ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಒನ್ ಇಂಡಿಯಾ'ದೊಂದಿಗೆ ಎಸ್ ಪಿ ಬಾಲಸುಬ್ರಹ್ಮಣ್ಯಂ ಮಾತುಕತೆ

ಹಂಸಲೇಖಾ ಮ್ಯೂಸಿಕ್ ಟ್ರಸ್ಟ್ ನ ಸಮಾರಂಭವೊಂದಕ್ಕೆ ಆಗಮಿಸಿದ್ದ ಜನಪ್ರಿಯ ಗಾಯಕ ಎಸ್.ಪಿ. ಬಾಲಸುಬ್ರಮಣ್ಯಂ ಅವರು ನುಡಿದ ನುಡಿಮುತ್ತುಗಳ ಆಯ್ದ ಭಾಗ ಇಲ್ಲಿ ನಿಮಗಾಗಿ.

|
Google Oneindia Kannada News

''ನಾವೇನು ಹಾಡ್ತೀವಿ. ಆದರೆ, ನಾವು ಹಾಡೋದು ದೊಡ್ಡದಲ್ಲ. ಅದನ್ನು ಕೇಳಿ ಆನಂದಿಸಿದರಲ್ಲವಾ? ಆ ಹಾಡುಗಳು ರಚನೆಯಾಗಿ ವರ್ಷಾನುಗಟ್ಟಲೇ ಕಳೆದರೂ ಅವನ್ನು ಇಂದಿಗೂ ಆಲಿಸಿ ಖುಷಿ ಪಡುತ್ತಾರಲ್ಲವಾ? ಆ ಆಸ್ವಾದಿಸುವ ಗುಣವೇ ದೊಡ್ಡದು''

ಆ ಐಶಾರಾಮಿ ಹೋಟೆಲ್ ನಲ್ಲಿ ಒಂದು ಕಾಟನ್ ಬಿಳಿ ಜುಬ್ಬ ಹಾಗೂ ಪೈಜಾಮ ಧರಿಸಿ ಸಿಂಪಲ್ಲಾಗಿ ಕೂತಿದ್ದ ಆ ಮನುಷ್ಯ ಹಾಗೊಂದು ಧನ್ಯತಾ ಭಾವವನ್ನು ವ್ಯಕ್ತಪಡಿಸುತ್ತಿದ್ದರೆ ಯಾಕೋ ತುಂಬಿದ ಕೊಡ ತುಳುಕುವುದಿಲ್ಲ ಎಂಬ ಗಾದೆ ಹಾಗೇ ಮನಸ್ಸಿನಲ್ಲಿ ಸುಳಿದು ಮಾಯವಾಯಿತು.

ಹಂಸಲೇಖಾ ಮ್ಯೂಸಿಕ್ ಟ್ರಸ್ಟ್ ನ ಸಮಾರಂಭವೊಂದಕ್ಕೆ ಆಗಮಿಸಿದ್ದ ಎಸ್ ಪಿಬಿ ಮಾತನಾಡುತ್ತಿದ್ದರೆ ಮಹಾನ್ ಸಾಗರವೇ ಎದುರಿಗಿರುವ ಅನುಭವ. ಅವರಾಡುವ ಪ್ರತಿಯೊಂದು ಮಾತುಗಳೂ, ಅರ್ಥಗರ್ಭಿತವಾಗಿರುತ್ತವೆ.

ತಮ್ಮ ಈ ಐವತ್ತು ವರ್ಷಗಳ ಸಾಧನೆಯ ಯಶಸ್ಸನ್ನು ಹೀಗೆ ಶ್ರೋತೃಗಳ ಹೆಗಲ ಮೇಲೆ ಹೊರಿಸಿದ ಸಂಗೀತ ದಿಗ್ಗಜ ಒನ್ ಇಂಡಿಯಾದೊಂದಿಗೆ ತಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಅವರ ಪ್ರತಿಯೊಂದು ಮಾತುಗಳು ಪರಿಪಕ್ವವಾಗಿದ್ದವು. ಅಲ್ಲದೆ, ಅಪ್ಪಟ ಸಂಗೀತ ಪ್ರೇಮಿಗಳಿಗೆ ಮಾತ್ರ ಅರ್ಥವಾಗುವಂಥವು.

