ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾಂಗ್ರೆಸ್ ವೇದವ್ಯಾಸ ಕೌಲಗಿಯಿಂದ ಪ್ರಹ್ಲಾದ್ ಜೋಶಿಗೆ ಬಹಿರಂಗ ಪತ್ರ

By ಹುಬ್ಬಳ್ಳಿ ಪ್ರತಿನಿಧಿ
|
Google Oneindia Kannada News

ಹುಬ್ಬಳ್ಳಿ, ಫೆಬ್ರವರಿ, 04: ಹುಬ್ಬಳ್ಳಿ-ಧಾರವಾಡ ಜಿಲ್ಲಾ ಕಾಂಗ್ರೆಸ್ ವಕ್ತಾರ ವೇದವ್ಯಾಸ ಕೌಲಗಿ ಅವರು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಸಂಸದ ಪ್ರಹ್ಲಾದ ಜೋಶಿಯವರಿಗೆ ಬಹಿರಂಗ ಪತ್ರ ಬರೆದು ಹಲವಾರು ಸವಾಲುಗಳನ್ನು ಹಾಕಿದ್ದು, ಜೋಶಿ ಅವರ ಉತ್ತರ ಇನ್ನೂ ದೊರೆತಿಲ್ಲ.

ಸ್ಮಾರ್ಟ್ ಸಿಟಿ ವಿಚಾರದಲ್ಲಿ ವೇದವ್ಯಾಸ ಕೌಲಗಿ ಅವರು ಬರೆದ ಬಹಿರಂಗ ಪತ್ರಕ್ಕೆ ಪ್ರಹ್ಲಾದ ಜೋಶಿಯವರ ಪ್ರತಿಕ್ರಿಯೆ ಏನು ಎಂಬುದು ಮಾತ್ರ ತಿಳಿದುಬಂದಿಲ್ಲ. ಆದರೆ ಕೌಲಗಿ ಅವರು ಇದರಲ್ಲಿ ಹಲವಾರು ಪ್ರಶ್ನೆಗಳನ್ನು ಕೇಳಿ ಉತ್ತರಕ್ಕಾಗಿ ಕಾಯುತ್ತಿದ್ದಾರೆ.

ಹುಬ್ಬಳ್ಳಿ-ಧಾರವಾಡ ಜಿಲ್ಲಾ ಕಾಂಗ್ರೆಸ್ ವಕ್ತಾರ ವೇದವ್ಯಾಸ ಕೌಲಗಿ ಅವರು ಬರೆದ ಪತ್ರದಲ್ಲಿ ಏನಿದೆ?

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಡಳಿತ ಪಕ್ಷದ ವಿರೋಧವಾಗಿ ವಿರೋಧ ಪಕ್ಷಗಳು ಟೀಕೆ ಮಾಡುವುದು ಸಹಜ. ಆದರೆ ಟೀಕೆಗಳು ವಾಸ್ತವಿಕತೆ ಹಾಗೂ ವೈಚಾರಿಕತೆಯಿಂದ ಕೂಡಿರಬೇಕು. ಆದರೆ ಸಂಸದ ಜೋಶಿಯವರೇ ತಾವು ಹಲವು ಬಾರಿ ಕಾಂಗ್ರೆಸ್ ಪಕ್ಷವನ್ನು ಅನವಶ್ಯಕ ಹಾಗೂ ಅಸಬಂದ್ಧವಾಗಿ ಟೀಕಿಸಿದ್ದು, ಇದೀಗ ಅದಕ್ಕೆ ಪುಷ್ಠಿ ನೀಡುವಂತೆ ಕಳಸಾ-ಬಂಡೂರಿ ವಿಳಂಬವಾಗಲು ಮುಖ್ಯಮಂತ್ರಿಗಳೇ ಕಾರಣವೆಂದು ಹುಬ್ಬಳ್ಳಿಯಲ್ಲಿ ನೀವು ಹೇಳಿದ ಹೇಳಿಕೆಗೆ ಪ್ರತ್ಯುತ್ತರವಾಗಿ ಈ ಪತ್ರ ಬರೆಯುತ್ತಿದ್ದೇನೆ.[ಹುಬ್ಬಳ್ಳಿಗೆ ಸ್ಮಾರ್ಟ್ ಸಿಟಿ ಕೈತಪ್ಪಲು ಸಿದ್ಧರಾಮಯ್ಯ ಕಾರಣ: ಜೋಶಿ]

