ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿದ್ದರಾಮಯ್ಯ ರಾಜಕೀಯ ನಿವೃತ್ತರಾಗಲ್ಲ: ಡಾ ಯತೀಂದ್ರ ಸಂದರ್ಶನ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಿರಿಯ ಮಗ ಡಾ ಯತೀಂದ್ರ ಇತ್ತೀಚೆಗೆ ತಂದೆ ಜತೆಗೆ ರಾಜಕಾರಣದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರ ಆಲೋಚನೆ, ವಿಚಾರ, ಭವಿಷ್ಯದ ಬಗ್ಗೆ ಒನ್ಇಂಡಿಯಾ ವರದಿಗಾರ್ತಿ ಅನುಷಾ ರವಿ ಸಂದರ್ಶನ ಮಾಡಿದ್ದಾರೆ

By ಅನುಷಾ ರವಿ
|
Google Oneindia Kannada News

ಮೈಸೂರು, ಏಪ್ರಿಲ್ 5: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಿರಿಯ ಮಗ ಡಾ.ಯತೀಂದ್ರ ಅವರ ಮನಸಿನಲ್ಲಿ ರಾಜಕೀಯಕ್ಕೆ ಬರಬೇಕು ಎಂಬ ಆಲೋಚನೆಯೇ ಈ ಹಿಂದೆ ಇರಲಿಲ್ಲ. ಆದರೆ ಈಗ ಸಿದ್ದರಾಮಯ್ಯ ಅವರ ಗುಂಪಿನಲ್ಲಿ ಜನಪ್ರಿಯವಾದ ಹೆಸರು ಯತೀಂದ್ರರದು. ಸದ್ಯಕ್ಕೆ ಫುಲ್ ಟೈಂ ರಾಜಕಾರಣಿ ಅಂತ ಗುರುತಿಸಿಕೊಳ್ಳದಿದ್ದರೂ ಸಿದ್ದರಾಮಯ್ಯ ಅವರು ಪ್ರತಿನಿಧಿಸುವ ವಿಧಾನಸಭಾ ಕ್ಷೇತ್ರದ ವಿಚಾರದಲ್ಲಿ ಯತೀಂದ್ರ ಅವರು ಗಮನ ಹರಿಸುತ್ತಿದ್ದಾರೆ. ಜತೆಗೆ ಮುಂದೆ ಚುನಾವಣೆ ರಾಜಕಾರಣಕ್ಕೆ ಬರುವ ಸಾಧ್ಯತೆ ಕೂಡ ಅವರು ತಳ್ಳಿಹಾಕಲ್ಲ.

ಡಾ.ಯತೀಂದ್ರ ಅವರ ಮೊದಲ ಸಂದರ್ಶನ ಇದು. ಒನ್‍ಇಂಡಿಯಾದಿಂದ ಮಾಡಲಾಗಿದೆ. ಅಂದಹಾಗೆ ಯತೀಂದ್ರ ಅವರೀಗ ನಂಜನಗೂಡು, ಗುಂಡ್ಲುಪೇಟೆ ಉಪಚುನಾವಣೆಯಲ್ಲಿ ಮುಳಗಿಹೋಗಿದ್ದಾರೆ. ಆ ಮಧ್ಯೆಯೂ ಅವರದೊಂದು ಸಂದರ್ಶನ ಮಾಡಿದ್ದು, ಅದರ ಪೂರ್ಣ ಪಾಠ ಇಲ್ಲಿದೆ.[ಅನುಕಂಪದ ಅಲೆಯಲ್ಲ, ಪತಿಯ ಜನಸೇವೆ ನನ್ನ ಗೆಲ್ಲಿಸುತ್ತೆ: ಗೀತಾ ಮಹಾದೇವಪ್ರಸಾದ್]

Siddaramaiah unsure about quitting politics says son Yathindra in first ever interview

