ನೀವು ಸಿಗರೇಟು ಯಾಕೆ ಬಿಡಬೇಕು, ಇಲ್ಲಿವೆ 10 ಕಾರಣಗಳು

ಫೆಬ್ರವರಿ 4ರ ವಿಶ್ವ ಕ್ಯಾನ್ಸರ್ ದಿನದಂದು ಸಿಗರೇಟು ಸೇದುವವರಿಗೆ, ಸಿಗರೇಟು ಸೇದಿದರೆ ಕ್ಯಾನ್ಸರ್ ಬರುತ್ತದೆಂದು ಉಪದೇಶ ಮಾಡಲೆಂದು ಬರೆದ ಲೇಖನವಲ್ಲ ಇದು. ವಸ್ತುಸ್ಥಿತಿಯನ್ನು ತೆರೆದಿಡುವ ಪ್ರಯತ್ನವಷ್ಟೆ.

By:
Subscribe to Oneindia Kannada

ಭಾರತದಲ್ಲಿ ಪ್ರತಿವರ್ಷ ಸಿಗರೇಟು ಸೇದಿಸೇದಿ ಕೆಮ್ಮಿಕೆಮ್ಮಿ ವಿಕಾರವಾಗಿ ಸಾಯುತ್ತಿರುವವರ ಸಂಖ್ಯೆ 6 ಲಕ್ಷದಿಂದ 10 ಲಕ್ಷಕ್ಕೇರಿದೆ. ಸಿಗರೇಟು ಸೇದುವುದು ಆರೋಗ್ಯಕ್ಕೆ ಹಾನಿಕರವೆಂದು ಗೊತ್ತಿದ್ದರೂ ಧೂಮಪಾನಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ.

ಇರಲಿ, ಸಿಗರೇಟು ಸೇದುವುದು ಸ್ಟೈಲಿಗೋ, ಹವ್ಯಾಸಕ್ಕೋ, ಯಾರನ್ನೋ ಮೆಚ್ಚಿಸಲಿಕ್ಕೋ, ಅದೊಂದು ಅಡಿಕ್ಷನ್ನೋ ಬಹುಶಃ ಧೂಮಲೀಲೆಯ ಪರಿಣಿತರಿಗೂ ಗೊತ್ತಿರಲಿಕ್ಕಿಲ್ಲ. ಇದೊಂದು ಬಗೆಹರಿಸಲಾಗದ ಚಿದಂಬರ ರಹಸ್ಯ. ಒಟ್ಟಿನಲ್ಲಿ ತುಟಿಯ ತುದಿಯಲ್ಲಿ ಸಿಗರೇಟಿಗೆ ಬೆಂಕಿ ಹತ್ತಿಸಿ, ಸುರುಳಿಸುರುಳಿಯಾಗಿ ಹೊಗೆ ಬಿಡುತ್ತಿರಬೇಕು, ಅಷ್ಟೇ.

ಸಿಗರೇಟು ಸೇದುವುದು ಆರೋಗ್ಯಕ್ಕೆ ಹಾನಿಕರ, ಹೃದಯಾಘಾತವಾಗತ್ತೆ, ಕ್ಯಾನ್ಸರ್ ಬರತ್ತೆ ಅಂತ ಎಲ್ಲರಿಗೂ ಗೊತ್ತಿರತ್ತೆ. ಆದರೂ ಸಿಗರೇಟು ತ್ಯಜಿಸಲು ಏನೋ ಬಿಗುಮಾನ. "ಅಷ್ಟು ಈಸಿ ಅಲ್ಲರೀ ಸಿಗರೇಟು ಬಿಡೋದು, ಬೆಳಿಗ್ಗೆ ಒಂದು ದಮ್ ಎಳೆಯದಿದ್ದರೆ ಸರಿಯಾಗಿ ಎರಡು ಬರಲ್ಲ ಗೊತ್ತಾ? ನಿಮಗೇನು ಗೊತ್ತು ನಮ್ಮ ಕಷ್ಟ!" ಅಂತ ಡೈಲಾಗು ಸುರುಳಿಯಾಗಿ ಬರುತ್ತಿರುತ್ತವೆ.