Hubballi-Dharwad Congress spokesperson Vedavyas writes open letter to Prahlad Joshi

ರೈತರ ಬಗ್ಗೆ ಯೋಚಿಸಿದ್ದೀರಾ?

ಕಳೆದ 12 ವರ್ಷಗಳಿಂದ ಸಂಸದರಾಗಿರುವ ನೀವು ಒಮ್ಮೆಯಾದರೂ ರೈತರ ಬಗ್ಗೆ ಪ್ರಾಮಾಣಿಕ ಚಿಂತನೆ ಮಾಡಿದ್ದೀರಾ? ದೇಶಾಭಿಮಾನದ ಹೆಸರಿನಲ್ಲಿ ಹಿಂದೂ ಮುಸ್ಲಿಂರ ಮಧ್ಯೆ ದ್ವೇಷ ಹುಟ್ಟಿಸಿ ರಾಜಕೀಯ ಬೇಳೆ ಬೇಯಿಸಿಕೊಂಡ ನೀವುಗಳು ನಿಮ್ಮ ಜೀವನದುದ್ದಕ್ಕೂ ಒಮ್ಮೆಯಾದರೂ ಬಡವರು, ರೈತರು, ಶೋಷಿತರ ಪರ ಬೀದಿ ಹೋರಾಟ ಮಾಡಿದ್ದೀರಾ? ಕೇವಲ ಜಾತಿ ಜಾತಿಯಲ್ಲಿ ಭೇದ ಹುಟ್ಟಿಸುವ ಸಾರ್ವಜನಿಕರನ್ನು ಪ್ರಚೋದಿಸುವ ಹೋರಾಟವೇ ನಿಮ್ಮಗಳ ಮೂಲ ಮಂತ್ರವಾಗಿದೆ.

ಈದ್ಗಾ ಪ್ರಕರಣವನ್ನೇ ರಾಜಕೀಯ ಬಂಡವಾಳ ಮಾಡಿಕೊಂಡಿರಿ

1994ರಲ್ಲಿ ಇದೇ ಈದ್ಗಾ ಪ್ರಕರಣದಲ್ಲಿಯೇ ಜಗದೀಶ ಶೆಟ್ಟರ್ ರವರು ವಿಧಾನಸಭೆ ಪ್ರವೇಶಿಸಿದರು. ನೀವು 1996ರಲ್ಲಿ ಇದನ್ನೇ ಬಂಡವಾಳ ಮಾಡಿಕೊಂಡು ಪಶ್ಚಿಮ ಪದವೀಧರ ಮತ ಕ್ಷೇತ್ರದಿಂದ ಹೆಚ್.ಕೆ. ಪಾಟೀಲರ ವಿರುದ್ಧ ಸ್ಫರ್ಧಿಸಿ ಸೋಲುಂಡಿರಿ. ಈದ್ಗಾ ಮೈದಾನ ಹೋರಾಟದಲ್ಲಿ ಅಂದು ಬಿಜೆಪಿ, ಆರೆಸ್ಸೆಸ್ ನವರು ಕಾಂಗ್ರೆಸ್ ಪಕ್ಷದವರು ಕೊನೆವರೆಗೂ ಹೋರಾಟಕ್ಕೆ ಕೂಡಿಸಿದ ಹಣದ ಲೆಕ್ಕ ಕೊಡಲಿಲ್ಲವೆಂದು ಆಪಾದನೆ ಮಾಡುತ್ತಲೇ ಬಂದರು.

