ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿಕ್ಕಮಗಳೂರು ಡಿವೈಎಸ್‌ಪಿ ಕಲ್ಲಪ್ಪ ಹಂಡಿಭಾಗ್ ಆತ್ಮಹತ್ಯೆ

By Super Admin
|
Google Oneindia Kannada News

ಬೆಳಗಾವಿ, ಜುಲೈ 05 : ಉದ್ಯಮಿಯನ್ನು ಅಪಹರಣ ಮಾಡಿದ ಆರೋಪ ಎದುರಿಸುತ್ತಿದ್ದ ಚಿಕ್ಕಮಗಳೂರು ಡಿವೈಎಸ್‌ಪಿ ಕಲ್ಲಪ್ಪ ಹಂಡಿಭಾಗ್ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 'ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಸಿಐಡಿಗೆ ಒಪ್ಪಿಸಲಾಗುವುದು' ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿದರು.

ಮಂಗಳವಾರ ಮುಂಜಾನೆ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುರಗೋಡ ಠಾಣಾ ವ್ಯಾಪ್ತಿಯಲ್ಲಿರುವ ಮಾವನ ಮನೆಯಲ್ಲಿ ಕಲ್ಲಪ್ಪ ಅವರು ನೇಣಿಗೆ ಶರಣಾಗಿದ್ದಾರೆ. ಕೆಎಲ್‌ಇ ಆಸ್ಪತ್ರೆಗೆ ಶವವನ್ನು ತೆಗೆದುಕೊಂಡು ಹೋಗಲಾಗಿದ್ದು, ಮರಣೋತ್ತರ ಪರೀಕ್ಷೆ ನಡೆಯಬೇಕಿದೆ. [ಹಿರಿಯ ಅಧಿಕಾರಿಗಳ ವಿರುದ್ಧ ದೂರು ನೀಡಿದ ಅನುಪಮಾ ಶೆಣೈ]

kallappa handibag

ಭಾನುವಾರ ಕರ್ತವ್ಯಕ್ಕೆ ಹಾಜರಾಗಿದ್ದ ಅವರು ಸೋಮವಾರ ನಾಪತ್ತೆಯಾಗಿದ್ದರು. ಮಂಗಳವಾರ ಬೆಳಗ್ಗೆ ಮಾವನ ಮನೆಯಲ್ಲಿ ಅವರು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಮರ್ಯಾದೆಗೆ ಅಂಜಿ ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. [ರಾಜೀನಾಮೆ ನೀಡಿದ್ದೇಕೆ? ಅನುಪಮಾ ಶೆಣೈ ಪತ್ರದಿಂದ ಬಹಿರಂಗ]

ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಹಂದಿಗುಂದ ಗ್ರಾಮದವರಾದ ಕಲ್ಲಪ್ಪ ಹಂಡಿಭಾಗ್ ಅವರು ಮೂರು ವರ್ಷಗಳ ಹಿಂದೆ ಮುರಗೋಡ ಗ್ರಾಮದ ವಿದ್ಯಾ ಎಂಬುವವರನ್ನು ವಿವಾಹವಾಗಿದ್ದರು. ಕಲ್ಲಪ್ಪ, ವಿದ್ಯಾ ದಂಪತಿಗೆ 1 ವರ್ಷದ ಗಂಡು ಮಗುವಿದೆ.

ಕಲ್ಲಪ್ಪ ಹಂಡಿಬಾಗ್ ವಿರುದ್ಧ ಆರೋಪ : ಹಣಕ್ಕಾಗಿ ವ್ಯಕ್ತಿಯನ್ನು ಅಪಹರಣ ಮಾಡಿಸಿದ ಆರೋಪವನ್ನು ಕಲ್ಲಪ್ಪ ಹಂಡಿಭಾಗ್ ಎದುರಿಸುತ್ತಿದ್ದಾರೆ. ಜೂನ್ 28ರಂದು ಮುಂಜಾನೆ 2 ಗಂಟೆ ಸುಮಾರಿಗೆ ಚಿಕ್ಕಮಗಳೂರಿನ ರತ್ನಗಿರಿ ಬಡಾವಣೆ ನಿವಾಸಿ ತೇಜಸ್ ಗೌಡ ಅಪಹರಣವಾಗಿತ್ತು.[ಡಿವೈಎಸ್ಪಿ ಕಲ್ಲಪ್ಪ ಸಾವಿಗೆ ಕಿರುಕುಳ ಕಾರಣವಲ್ಲ: ಎಸ್ಪಿ ಸಂತೋಷ್]

ತೇಜಸ್ ಅವರನ್ನು ಅಪಹರಣ ಮಾಡಿದ ಬಳಿಕ, ಬೆಂಗಳೂರಿನ ಅಜ್ಞಾತ ಸ್ಥಳದಲ್ಲಿಟ್ಟು ಚಿಕ್ಕಮಗಳೂರಿನಲ್ಲಿರುವ ತಮಗೆ ಬೇಕಾದವರಿಗೆ 10 ಲಕ್ಷ ಹಣ ನೀಡುವಂತೆ ರೌಡಿಗಳು ಹಿಂಸೆ ನೀಡಿದ್ದರು. ಹಿಂಸೆಯಿಂದ ಹೆದರಿದ ತೇಜಸ್ ತನ್ನ ಸ್ನೇಹಿತ ಪವನ್‌ಗೆ ಕರೆ ಮಾಡಿ ಹಣ ತರುವಂತೆ ಹೇಳಿದ್ದ.[ಕಲ್ಲಪ್ಪ ಪ್ರಕರಣದಲ್ಲಿ ಕಿಡ್ನಾಪ್ ಆಗಿದ್ದ ತೇಜಸ್ ಹೇಳಿದ್ದೇನು?]