ನಿಮ್ಮ ವಾದ ನಿಮಗೆ. ಒಂದು ವಿಷಯ ನಿಮಗೆ ಗೊತ್ತಾ? ಮೂರಿಂಚಿನ ಸಿಗರೇಟಿನಲ್ಲಿ ಏನೇನಿರತ್ತೆ ಅಂತ? ಕೀಟನಾಶಕದಲ್ಲಿ ಬಳಸಲಾಗುವ ವಿಷಾಕಾರಕ ನಿಕೋಟಿನ್, ಜರ್ಮನಿಯಲ್ಲಿ ಹಿಂದೆ ಮನುಷ್ಯರನ್ನು ಕೊಲ್ಲಲು ಬಳಸಲಾಗುತ್ತಿದ್ದ ಹೈಡ್ರೋಜನ್ ಸೈನೈಡ್, ಇಲಿ ಪಾಶಾಣದಲ್ಲಿ ಉಪಯೋಗಿಸಲಾಗುವ ಅರ್ಸೆನಿಕ್, ಬ್ಯಾಟರಿ ತಯಾರಿಕೆಯಲ್ಲಿ ಬಳಸಲಾಗುವ ಕ್ಯಾಡ್ಮಿಯಂ... ಸಾಕಾ ಇನ್ನೂ ಬೇಕಾ?

ಮಕ್ಕಳಿಗೆ ಶಿಕ್ಷಣ ಚೆನ್ನಾಗಿರಲಿ ಅಂತ ದುಡಿಯುವ ಅಪ್ಪ, ಮಕ್ಕಳು ಚೆನ್ನಾಗಿ ಬೆಳೆಯಲಿ ಅಂತ ಬೇಕಿದ್ದನ್ನೆಲ್ಲಾ ಮಾಡಿ ಹಾಕುವ ಅಮ್ಮನಿಗೆ, ಕುಡಿಮೀಸೆ ಚಿಗುರಿರುವ ತಮ್ಮ ಮಗ ಅಥವಾ ಮಗಳು ಕಾಲೇಜಿನ ಹೊರಗೆ ಬೆರಳ ತುದಿಯಲ್ಲಿ ಸಿಗರೇಟು ಹಿಡಿದಿರುತ್ತಾನೆ ಅಂತ ಗೊತ್ತಿರತ್ತಾ? ಗೊತ್ತಿಲ್ಲದಿದ್ದರೆ ಒಂದು ಬಾರಿ ಚೆಕ್ ಮಾಡಿ.

ಇಷ್ಟೆಲ್ಲಾ ಪೀಠಿಕೆ ಯಾಕೆ ಬರೆಯಬೇಕಾಯಿತೆಂದರೆ ಮಾರ್ಚ್ 8 ಮಹಿಳಾಮಣಿಗಳ ದಿನವಾದರೆ, ಮಾರ್ಚ್ 9 ವಿಶ್ವ ಧೂಮಪಾನ ರಹಿತ ದಿನವಂತೆ. ಧೂಮಪಾನಿಗಳೆ, ಕನಿಷ್ಠ ಇವತ್ತೊಂದು ದಿನವಾದರೂ ಸಿಗರೇಟಿನಿಂದ ದೂರವಿರಿ, ಬೀಡಿಗೂ ಕೈಹಾಕಬೇಡಿ. ಸಾಧ್ಯವಾದರೆ ಕಷ್ಟವಾದರೂ ಸರಿ ಧೂಪಮಾನ ತ್ಯಜಿಸಿಬಿಡಿ. ಏಕೆಂದರೆ, ಮುಂದೆ ಮತ್ತಷ್ಟು ಕಾರಣಗಳಿವೆ ನೋಡಿ. [ಧೂಮಪಾನ ಮಾಡುವುದು ಬಿಡುವುದು ನಿಮ್ಮಿಷ್ಟ!]

ಎಷ್ಟು ಹಣ ಉಳಿಸುತ್ತೀರಿ ಲೆಕ್ಕ ಹಾಕಿ

ನಿಮ್ಮ ಬ್ರಾಂಡ್ ಯಾವುದು? ದಿನಕ್ಕೆ ಎಷ್ಟು ಸೇದುತ್ತೀರಿ? ದಿನ ಇಷ್ಟಿಷ್ಟೇ ಎಂದು ಸೇದಿದರೆ ವರ್ಷಕ್ಕೆ ಎಷ್ಟಾಗುತ್ತದೆ? ಮುಂದಿನ ಐದು ವರ್ಷಕ್ಕೆ ಕನಿಷ್ಠ ಎಷ್ಟಾಗುತ್ತದೆ ಲೆಕ್ಕ ಹಾಕಿ. ಬಹುಶಃ ಸಿಗರೇಟು ಬಿಟ್ಟಿದ್ದರೆ ಇಷ್ಟು ಹಣವನ್ನು ಉಳಿಸಬಹುದಿತ್ತು ಎಂಬ ಯೋಚನೆ ತಲೆಯಲ್ಲಿ ಹೊಕ್ಕರೂ ಹೊಕ್ಕೀತು.

