ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನಲ್ಲಿ ನಾ ಕಂಡ ಕನ್ನಡದ ಕರ್ಮಯೋಗಿ

By ರಮೇಶ್ ಸಣ್ಣಣವರ್, ನ್ಯೂಜೆರ್ಸಿ
|
Google Oneindia Kannada News

ಈ ಬಾರಿ ನನ್ನ ಭಾರತದ 3 ವಾರಗಳ ಪ್ರವಾಸದಲ್ಲಿ ಮರೆಯಲಾಗದ ಅನುಭವ ನೀಡಿದ್ದು ಬೆಂಗಳೂರಿನ ಜಯನಗರದಲ್ಲಿರುವ "ಟೋಟಲ್ ಕನ್ನಡ" ಎಂಬ ಮಳಿಗೆಗೆ ಭೇಟಿ ನೀಡಿದ್ದಾಗ. 4 ವರ್ಷಗಳ ಸುದೀರ್ಘ ಅವಧಿಯ ಬಳಿಕ ನಾನು ಭಾರತಕ್ಕೆ ಆಗಮಿಸಿದ್ದೆ. ಬೆಂಗಳೂರು ಬಿಸಿಲಲ್ಲಿ ಬೇಯುತ್ತಿತ್ತು. ಆದರೂ ನಮ್ಮೂರು, ನಮ್ಮ ಜನ (ಕನ್ನಡ ಜನ) ಹಾಗೆಯೇ ತಂಪಾಗಿಯೇ ಇದ್ದರು ಅನಿಸುತ್ತಿತ್ತು.

3 ವಾರಗಳ ಸಮಯದಲ್ಲಿ ಎಲ್ಲೆಲ್ಲಿ ಹೋಗಬೇಕೆಂದು ಪಟ್ಟಿ ಮೊದಲೇ ಸಿದ್ದವಾಗಿತ್ತು. ಆ ಪಟ್ಟಿಯಲ್ಲಿ ನನ್ನ ಗೆಳೆಯ ಗುರುರಾಜ್ ಕಾಡದೇವರ ಸೂಚಿಸಿದ್ದ ಟೋಟಲ್ ಕನ್ನಡ ಮಳಿಗೆ ಮೊದಲ ಆದ್ಯತೆಯಲ್ಲಿತ್ತು. ಈ ಮಳಿಗೆಗೆ ಭೇಟಿ ನೀಡಲೇಬೇಕೆಂದು ಗುರು ಸೂಚಿಸಿದ್ದ.

ಜಯನಗರದಲ್ಲಿರುವ ಟೋಟಲ್ ಕನ್ನಡ ಮಳಿಗೆಗೆ ನಾನು ಹೋದಾಗ ನನಗೆ ನಗುವಿನ ಮೂಲಕ ಸ್ವಾಗತ ಕೋರಿದ ಅಲ್ಲಿನ ಸಿಬ್ಬಂದಿ, ಮೊದಲಿಗೆ ಅಂಗಡಿಯಲ್ಲಿ ಎಲ್ಲೆಲ್ಲಿ ಏನೇನಿದೆ ಎಂದು ತೋರಿಸಿದರು. ಕನ್ನಡದ ಪುಸ್ತಕಗಳು, ಚಲನಚಿತ್ರಗಳು, ಸಂಗೀತದ ಸೀಡಿಗಳು, ಟೀ-ಶರ್ಟ್ ಗಳು, ಗ್ರೀಟಿಂಗ್ ಕಾರ್ಡ್, ಇತ್ಯಾದಿ. ಇತ್ಯಾದಿಗಳೆಲ್ಲವನ್ನೂ ಒಂದೇ ಮಳಿಗೆಯಲ್ಲಿ ನೋಡಿ ಒಂದು ಕ್ಷಣ ಅವಾಕ್ಕಾದೆ. ಆದರೆ ನನಗಿದ್ದ ಲಗೇಜ್ ಮಿತಿಯ 23 ಕೆ.ಜಿ. ಗಳಲ್ಲಿ ನನ್ನ ಶ್ರೀಮತಿಯ ಪಟ್ಟಿಯಲ್ಲಿನ ವಸ್ತುಗಳಿಗೆ ಕನಿಷ್ಠ 20 ಕೆ.ಜಿ. ಬೇಕಿತ್ತು. ಆದರೂ ಹುಡುಕಿ ಕೆಲವು ಇತ್ತೀಚಿನ ಹೊಸ ಸಿನೆಮಾಗಳು, ಪುಸ್ತಕಗಳನ್ನು ಕೊಂಡೆ.