ಪ್ರಶ್ನೆ: ನೀವು ರಾಜಕಾರಣದಿಂದ ಅಂತರ ಕಾಯ್ದುಕೊಂಡವರು. ನಿಮ್ಮ ಮನಸ್ಸು ಬದಲಾಯಿಸಲು ಕಾರಣ ಏನು?
ಉತ್ತರ: ರಾಕೇಶ್ (ಸಿದ್ದರಾಮಯ್ಯ ಅವರ ಹಿರಿಯ ಮಗ) ನಿಧನದಿಂದ ಹಲವು ಬದಲಾವಣೆಗಳಾದವು. ಆತನ ನಂತರ ನನ್ನ ತಂದೆ ಪ್ರತಿನಿಧಿಸುವ ಕ್ಷೇತ್ರ ನೋಡಿಕೊಳ್ಳುವವರು ಇರಲಿಲ್ಲ. ನಾನು ಈಗಲೂ ರಾಜಕಾರಣಕ್ಕೆ ಹೊಂದಿಕೊಂಡಿಲ್ಲ. ಆದರೆ ನನ್ನ ತಂದೆಯವರ ಮೇಲಿರುವ ಭಾರ ಹಂಚಿಕೊಳ್ಳುವುದಕ್ಕೆ ಒಬ್ಬರು ಬೇಕು ಅಂತ ನನಗೆ ಅರ್ಥವಾಯಿತು. ನಾನು ಸೇರಿದ ಹಾಗೆ ನಮ್ಮ ಇಡೀ ಕುಟುಂಬಕ್ಕೆ ಕಷ್ಟದ ಸಮಯ ಆಗಿತ್ತು. ನನಗೆ ಯಾವತ್ತೂ ರಾಜಕಾರಣದಲ್ಲಿ ಆಸಕ್ತಿ ಇರಲಿಲ್ಲ. ಇನ್ನು ಕ್ಷೇತ್ರದಲ್ಲಿ ಒಳಜಗಳ ಕಾಣಿಸಿಕೊಳ್ಳುವ ಸಾಧ್ಯತೆ ಇತ್ತು. ತಪ್ಪಾದ ವ್ಯಕ್ತಿಗಳ ಕೈಗೆ ಕ್ಷೇತ್ರ ಹೋಗೋದು ನನಗೆ ಇಷ್ಟವಿರಲಿಲ್ಲ.

Siddaramaiah unsure about quitting politics says son Yathindra in first ever interview

ಪ್ರಶ್ನೆ: ನೀವು ಚುನಾವಣೆಯಲ್ಲಿ ಸ್ಪರ್ಧಿಸುತ್ತೀರಾ? ನಿಮ್ಮ ಅಣ್ಣನಿಗೆ ಚುನಾವಣೆ ರಾಜಕೀಯದಲ್ಲಿ ಆಸಕ್ತಿ ಇತ್ತು. ಅವರು 2018ರ ಚುನಾವಣೆಯಲ್ಲಿ ಸ್ಪರ್ಧೆ ಕೂಡ ಮಾಡ್ತಿದ್ದರೇನೋ?
ಉತ್ತರ: ನನ್ನ ಅಣ್ಣ ಖಂಡಿತವಾಗಿಯೂ ಚುನಾವಣೆಗೆ ಸ್ಪರ್ಧಿಸುತ್ತಿದ್ದರು. ಆದರೆ ನಾನು ಆ ವಿಚಾರದಲ್ಲಿ ಖಾತ್ರಿ ಇಲ್ಲ. ಈ ಬಗ್ಗೆ ಇನ್ನೂ ಮಾನಸಿಕವಾಗಿ ಅಂತಿಮವಾಗಿಲ್ಲ. ನಾನು ಯಾವುದೇ ತೀರ್ಮಾನ ತೆಗೆದುಕೊಂಡರೂ ನನ್ನ ತಂದೆ ಬೆಂಬಲಿಸುತ್ತಾರೆ. ನನಗೆ ವರುಣಾ ಕ್ಷೇತ್ರ ಹಾಗೂ ಜನರ ಸಂಪರ್ಕ ಚೆನ್ನಾಗಿದೆ. ಮುಂದಿನ ಚುನಾವಣೆಯಲ್ಲಿ ವರುಣಾ ಹಾಗೂ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಗೆಲ್ಲುವ ಅಭ್ಯರ್ಥಿಗಳು ಬೇಕು. ಒಂದು ವೇಳೆ ನಾನು ಸ್ಪರ್ಧಿಸುವುದಾದರೆ ವರುಣಾದಿಂದಲೇ. ನನ್ನ ತಂದೆ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ.[ಸಿದ್ದರಾಮಯ್ಯ ಒಬ್ಬ ತಲಾಕ್ ರಾಜಕಾರಣಿ: ಈಶ್ವರಪ್ಪ ವ್ಯಂಗ್ಯ]