ಸಿಗರೇಟು ತ್ಯಜಿಸಿದರೆ ಗೌರವದಿಂದ ಕಾಣುತ್ತಾರೆ

ಅಲ್ಲಿ ನನ್ನ ಮಗನಿಗೆ ಅಂಥಾದ್ಯಾವ್ದೂ ಚಟವಿಲ್ಲಪ್ಪ ಅಂತ ಅಮ್ಮ ಹೆಮ್ಮೆಯಿಂದ ಹೇಳುತ್ತಿರುತ್ತಾಳೆ, ಇಲ್ಲಿ ಮಗನ ಬೆರಳುಗಳ ಸಂದಿಯಿಂದ ಹೊಗೆ ಬರುತ್ತಿರುತ್ತದೆ. ಈ ಸಂಗತಿ ಮೇಷ್ಟ್ರಿಗೆ, ಸಂಬಂಧಿಗಳಿಗೆ, ಹೆತ್ತವರಿಗೆ, ಪ್ರೇಯಸಿಗೆ ಗೊತ್ತಾದರೆ ಏನಾಗುತ್ತದೆಂದು ಯೋಚಿಸಿ. ಪ್ರೇಯಸಿ ನಿಮಗೆ ಮುತ್ತಿಡಲ್ಲ, ಸಾವು ಮುತ್ತಿಡುತ್ತದೆ! ಸಿಗರೇಟು ಬಿಟ್ಟರೆ ನಿಮ್ಮ ಗೌರವ ಮಣ್ಣುಪಾಲಾಗಲ್ಲ, ಹೆಚ್ಚುತ್ತದೆ.

ನಿಮ್ಮ ನೋಟದಲ್ಲೇ ಒಂದು ರೀತಿಯ ಕಳೆ

ಚೇನ್ ಸ್ಮೋಕರ್ ಮುಖವನ್ನೊಮ್ಮೆ ದಿಟ್ಟಿಸಿ ನೋಡಿ. ತುಟಿ ಕಪ್ಪಾಗಿರುತ್ತದೆ, ಹಲ್ಲು ಹಳದಿಗಟ್ಟಿರುತ್ತದೆ, ಮುಖ ಸುಕ್ಕುಗಟ್ಟಿರುತ್ತದೆ, ಬಾಯಿಯಿಂದ ದುರ್ಗಂಧ, ಥೂ! ರಕ್ತ ಸೇರುವ ಸಿಗರೇಟಿನ ಕಣಗಳು ಚರ್ಮ ಕಳೆಗುಂದುವಂತೆ ಮಾಡುತ್ತದೆ. ಸಿಗರೇಟು ಬಿಟ್ಟರೆ ಚರ್ಮಕ್ಕೆ ರಕ್ತದ ಹರಿವು ಹೆಚ್ಚಾಗಿ ನ್ಯಾಚುರಲ್ ಆಗಿ ಅಂದ ಬರುತ್ತದೆ. ಕನ್ನಡಿಯಲ್ಲಿ ನಿಮ್ಮ ಮುಖ ದಿಟ್ಟಿಸಿ ನೋಡಿಕೊಳ್ಳಿ.

ಕಾಳಜಿ ಮಾಡುವವರಿಗಾಗಿ ಸಿಗರೇಟು ಬಿಡಿ

ಸಿಗರೇಟು ನಿಮ್ಮನ್ನು ಅನಾರೋಗ್ಯದ ಕೂಪಕ್ಕೆ ತಳ್ಳಿ, ಸಾವಿಗೆ ಹತ್ತಿರವಾಗಿಸುವುದು ಮಾತ್ರವಲ್ಲ, ಪ್ರೀತಿಪಾತ್ರರಿಂದಲೂ ದೂರವಾಗಿಸುತ್ತದೆ. ಇದು ನಿಮ್ಮನ್ನು ಅತಿಯಾಗಿ ಪ್ರೀತಿಸುವ ತಂದೆ ತಾಯಿ, ಹೆಂಡತಿ, ಮಕ್ಕಳ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದನ್ನು ಕೆಲಸಮಯ ಸುಮ್ಮನೆ ಕುಳಿತು ಯೋಚಿಸಿ. ನಿಮಗೂ ಅವರ ಬಗ್ಗೆ ಕಾಳಜಿ ಇದ್ದರೆ ಸಿಗರೇಟನ್ನು ಹೊಸಕಿಹಾಕಿ.

