ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಒತ್ತಡದಿಂದ ಬೇಸತ್ತೇ ಅನುಪಮಾ ರಾಜೀನಾಮೆ ನೀಡಿದ್ದಾರೆ'

By ಐಸ್ಯಾಕ್ ರಿಚರ್ಡ್, ಮಂಗಳೂರು
|
Google Oneindia Kannada News

ಅನುಪಮಾ ಅವರ ಪರ ರಾಜ್ಯಾದ್ಯಂತ ಉತ್ತಮ ಬೆಂಬಲ ವ್ಯಕ್ತವಾಗಿದೆ. ಫೇಸ್ಬುಕ್‌ನಲ್ಲಿ ಅವರ ಪರ ಸಾವಿರಾರು ಕಮೆಂಟ್‌ಗಳು ಹರಿದಾಡುತ್ತಿವೆ. ಜೊತೆಗೆ ಪೊಲೀಸ್ ಇಲಾಖೆಯ ಕೆಲವು ನಿಷ್ಠಾವಂತ ಅಧಿಕಾರಿಗಳು ಕೂಡಾ ಅನುಪಮಾ ಅವರ ಬೆಂಬಲಕ್ಕೆ ನಿಂತಿದ್ದಾರೆ.

ಅನುಪಮಾ ಶೆಣೈ ಅವರು ಕೆಲಸಕ್ಕೆ ರಾಜೀನಾಮೆ ನೀಡಿದ್ದು ತಪ್ಪು. ಅವರು ಇಲಾಖೆಯ ಒಳಗಿದ್ದುಕೊಂಡೇ ವ್ಯವಸ್ಥೆಯ ವಿರುದ್ಧ ಹೋರಾಡಬೇಕಿತ್ತು ಎಂದು ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಮಿತ್ರಾ ಬುಧವಾರ ಅಭಿಪ್ರಾಯಪಟ್ಟರು.

ಒನ್‌ಇಂಡಿಯಾ ಜೊತೆಗೆ ಮಾತನಾಡಿದ ಅವರು, "ಅನುಪಮಾರ ರಾಜೀನಾಮೆಗೆ ವೈಯಕ್ತಿಕ ಸಮಸ್ಯೆಗಳು ಕಾರಣವಲ್ಲ. ಅವರು ಒತ್ತಡದಿಂದ ಬೇಸತ್ತೇ ರಾಜೀನಾಮೆ ನೀಡಿದ್ದಾರೆ. ಅವರು ಇಲಾಖೆಯ ಒಳಗಿದ್ದುಕೊಂಡೇ ಹೋರಾಟ ಮಾಡಬೇಕಿತ್ತು. ಇದೀಗ ನಿಷ್ಠಾವಂತ ಅಧಿಕಾರಿಗಳಿಗೆ ಕರ್ತವ್ಯ ನಿರ್ವಹಿಸಲು ಸಾಧ್ಯವಿಲ್ಲದಂತಾಗಿದೆ. ಅದರಲ್ಲೂ ಮಹಿಳಾ ಅಧಿಕಾರಿಗಳ ಗೋಳನ್ನು ಕೇಳುವವರೇ ಇಲ್ಲದಂತಾಗಿದೆ. ಅನುಪಮಾ ಶೆಣೈ ಅವರಂತಹ ನಿಷ್ಠಾವಂತ ಅಧಿಕಾರಿಯ ಬೆನ್ನಿಗೆ ಮಹಿಳಾ ಸಂಘಟನೆಗಳು ನಿಲ್ಲದೇ ಇರುವುದು, ಬೆಂಬಲ ನೀಡದಿರುವುದು ವಿಷಾದನೀಯ" ಎಂದು ಬೇಸರ ವ್ಯಕ್ತಪಡಿಸಿದರು. [ಅನುಪಮಾ ವರ್ಸಸ್ ಪರಮೇಶ್ವರ್ : ಇದುವರೆಗಿನ ಕಥೆಗಳು]

Anupama resigned due to pressure : Retired police officer

ಇದರ ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಜನರು ಬೆಂಬಲ ವ್ಯಕ್ತಪಡಿಸುವುದರ ಜೊತೆಗೆ ಪತ್ರಕರ್ತರೂ ಕೂಡಾ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. "ಅನುಪಮಾ ಅವರು ಎಲ್ಲಿದ್ದಾರೆ ಎನ್ನುವುದು ಮುಖ್ಯವಲ್ಲ. ಅವರ ಹೋರಾಟವನ್ನು ಬೆಂಬಲಿಸುವುದು ನಮ್ಮ ಕರ್ತವ್ಯ. ಅನುಪಮಾ ಅವರು ಎಲ್ಲಿದ್ದರೂ ಅವರ ಹೋರಾಟಕ್ಕೆ ಬೆಂಬಲ ಸೂಚಿಸುವುದು ಎಲ್ಲಾ ಪ್ರಜ್ಞಾವಂತ ನಾಗರಿಕರ ಕರ್ತವ್ಯ" ಎಂದು ಪತ್ರಕರ್ತ ಜಿತೇಂದ್ರ ಕುಂದೇಶ್ವರ ಅನಿಸಿಕೆ ವ್ಯಕ್ತಪಡಿಸಿದರು.