2014ರಲ್ಲಿ ಕ್ಷೇತ್ರ ಪ್ರಚಾರ ಕೈಗೊಳ್ಳಲಿಲ್ಲ

2004ರಲ್ಲಿ ವಾಜಪೇಯಿಯವರ ಗಾಳಿಯಲ್ಲಿ, 2009ರಲ್ಲಿ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗುವುದಕ್ಕೆ ಇಡೀ ಲಿಂಗಾಯಿತ ಸಮುದಾಯದವರು ಬೆಂಬಲ ನೀಡಿದರು. 2014ರಲ್ಲಂತೂ ಒಮ್ಮೆಯೂ ನೀವು ಅಪ್ಪಿತಪ್ಪಿ ನಿಮಗೆ ಮತ ಕೇಳಲಿಲ್ಲ. ಮೋದಿಯರಿಗೆ, ಮೋದಿ ಸರಕಾರಕ್ಕೆ ಮತ ನೀಡಿರೆಂದು ಕೇಳಿದ್ದಲ್ಲದೇ ರಾಜ್ಯಾಧ್ಯಕ್ಷರಾಗಿ ನೀವು ಯಾವ ಕ್ಷೇತ್ರಕ್ಕೂ ಪ್ರಚಾರಕ್ಕೆ ಹೋಗಲಿಲ್ಲ.

ನೀವು ಹಾಗೂ ಶೆಟ್ಟರ್ ಅವರು ಅಂದು ಈದ್ಗಾ ಮೈದಾನದಲ್ಲಿ ಧ್ವಜಾರೋಹಣಕ್ಕಾಗಿ ನಡೆದ ಗಲಾಟೆಯಲ್ಲಿ ದೇಶಪಾಂಡೆ ನಗರದ ಕೆಲವು ಅಮಾಯಕರು ಪ್ರಾಣ ಕಳೆದುಕೊಂಡರು. ಅವರ ನೆನಪಿಗೆ ರೋಟರಿ ಸ್ಕೂಲ್ ಎದುರು ಸ್ಮಾರಕ ನಿರ್ಮಾಣ ಮಾಡುವವರೆಗೆ ಹೋರಾಟ ಮಾಡಿದ್ದೀರಿ. ಆದರೆ ಇದುವರೆಗೆ ಆಗಸ್ಟ್ 15 ಅಥವಾ ಜನವರಿ 26ಕ್ಕೆ ನೀವು ಹಾಗೂ ಶೆಟ್ಟರ್ ಒಮ್ಮೆಯಾದರೂ ಅವರ ಸ್ಮಾರಕಕ್ಕೆ ಹೋಗಿ ಶ್ರದ್ಧಾಂಜಲಿ ಸಲ್ಲಿಸಿದ್ದೀರಾ? ಅವರ ಹೆಣದ ಮೇಲೆ ನಿಮ್ಮ ರಾಜಕೀಯ ಬೇಳೆ ಬೇಯಿಸಿಕೊಂಡ ನಿಮಗೆ ಅವರ ನೆನಪಾದರೂ ಇದೆಯಾ?[ಮಹದಾಯಿ ಜಲವಿವಾದ : ಮುರಿದು ಬಿತ್ತು ಮಾತುಕತೆ ಪ್ರಸ್ತಾಪ?]

