ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಂಗ್ರೆಸ್ ತೊರೆದು ನಡೆದ ಜಯಂತಿ ನಟರಾಜನ್ ಯಾರು?

By Prasad
|
Google Oneindia Kannada News

ಮೂರು ದಶಕಗಳ ಕಾಲ ನೆಹರೂ-ಗಾಂಧಿ ಕುಟುಂಬಕ್ಕೆ ನಿಷ್ಠಳಾಗಿ ದುಡಿದಿದ್ದರೂ, ತನಗನಿಸಿದ್ದನ್ನು ತಡಬಡಿಸದೆ ಹೇಳುವ ನೇರನುಡಿಯ ದಿಟ್ಟಗಾತಿ, ರಾಹುಲ್ ಗಾಂಧಿಯನ್ನು ಎದುರುಹಾಕಿಕೊಂಡ ಗಟ್ಟಿಗಿತ್ತಿ, 60 ವರ್ಷದ ಜಯಂತಿ ನಟರಾಜನ್, ತಮ್ಮನ್ನು ಕಡೆಗಣಿಸಿದ ನೋವಿನಿಂದ ಕಾಂಗ್ರೆಸ್ಸಿಗೆ ಗುಡ್ ಬೈ ಹೇಳಿದ್ದಾರೆ.

ಯುಪಿಎ II ಸರಕಾರದಲ್ಲಿ ಪರಿಸರ ಮಂತ್ರಿಯಾಗಿದ್ದ ಹಿರಿಯ ಕಾಂಗ್ರೆಸ್ಸಿಗ, 1963ರಿಂದ 1967ವರೆಗೆ ತಮಿಳುನಾಡಿನ ಮಾಜಿ ಮುಖ್ಯಮಂತ್ರಿಯಾಗಿದ್ದ ಎಂ ಭಕ್ತವತ್ಸಲಮ್ ಅವರ ಮಗಳು. ತಂದೆಯ ಹಾದಿಯಲ್ಲೇ ನಡೆದು ಕಾಂಗ್ರೆಸ್ಸನ್ನು 1980ರಲ್ಲಿ ಸೇರುವ ಮೊದಲು ಅವರು ಮದ್ರಾಸ್ ಹೈಕೋರ್ಟಿನಲ್ಲಿ ವಕೀಲೆಯಾಗಿದ್ದರು. ಕೆಲ ಕಾಲ ಮದ್ರಾಸ್ ದೂರದರ್ಶನದಲ್ಲಿಯೂ ಕೆಲಸ ಮಾಡಿದ್ದರು.

ಹಲವಾರು ವರ್ಷಗಳ ಕಾಲ ಕಾಂಗ್ರೆಸ್ಸಿನ ಅಧಿಕೃತ ರಾಷ್ಟ್ರೀಯ ವಕ್ತಾರೆಯಾಗಿದ್ದ ಜಯಂತಿ ನಟರಾಜನ್, ನಾಗರಿಕ ವಿಮಾನಯಾನ ರಾಜ್ಯ ಖಾತೆ ಮಂತ್ರಿಯಾಗಿ, ಪರಿಸರ ಸಚಿವೆಯಾಗಿ ಹಲವಾರು ಹುದ್ದೆಗಳನ್ನು ಅಲಂಕರಿಸಿದವರು. ಹೇಳಬೇಕಾಗಿದ್ದನ್ನು ಅತ್ಯಂತ ಸ್ಪಷ್ಟ ಪದಗಳಲ್ಲಿ, ತಿಳಿಯುವಂತೆ ಹೇಳುವುದರಲ್ಲಿ ನಿಸ್ಸೀಮರಾಗಿದ್ದ ಅವರು ಪಕ್ಷದಲ್ಲಿಯೂ ಅಪಾರ ಗೌರವ ಸಂಪಾದಿಸಿದ್ದರು. [ಕಾಂಗ್ರೆಸ್ಸಿಗೆ ಗುಡ್ ಬೈ ಹೇಳಿದ ಜಯಂತಿ]

Who is Jayanthi Natarajan

ವಕೀಲೆಯಾಗಿದ್ದ ಅವರಲ್ಲಿನ ಪ್ರತಿಭೆಯನ್ನು ಪ್ರಥಮಬಾರಿಗೆ ಗುರುತಿಸಿದ್ದು ಮಾಜಿ ಪ್ರಧಾನಿ ರಾಜೀವ್ ಗಾಂಧಿ. ಅವರ ಮಾತಿಗೆ ಓಗೊಟ್ಟು 1980ರಲ್ಲಿ ಕಾಂಗ್ರೆಸ್ ಸೇರಿದ ಅವರನ್ನು ರಾಜೀವ್ ಗಾಂಧಿ ಅವರು 1986ರಲ್ಲಿ ರಾಜ್ಯಸಭಾ ಸದಸ್ಯೆಯನ್ನಾಗಿ ಮಾಡಿದರು. ನಂತರ 1992, 1997 ಮತ್ತು 2008ರಲ್ಲಿ ಮತ್ತೆ ರಾಜ್ಯಸಭೆಗೆ ಅವರು ಆಯ್ಕೆಯಾಗಿದ್ದರು.