ಇತ್ತ ಅನುಪಮಾ ಶೆಣೈ ಅವರು ಕೂಡಾ ತಮ್ಮ ಹೋರಾಟವನ್ನು ಹಾದಿ ಕೆಡಿಸದಂತೆ ತಮಗೆ ಸಹಕಾರ ನೀಡಬೇಕೆಂದು ಜನತೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ. ತಮ್ಮ ಹೋರಾಟದ ಉದ್ದೇಶಕ್ಕೆ ಧಕ್ಕೆಯಾಗದಂತೆ ಎಲ್ಲಾ ಸಾರ್ವಜನಿಕರು ಬೆಂಬಲ ನೀಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ. ['ರೆಬೆಲ್' ಕಾಪ್ ಅನುಪಮಾ ವ್ಯಕ್ತಿಚಿತ್ರ]

ರಾಜೀನಾಮೆಗೆ ಕಾರಣ : ಕೂಡ್ಲಿಗಿಯ ಅಂಬೇಡ್ಕರ್ ಭವನದ ಬಳಿ ರಾಜಕೀಯ ಪಕ್ಷವೊಂದರ ಪ್ರಭಾವಿ ನಾಯಕ ಪರವಾನಿಗೆ ಇಲ್ಲದೆ ಮದ್ಯದಂಗಡಿಯೊಂದಕ್ಕೆ ಕಟ್ಟಡ ನಿರ್ಮಾಣ ಮಾಡುತ್ತಿದ್ದರು. ಇದರ ವಿರುದ್ಧ ದಲಿತ ಸಂಘಟನೆಗಳು ನೀಡಿದ ದೂರಿನ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಯಾವುದೇ ಕಾಮಗಾರಿಗಳನ್ನು ನಡೆಸದಂತೆ ಅನುಪಮಾ ಸೂಚನೆ ನೀಡಿದ್ದರು. ಅಲ್ಲದೆ, ಈ ಸಂಬಂಧ ಮೂವರನ್ನು ಬಂಧಿಸಿ ಅವರ ವಿರುದ್ಧ ಅಪರಾಧ ದಂಡ ಸಂಹಿತೆ ಸೆಕ್ಷನ್ 107ರಂತೆ ಪ್ರಕರಣ ದಾಖಲಿಸಿಕೊಂಡು ತಾಲೂಕು ದಂಡಾಧಿಕಾರಿ ಮುಂದೆ ಹಾಜರು ಪಡಿಸಿದ್ದರು.

ಮೂವರ ಬಂಧನವನ್ನು ವಿರೋಧಿಸಿ ರಾಜಕೀಯ ಮುಖಂಡನ ಬೆಂಬಲಿಗರು ಪೊಲೀಸ್ ಠಾಣೆಯ ಎದುರು ಪ್ರತಿಭಟನೆಗಳನ್ನು ನಡೆಸಿ, ಅವರ ವಿರುದ್ಧ ಧಿಕ್ಕಾರಗಳನ್ನು ಕೂಗಿದ್ದರು. ಇದರಿಂದಾಗಿ ಮನನೊಂದು ಅನುಪಮಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎನ್ನುವುದು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿರುವ ಮಾತುಗಳು.

ಅನುಪಮಾ ಶೆಣೈ ರಾಜೀನಾಮೆ ನೀಡಿದ್ದರೂ ಕೈಕಟ್ಟಿ ಸುಮ್ಮನೇ ಕುಳಿತುಕೊಂಡಿಲ್ಲ. ಏಕಾಏಕಿ ತಮ್ಮ ರಾಜೀನಾಮೆಗೆ ಕಾರಣಕರ್ತರಾದ ಸರ್ಕಾರದ ವಿರುದ್ಧ ಅನುಪಮಾ ತಮ್ಮ ದಾಳಿ ಆರಂಭಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸರಕಾರ, ತಮ್ಮ ಇಲಾಖೆಯ ಹುಳುಕನ್ನು ಎತ್ತಿ ತೋರಿಸುವಂತೆ ಕಮೆಂಟ್‌ಗಳನ್ನು ಸ್ಟೇಟಸ್‌ಗಳನ್ನು ಹಾಕುತ್ತಿದ್ದಾರೆ. ಈ ಮೂಲಕ ಇಲಾಖೆಯೊಳಗಿನ ಹುಳುಕು ಹಾಗೂ ಅಧಿಕಾರಿಗಳಿಗೆ ನೀಡುತ್ತಿರುವ ಕಿರುಕುಳದ ಕುರಿತು ಬಹಿರಂಗವಾಗಿ ಆರೋಪ ಮಾಡುತ್ತಿದ್ದಾರೆ.

ರಾಜೀನಾಮೆ ನೀಡಿದ ಬಳಿಕ ಅವರು ಎಲ್ಲಿದ್ದಾರೆ ಎಂಬುದು ಯಾರಿಗೂ ಗೊತ್ತಿಲ್ಲ. ಪೊಲೀಸ್ ಇಲಾಖೆಯ ಕೆಲ ಅಧಿಕಾರಿಗಳು ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಯಾರ ಸಂಪರ್ಕಕ್ಕೂ ಸಿಕ್ಕಿಲ್ಲ. ಆದರೆ ಒನ್‌ಇಂಡಿಯಾಗೆ ಲಭಿಸಿರುವ ಮಾಹಿತಿಯ ಪ್ರಕಾರ ಅವರು ಶಿವಮೊಗ್ಗದಲ್ಲಿ ತಮ್ಮ ಸ್ನೇಹಿತೆಯ ಮನೆಯಲ್ಲಿದ್ದಾರೆ. ಅಲ್ಲಿಂದಲೇ ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ತೆರೆಮರೆಯ ಹೋರಾಟವನ್ನು ಮುಂದುವರೆಸಿದ್ದಾರೆ.

English summary
Former police officer Mitra has expressed his opinion on Anupama Shenoy resignation. He says, she should have fought the battle staying in police department. He has also lambasted women organizations for not taking side of woman police officer, who is fighting against liquor lobby.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X