ಪ್ರಶ್ನೆ: ಸಿದ್ದರಾಮಯ್ಯ ಅವರು ಸಕ್ರಿಯ ರಾಜಕಾರಣದಲ್ಲಿ ಇರುವವರೆಗೆ ತಮ್ಮ ಕುಟುಂಬದವರು ರಾಜಕೀಯಕ್ಕೆ ಬರುವುದು ಅವರಿಗೆ ಇಷ್ಟವಿರಲಿಲ್ಲ. ಆದರೆ ನಿಮ್ಮ ಪ್ರವೇಶ ಅವರ ನಿರ್ಧಾರ ಬದಲಿಸಿದ್ದು ಹೇಗೆ?
ಉತ್ತರ: ಕಳೆದ ವಿಧಾನಸಭೆ ಚುನಾವಣೆಯಲ್ಲಿ ನನ್ನ ಅಣ್ಣನಿಗೆ ಟಿಕೆಟ್ ಕೊಡಲಿಲ್ಲ. ನಾವು ಯಾರೂ ರಾಜಕೀಯ ಪ್ರವೇಶಿಸುವುದು ಅವರಿಗೆ ಇಷ್ಟವಿರಲಿಲ್ಲ. ಅವರ ಮನಸಿನಲ್ಲಿ ಏನಿತ್ತು ಅನ್ನೋದು ನನಗೆ ಗೊತ್ತಿರಲಿಲ್ಲ. ಕೆಲವು ಸಲ ತಾವು ರಾಜಕಾರಣದಿಂದ ನಿವೃತ್ತರಾಗುವ ಮಾತನಾಡುತ್ತಾರೆ. ಸುಸ್ತಾಗಿದ್ದೀನಿ ಅಂತಾರೆ. ಆದರೆ ಅವರಿಗೆ ಮುಂದಿನ ಚುನಾವಣೆಯಲ್ಲಿ ಪಕ್ಷವನ್ನು ಮುನ್ನಡೆಸಬೇಕು ಅಂತಲೂ ಇದೆ. ಕಾಂಗ್ರೆಸ್ ಗೆ ಬಲಿಷ್ಠ ನಾಯಕನ ಅಗತ್ಯವಿದೆ.

Siddaramaiah unsure about quitting politics says son Yathindra in first ever interview