ತೇಜಸ್‌ ತನ್ನ ಮತ್ತೊಬ್ಬ ಸ್ನೇಹಿತ ಶಿವುಗೆ ಕರೆ ಮಾಡಿ ಪವನ್‌ಗೆ ಹಣ ನೀಡುವಂತೆ ಹೇಳಿದ್ದ. ಪವನ್ ಹಣ ಕೊಡಲು ಕರೆ ಮಾಡಿದ ನಂಬರ್‌ ಡಿವೈಎಸ್‌ಪಿ ಕಲ್ಲಪ್ಪ ಹಂಡಿಭಾಗ್ ಅವರದ್ದಾಗಿತ್ತು. ಬಾರ್‌ಲೈನ್ ರಸ್ತೆಗೆ ಬಂದು ಹಣ ನೀಡುವಂತೆ ಅವರು ಹೇಳಿದ್ದರು. ಪವನ್ ಹಣ ಕೊಟ್ಟ ಮೇಲೆ ಕಲ್ಲಪ್ಪ ಅವರು ರೌಡಿಗಳಿಗೆ ಕರೆ ಮಾಡಿ ತೇಜಸ್ ಬಿಡುಗಡೆಗೆ ಸೂಚಿಸಿದ್ದರು. ರೌಡಿಗಳು ತೇಜಸ್‌ನನ್ನು ಮೆಜೆಸ್ಟಿಕ್‌ನಲ್ಲಿ ಬಿಟ್ಟು ಪರಾರಿಯಾಗಿದ್ದರು.

ಜುಲೈ 1ರಂದು ತೇಜಸ್ ಕುಮಾರ್ ಬಸವನಹಳ್ಳಿ ಪೊಲೀಸ್ ಠಾಣೆಗೆ ಈ ಕುರಿತು ದೂರು ನೀಡಿದ್ದರು. ಪೊಲೀಸರು ಮೊಬೈಲ್ ಕರೆ ಪರಿಶೀಲನೆ ನಡೆಸಿದಾಗ ಹಂಡಿಭಾಗ್ ಮಾತನಾಡಿರುವುದು ಖಾತ್ರಿಯಾಗಿತ್ತು. ದೂರು ನೀಡಿದ ವಿಷಯ ಬೆಳಕಿಗೆ ಬರುತ್ತಿದ್ದಂತೆ ಹಂಡಿಭಾಗ್ ತಲೆಮರೆಸಿಕೊಂಡಿದ್ದರು.

ತೇಜಸ್ ಬಂಧಿಸಲಾಗಿತ್ತು : ಚಿಕ್ಕಮಗಳೂರು ನಗರದ ಹೊರವಲಯದ ಚಿಕ್ಕೊಳಳೆ ಸಮೀಪ ಬಳಿ ಜೂಜಾಡುತ್ತಿದ್ದ 24 ಮಂದಿಯನ್ನು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದರು ಮತ್ತು 3 ಲಕ್ಷ ರೂ.ಗಳನ್ನು ವಶಕ್ಕೆ ಪಡೆದುಕೊಂಡಿದ್ದರು. ಈ ಗುಂಪಿನಲ್ಲಿ ತೇಜಸ್ ಗೌಡ ಸಹ ಇದ್ದ. ಜೂನ್ 28ರಂದು ಜಾಮೀನು ಪಡೆದು ಆತ ಹೊರಬಂದ ಬಳಿಕ ಅಪಹರಣ ಮಾಡಲಾಗಿತ್ತು.

ಸಿಐಡಿ ತನಿಖೆ : ಕಲ್ಲಪ್ಪ ಆತ್ಮಹತ್ಯೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು, 'ಈ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲಾಗುತ್ತದೆ' ಎಂದು ಮಂಗಳವಾರ ಮಧ್ಯಾಹ್ನ ವಿಧಾನಸೌಧದಲ್ಲಿ ಹೇಳಿದರು.

'ಡಿವೈಎಸ್‌ಪಿ ಕಲ್ಲಪ್ಪ ಹಂಡಿಭಾಗ್ ಅವರ ಮಾವನ ಮನೆಯಲ್ಲಿ ಯಾವುದೇ ಡೆತ್ ನೋಟ್ ಪತ್ತೆಯಾಗಿಲ್ಲ. ಇಂದು ಬೆಳಗ್ಗೆ 11.30ರ ವೇಳೆಗೆ ಕಲ್ಲಪ್ಪ ಅವರು ಮೃತಪಟ್ಟಿದ್ದಾರೆ' ಎಂದು ಉತ್ತರ ವಲಯ ಐಜಿಪಿ ಉಮೇಶ್ ಕುಮಾರ್ ಬೆಳಗಾವಿಯಲ್ಲಿ ಹೇಳಿದರು.

English summary
Chikkamagaluru deputy superintendent of police (DySP) Kallappa Handibag committed suicide on July 5, 2016. Kallappa Handibag who was accused of kidnapping a man and taking a ransom of Rs 10 lakhs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X