ನೋಟ್ ಬ್ಯಾನ್, ಐಟಿ ದಾಳಿ, ಮನಿ ಲಾಂಡ್ರಿಂಗ್ ಗೆ 7 ವಿಧಾನಗಳು

ಆದಾಯ ತೆರಿಗೆ ಇಲಾಖೆಯವರು 200ಕ್ಕೂ ಅಧಿಕ ದಾಳಿ ನಡೆಸಿ ಕೋಟ್ಯಂತರ ಪ್ರಮಾಣದಲ್ಲಿ ಹೊಸ ನೋಟುಗಳನ್ನು ಜಪ್ತಿ ಮಾಡಲಾಗಿದೆ. ಕೆಲ ನಿರ್ಲಜ್ಜ ಬ್ಯಾಂಕ್ ಉದ್ಯೋಗಿಗಳು ಹೊಸ ನೋಟುಗಳ ಮನಿ ಲಾಂಡ್ರಿಂಗ್ 7 ವಿಧಾನಗಳನ್ನು ಬಳಸುತ್ತಿರುವ ಶಂಕೆ ಇದೆ.

By:
Subscribe to Oneindia Kannada

ಬೆಂಗಳೂರು, ಡಿಸೆಂಬರ್ 14: ನೋಟ್ ಬ್ಯಾನ್ ಅಥವಾ ಅಪನಗದೀಕರಣದ ನಂತರ ಆದಾಯ ತೆರಿಗೆ ಇಲಾಖೆಯವರು ಸರಿ ಸುಮಾರು 200ಕ್ಕೂ ಅಧಿಕ ದಾಳಿ ನಡೆಸಿ ಕೋಟ್ಯಂತರ ಪ್ರಮಾಣದಲ್ಲಿ ಹೊಸ ನೋಟುಗಳನ್ನು ಜಪ್ತಿ ಮಾಡಲಾಗಿದೆ.

ಕಪ್ಪು ಹಣವನ್ನು ಬಿಳಿಯನ್ನಾಗಿಸುವುದು ಹಾಗೂ ಮನಿ ಲಾಂಡ್ರಿಂಗ್ ನಲ್ಲಿ ನಗರ ಪ್ರದೇಶ ಹಾಗೂ ಖಾಸಗಿ ಬ್ಯಾಂಕುಗಳು ದೊಡ್ಡ ಪ್ರಮಾಣದ ಪರಿಣಾಮ ಬೀರುತ್ತಿದ್ದು, ಗ್ರಾಮೀಣ ಪ್ರದೇಶದಲ್ಲಿ ಪ್ರಭಾವ ಕಡಿಮೆ ಇದೆ ಎಂದು ತಿಳಿದು ಬಂದಿದೆ.[ನೋಟು ಬದಲಿಸಲು ಆರ್ ಬಿಐ ಅಧಿಕಾರಿಗೆ ಶೇ 30 ಕಮಿಷನ್]

ಬೆಂಗಳೂರು ಮಿರರ್ 7 ವಿಧಾನಗಳು ಪಟ್ಟಿ ಮಾಡಿದ್ದು, ಕೆಲ ನಿರ್ಲಜ್ಜ ಬ್ಯಾಂಕ್ ಉದ್ಯೋಗಿಗಳು ಹೊಸ ನೋಟುಗಳ ಮನಿ ಲಾಂಡ್ರಿಂಗ್ ಈ ವಿಧಾನಗಳನ್ನು ಬಳಸುತ್ತಿರುವ ಶಂಕೆ ಇದೆ.[ನೋಟು ಬದಲಾವಣೆ ದಂಧೆ ನಡೆದದ್ದು ಹೀಗೆ]

ಬ್ಯಾಂಕ್ ಅಧಿಕಾರಿಗಳು ನೋಟ್ ಬ್ಯಾನ್ ಲಾಭ ಪಡೆದು ಮನಿ ಲಾಂಡ್ರಿಂಗ್ ಮಾಡುತ್ತಿರುವ ಬಗ್ಗೆ ತನಿಖೆ ನಡೆಸುವುದಾಗಿ ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.