ಪ್ರಶ್ನೆ: ವಂಶಪಾರಂಪರ್ಯ ಆಡಳಿತದ ವಿರೋಧಿಯಾದ ಸಿದ್ದರಾಮಯ್ಯ ಅವರು ತಮ್ಮ ಕುಟುಂಬದಿಂದ ಯಾರೂ ರಾಜಕಾರಣಕ್ಕೆ ಬರಬಾರದು ಅಂದುಕೊಂಡಿರಬಹುದು. ನೀವಿದನ್ನು ಒಪ್ತೀರಾ?
ಉತ್ತರ: ರಾಜಕಾರಣಿಯ ಮಗ ಶಾಸಕ ಆಗೋದು ವಂಶ ಪಾರಂಪರ್ಯ ರಾಜಕಾರಣವಲ್ಲ. ನನ್ನ ತಂದೆ ಸಮಾಜವಾದಿ. ಯಾವುದೇ ಸರಕಾರಿ ಕಾರ್ಯಕ್ರಮದಲ್ಲಿ ಕುಟುಂಬದವರು ಪಾಲ್ಗೊಳ್ಳುವುದು ಅವರಿಗೆ ಇಷ್ಟವಿಲ್ಲ. ನಾನು ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲೂ ಭಾಗವಹಿಸಿರಲಿಲ್ಲ. ರಾಜಕಾರಣಿಯ ಮಕ್ಕಳು ಅನ್ನೋ ಕಾರಣಕ್ಕೆ, ಸಮಾಜವಾದಿ ಸಿದ್ಧಾಂತವನ್ನು ಅನುಸರಿಸುತ್ತಾರೆ ಎಂಬ ಕಾರಣಕ್ಕೆ ರಾಜಕೀಯದಿಂದ ದೂರ ಉಳಿಯಬೇಕು ಅಂತ ಆಲೋಚಿಸುವುದು ಸರಿ ಅನಿಸಲ್ಲ. ಮಕ್ಕಳು ತಮ್ಮ ತಂದೆ-ತಾಯಿಯ ಹಾದಿಯನ್ನು ಅನುಸರಿಸುವುದು ತುಂಬ ಸಹಜ. ಅದು ರಾಜಕಾರಣದಲ್ಲಿ ಮಾತ್ರ ಬೇರೆ ಆಗಬೇಕು ಅಂದರೆ ಹೇಗೆ ಸಾಧ್ಯ? ಏಕೆಂದರೆ ಮಗ ಅಥವಾ ಮಗಳಿರಬಹುದು, ತುಂಬ ಚಿಕ್ಕ ವಯಸ್ಸಿನಿಂದಲೇ ರಾಜಕಾರಣವನ್ನು ಹತ್ತಿರದಿಂದ ನೋಡುತ್ತಾ ಬೆಳೆಯುತ್ತಾರೆ.[ನಂಜನಗೂಡು: ಜನಸೇವೆ ಮಾಡುವ ಅಭ್ಯರ್ಥಿಗೆ ಮತನೀಡಿ-ಸಿದ್ದರಾಮಯ್ಯ]

Siddaramaiah unsure about quitting politics says son Yathindra in first ever interview

ಪ್ರಶ್ನೆ: ಕಳೆದ ಆರು ತಿಂಗಳಲ್ಲಿ ನಿಮ್ಮ ಜೀವನ ಹೇಗೆ ಬದಲಾಗಿದೆ?
ಉತ್ತರ: ಜನರ ಜತೆ ಮಾತುಕತೆ ಅನ್ನೋದು ತುಂಬ ಸಲೀಸಲ್ಲ. ನಾನು ರೇಡಿಯಾಲಾಜಿ ಅಥವಾ ಪಥಾಲಜಿಯಲ್ಲಿ ತಜ್ಞನಾಗಬೇಕು ಅಂದುಕೊಂಡಿದ್ದೆ. ರಾಜಕಾರಣ ನನಗೆ ಹೊಸದು. ಜನರೊಂದಿಗೆ ಬೆರೆಯಲೇ ಬೇಕು. ಮತ್ತು ಈ ಅನುಭವ ವಿಭಿನ್ನವಾದದ್ದು. ಈಗ ಕಲಿಯುತ್ತಾ ಇದ್ದೀನಿ. ಜನರೊಂದಿಗೆ ಬೆರೆಯುತ್ತಾ ಇದ್ದೀನಿ. ಆರು ತಿಂಗಳ ಹಿಂದೆ ವರುಣಾ ಕ್ಷೇತ್ರಕ್ಕೆ ತೆರಳಿ ನನ್ನ ಪರಿಚಯ ಮಾಡಿಕೊಂಡೆ. ಅವರು ರಾಕೇಶ್ ಜತೆ ನಿಕಟವಾಗಿದ್ದರು. ಈಗ ನನ್ನ ಜತೆಗೆ ಇದ್ದಾರೆ. ಅವರ ಅಹವಾಲುಗಳನ್ನು ಕೇಳ್ತೀನಿ, ನನ್ನಿಂದ ಆದ ಸಹಾಯ ಮಾಡ್ತೀನಿ. ನಾನೀಗ ಏನು ಮಾಡ್ತಿದ್ದೀನೋ ಅದರಲ್ಲಿ ಯಾವುದೇ ಗೊಂದಲಯಿಲ್ಲ. ಆದರೆ ರಾಜಕಾರಣ ಬೇರೆ ಮತ್ತು ತುಂಬ ಕಷ್ಟವಾದ್ದು. ನನ್ನ ತಂದೆ ಜತೆಗಿನ ಮಾತುಕತೆ ಬದಲಾಗಿದೆ. ಮನೆ ಹಾಗೂ ಕುಟುಂಬದ ಬಗ್ಗೆ ಮಾತನಾಡುತ್ತಿದ್ದವರು ಈಗ ಕ್ಷೇತ್ರ, ಜನರ ಬಗ್ಗೆ ಚರ್ಚೆ ಮಾಡ್ತೀವಿ.