ಅವರ ನುಡಿಮುತ್ತುಗಳಲ್ಲಿ ಆಯ್ದವುಗಳನ್ನು ಇಲ್ಲಿ ನಿಮ್ಮಗಾಗಿ ಹರಡಿದ್ದೇವೆ. ಆರಿಸಿಕೊಳ್ಳೋದು, ಆದರಿಸುವುದು ನಿಮ್ಮ ಕೆಲಸ.

ಕಾಲ ಚಕ್ರದ ನಿಯಮ ಒಪ್ಪಲೇಬೇಕು

ಕಾಲ ಚಕ್ರದ ನಿಯಮ ಒಪ್ಪಲೇಬೇಕು

ಹಾಲಿ ತಮ್ಮ ವಿರಾಮದ ಸಮಯವನ್ನು ಹೇಗೆ ಕಳೆಯುತ್ತಿದ್ದಾರೆಂಬ ವಿಚಾರದ ಬಗ್ಗೆ ಅವರು ಹೇಳಿದ್ದು ಹೀಗೆ. ನಾನು ಬ್ಯುಸಿ ಇದ್ದ ದಿನಗಳಲ್ಲಿ ದಿನಕ್ಕೆ ಸುಮಾರು 12ರಿಂದ 16 ಹಾಡುಗಳನ್ನು ಹಾಡುತ್ತಿದ್ದೆ. ಆದರೆ, ಈಗ ಹಾಗಿಲ್ಲ. ದಿನಕ್ಕೆ ಒಂದು ಹಾಡು ಹಾಡುತ್ತೇನಷ್ಟೆ. ಆದರೆ, ನನಗೀಗ ಬೇಜಾರಿಲ್ಲ. ಏಕೆಂದರೆ, ಕಾಲಚಕ್ರದ ನಿಯಮವನ್ನು ನಾವು ಒಪ್ಪಿಕೊಳ್ಳಲೇಬೇಕು. ಈಗ ಬರುತ್ತಿರುವ ಉತ್ತಮ ಹಾಡುಗಾರರಿಗಾಗಿ ಜಾಗ ಬಿಟ್ಟುಕೊಟ್ಟು ನಾವು ಪಕ್ಕಕ್ಕೆ ಬರಲೇಬೇಕು. ಇದು ಕಾಲದ ನಿಯಮ ಎಂದು ಹೇಳಿದರು.

ಮಾಯವಾಗುತ್ತಿದೆ ಭಾರತೀಯ ಸಂಗೀತ

ಮಾಯವಾಗುತ್ತಿದೆ ಭಾರತೀಯ ಸಂಗೀತ

ಹಾಲಿ ಸಂಗೀತ ದಾರಿ ತಪ್ಪುತ್ತಿದೆ ಎಂಬ ಬಗ್ಗೆ ಅವರಿಗೆ ಬೇಸರವೂ ಇದೆ. ಭಾರತೀಯ ಸಂಗೀತವು ವಿಶ್ವದಲ್ಲಿಯೇ ಪರಿಪೂರ್ಣ ಸಂಗೀತ. ಆದರೆ, ನಮ್ಮ ಸಂಗೀತವನ್ನು ಅರಿಯುವಲ್ಲಿ ನಾವು ಎಡವುತ್ತಿದ್ದೇವೆ. ನಮ್ಮ ಮೂಲ ಸಂಗೀತದ ಛಾಯೆ ಇಂದಿನ ಕಂಪೋಸಿಂಗ್ ಗಳಲ್ಲಿ ದೂರವಾಗುತ್ತಿದೆ ಎಂಬ ಬೇಸರವನ್ನೂ ಅವರು ವ್ಯಕ್ತಪಡಿಸಿದರು.