ಸಹಜ ಉಸಿರಾಟವನ್ನು ಮರಳಿ ಪಡೆಯಿರಿ

ಸಿಗರೇಟಿಗೆ ಅಡಿಕ್ಟ್ ಆಗಿದ್ದೀರಾ? ಉಸಿರಾಟ ಸಹಜವಾಗಿದೆಯೆ? ಅಥವಾ ಕಷ್ಟವಾಗುತ್ತಿದೆಯೆ? ನಿಮ್ಮ ಪುಪ್ಪುಸ ಆರೋಗ್ಯವಾಗಿದೆಯೆ ಅಥವಾ ಎದೆಯಲ್ಲಿ ಉರಿ ಶುರುವಾಗಿದೆಯೆ? ಒಂದು ಬಾರಿ ಪುಪ್ಪುಸದ ಎಕ್ಸ್‌ರೆ ತೆಗೆಸಿ ನೋಡಿ. ಸಿಗರೇಟು ಸೇದುವಾಗ ಕನ್ನಡಿಯಲ್ಲಿ ನಿಮ್ಮ ಲಂಗ್ ಹೇಗೆ ಕಾಣುತ್ತಿದೆಯೆಂದು ಗೊತ್ತಾಗುವಂತಿದ್ದರೆ ಚೆನ್ನಾಗಿರುತ್ತಿತ್ತು ಅಲ್ಲವಾ? ಆ ಎಕ್ಸ್‌ರೇ ನೋಡಿದರೆ ಮತ್ತೆಂದೂ ನೀವು ಸಿಗರೇಟು ಮುಟ್ಟುವುದಿಲ್ಲ.

ಹಾರ್ಟ್ ಅಟಾಕ್, ಕ್ಯಾನ್ಸರ್!

ಧೂಮಪಾನ ಮಾಡದವರಿಗಿಂತ ಧೂಮಪಾನಿಗಳ ಸಾವಿನ ಸಂಭವನೀಯತೆ ನಾಲ್ಕರಷ್ಟು ಹೆಚ್ಚಿರುತ್ತದೆ. ಸಿಗರೇಟು ದೇಹವನ್ನೇ ವಿಷಮಯವಾಗಿಸುತ್ತದೆ. ಧೂಮ ಬ್ಯಾಡ್ ಕೊಲೆಸ್ಟ್ರಾಲ್ ಹಿಗ್ಗಿಸಿ, ಗುಡ್ ಕೊಲೆಸ್ಟ್ರಾಲ್ ಪ್ರಮಾಣವನ್ನು ಕುಗ್ಗಿಸುತ್ತದೆ. ಪರಿಣಾಮ ಹೃದಯ ಸ್ಥಂಬನ. ಇನ್ನು ಬಾಯಿ ಕ್ಯಾನ್ಸರ್, ಪುಪ್ಪುಸ ಕ್ಯಾನ್ಸರ್, ಗಂಟಲು ಕ್ಯಾನ್ಸರ್ ನಿಮ್ಮನ್ನು 14 ಪಟ್ಟು ವೇಗವಾಗಿ ಯಮನ ಬಳಿಗೆ ಕಳಿಸುತ್ತದೆ. ಇಂಥ ಸಾವು ಬೇಕಾ?

ಮಹಿಳೆಯರೆ ನಿಮಗಿದೆಲ್ಲಾ ಬೇಕಾ?

ಇತ್ತೀಚಿನ ದಿನಗಳಲ್ಲಿ, ಪುರುಷರಿಗಿಂತ ನಾವೇನು ಕಮ್ಮಿ ಅಂತ ಲಲನೆಯರೂ ಧೂಮಲೀಲೆಗೆ ಮರುಳಾಗುತ್ತಿದ್ದಾರೆ. ಇದರಿಂದಾಗಿ ಋತುಚಕ್ರ ಏರುಪೇರಾಗುತ್ತದೆ, ಖಿನ್ನತೆಗೊಳಗಾಗುತ್ತಿದ್ದಾರೆ, ಹುಟ್ಟುವ ಮಕ್ಕಳು ಅಂಗವಿಕಲರಾಗುತ್ತಿದ್ದಾರೆ, ಮಾರಕ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ತಿರಸ್ಕಾರಕ್ಕೊಳಗಾಗುತ್ತಿದ್ದಾರೆ. ಮಹಿಳೆಯರೇ ಸಿಗರೇಟು ಸೇದುವುದು ಪ್ರತಿಷ್ಠೆಯ ಸಂಕೇತವಲ್ಲ, ನಿಮ್ಮ ಅವನತಿಗೆ ಬರೆಯುವ ಮುನ್ನುಡಿ.

