಧ್ಯಯನ ಮಾಡಿ, ರಹಸ್ಯ ಭೇದಿಸಲು ಒಂದು ಸಮಿತಿಯನ್ನು ರಚಿಸಿದೆ.

ಬೋಸ್ ಅವರು ವಿಮಾನ ಅಪಘಾತದಲ್ಲೇ ಸಾವಿಗೀಡಾಗಿದ್ದರೆ, ಸಾವಿಗೆ ಸಂಬಂಧಿಸಿದ ಕಡತಗಳನ್ನು ರಹಸ್ಯವಾಗಿಟ್ಟಿದ್ದೇಕೆ ಎಂದು ಸಾರ್ವಜನಿಕರು ಕೇಳುತ್ತಿದ್ದಾರೆ. ನೇತಾಜಿ ಸಾವು ಕುರಿತು, 'ಇಂಡಿಯಾಸ್ ಬಿಗ್ಗೆಸ್ಟ್ ಕವರ್ ಅಪ್' ಪುಸ್ತಕ ಬರೆದಿರುವ ಅನುಜ್ ಧಾರ್ ಅವರು, ನೇತಾಜಿ ಅವರು ಸತ್ತಿದ್ದು 1985ರಲ್ಲಿ, ಅವರದು ಸಹಜ ಸಾವು ಎಂದು ಒನ್ಇಂಡಿಯಾ ಜೊತೆ ನಡೆಸಿದ ಸಂದರ್ಶನದಲ್ಲಿ ಷರಾ ಬರೆದಿದ್ದಾರೆ. ಸಂದರ್ಶನದ ಪೂರ್ಣಪಾಠ ಕೆಳಗಿನಂತಿದೆ.

Anuj Dhar believes that Netaji died in 1985 due to natural causes

ನೇತಾಜಿ ಸಾವಿರ ಕುರಿತು ಅನೇಕ ಊಹಾಪೋಹಗಳಿವೆ. ಈ ವಿಷಯದ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಬೋಸ್ ಅವರು 1985ರಲ್ಲಿ ಫೈಜಾಬಾದ್(ಉತ್ತರಪ್ರದೇಶ)ನಲ್ಲಿ ಸಹಜವಾಗಿ ಸಾವನ್ನಪ್ಪಿದರು ಎಂದು ನಾನು ಬಲವಾಗಿ ನಂಬಿದ್ದೇನೆ. ಅವರು ಅಲ್ಲೇ ಇದ್ದರು. ನಿಖರವಾಗಿ ಹೇಳಬೇಕೆಂದರೆ, 1985ರ ಸೆಪ್ಟೆಂಬರ್ 16ರಂದು ನೇತಾಜಿ ಫೈಜಾಬಾದ್ ನಲ್ಲಿ ಕೊನೆಯುಸಿರೆಳೆದರು. ಅವರನ್ನು ಸ್ಥಳೀಯರು 'ಭಗವಾನ್‌ಜಿ' ಎಂದು ಸಂಬೋಧಿಸುತ್ತಿದ್ದರು. ಅವರು ಕೊನೆಯುಸಿರೆಳೆದಾಗ, ಅವರೇ ನೇತಾಜಿ ಎಂದು ಅವರೆಲ್ಲರಿಗೂ ತಿಳಿದಿತ್ತು.

ಬೋಸ್ ಸಾವಿನ ರಹಸ್ಯ ಬಿಡಿಸಲು ಸರಕಾರ ಸಮಿತಿ ರಚಿಸಿದೆ. ಇದಕ್ಕೇನಂತೀರಿ?