ಕಳಸಾ-ಬಂಡೂರಿ ಪ್ರಸ್ತಾಪ

ಕಳಸಾ- ಬಂಡೂರಿ ಹೋರಾಟದಲ್ಲಿ ಕಳೆದ 200 ದಿನಗಳಿಂದ ಭಾಗವಹಿಸಿದ ರೈತರಿಗೆ ರಾಜ್ಯ ಸರ್ಕಾರದೊಂದಿಗೆ ಕೈ ಜೋಡಿಸಿ ಪ್ರಧಾನಿಯವರನ್ನು ಒಪ್ಪಿಸಿ ನಿಮಗೆ ನೀರು ಕೊಡಿಸುವವರೆಗೆ ವಿಶ್ರಮಿಸುವುದಿಲ್ಲವೆಂದು ಒಮ್ಮೆಯಾದರೂ ಹೇಳಿದ್ದೀರಾ? ನೀವು ಪರಿಸ್ಥಿತಿಯ ದುರ್ಲಾಭ ಪಡೆಯುತ್ತೀರಿ ಎನ್ನುವುದಕ್ಕೆ ನವಲಗುಂದ ತಾಲೂಕ ಹಳ್ಳಿಕೇರಿ ಗ್ರಾಮದಲ್ಲಿ ನಡೆದ ಚಿಕ್ಕ ಗಲಭೆ ವೀಕ್ಷಿಸಲು ಹೋದಾಗ ನೀವು ಹಿಂದೂಗಳಿಗೆ ರಕ್ಷಣೆ ಇಲ್ಲ ಎಂದು ಹೇಳುವ ಮೂಲಕ ಉರಿಯುವ ಬೆಂಕಿಗೆ ತುಪ್ಪ ಸುರಿದಿರಿ.

ಕಳಸಾ ಬಂಡೂರಿ ವಿಚಾರದಲ್ಲಿ ರೈತರು, ಮಠಾಧೀಶರೊಂದಿಗೆ ಮುಖ್ಯಮಂತ್ರಿಗಳ ನೇತೃತ್ವದ ಸರ್ವಪಕ್ಷ ನಿಯೋಗ ಪ್ರಧಾನಿ ನರೇಂದ್ರ ಮೋದಿ ತೆರಳಿದಾಗ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಪ್ರಧಾನಿಯವರ ಕಾಲಿಗೆ ಬೀಳುವುದೊಂದು ಮಾತ್ರ ಉಳಿದಿತ್ತು. ಅಷ್ಟೊಂದು ಕಳಕಳಿಯಿಂದ ಹೇಳಿದರು ಎಂದು ಬಹಿರಂಗವಾಗಿ ರೈತ ಮುಖಂಡರು ಮಾಧ್ಯಮಗಳಿಗೆ ಹೇಳಿದ್ದಾರೆ. ಆದರೆ ನೀವು ಹಾವೇರಿಯಲ್ಲಿ ನಡೆದ ರೈತ ಚೈತನ್ಯ ಯಾತ್ರೆಯಲ್ಲಿ ಸಿದ್ಧರಾಮಯ್ಯನವರು ಪ್ರಧಾನಿ ಬಳಿ ಹೋದಾಗ ತೂಕಡಿಸುತ್ತಿದ್ದರೆಂದು ಹಸಿ ಸುಳ್ಳು ಹೇಳಿದಿರಿ.

Hubballi-Dharwad Congress spokesperson Vedavyas writes open letter to Prahlad Joshi

ನೀವು ಎಂದಾದರೂ ಹೊಲದಲ್ಲಿ ಕೆಲಸ ಮಾಡಿದ್ದೀರಾ?

ಅಷ್ಟೇ ಅಲ್ಲ ಹಸಿರು ಶಾಲು ಹೊದ್ದವರೆಲ್ಲ ರೈತರಲ್ಲ ಎಂದು ಹೇಳಿದ ನೀವು ಹಾವೇರಿಯಲ್ಲಿ ಹಸಿರು ಶಾಲು ಹೊದ್ದಿದ್ದೀರಿ. ನೀವು ರೈತರೇ? ನೀವು ಎಂದಾದರೂ ಹೊಲದಲ್ಲಿ ಕೆಲಸ ಮಾಡಿದ್ದೀರಾ? ಆದರೆ ಸಿದ್ಧರಾಮಯ್ಯನವರು ರೈತರಾಗಿ, ಹೊಲದಲ್ಲಿ ಕೆಲಸ ಮಾಡಿದವರಾಗಿದ್ದಾರೆ. ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಸಭೆಗಳಲ್ಲಿ ತಾವು ತೂಕಡಿಸುವುದರ ಬಗ್ಗೆ ಬಹಿರಂಗವಾಗಿ ತಮಗಿರುವ ರೋಗದ ಬಗ್ಗೆ ಹೇಳಿದ್ದಲ್ಲದೇ ಅದನ್ನು ಯೋಗದಿಂದ ಕಡಿಮೆ ಮಾಡಿಕೊಂಡಿರುವುದಾಗಿ ಹೇಳಿದ್ದರೂ ನೀವು ಸಿದ್ಧರಾಮಯ್ಯನವರಿಗೆ ನಿದ್ರಾಮಯ್ಯರೆಂದು ವ್ಯಂಗ್ಯವಾಗಿ ಮಾತನಾಡುತ್ತೀರಿ.