ಆ ಗ್ರಾಮರ್ ಅನ್ನು ಉತ್ತೇಜಿಸಬೇಕಿದೆ

ಆ ಗ್ರಾಮರ್ ಅನ್ನು ಉತ್ತೇಜಿಸಬೇಕಿದೆ

ಇಂದಿನ ಚಿತ್ರ ಸಂಗೀತದಲ್ಲಿ ಭಾರತೀಯ ಸಂಗೀತ ಕಳೆದು ಹೋಗುತ್ತಿರುವುದನ್ನು ತಪ್ಪಿಸಲು ಅವರ ಬಳಿಯೊಂದು ಐಡಿಯಾವೂ ಇದೆ. ಅವರ ಪ್ರಕಾರ, ಜಾನಪದ ಸಂಗೀತವಾಗಲೀ, ಸಿನಿಮಾ ಸಂಗೀತವಾಗಲೀ ಈ ಎಲ್ಲಾ ಸಂಗೀತಗಳಿಗೆ ಒಂದು ಶಾಸ್ತೀಯತೆ ಇದೆ. ಜನಪದಲ್ಲಿ, ಸಿನಿಮಾ ಹಾಡುಗಳಲ್ಲಿ ಶಾಸ್ತ್ರೀಯತೆ ಇಲ್ಲ ಎಂದು ಹೇಳುವುದರಲ್ಲಿ ಅರ್ಥವೇ ಇಲ್ಲ. ಏಕೆಂದರೆ, ಪ್ರತಿಯೊಂದು ಸಂಗೀತದಲ್ಲಿಯೂ ಗ್ರಾಮರ್ ಎಂಬುದೊಂದಿರುತ್ತದೆ. ಅದನ್ನು ಹೆಚ್ಚಿಸಬೇಕು. ಅದನ್ನು ಬೆಳೆಸಬೇಕು. ಆಧುನಿಕತೆಯ ಭರಾಟೆಯ ನಡುವೆಯೂ ಹಂಸಲೇಖ ಸಂಗೀತ ಟ್ರಸ್ಟ್, ಜಾನಪದ ಸಂಗೀತವನ್ನು ಮತ್ತೊಂದು ಎತ್ತರಕ್ಕೆ ಕೊಂಡೊಯ್ಯಲು ಅಡಿಯಿಟ್ಟಿದೆ. ಇಂಥ ಕೆಲಸಗಳು ಆಗಬೇಕಿದೆ.

ನಾವು ಎಡವಿದ್ದೇ ಇಲ್ಲಿ

ನಾವು ಎಡವಿದ್ದೇ ಇಲ್ಲಿ

ತಲಾತಲಾಂತರಗಳಿಂದ ಬಂದ ಸಂಗೀತವನ್ನು ನಾವು ಅಭ್ಯಸಿಸಿದ್ದೇವೆ. ಉನ್ನತೀಕರಿಸಿದ್ದೇವೆ. ಆದರೆ, ಆವಿಷ್ಕರಿಸಿಲ್ಲ ಎಂಬ ಕೊರಗು ಬಾಲು ಅವರಿಗಿದೆ. ಇದನ್ನು ಒಂದು ಉದಾಹರಣೆ ಮೂಲಕ ಹೇಳುವ ಅವರು, ''ಬಿದಿರಿನ ಕೊಳವೆಯಲ್ಲಿ ಗಾಳಿ ಸಂಚರಿಸಿದರೆ ಉತ್ತಮವಾದ ಧ್ವನಿಯೊಂದು ಹೊರಹೊಮ್ಮುತ್ತದೆ ಎಂಬುದನ್ನು ಕಂಡುಕೊಂಡ ಮಾನವ ಆ ತತ್ವವನ್ನು ಇಟ್ಟುಕೊಂಡು ಕೊಳಲು ಕಂಡು ಹಿಡಿದ. ಆನಂತರ ಕಾಲ ಕಳೆದಂತೆ ಹಲವಾರು ರೂಪಾಂತರಗಳನ್ನು ಕಂಡು ಇದು ಫ್ಲೂಟ್ ಮ್ಯೂಸಿಕ್ ನಲ್ಲಿ ಹಲವಾರು ಪ್ರಬೇಧಗಳನ್ನು ಹುಟ್ಟುಹಾಕಿದೆ. ಆದರೆ, ಕೊಳಲಿನ ಆವಿಷ್ಕಾರಕ್ಕೆ ಮೂಲವಾದ ಹಲವಾರು ತತ್ವಗಳು ನಿಸರ್ಗದಲ್ಲಿ ಸಾಕಷ್ಟಿರಬಹುದು. ಆದರೆ, ಅವುಗಳನ್ನು ಆವಿಷ್ಕರಿಸುವಲ್ಲಿ ಮನುಷ್ಯ ಹಿಂದೆ ಬಿದ್ದಿದ್ದಾನೆ'' ಎಂದರು.