Siddaramaiah unsure about quitting politics says son Yathindra in first ever interview

ಪ್ರಶ್ನೆ: ಕಾಂಗ್ರೆಸ್ ಪಕ್ಷದ ಬಗ್ಗೆ ನಿಮ್ಮ ಅಭಿಪ್ರಾಯ ಏನು? ಪಕ್ಷದಲ್ಲಿ ಬದಲಾವಣೆ ತರಬೇಕು ಅನಿಸುತ್ತಾ?
ಉತ್ತರ: ಜಾತ್ಯತೀತತೆ, ಸಾಮಾಜಿಕ ನ್ಯಾಯದಂತಹ ಕಾಂಗ್ರೆಸ್ ಸಿದ್ಧಾಂತಗಳು ಈ ದೇಶಕ್ಕೆ ಒಳ್ಳೆಯದು. ಬಲಪಂಥೀಯ ಧೋರಣೆ ಇರುವ ಇತರ ಪಕ್ಷಗಳಿಗಿಂತ ಕಾಂಗ್ರೆಸ್ ಉತ್ತಮ. ಸಿದ್ಧಾಂತಗಳು ಸಾರ್ವಕಾಲಿಕ. ಇದರಲ್ಲಿ ಬದಲಾವಣೆ ಅಗತ್ಯವಿಲ್ಲ. ನಾವು ಹೇಗೆ ಕೆಲಸ ಮಾಡ್ತೀವಿ, ಜನರ ಜತೆ ಹೇಗೆ ಇರ್ತೀವಿ ಆ ಬಗ್ಗೆ ಯೋಚನೆ ಮಾಡಬೇಕು. ಜನರನ್ನು ತಲುಪುವ ಬಗೆಯನ್ನು ನಾವು ಪುನರ್ ಪರಿಶೀಲಿಸಬೇಕು. ಆದರೆ ನನಗೆ ಅರ್ಥವಾಗದಿದ್ದು ಏನೆಂದರೆ ಯುವ ಸಮುದಾಯ ಏಕೆ ಹಿಂದೂ ರಾಷ್ಟ್ರದಂತಹ ಆಲೋಚನೆ ಒಪ್ಪಿಕೊಳ್ಳುತ್ತಿದ್ದಾರೆ? ವೈಯಕ್ತಿಕ ಸ್ವಾತಂತ್ರ್ಯ ಕಳೆದುಕೊಂಡರೂ ಪರವಾಗಿಲ್ವ?