1996ರಲ್ಲಿ ಅಂದಿನ ಪ್ರಧಾನಿಯಾಗಿದ್ದ ಪಿ.ವಿ. ನರಸಿಂಹರಾವ್ ಅವರೊಂದಿಗಿನ ಭಿನ್ನಾಭಿಪ್ರಾಯದಿಂದಾಗಿ ಕಾಂಗ್ರೆಸ್ ಪಕ್ಷವನ್ನು ತೊರೆದು, ತಮಿಳುನಾಡಿನಲ್ಲಿ ಜಿಕೆ ಮೂಪನಾರ್ ಸ್ಥಾಪಿಸಿದ್ದ ತಮಿಳ್ ಮಾನಿಲ ಕಾಂಗ್ರೆಸ್ ಸೇರಿಕೊಂಡರು. ಆ ಪಕ್ಷದಲ್ಲಿಯೂ ನಿಷ್ಠರಾಗಿ ದುಡಿದ ಜಯಂತಿ ಅವರು ಮೂಪನಾರ್ ಸಾವಿನ ನಂತರ ಮತ್ತೆ ಕಾಂಗ್ರೆಸ್ ಸೇರಿಕೊಂಡರು. [ಸೋನಿಯಾಗೆ ಜಯಂತಿ ಬರೆದ ಪತ್ರದ ಸಾರಾಂಶ]

ಮಹಿಳಾ ಹಕ್ಕುಗಳಿಗಾಗಿ ಅವರು ಸಾಕಷ್ಟು ಹೋರಾಟ ನಡೆಸಿದ್ದರು. ಮಹಿಳಾ ಮೀಸಲಾತಿ ಮಸೂದೆಗಾಗಿ ಸ್ಥಾಪಿಸಲಾಗಿದ್ದ ಸಂಸದೀಯ ಮಂಡಳಿಯ ಸದಸ್ಯರೂ ಆಗಿದ್ದರು. ಒರಿಸ್ಸಾದಲ್ಲಿ 30 ಸಾವಿರ ಕೋಟಿ ಮೌಲ್ಯದ ಗಣಿಗಾರಿಕೆಯ ವಿರುದ್ಧ ಗುಡುಗು ಹಾಕಿದ್ದರು. ಇದರಲ್ಲಿ ಮೂಗು ತೂರಿಸಲು ರಾಹುಲ್ ಗಾಂಧಿ ಯತ್ನಿಸಿದ್ದರೂ ಗಣಿಗಾರಿಕೆಯ ವಿರುದ್ಧ ಹೋರಾಡಿ ಸುಪ್ರೀಂ ಕೋರ್ಟಿನ ಪ್ರಶಂಸೆ ಗಳಿಸಿದ್ದರು.

ನಂತರ 2014ರಲ್ಲಿ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ಹೀನಾಯವಾಗಿ ಸೋಲು ಕಂಡರೂ, 'ಸೋಲಿಗೆ ರಾಹುಲ್ ಅವರನ್ನು ದೂಷಿಸಬೇಡಿ, ಇದು ಸಂಘಟಿತ ಸೋಲು' ಎಂದು ಅವರ ಪರವಾಗಿಯೇ ದನಿಯೆತ್ತಿದ್ದರು. ಇಷ್ಟೆಲ್ಲ ಆದರೂ ಅವರನ್ನು ಕಾಂಗ್ರೆಸ್ಸಿನಲ್ಲಿ ಮೂಲೆಗುಂಪು ಮಾಡಲಾಯಿತು, ವಕ್ತಾರೆ ಸ್ಥಾನವನ್ನು ಕಿತ್ತುಕೊಳ್ಳಲಾಯಿತು.

ಈ ಎಲ್ಲ ಬೆಳವಣಿಗೆಗಳಿಂದ ರೋಸತ್ತಿದ್ದ ಜಯಂತಿ ನಟರಾಜನ್ ಅವರು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಹರಿಹಾಯ್ದಿರುವುದಲ್ಲದೆ, ಪಕ್ಷವನ್ನೇ ತೊರೆದು ಹೊರನಡೆದಿದ್ದಾರೆ. ಶುಕ್ರವಾರ, ಜ.30ರಂದು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ, ಕಾಂಗ್ರೆಸ್‌ನಲ್ಲಿ ಉಸಿರುಗಟ್ಟಿಸುವ ವಾತಾವರಣ ಸೃಷ್ಟಿಯಾಗಿರುವುದು ಬೇಸರ ತಂದಿದೆ ಎಂದು ನೋವಿನಿಂದ ನುಡಿದಿದ್ದಾರೆ. ದೆಹಲಿ ಚುನಾವಣೆಯನ್ನು ಎದುರಿಸಲು ಸಿದ್ಧತೆ ನಡೆಸುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಇದು ದೊಡ್ಡ ಹೊಡೆತ ನೀಡಿದ್ದರೆ, ವಿರುದ್ಧ ಪಕ್ಷಗಳಿಗೆ ಪಾಯಸದಲ್ಲಿ ಸಿಕ್ಕ ಗೋಡಂಬಿಯಂತಾಗಿದೆ.

English summary
Veteran politician Jayanthi Natarajan has quit Congress after serving the party for three decades. She as loyal to Nehru-Gandhi family and played many major role in building the party. The outspoken leader was official spokesperson of Congress for many years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X