1. ಐಡೆಂಡಿಟಿ ಕಳ್ಳತನ

ನವೆಂಬರ್ 8ರ ನಂತರ ಬ್ಯಾಂಕಿನ ಕ್ಯೂನಲ್ಲಿ ಎಂದಿನಂತೆ ನಿಂತಿದ್ದ ಅನೇಕ ಗ್ರಾಹಕರಿಗೆ ತಮ್ಮ ಬಳಿ ಇದ್ದ PAN ಕಾರ್ಡ್ ಇನ್ನಿತರ ಗುರುತಿನ ಚೀಟಿಗಳನ್ನು ಬ್ಯಾಂಕಿನವರೇ ದುರುಪಯೋಗಪಡಿಸಿಕೊಳ್ಳಬಹುದು ಎಂಬ ಆಲೋಚನೆಯೂ ಬಂದಿರಲಿಕ್ಕಿಲ್ಲ. ಆದರೆ, ನೋಟ್ ಬ್ಯಾನ್ ನಂತರ ಕೆಲ ಬ್ಯಾಂಕರ್ ಗಳು ಗ್ರಾಹಕರ ಮಾಹಿತಿಯನ್ನು ದುರುಪಯೋಗ ಪಡಿಸಿಕೊಂಡಿರುವ ಮಾಹಿತಿ ಇದೆ.

2 ಎಟಿಎಂ ಅವ್ಯವಹಾರ

ನವೆಂಬರ್ 8ರ ನಂತರ ಶೇ 50ಕ್ಕೂ ಅಧಿಕ ಎಟಿಎಂಗಳು ಕಾರ್ಯ ನಿರ್ವಹಿಸುವುದನ್ನು ನಿಲ್ಲಿಸಲಾಗಿತ್ತು. ನೋಟು ಬದಲಿ ವ್ಯವಸ್ಥೆ ಜಾರಿಗೆ ಬಂದ ಮೇಲೆ ಗಲಾಟೆ, ಮಾತಿನ ಚಕಮಕಿ, ಅನೇಕರ ಸಾವು ನೋವುಗಳು ಕೂಡಾ ವರದಿಯಾಯಿತು. ಎಟಿಎಂ ಸೇರಬೇಕಿದ್ದ ಹೆಚ್ಚಿನ ಪ್ರಮಾಣದ ಮೊತ್ತ ಕಾಳಧನಿಕರ ಪಾಲಾಗಲು ಬ್ಯಾಂಕ್ ಅಧಿಕಾರಿಗಳು ನೆರವಾಗಿರುವ ಸಾಧ್ಯತೆ ಕಂಡು ಬಂದಿದ್ದು, ಸೆಕ್ಯುರಿಟಿ ಏಜೆನ್ಸಿ ಹಾಗೂ ಹಣ ಸಾಗಣೆ ವಾಹನ ಉಸ್ತುವಾರಿ ವಹಿಸಿಕೊಂಡ ಸಂಸ್ಥೆಗಳು ಈ ಅವ್ಯವಹಾರದಲ್ಲಿ ಕೈಜೋಡಿಸಿರುವ ಸಾಧ್ಯತೆಯಿದೆ.

3.ಜನ್ ಧನ್ ಖಾತೆ

ಸರಿ ಸುಮಾರು ಶೇ 10 ರಿಂದ 15ರಷ್ಟು ಜನ್ ಧನ್ ಖಾತೆಗಳನ್ನು ಕಪ್ಪುಹಣವನ್ನಾಗಿ ಪರಿವರ್ತಿಸಲು ಬಳಸಲಿರುವ ಶಂಕೆ ಇದೆ. ಇಂಥ ದುಷ್ಕರ್ಮಿಗಳ ವಿರುದ್ಧ ಸಿಬಿಐ ಕಾರ್ಯಾಚರಣೆ ಕೈಗೊಂಡಿದೆ.
ಉದಾಹರಣೆ: ಬೆಂಗಳೂರಿನ ವಿಜಯನಗರದ ಬ್ಯಾಂಕ್ ಖಾತೆಯೊಂದರಲ್ಲಿ ಕೇವಲ 500ರು ಬ್ಯಾಲೆನ್ಸ್ ಇತ್ತು. ನವೆಂಬರ್ 8ರ ನಂತರ ಈ ಖಾತೆಗೆ 2 ಲಕ್ಷ ರು ಜಮೆಯಾಗಿದೆ. ಈ ವಿಷಯ ಖಾತೆದಾರನಿಗೆ ತಿಳಿಯದಂತೆ ನಡೆಸಲಾಗಿದೆ.