ಪ್ರಶ್ನೆ: ರಾಹುಲ್ ಗಾಂಧಿ ಅವರ ಬಗ್ಗೆ ನಿಮ್ಮ ಅಭಿಪ್ರಾಯ ಏನು? ಅವರು ಪ್ರಖರ ನಾಯಕರಲ್ಲ ಎಂದು ಸಾಮಾನ್ಯ ಅಭಿಪ್ರಾಯ ಇದೆಯಲ್ಲ?
ಉತ್ತರ: ಅವರು ಪ್ರಖರ ನಾಯಕರಲ್ಲ ಅಂತ ನನಗೆ ಅನಿಸಲ್ಲ. ಇದೊಂದು ತಪ್ಪು ಕಲ್ಪನೆಯನ್ನು ನಿರಂತರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿದ್ದಾರೆ. ಇದು ಸಾಮಾಜಿಕ ಜಾಲ ತಾಣದ ಸೃಷ್ಟಿ. ಯೋಗಿ ಆದಿತ್ಯನಾಥ್ ಮತ್ತು ಸಾಧ್ವಿ ಪ್ರಾಚಿ ಅಂತಹವರು ಮುಖ್ಯವಾಹಿನಿಗೆ ಬರುತ್ತಿದ್ದಾರೆ. ಇಂತಹವರ ಸಿದ್ಧಾಂತ ಬಹಳ ದಿನ ಚಲಾವಣೆಯಲ್ಲಿ ಇರೋದಿಲ್ಲ. ಜಾತ್ಯತೀತರು, ಅಲ್ಪಸಂಖ್ಯಾತರು ಮತ್ತು ಹಿಂದುಳಿದ ವರ್ಗದವರು ನಡೆಸುವ ಎಲ್ಲ ಸಂಸ್ಥೆಗಳು ಕಷ್ಟ ಅನುಭವಿಸಬೇಕಾಗುತ್ತದೆ. ಇದನ್ನು ನಿಲ್ಲಿಸಬೇಕು.[ಕೃಷ್ಣರ 'ದೂರಾಲೋಚನೆ' ಹೇಳಿಕೆಗೆ ಸಿದ್ದು ತಿರುಗೇಟು]

ಪ್ರಶ್ನೆ: ರಾಜಕೀಯದಲ್ಲಿ ನಿಮಗೆ ಭಯ ಮೂಡಿಸುವಂತಹದ್ದು ಏನು?
ಉತ್ತರ: ವಿರೋಧಿಗಳು ಮಾಡುವ ವೈಯಕ್ತಿಕ ದಾಳಿ ಭಯ ಮೂಡಿಸುತ್ತದೆ. ಸರಕಾರದ ಜತೆಗೆ ನನ್ನ ಸಂಸ್ಥೆ ಲ್ಯಾಬ್ ಆರಂಭಿಸಲು ಮುಂದಾದಾಗ ಆದ ವಿವಾದದಲ್ಲಿ ನನಗೆ ಅದು ಅರ್ಥವಾಗಿದೆ. ನಾನೊಬ್ಬ ಉದ್ಯಮಿ ಆಗಿ ಸರಕಾರದ ಜತೆಗೆ ವ್ಯವಹಾರ ಮಾಡಿದರೆ ಏನೂ ತಪ್ಪಿಲ್ಲ ಅಂದುಕೊಂಡೆ. ಅದು ಪೂರ್ತಿಯಾಗಿ ಕಾನೂನು ಪ್ರಕಾರವೇ ಮಾಡಿದ್ದು. ನನ್ನ ಸಂಸ್ಥೆಯಿಂದ ಟೆಂಡರ್ ಕೂಡ ಹಾಕಿದ್ದಿವಿ. ಅದರೂ ನಾನು ವಿವಾದದಲ್ಲಿ ಸಿಕ್ಕಿಕೊಂಡೆ. ಕಾನೂನು ಪ್ರಕಾರವಾಗಿಯೇ ನಡೆದುಕೊಂಡರೂ ಅಧಿಕಾರದಲ್ಲಿರುವವರ ಸಂಬಂಧಿಗಳು ಸರಕಾರದ ಜತೆ ವ್ಯವಹಾರ ಮಾಡುವುದು ತಪ್ಪು ಅಂತ ತಿಳಿದುಕೊಂಡೆ.