ಭಾವುಕತೆ ಕಳೆದು ಹೋಗುತ್ತಿರುವ ಕೊರಗು

ಭಾವುಕತೆ ಕಳೆದು ಹೋಗುತ್ತಿರುವ ಕೊರಗು

ಆನಂತರ ಅವರ ಮಾತುಗಳು ಬದಲಾದ ಇಂದಿನ ಭಾರತೀಯ ಸಮಾಜದ ಕಡೆಗೆ ಹೊರಳಿತು. ''ಇಂದು ನಾವು ಮಕ್ಕಳನ್ನು ಬೆಳೆಸುವ ಬಗೆಯೇ ಬದಲಾಗಿದೆ. ನಾವು ಮಕ್ಕಳಿಗೆ ಆಸ್ತಿಗಳನ್ನು ಮಾಡುತ್ತಿದ್ದೇವೆ. ಹೊಲ ಗದ್ದೆಗಳನ್ನು ಕೊಳ್ಳುತ್ತಿದ್ದೇವೆ. ಮನೆ, ಬಂಗಲೆಗಳನ್ನು ಕಟ್ಟುತ್ತಿದ್ದೇವೆ. ಆದರೆ, ಮಕ್ಕಳಿಗೆ ಸಂಸ್ಕಾರ ಕೊಡುತ್ತಿಲ್ಲ. ಅವರಲ್ಲಿ ಭಾರತೀಯ ಸಂಸ್ಕೃತಿಯನ್ನು ಬೆಳೆಸುವ ಪ್ರಯತ್ನ ಮಾಡುತ್ತಿಲ್ಲ. ಹಾಗಾಗಿಯೇ ಭಾರತೀಯ ಸಂಗೀತದ ಅವಿಭಾಜ್ಯ ಅಂಗವಾದ ಸಂಗೀತದ ಆಸ್ವಾದನೆ ಅವರಿಂದ ದೂರವಾಗುತ್ತಿದೆಯೇನೋ ಎನ್ನಿಸುತ್ತಿದೆ. ನಾವೆಲ್ಲರೂ ಇಂದು ರೋಬೋಗಳಾಗಿದ್ದೇವೆ. ಒಂದು ಭಾವನಾತ್ಮಕವಾದ ವಿಚಾರ ಕೇಳಿದರೆ ಕಣ್ತುಂಬಿ ಬರಬೇಕು, ಮನತುಂಬಬೇಕು. ಅವು ಆಗುತ್ತಿಲ್ಲವೆಂದಾದರೆ ನಮ್ಮ ಮನಸ್ಸು ಕಲ್ಲುಗಳಾಗಿವೆ ಎಂದರ್ಥ ಎಂದು ಮಾರ್ಮಿಕವಾಗಿ ನುಡಿದರು.

English summary
The Legendary Singer SP Balasubrahmanyam was in Bengaluru to attend an event organized by Hamsalekha Music Trust, Bengaluru. Here are some of the highlights of his talk, while we had a chit chat with the media.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X