ರಾಜ್ಯದ ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ ಐಸಿಯು ಘಟಕ: ಸಚಿವ ರಮೇಶ್

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಕೆ ಆರ್ ರಮೇಶ್ ಕುಮಾರ್ ಅವರು ಭಾನುವಾರ ಧಾರವಾಡ ಮತ್ತು ಹುಬ್ಬಳ್ಳಿ ಜಿಲ್ಲಾ ಪ್ರವಾಸ ಕೈಗೊಂಡು ಕುಂದಗೋಳದಲ್ಲಿ 30 ರಿಂದ 100 ಹಾಸಿಗೆಗಳ ಕಟ್ಟಡ ಹಾಗೂ ಅದರಗುಂಚಿ ಪ್ರಾಥಮಿಕ ಆರೋಗ್ಯ ಕೇಂದ್ರ ಉದ್ಘಾಟಿಸಿದರು

Written by: ಹುಬ್ಬಳ್ಳಿ ಪ್ರತಿನಿಧಿ
Subscribe to Oneindia Kannada

ಧಾರವಾಡ/ಹುಬ್ಬಳ್ಳಿ, ನವೆಂಬರ್. 28 : ರಾಜ್ಯದ ಎಲ್ಲ ತಾಲ್ಲೂಕು ಆಸ್ಪತ್ರೆಗಳಲ್ಲಿ 3 ಹಾಸಿಗೆಗಳ ತೀವ್ರ ನಿಗಾ ಘಟಕ, ಕೃತಕ ಉಸಿರಾಟ ವ್ಯವಸ್ಥೆ, ಡಯಾಲಿಸಿಸ್ ಘಟಕಗಳನ್ನು ಸ್ಥಾಪಿಸಲಾಗುವದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಕೆ ಆರ್ ರಮೇಶ್ ಕುಮಾರ್ ಹೇಳಿದರು.

ಭಾನುವಾರ ಧಾರವಾಡದ ಕುಂದಗೋಳ ಪಟ್ಟಣದಲ್ಲಿ 30 ರಿಂದ 100 ಹಾಸಿಗೆಗಳಿಗೆ ಮೇಲ್ದರ್ಜೆಗೇರಿಸಿದ ನೂತನ ಆಸ್ಪತ್ರೆ ಕಟ್ಟಡದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಸರಕಾರಿ ಆಸ್ಪತ್ರೆಗಳ ವೈದ್ಯರಿಗೆ ಔಷಧಿ ಖರೀದಿಗೆ ಚೀಟಿ ಬರೆದು ಕೊಡುವದನ್ನು ನಿಲ್ಲಿಸಲು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ವಿಶ್ವ ಆರೋಗ್ಯ ಸಂಸ್ಥೆಯಿಂದ ಮಾನ್ಯತೆ ಪಡೆದ ಉತ್ತಮ ಗುಣಮಟ್ಟದ ಔಷಧಿಗಳನ್ನು ಶೇ.60 ರಿಂದ 70ರಷ್ಟು ರಿಯಾಯಿತಿ ದರದಲ್ಲಿ ಜೆನರಿಕ್ ಔಷಧಿ ಮಳಿಗೆಗಳ ಮೂಲಕ ಪೂರೈಸಲಾಗುವುದು ಎಂದು ಸಚಿವರು ತಿಳಿಸಿದರು.

ಎಲ್ಲ ತಾಲೂಕು ಆಸ್ಪತ್ರೆಗಳಿಗೂ ಬೆಂಗಳೂರಿನ ಜಯದೇವ ಹೃದ್ರೋಗ ಸಂಸ್ಥೆ, ವಾಣಿ ವಿಲಾಸ ಆಸ್ಪತ್ರೆ, ರಾಜೀವಗಾಂಧಿ, ಸಂಜಯ್ ಗಾಂಧಿ ಆಸ್ಪತ್ರೆಗಳು ಹಾಗೂ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯಿಂದ ಟೆಲಿಮೆಡಿಸಿನ್ ಸೌಲಭ್ಯ ಒದಗಿಸಲಾಗುವದು.