4 ಡಿಮ್ಯಾಂಡ್ ಡ್ರಾಫ್ಟ್

ಚೆಕ್ ಗಳಿಗಿಂತ ಡಿಮ್ಯಾಂಡ್ ಡ್ರಾಫ್ಟ್ ಸುರಕ್ಷಿತ ಹಾಗೂ ಖಾತ್ರಿ ಎಂಬುದು ಸಾರ್ವಜನಿಕ ಅಭಿಪ್ರಾಯ. ಆದರೆ, ಕಪ್ಪು ಹಣವನ್ನು ಬಿಳಿಯನ್ನಾಗಿಸಲು ಡಿಡಿಯನ್ನು ಕೂಡಾ ಬ್ಯಾಂಕರ್ ಗಳು ಬಳಸಿದ್ದಾರೆ. ಹಳೆ ನೋಟುಗಳಲ್ಲಿ ಡಿಡಿ ತೆಗೆಸಿಕೊಂಡು ಕ್ಯಾನ್ಸಲ್ ಮಾಡಿ ಹೊಸ ನೋಟುಗಳನ್ನು ಪಡೆದುಕೊಳ್ಳುವುದು ಸುಲಭವಾಗಿದೆ. 49 ಸಾವಿರಕ್ಕೂ ಕಡಿಮೆ ಮೊತ್ತವಿದ್ದರೆ ಈ ಬಗ್ಗೆ ಯಾರೂ ಪ್ರಶ್ನಿಸುವುದಿಲ್ಲ ಕೂಡಾ.

5 ಕಮಿಷನ್ ಮೂಲಕ ಕ್ಯಾಶಿಯರ್ ಜತೆ ಡೀಲ್

ಗ್ರಾಮೀಣ ಹಾಗೂ ಕುಗ್ರಾಮಗಳಲ್ಲಿರುವ ಬ್ಯಾಂಕ್ ಗಳಿಗೆ ಹೋಗಿ ನೋಟು ಬದಲಾವಣೆ ಮಾಡಿಕೊಳ್ಳಲು ಆಗದಿರುವ ಅನಕ್ಷರಸ್ಥ ಹಾಗೂ ಬಡ ಜನರು ಕ್ಯಾಶಿಯರ್ ಜತೆ ಕಮಿಷನ್ ಆಧಾರದಲ್ಲಿ ಹಣ ವಿನಿಮಯ ಮಾಡಿಕೊಳ್ಳುವ ಪದ್ಧತಿ ಇದೆ. ಬ್ಯಾಂಕರ್ ಗಳು ಶೇ 25ರಿಂದ 30ರಷ್ಟು ಕಮಿಷನ್ ಪಡೆದುಕೊಳ್ಳುತ್ತಿದ್ದಾರೆ.

6 ಬೇನಾಮಿ ಖಾತೆ

ಮೊದಲ ವಿಧಾನದಲ್ಲಿ ತಿಳಿಸಿದಂತೆ ಬ್ಯಾಂಕ್ ಗ್ರಾಹಕರ ಗುರುತಿನ ಚೀಟಿ ದುರುಪಯೋಗ ಪಡಿಸಿಕೊಂಡು ಬೇನಾಮಿ ಖಾತೆ ಆರಂಭಿಸಿ ಅದರಲ್ಲಿ ಹಳೆ ನೋಟುಗಳನ್ನು ತುಂಬಿ ನಂತರ ಹೊಸ ನೋಟುಗಳನ್ನು ಬದಲಾಯಿಸಿಕೊಳ್ಳುವ ವಿಧಾನ ಅನುಸರಿಸಲಾಗಿದೆ. ಕನಿಷ್ಠ ಠೇವಣಿ ಇಡಲು ಆಗದ ಖಾತೆಗಳನ್ನು ನಿಷ್ಕ್ರಿಯಗೊಳಿಸಿ ಹಣ ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ.

7 ಸ್ವ ಸಹಾಯಸಂಘ, ಕೋ ಆಪರೇಟಿವ್ ಬ್ಯಾಂಕ್

ಕೈಸಾಲ ನೀಡುವ ಏಜೆಂಟ್ ಗಳು 1 ರಿಂದ 100ರುಪಾಯಿ ಮುಖಬೆಲೆಯಲ್ಲಿ ದಿನನಿತ್ಯ ಹಣ ಸಂಗ್ರಹಿಸುತ್ತಿದ್ದು, ಹಣವನ್ನು ಸ್ವ ಸಹಾಯಸಂಘ, ಕೋ ಆಪರೇಟಿವ್ ಬ್ಯಾಂಕ್ ಗಳಲ್ಲಿ ಜಮೆ ಮಾಡುತ್ತಿದ್ದಾರೆ. ಅನೇಕ ಕಡೆ ಗಣಕೀಕೃತ ದಾಖಲೆ ಇಲ್ಲದ ಕಾರಣ ಹಳೆ ದಿನಾಂಕಕ್ಕೆ ಮೊತ್ತವನ್ನು ಸರಿದೂಗಿಸಿ ಮನಿ ಲಾಂಡ್ರಿಂಗ್ ಮಾಡಲಾಗುತ್ತಿದೆ.

English summary
Bangalore Mirror lists seven ways some unscrupulous people in the banking system may be using to launder new money.
Please Wait while comments are loading...