ಧಾರವಾಡಕ್ಕೆ ಐಐಟಿ ಬರಲು ಸಾಕಷ್ಟು ಶ್ರಮಿಸಿದ ಹಾಗೂ ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದಲ್ಲಿ ಗ್ರಾಹಕರ ತರಬೇತಿ ಕೇಂದ್ರ ಸ್ಥಾಪಿಸುವ ಯೋಜನೆ ತಂದ ದಿನೇಶ ಗುಂಡೂರಾವ್ ಅವರಿಗೆ ನೀವು ಅಂದು ಅವರು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಅತಿಥಿ ನಟರಂತೆ ಬರುತ್ತಾರೆಂದು ವ್ಯಂಗ್ಯೋಕ್ತವಾಗಿ ಮಾತನಾಡಿದ್ದೀರಿ.

ಮಾಜಿ ಸಂಸದೆ ರಮ್ಯಾ ಅವರಿಗೆ ಅವಮಾನ

ಅಷ್ಟೇ ಅಲ್ಲ ಇತ್ತೀಚೆಗೆ ಸಭೆಯೊಂದರಲ್ಲಿ ಮಾಜಿ ಸಂಸದೆ ರಮ್ಯಾ ಅವರಿಗೆ ರಮ್ಯಾ ಅವರಿಗೆ ಕೆಲಸವಿಲ್ಲ ರಾಹುಲ್ ಗಾಂಧಿ ಮೆಚ್ಚಿಸಲು ಎಲ್ಇಡಿ ಬಲ್ಬ್ ಪ್ರಚಾರಕ್ಕಾಗಿ ಭಾಗವಹಿಸಿದ್ದಾರೆಂದು ಒಬ್ಬ ಮಹಿಳೆಯ ಬಗ್ಗೆ ಕೀಳು ಮಾತನಾಡಿದ್ದೀರಿ. ಇದು ನಿಮ್ಮ ಪಕ್ಷದ ಸಂಸ್ಕೃತಿಯೇ ಇರಬಹುದು. ಸಭೆಯೊಂದರಲ್ಲಿ ರಾಜ್ಯ ಸರಕಾರ ಕತ್ತೆ ಕಾಯುತ್ತಿದೆಯೆಂದು ಹೇಳುವ ಮೂಲಕ ರಾಜ್ಯದ ಜನತೆಯನ್ನು ಕತ್ತೆಗೆ ಹೋಲಿಸಿದ್ದೀರಿ.[ವಿಧಾನಪರಿಷತ್ ಸ್ಥಾನ ಬೇಡವೆಂದ್ರು ಮಾಜಿ ಸಂಸದೆ ರಮ್ಯಾ]