ಪ್ರತಿ 10 ಕಿ.ಮೀ.ಅಂತರದಲ್ಲಿ ಅಂಬುಲೆನ್ಸ್ ಸೇವೆ ಒದಗಿಸಲು ಹೊಸ 300 ವಾಹನಗಳನ್ನು ಖರೀದಿಸಲಾಗುತ್ತಿದೆ. ಆಸ್ಪತ್ರೆಗಳಲ್ಲಿ ಕಡಿಮೆ ದರದಲ್ಲಿ ಉತ್ತಮ ಆಹಾರ ಒದಗಿಸಲು ಸಬ್ಸಿಡಿ ದರದ ಕ್ಯಾಂಟೀನ್ ಗಳನ್ನು ತೆರೆಯಲಾಗುವದು ಹಾಗೂ ಕುಂದಗೋಳದಲ್ಲಿನ ಆಸ್ಪತ್ರೆಗೆ ಹೊಸ ಎಕ್ಸ್ ರೇ ಯಂತ್ರ, 27 ಲಕ್ಷ ರೂ. ವೆಚ್ಚದಲ್ಲಿ ವೆಂಟಿಲೇಟರ್ ಸೌಲಭ್ಯ ಕಲ್ಪಿಸಲಾಗುವದು.

ಸಾರ್ವಜನಿಕರು ಖಾಸಗಿ ಆಸ್ಪತ್ರೆಗಳ ಧನದಾಹಕ್ಕೆ, ಆಮಿಷಗಳಿಗೆ ಸೊಪ್ಪು ಹಾಕಬಾರದು ಎಂದು ಸಚಿವ ರಮೇಶ್ ಕುಮಾರ್ ಹೇಳಿದರು.

ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮನವಿ

ಕರ್ನಾಟಕ ರಾಜ್ಯದ ಕಿರಿಯ ಮತ್ತು ಹಿರಿಯ ಆರೋಗ್ಯ ಸಹಾಯಕರು ಮತ್ತು ಮೇಲ್ವಿಚಾರಕರ ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳು, ಆಶಾ ಕಾರ್ಯಕರ್ತೆಯರು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಚಿವರಿಗೆ ಮನವಿ ಸಲ್ಲಿಸಿದರು. ಬೆಟದೂರಿನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪನೆಗೆ ಆಗ್ರಹಿಸಿ ಗ್ರಾಮಸ್ಥರು ಇದೇ ಸಂದರ್ಭದಲ್ಲಿ ಮನವಿ ಸಲ್ಲಿಸಿದರು.

ವೈದ್ಯಾಧಿಕಾರಿಗಳೊಂದಿಗೆ ಸಭೆ

ಕುಂದಗೋಳದ ತಾಲೂಕು ಆಸ್ಪತ್ರೆ ನೂತನ ಕಟ್ಟಡದಲ್ಲಿ ಜಿಲ್ಲೆಯ ವೈದ್ಯಾಧಿಕಾರಿಗಳ ಸಭೆ ನಡೆಸಿದ ಸಚಿವ ರಮೇಶ್ ಕುಮಾರ್. ಬಡವರ ಸೇವೆಗೆ ವೈದ್ಯರು ಮುಂದಾಗಬೇಕು ಎಂದರು. ಕೇವಲ ಎಂ.ಬಿ.ಬಿ.ಎಸ್.ಪದವಿ ಪಡೆದರೆ ವೈದ್ಯರೆನಿಸಿಕೊಳ್ಳುವದಿಲ್ಲ ಗ್ರಾಮೀಣ ಭಾಗದ ಜನರ ನೋವಿಗೆ ಸ್ಪಂದಿಸಿದಾಗ ವೈದ್ಯ ಪದವಿಗೆ ಸಾರ್ಥಕತೆ ಸಿಗುತ್ತದೆ ನಿಮ್ಮ ಎಲ್ಲ ಸಮಸ್ಯೆಗಳಿಗೂ ಸರಕಾರ ಸ್ಪಂದಿಸುತ್ತದೆ ಪ್ರತಿ 15 ದಿನಗಳಿಗೊಮ್ಮೆ ಸಭೆ ನಡೆಸಿ ನಿಮ್ಮ ಅಗತ್ಯತೆಗಳನ್ನು ಆನ್ ಲೈನ್ ಮೂಲಕ ಸಲ್ಲಿಸಿದರೆ ಸರಕಾರ ತ್ವರಿತವಾಗಿ ನಿಮ್ಮ ಬೇಡಿಕೆಗಳನ್ನು ಈಡೇರಿಸಲು ಸಿದ್ಧವಿದೆ ಎಂದರು.