ಸಮಯರಹಣಕ್ಕೆ ಇದೊಂದು ನೆಪ. ಗುಪ್ತಚರ ಇಲಾಖೆ ಹಾಗು ರಿಸರ್ಚ್ ಮತ್ತು ಅನಾಲಿಸಿಸ್ ವಿಂಗ್ (ರಾ)ನಲ್ಲಿ ಇರುವ ಅಧಿಕಾರಿಗಳು ತಮ್ಮ ಹಳೆ ಸಹೋದ್ಯೋಗಿಗಳ ಮಾನ ಕಾಪಾಡಲು ನಿಂತಿದ್ದಾರೆ. ಇಡೀ ದೇಶ ನೇತಾಜಿಯನ್ನು ಕಡೆಗಣಿಸಿದೆ. ಯಾರು ಸತ್ಯಾನ್ವೇಷಣೆಯಲ್ಲಿ ತೊಡಗಿದ್ದಾರೋ ಅವರನ್ನು ದ್ರೋಹಿಗಳೆಂದು ಪರಿಗಣಿಸಲಾಗುತ್ತದೆ. ನೇತಾಜಿ ವಿಮಾನಾಪಘತದಲ್ಲಿ ಸತ್ತಿದ್ದರೆ, ಕಡತಗಳನ್ನು ಮುಚ್ಚಿಡುವ, ಡಿಕ್ಲಾಸಿಫಿಕೇಷನ್ ಮಾಡುವ ಅಗತ್ಯವಾದರೂ ಏನಿದೆ?

ಸಮಿತಿ ಏನು ಮಾಡಬೇಕೆಂದು ನೀವು ಬಯಸುತ್ತೀರಿ?

ಅವರೇನಾದರೂ ಮಾಡ್ತಾರೆ ಅಂತ ನನಗನಿಸುವುದಿಲ್ಲ. ಅವರು ತಮಗೆ ಬೇಕಾದ ಕಡತಗಳನ್ನು ಮಾತ್ರ ವಿಘಟನೆ ಮಾಡುತ್ತಾರೆ. ಎಲ್ಲ ಕಡತಗಳನ್ನು ವಿಘಟನೆ ಮಾಡಿ ರಾಷ್ಟ್ರೀಯ ಪತ್ರಾಗಾರದಲ್ಲಿ ಇಡಬೇಕು. ನೇತಾಜಿ ನಮ್ಮ ಸ್ವಾತಂತ್ರ್ಯ ಹೋರಾಟದಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸಿದ್ದಾರೆ. ಮಹಾತ್ಮಾ ಗಾಂಧಿಗೆ ಸಂಬಂಧಿಸಿದ ಕಡತಗಳನ್ನು ರಹಸ್ಯವಾಗಿಡಲು ಯಾರಾದರೂ ಧೈರ್ಯ ಮಾಡುತ್ತಾರೆಯೆ? ಅದು ಸಾಧ್ಯವೇ ಇಲ್ಲ.

Anuj Dhar believes that Netaji died in 1985 due to natural causes

ಈ ಕುರಿತಂತೆ ಸರಕಾರಕ್ಕೇನು ಗೊತ್ತಿದೆ?

ಹದಿನೈದು ವರ್ಷಗಳ ನನ್ನ ನಿರಂತರ ಸಂಶೋಧನೆಯ ಪ್ರಕಾರ, ನನಗೆ ತಿಳಿದದ್ದೇನೆಂದರೆ ನೇತಾಜಿ ವಿಮಾನ ಅಪಘಾತದಲ್ಲಿ ಸತ್ತಿಲ್ಲ ಎಂದು ಸರಕಾರಕ್ಕೆ ಖಚಿತವಾಗಿ ಗೊತ್ತಿದೆ.

ಹಾಗಾದರೆ ಅದರಲ್ಲಿ ರಹಸ್ಯವಾಗಿಡುವಂಥಾದ್ದು ಏನಿದೆ?