ರೈತರಿಗೆ ಸಾಂತ್ವನ ಹೇಳಲೇ ಇಲ್ಲ

ಈಗ ಕಳಸಾ ಬಂಡೂರಿ ಯೋಜನೆಯನ್ನು ಮಾತುಕತೆ ಮೂಲಕ ಬಗೆ ಹರಿಯುವುದೆಂಬ ಆಶಾ ಭಾವನೆಯಿಂದ ಚಾತಕ ಪಕ್ಷಿಯಂತೆ ಕುಳಿತಿದ್ದ ರೈತರಿಗೆ ಇದೀಗ ಕೇಂದ್ರ ಜಲ ಸಂಪನ್ಮೂಲ ಸಚಿವೆ ಉಮಾಭಾರತಿಯವರ ಪತ್ರ ಹಾಗೂ ಗೋವಾ ಮುಖ್ಯಮಂತ್ರಿಗಳ ಪತ್ರದಿಂದ ಬಹು ದೊಡ್ಡ ಆಘಾತವಾಗಿದೆ.
ಜವಾಬ್ದಾರಿ ಸ್ಥಾನದಲ್ಲಿರುವ ನೀವು ರೈತರಿಗೆ ಗಾಬರಿಯಾಗಬೇಡಿ, ನಿರಾಶರಾಗಬೇಡಿ ರಾಜ್ಯದ 17 ಜನ ಸಂಸದರು, ಪ್ರಧಾನಿಯವರ ಹತ್ತಿರ ಹೋಗಿ ಮಾತುಕತೆಗೆ ಕೈ ಮುಗಿದು ಒಪ್ಪಿಸುತ್ತೇವೆಯೆಂದು ರೈತರಲ್ಲಿ ಆತ್ಮ ವಿಶ್ವಾಸವನ್ನು ತುಂಬುವುದನ್ನು ಬಿಟ್ಟು, ತಾವು ಈ ರೀತಿ ನಡೆಯಲು ಮುಖ್ಯಮಂತ್ರಿ ಸಿದ್ಧರಾಮಯ್ಯನವರೇ ಕಾರಣ. ಎರಡೂ ರಾಜ್ಯಗಳ ಕಾಂಗ್ರೆಸ್ ನಾಯಕರುಗಳೊಂದಿಗೆ ಮಾತನಾಡಬೇಕಿತ್ತು, ಸೋನಿಯಾ ಗಾಂಧಿ, ರಾಹುಲ್ ಗಾಂಧಿಯವರು ಮಧ್ಯ ಪ್ರವೇಶಿಸಬೇಕೆಂದು ಇದೆಲ್ಲ ಹಿಂದಿನ ಸರ್ಕಾರಗಳ ಕೊಡುಗೆಯೆಂದು ಹೇಳುವ ಮೂಲಕ ಕೀಳು ಮಟ್ಟದ ರಾಜಕೀಯ ಮಾಡುತ್ತಿರುವುದು ನಾಚಿಕೆಗೇಡಿತನ ಸಂಗತಿ.

Hubballi-Dharwad Congress spokesperson Vedavyas writes open letter to Prahlad Joshi

ಲೋಕಸಭಾ ಸದಸ್ಯ ಶಿವಕುಮಾರ ಉದಾಸಿ ಉಮಾಭಾರತಿಯವರ ಪತ್ರ ಮುಚ್ಚಿಟ್ಟುಕೊಂಡದ್ದು ಯಾಕೆ?

ತಾವು ಸಧ್ಯ ಏನೇ ಹೇಳಿದರೂ ರೈತರ ನಿಮ್ಮನ್ನು ನಂಬುವುದಿಲ್ಲ. ಮುಖ್ಯಮಂತ್ರಿಗಳನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸುವ ಪ್ರಯತ್ನ ಮಾಡಿದರೆ ಜನತೆ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ. ಡಿಸೆಂಬರ್ ನಲ್ಲಿ ಕೇಂದ್ರ ಜಲ ಸಂಪನ್ಮೂಲ ಸಚಿವೆ ಉಮಾಭಾರತಿಯವರ ಪತ್ರ ಬಂದರೂ ಈವರೆಗೆ ತಡೆದ ಕಾರಣವನ್ನು ರಾಜ್ಯ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲರು ಹೇಳಿದ್ದಾರೆ. ಅಲ್ಲದೇ ರಾಜ್ಯಕ್ಕೆ ಬರೆದ ಪತ್ರವನ್ನೇ ಲೋಕಸಭಾ ಸದಸ್ಯ ಶಿವಕುಮಾರ ಉದಾಸಿಯವರಿಗೂ ಬರೆದಿದ್ದಾರೆ. ಹಾಗಿದ್ದರೆ ಅವರೇಕೆ ಆ ಪತ್ರ ಮುಚ್ಚಿಟ್ಟುಕೊಂಡರು ಎಂದು ಸಚಿವ ಪಾಟೀಲರು ಪ್ರಶ್ನಿಸಿದ್ದಾರೆ.