ಅದರಗುಂಚಿ ಪ್ರಾಥಮಿಕ ಆರೋಗ್ಯ ಕೇಂದ್ರ ಉದ್ಘಾಟನೆ

ಹುಬ್ಬಳ್ಳಿ ತಾಲೂಕಿನ ಅದರಗುಂಚಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಕೆ.ಆರ್.ರಮೇಶ್ ಕುಮಾರ್ ಭಾನುವಾರ ಉದ್ಘಾಟಿಸಿದರು.

ಆಶಾ ಕಾರ್ಯಕರ್ತೆಯರ ಸೇವೆ ಅನನ್ಯ

ಉದ್ಯೋಗ ಭದ್ರತೆ, ವೇತನ, ಪಿಂಚಣಿ ಸೌಲಭ್ಯಗಳಿಲ್ಲದೇ ಇಲಾಖೆಗೆ ದುಡಿಯುತ್ತಿರುವ ಆಶಾ ಕಾರ್ಯಕರ್ತೆಯರನ್ನು ಸಮಾಜದ ಎಲ್ಲರೂ ಗೌರವದಿಂದ ಕಾಣಬೇಕು. ಅವರಿಗೆ ಸ್ವ-ಸಹಾಯ ಗುಂಪುಗಳ ಮೂಲಕ ಬಡ್ಡಿ ರಹಿತ ಸಾಲ, ಆಶಾ ಕಾರ್ಯಕರ್ತೆಯರ ಮಕ್ಕಳಿಗೆ ವಸತಿ ಶಾಲೆಗಳಲ್ಲಿ ಮೀಸಲಾತಿ ಹಾಗೂ ರಾಜೀವ ಗಾಂಧಿ ಗೃಹ ನಿಗಮದಿಂದ ವಸತಿ ಸೌಲಭ್ಯ ಕಲ್ಪಿಸಲಾಗುವದು ಎಂದು ಸಚಿವ ರಮೇಶ್ ಕುಮಾರ್ ಹೇಳಿದರು.

ಆಯುಷ್ ವೈದ್ಯರಿಗೆ ತರಬೇತಿ

ಗ್ರಾಮೀಣ ಭಾಗಗಳ ಆಸ್ಪತ್ರೆಗಳಲ್ಲಿ ಉತ್ತಮ ವಾತಾವರಣ ಕಾಪಾಡಿಕೊಳ್ಳಲು ಸೂಚಿಸಿದರು. ಸಮಗ್ರ ಆರೋಗ್ಯ ಪದ್ಧತಿಗಳಡಿ ಆಯುಷ್ ವೈದ್ಯರಿಗೆ 6 ತಿಂಗಳ ಅವಧಿಯ ಫಾರ್ಮಿಕಾಲಜಿ ತರಬೇತಿ ನೀಡಲಾಗುವುದು ಎಂದರು.

English summary
Inaugurating the taluk hospitals at Kundagol here, Health Minister K.R. Ramesh Kumar said on Sunday, all taluk-level public hospitals would be upgraded with Intensive Care Units (ICU) and generic medicine shops.
Please Wait while comments are loading...