ಅಷ್ಟರಲ್ಲಿ ಅಂಗಡಿಗೆ ಒಬ್ಬರು ಎರಡೂ ಕೈಯಲ್ಲೂ ಪುಸ್ತಕಗಳ ಚೀಲಗಳನ್ನು ತೆಗೆದುಕೊಂಡು ಒಳಗೆ ಬಂದರು. ಬಂದವರೇ ಚೀಲಗಳನ್ನು ಅಲ್ಲೇ ಇರಿಸಿ, ಕೂಡಲೇ ನನಗೆ "ಏನಾದರೂ ಹುಡುಕಿ ಕೊಡಲೇ?" ಎಂದು ನಗುನಗುತ್ತಾ ಕೇಳಿದರು. ನನಗೆ ಯಾರೆಂದು ತಕ್ಷಣಕ್ಕೆ ತಿಳಿಯಲಿಲ್ಲ. ನಾನು ಕೂಡಲೇ "ನೀವು...?" ಎಂದು ಪ್ರಶ್ನಿಸಿದೆ. ಆಗ ನಾನು "ಲಕ್ಷ್ಮೀಕಾಂತ್, ಅಂಗಡಿಯ ಮಾಲಿಕ" ಎಂದು ಪರಿಚಯಿಸಿಕೊಂಡರು.

V Lakshmikanth of Total Kannada book shop, a true Kannadiga

ಹಾಗೆಯೇ ಮಾತನಾಡುತ್ತಾ ಮಳಿಗೆಯ ವಿವರಗಳನ್ನು ಅವರಿಂದ ಕೇಳಿ ದಂಗಾದೆ. ಕನ್ನಡದಲ್ಲಿ ಈವರೆಗೂ ಬಿಡುಗಡೆಯಾಗಿರುವ 3700ಕ್ಕೂ ಅಧಿಕ ಚಲನಚಿತ್ರಗಳಲ್ಲಿ 3100ಕ್ಕೂ ಅಧಿಕ ಚಲನಚಿತ್ರಗಳನ್ನು ಅವರು ಸಂಗ್ರಹಿಸಿ ಅಂಗಡಿಯ ಉದ್ದಕ್ಕೂ ಜೋಡಿಸಿಟ್ಟಿದ್ದಾರೆ. ಅದರೊಂದಿಗೆ ತುಳು, ಕೊಂಕಣೆ, ಕೊಡವ, ನಾಟಕ, 600ಕ್ಕೂ ಹೆಚ್ಚು ಪ್ರವಚನಗಳ ಸೀಡಿಗಳು, ಯೋಗ, ಆಡಿಯೋ ಪುಸ್ತಕಗಳು. ಅಬ್ಬಾ ... ಸಂಗ್ರಹ ಸಖತ್ತಾಗಿದೆ. ಇವರಲ್ಲಿನ ಎಲ್ಲ ವಸ್ತಗಳ ಸಂಗ್ರಹ 30,000ಕ್ಕೂ ಅಧಿಕವಂತೆ!

ಜೊತೆಗೆ ನಾನು ಕೇಳಿದ ಕೆಲವು ಪುಸ್ತಕಗಳನ್ನು ಕ್ಷಣಾರ್ದದಲ್ಲಿ ಹುಡುಕಿಕೊಟ್ಟರು. ಎಲ್ಲಕ್ಕಿಂತ ಅಚ್ಚರಿಯಾಗಿದ್ದು ಅವರ ವಿದ್ಯಾಭ್ಯಾಸ ಮತ್ತು ಅವರು ಈ ಮುಂಚೆ ಮಾಡುತ್ತಿದ್ದ ವೃತ್ತಿ ಮತ್ತು ಈಗ ಮಾಡುತ್ತಿರುವ ಕೆಲಸ. ಬಿ.ಇ. ಕಂಪ್ಯೂಟರ್ ಸೈನ್ಸ್ ಓದಿ, ಸಾಫ್ಟ್ ವೇರ್ ನಲ್ಲಿ ಅಮೆರಿಕದಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಎಲ್ಲವನ್ನೂ ಬಿಟ್ಟು ಬಂದು ಒಂದು ಅಪ್ಪಟ ಕನ್ನಡದ ಮಳಿಗೆಗಾಗಿ ತನು, ಮನ, ಧನಗಳೆಲ್ಲವನ್ನೂ ಸುರಿದು, ಬಸವಳಿದು, ಕಳೆದು, ಕರ್ಮಯೋಗಿಯಾಗಿ ದುಡಿಯುತ್ತಿದ್ದಾನೆ.