ಕಾಂಗ್ರೆಸ್ ಪಕ್ಷ ಬಿಜೆಪಿಯಂತೆ ಚುನಾವಣೆಯ ಸಮಯದಲ್ಲಿ ಕೋಮು ಗಲಭೆ ಎಬ್ಬಿಸಿಲ್ಲ

ಜೋಶಿಯವರೇ ಕಾಂಗ್ರೆಸ್ ಪಕ್ಷವು ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಚುನಾವಣೆಯ ಸಂದರ್ಭದಲ್ಲಿ ಎರಡೂ ಪತ್ರಗಳನ್ನು ಬಿಡುಗಡೆ ಮಾಡಿ ದುರ್ಲಾಭ ಪಡೆಯುವಷ್ಟು ಕಾಂಗ್ರೆಸ್ ಗತಿಗೆಟ್ಟಿಲ್ಲ. ಕಾಂಗ್ರೆಸ್ ಪಕ್ಷ ಬಿಜೆಪಿಯಂತೆ ಚುನಾವಣೆಯ ಸಮಯದಲ್ಲಿ ಕೋಮು ಗಲಭೆ ಎಬ್ಬಿಸುವುದು, ಸಚಿವರು ಮಾಡಿದ ಅಧಿಕಾರಿಗಳ ವರ್ಗಾವಣೆಯನ್ನೇ ಬಂಡವಾಳ ಮಾಡಿಕೊಳ್ಳುವುದು, ಪ್ರಧಾನಿ ಮೋದಿಯವರ ಹೆಸರನ್ನು ಹಳ್ಳಿಗರಿಗೆ ಹೇಳಿ ಮೋಸ ಮಾಡುವುದು, ಇವೆಲ್ಲ ದುರ್ಲಾಭ ಪಡೆಯುವುದು ಬಿಜೆಪಿ ಪಕ್ಷದ್ದಾಗಿದೆ. [ಕರ್ನಾಟಕ ವಿಧಾನಪರಿಷತ್ತಿನಲ್ಲಿ ಕೆಲಸ ಖಾಲಿ ಇದೆ]

ಕಾಂಗ್ರೆಸ್ ಕಾರ್ಯಕ್ರಮಗಳ ಮೂಲಕ ಚುನಾವಣೆಯನ್ನು ಎದುರಿಸುತ್ತದೆ. ಜೋಶಿಯವರೇ ತಾವು ಮುಖ್ಯಮಂತ್ರಿಗಳನ್ನು ಟೀಕಿಸುವ ಭರದಲ್ಲಿ ರೈತರಿಗೆ ಮೋಸ ಮಾಡಿದರೆ ರೈತರು ನಿಮ್ಮನ್ನು ಸುಮ್ಮನೇ ಬಿಡಲಾರರು. ಇದಕ್ಕೆ ತಾವು ಪ್ರತಿಕ್ರಿಯೆ ನೀಡುವಿರೆಂದು ನಂಬಿದ್ದೇನೆ.

English summary
Hubballi-Dharwad Congress spokesperson Vedavyas Kaulagi has written an open letter to BJP president Pralhad Joshi on Wednesday, 3rd February. He has blamed Joshi of neglecting farmers of Karnataka. Joshi too had blamed Siddaramaiah for delaying Kalasa-Banduri irrigation project.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X