Siddaramaiah unsure about quitting politics says son Yathindra in first ever interview

ಪ್ರಶ್ನೆ: ತಂದೆಯವರಲ್ಲಿ ನಿಮಗೆ ಇಷ್ಟವಾಗೋದು ಹಾಗೂ ಇಷ್ಟವಾಗದಿರುವುದು ಏನು?
ಉತ್ತರ: ನಾನು ಈಚೆಗಷ್ಟೇ ನನ್ನ ತಂದೆಯ ಭಾಷಣಗಳನ್ನು ಕೇಳ್ತಿದೀನಿ. ಅವರು ಅದ್ಭುತ ವಾಗ್ಮಿ. ತುಂಬ ಸರಳ, ಪರಿಣಾಮಕಾರಿ ಮತ್ತು ತಮಾಷೆಯನ್ನು ಒಳಗೊಂಡ ಮಾತುಗಾರಿಕೆ ಅವರದು. ಜನರ ಜತೆಗೆ ತುಂಬ ಸುಲಭವಾಗಿ ಸಂಪರ್ಕ ಸಾಧಿಸುತ್ತಾರೆ. ನಾನು ಅವುಗಳನ್ನು ಕಲೀತಿದೀನಿ. ಅವರು ಬಿಡುವಿಲ್ಲದೆ ದುಡೀತಾರೆ. ಯಾವುದೇ ದೂರು ಹೇಳಲ್ಲ. ಬೇಸರ ಪಡಲ್ಲ. ಬೆಳಗ್ಗೆ 6ರಿಂದ ರಾತ್ರಿ 11ರವರೆಗೆ ಅವರು ಕೆಲಸ ಮಾಡೋದನ್ನು ನೋಡಿದ್ದೀನಿ. ಅವರು ರೂಢಿಸಿಕೊಂಡಿರುವ ಸಮಾಜವಾದಿ ಸಿದ್ಧಾಂತ, ಅಹಿಂದ ವರ್ಗಗಳ ಏಳ್ಗೆಗಾಗಿ ದುಡಿಯುವುದು ಅದ್ಭುತ. ನನಗೆ ಅವರಲ್ಲಿ ಇಷ್ಟವಾಗದ ಅಂಶ ಅಂದರೆ, ಅವರಿಗೆ ಹತ್ತಿರವಾದವರನ್ನು ತುಂಬ ಹಚ್ಚಿಕೊಂಡು ಬಿಡ್ತಾರೆ. ಅಂತಹವರ ಸಮರ್ಥನೆ ಮಾಡಿಕೊಳ್ಳಬಾರದು ಎಂದು ಗೊತ್ತಿದ್ದರೂ ಆತ್ಮೀಯರು ಅನ್ನೋ ಕಾರಣಕ್ಕೆ ಮಾಡಬೇಕಾಗುತ್ತದೆ. ಆತ್ಮೀಯರ ಬಗ್ಗೆ ಅವರು ತುಂಬ ಮೃದುವಾಗಿ ವರ್ತಿಸುತ್ತಾರೆ.

ನಮ್ಮ ಸಂದರ್ಶನ ಮುಗಿದು ಅವರು ಕಾರಿನಿಂದ ಇಳಿಯುವ ಹೊತ್ತಿಗೆ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ನ ಬೆಂಬಲಕ್ಕೆ ಸಾಕ್ಷಿ ಅನ್ನೋ ಹಾಗೆ ಗುಂಡ್ಲುಪೇಟೆ ತಾಲೂಕಿನ ಹೊಸೂರಿನಲ್ಲಿ ಯತೀಂದ್ರ ಅವರಿಗೆ ಆತ್ಮೀಯ ಸ್ವಾಗತ ಕೋರಲಾಯಿತು.

English summary
Politics was never on his mind but the younger son of Karnataka Chief Minister Siddaramaiah, Dr Yathindra is now the most popular face in the political circles in his father's turf. A reluctant almost-politician of sorts, Yathindra in his first ever interview said that while he was merely taking care of his father's constituency currently, he did not rule out entry into electoral politics.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X