ಮತ್ತಷ್ಟು ಆಶ್ಚರ್ಯವಾಗಿದ್ದು ನಾನು ಕೇಳಿದ ಕೆಲವು ಹಳೆಯ ಪುಸ್ತಕಗಳ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಂಡಿದ್ದು, ರನ್ನ, ಕುಮಾರವ್ಯಾಸ, ಪಂಪ, ಕುವೆಂಪು, ಡಿ.ವಿ.ಜಿ.ಯವರ ಪುಸ್ತಕಗಳು, ಸಿ.ಡಿ. ಗಳ ಎಲ್ಲಾ ಹೆಸರುಗಳನ್ನು ನಿರರ್ಗಳವಾಗಿ ಹೇಳುತ್ತಿದ್ದದ್ದು. ಹೆಸರು ಮಾತ್ರವಲ್ಲದೆ, ಪುಸ್ತಕಗಳ ಬಗ್ಗೆಯೂ ವಿವರಗಳ ಸಮೇತ ಮಾಹಿತಿ ನೀಡಿದ್ದು. ಬಹುಷಃ ಬೇರೆ ಯಾವುದೇ ಕನ್ನಡದ ಪುಸ್ತಕ, ಸಿಡಿಗಳ ಮಳಿಗೆಯಲ್ಲೂ ಸಿನೆಮಾ, ಸಂಗೀತ ಮತ್ತು ಪುಸ್ತಕಗಳ ಬಗ್ಗೆ ಒಬ್ಬ ವ್ಯಕ್ತಿ ಈ ರೀತಿ ಹೆಸರು ಮತ್ತು ಪ್ರತಿಯೊಂದು ಮಾಹಿತಿ ನೀಡುವ ಯಾರೊಬ್ಬರನ್ನು ನಾನು ನೋಡಿರಲಿಲ್ಲ.

ಲಕ್ಷ್ಮೀಕಾಂತ್ ಅವರು ತಿಳಿದುಕೊಂಡಿರುವ ಮಾಹಿತಿಗೆ ನಾನು ಸಾಷ್ಟಾಂಗ ಪ್ರಣಾಮಗಳನ್ನು ಅರ್ಪಿಸುತ್ತೇನೆ. ಒಬ್ಬ ಮಾಲಿಕನೇ ಗ್ರಾಹಕನಿಗೆ ಮಾಹಿತಿ ನೀಡಿ, ಪುಸ್ತಕ ಹುಡುಕಿಕೊಡುತ್ತಿದ್ದುದ್ದನ್ನು ನೋಡಿ ಅವರ ವೃತ್ತಿಪರತೆಗೆ ಶರಣಾದೆ. ಕೊನೆಗೆ ತೂಕಗಳ ಲೆಕ್ಕಾಚಾರವನ್ನು ಮರೆತು ನನಗಿಷ್ಟವಾದದೆಲ್ಲವನ್ನೂ ಕೊಂಡು, ಹೆಂಡತಿಯ ಪಟ್ಟಿಯಲ್ಲಿನ ಕೆಲವು ವಸ್ತುಗಳಿಗೆ ಕೊಕ್ ಕೊಡುವುದೆಂದು ನಿರ್ಧರಿಸಿದೆ.

ಕೊಂಡ ಸಿ.ಡಿ, ಪುಸ್ತಕಗಳ ಬಿಲ್ ಮಾಡುತ್ತಿದ್ದಾಗ, ಬಿಲ್ಲಿಂಗ್ ಕೌಂಟರಿನಲ್ಲಿ ಲಕ್ಷ್ಮೀಕಾಂತ್ ರಿಗೆ ಬಂದಿದ್ದ ಪ್ರಶಸ್ತಿಗಳ ಫಲಕಗಳನ್ನು ನೋಡಿ ಅವರ ಬಗ್ಗೆ ಅತೀವ ಹೆಮ್ಮೆ ಎನಿಸಿತು. ಚೆನ್ನೆನ ಕರ್ನಾಟಕ ಸಂಘವು ಅವರಿಗೆ "ರಾಜ್ಯೋತ್ಸವ ಪ್ರಶಸ್ತಿ" ನೀಡಿ ಗೌರವಿಸಿದೆ. ಪಬ್ಲಿಕ್ ಟಿ.ವಿ. ಇವರನ್ನು "ಪಬ್ಲಿಕ್ ಹೀರೋ" ಆಗಿ ಆಯ್ಕೆ ಮಾಡಿತ್ತಂತೆ. ಆದರೆ ನಮ್ಮ ರಾಜ್ಯ ಸರ್ಕಾರ ಮಾತ್ರ ಇವರಿಗೆ ಯಾವುದೇ ರಾಜ್ಯೋತ್ಸವ ಪ್ರಶಸ್ತಿಯಾಗಲಿ, ಗೌರವವನ್ನಾಗಲಿ ನೀಡಿಲ್ಲ.