ಪುರುಷರಲ್ಲಿ ಲೈಂಗಿಕಾಸಕ್ತಿ ಕುಂದುತ್ತಿದೆ

ನಿಮಗೆ ಗೊತ್ತಾ? ಮೂರಿಂಚಿನ ಸಿಗರೇಟಿನಿಂದ ಆರಿಂಚಿನ ನಿಮ್ಮ ಪುರುಷತ್ವದ ಅಂಗ ಶಕ್ತಿ ಕಳೆದುಕೊಳ್ಳುತ್ತದೆ! ಯಸ್, ಸಿಗರೇಟು ಸೇದುವುದಕ್ಕೂ ನಿಮ್ಮಲ್ಲಿ ಲೈಂಗಿಕಾಸಕ್ತಿ ಕುಂದುವುದಕ್ಕೂ ನೇರಾನೇರವಾದ ಸಂಪರ್ಕವಿದೆ. ನಿಮಿರು ದೌರ್ಬಲ್ಯ ಧೂಮಪಾನಿಗಳಿಗೆ ಕಟ್ಟಿಟ್ಟಬುತ್ತಿ. ದಿನಕ್ಕೆ ಎರಡೇ ಎರಡು ಸಿಗರೇಟು ಸಾಕು ನಿಮ್ಮ ಪುರುಷತ್ವವನ್ನು ಕುಗ್ಗಿಸಲು. ಇದಕ್ಕೆಲ್ಲ ಪರಿಹಾರ ಒಂದೇ, ಧೂಮಪಾನವನ್ನು ಬಿಟ್ಟುಬಿಡಿ ಸಾರ್ ಬಿಟ್ಟುಬಿಡಿ. ಬಿಡಲ್ವಾ? ನಿಮ್ಮಿಷ್ಟ!

ನಿಮ್ಮಿಂದ ಇತರರಿಗೂ ತೊಂದರೆ

ವಾತಾವರಣವನ್ನು ಸೇರಿಕೊಳ್ಳುವ ನಿಮ್ಮ ಬಾಯಿಯಿಂದ ಹೊರಹೊಮ್ಮುವ ಸಿಗರೇಟಿನ ಧೂಮ ಪಕ್ಕದಲ್ಲಿರುವವರನ್ನೂ ತೊಂದರೆಗೆ ಸಿಲುಕಿಸುತ್ತದೆ. ವಯಸ್ಸಾದವರು, ಮಕ್ಕಳು, ಗರ್ಭಿಣಿಯರು, ಸಿಗರೇಟು ವಾಸನೆ ಕಂಡರಾಗದವರು ನಿಮ್ಮಿಂದ ಪ್ಯಾಸೀವ್ ಸ್ಮೋಕರ್ಸ್ ಆಗುತ್ತಿದ್ದಾರೆ. ನಿಮಗೇನಾದರೂ ನಾಚಿಕೆ ಮಾನ ಮರ್ಯಾದೆ ಇದ್ದರೆ...

ಇನ್ನು, ಸಿಗರೇಟು ಬಿಡಿ, ಕೇವಲ ನಿಮಗಾಗಿ

ನಿಮ್ಮ ಮೇಲೆ ನಿಮಗೆ ಪ್ರೀತಿ ಇದೆಯಾ? ಸಮಾಜದಲ್ಲಿ ಆರೋಗ್ಯವಂತನಾಗಿ ಬಾಳಿಬದುಕುವುದು ನಿಮಗೆ ಇಷ್ಟವಿಲ್ಲವಾ? ನಿಮ್ಮ ಮೇಲೆ ನಿಮಗೆ ಗೌರವ ಇಲ್ಲವಾ? ನಿಮ್ಮಲ್ಲಿ ಸಿಗರೇಟು ಬಿಟ್ಟುಬಿಡಲೇಬೇಕೆಂಬ ದೃಢ ನಿರ್ಧಾರ ತಳೆಯುವ ಮನಸ್ಸು ಇದೆಯಾ? ವಿಚಾರ ಮಾಡಿ. ಅಲ್ಟಿಮೇಟ್ಲಿ ಲೈಫ್ ಈಸ್ ಯುವರ್ಸ್!

English summary
Why should you quit smoking : 10 reasons. March 9 is obersered as World No Smoking Day. The celebration is to create awareness about health hazards of smoking. If you love yourself you will never smoke again.
Please Wait while comments are loading...