ಸತ್ಯ ಬಹಿರಂಗವಾದರೆ ಇಡೀ ದೇಶದಲ್ಲಿ, ಅದರಲ್ಲೂ ಪಶ್ಚಿಮ ಬಂಗಾಳದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತದೆ ಎಂಬುದು ಸರಕಾರದ ವಾದ. ಆದರೆ, ಸತ್ಯವನ್ನು ಮರೆಮಾಚಲು ಅದು ತಾರ್ಕಿಕ ಕಾರಣವಲ್ಲ. ಕೆಲ ಧಾರ್ಮಿಕ ಕಾರ್ಯಕ್ರಮಗಳಲ್ಲೂ ಕಾನೂನು ವ್ಯವಸ್ಥೆ ಕೆಡುತ್ತದೆ. ಹಾಗಂತ, ಅವನ್ನು ನಿಷೇಧಿಸಲು ಸಾಧ್ಯವೆ? ಇತ್ತೀಚೆಗೆ ಕೇವಲ ಎರಡು ಕಡತಗಳಲ್ಲಿನ ಸತ್ಯ ಬಹಿರಂಗವಾಗಿದ್ದಕ್ಕೆ ಸರಕಾರ ಹಿನ್ನಡೆ ಅನುಭವಿಸಬೇಕಾಯಿತು. ಇನ್ನು ನೇತಾಜಿಗೆ ಸಂಬಂಧಿಸಿದ ಎಲ್ಲ ಕಡತಗಳು ಬಹಿರಂಗವಾದರೆ? ಸ್ವಲ್ಪ ವಿಚಾರಮಾಡಿ.

ಫೈಜಾಬಾದ್ ಕಥೆ ಸರಕಾರಕ್ಕೆ ತಿಳಿದಿದೆಯೆ?

ಆಫ್ ಕೋರ್ಸ್. ಸರಕಾರ ಅವರೊಂದಿಗೆ ಸಂಪರ್ಕದಲ್ಲಿತ್ತು ಮತ್ತು ಅವರ ಭೇಟಿಗೆ ನಿರಂತರವಾಗಿ ಗುಪ್ತಚರರನ್ನು ಕಳುಹಿಸುತ್ತಿತ್ತು. ಆದರೆ, ಕೆಲ ಒತ್ತಡಗಳಿಂದಾಗಿ ನೇತಾಜಿ ಹೊರಬರಲು ಸಾಧ್ಯವಾಗಲಿಲ್ಲ. ಸರಕಾರಕ್ಕೂ ಅದು ಬೇಕಾಗಿರಲಿಲ್ಲ ಮತ್ತು ಸತ್ಯ ಬಹಿರಂಗವಾಗುವುದೂ ಬೇಕಾಗಿರಲಿಲ್ಲ. ನನ್ನನ್ನು ನಂಬಿ, ಆ ಸಮಯದಲ್ಲಿ ಫೀಲ್ಡ್ ಮಾರ್ಷಲ್ ಮಾಣೆಕ್ ಷಾ ಮತ್ತು ರಾ ಚೀಫ್ ಆರ್ ಎನ್ ಕಾವೋ ಕೂಡ ಅವರನ್ನು ಭೇಟಿಯಾಗಿದ್ದರು.

ಅವರು ಹೊರಬರುವುದು ಸರಕಾರಕ್ಕೆ ಏಕೆ ಬೇಡವಾಗಿತ್ತು?

ಇದರಲ್ಲಿ ನೆಹರೂ ಅವರ ಅಭದ್ರತೆ ಮಾತ್ರ ಕಾರಣವಾಗಿರಲಿಲ್ಲ. ನೇತಾಜಿ ಹೊರಬಂದರೆ ಗಾಂಧೀಜಿಯ ಜನಪ್ರಿಯತೆಗೆ ಕೂಡ ಹೊಡೆತ ಬೀಳುತ್ತಿತ್ತು ಎಂಬ ಅನಿಸಿಕೆ ಅವರದಾಗಿತ್ತು. ಇಷ್ಟೊಂದು ವರ್ಷಗಳ ನಂತರ ನೇತಾಜಿ ಇರುವಿನ ಬಗ್ಗೆ ತಿಳಿದರೆ ಅಲ್ಲೋಲಕಲ್ಲೋಲವಾಗುತ್ತದೆ ಎಂಬುದೂ ತಿಳಿದಿತ್ತು. ಹೀಗಾಗಿ ನೇತಾಜಿ ಅವರ ಜೀವನ ರಹಸ್ಯವಾಗಿಯೇ ಉಳಿಯಿತು.

English summary
Anuj Dhar who has authored the book on Netaji titled, 'India’s biggest cover up', says in this interview with Oneindia that he is 100 per cent sure that Netaji Subhash Chandra Bose had died a natural death in 1985.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X