ಕೊನೆಗೆ ಈ ರೀತಿಯ "ಸಂಪೂರ್ಣ ಕನ್ನಡದ ಮಳಿಗೆಗೆ" 1 ಪೈಸೆಯಷ್ಟು ಧನ ಸಹಾಯವನ್ನೂ ಮಾಡಿಲ್ಲ. ಮತ್ತಷ್ಟು ಬೇಸರ ಹುಟ್ಟಿಸಿದ್ದು ನಮ್ಮ ಅಮೆರಿಕದ "ಅಕ್ಕ" ಸಂಸ್ಥೆಯಾಗಲಿ ಅಥವ "ನಾವಿಕ" ಸಂಸ್ಥೆಯಾಗಲಿ ಇವರಿಗೆ ಯಾವ ಪುರಸ್ಕಾರವನ್ನಾಗಲಿ, ಗೌರವವನ್ನಾಗಲಿ ನೀಡದಿರುವುದು. ಪ್ರತೀ ಬಾರಿಯೂ ಬಂದವರನ್ನೇ ಕರೆಸಿ, ಕರೆಸಿ ಸನ್ಮಾನ ಮಾಡುವ ಅಕ್ಕ, ಯಾಕೆ ಈ ರೀತಿಯವರನ್ನು ಹುಡುಕಿ ಸತ್ಕರಿಸಬಾರದು? ನನ್ನ ಅಮೆರಿಕದ ಸ್ನೇಹಿತರೇ, ಈ ಬಗ್ಗೆ ನೀವು ಅಕ್ಕ, ನಾವಿಕ ಸಂಸ್ಥೆಗಳಿಗೆ ಬರೆಯಿರಿ.

೨೦೦೭ ರಲ್ಲಿ ಭಾರತಕ್ಕೆ ಹಿಂತಿರುಗಿ ಬಂದ ನಂತರ, ಲಕ್ಷ್ಮೀಕಾಂತ್ ಬರೀ ಕನ್ನಡಕ್ಕಾಗಿ ಮಾತ್ರ ಕೆಲಸ ಮಾಡಿಲ್ಲ. ೨೦೦೭, ೨೦೦೮ ಇಸವಿಯಲ್ಲಿ "ಕ್ಲೀನ್ ಇಂಡಿಯಾ" ಎಂಬ ಧಾರಾವಾಹಿಗೆ ಚಿತ್ರಕತೆ ಬರೆದು ಕೇವಲ ೩೦ ನಿಮಿಷಗಳ ಸಮಯಕ್ಕೆ ಎಲ್ಲಾ ಚಾನೆಲ್ ಗಳ ಬಾಗಿಲು ಬಡಿದರಂತೆ. ಅದರೆ ಟಿ.ಅರ್.ಪಿ. ಸಿಗದು ಎಂದು ಯಾವೊಂದೂ ಚಾನೆಲ್ ಸಹ ಇವರ "ಕ್ಲೀನ್ ಇಂಡಿಯಾ" ಕಾನ್ಸೆಪ್ಟ್ ಗೆ ಕೈ ಜೋಡಿಸಲಿಲ್ಲವಂತೆ. ಇದು ತುಂಬಾ ಬೇಸರದ ಸಂಗತಿಯೆನಿಸುತ್ತಿದೆ.

ಒಟ್ಟಿನಲ್ಲಿ, 2007ರಲ್ಲಿ ಭಾರತಕ್ಕೆ ವಾಪಸ್ ಬಂದು ಸಾಫ್ಟ್ ವೇರ್ ನಲ್ಲಿ ಮಾಡುತ್ತಿದ್ದ ಕೆಲಸಕ್ಕಿಂತ ಮೂರುಪಟ್ಟು ಹೆಚ್ಚಿಗೆ ಕೆಲಸ ಮಾಡಿಯೂ, ಲಾಭದ ಮುಖ ನೋಡದೆ, ಇದ್ದದ್ದೆಲ್ಲವನ್ನೂ ಮಳಿಗೆಯ ಅಭಿವೃದ್ಧಿಗೆ ವಿನಿಯೋಗಿಸಿ, 8 ಜನಕ್ಕೆ ಕೆಲಸ ನೀಡಿ ಸಾರ್ಥಕತೆ ಮೆರೆಯುತ್ತಿರುವ ಲಕ್ಷ್ಮೀಕಾಂತ್ ನನ್ನ ಪ್ರಕಾರ ನಿಜಕ್ಕೂ ಕನ್ನಡದ ಒಬ್ಬ ಕರ್ಮಯೋಗಿಯೇ ಸರಿ.

ಇವರ ಆದರ್ಶ, ತ್ಯಾಗ, ಸಮರ್ಪಣೆ, ನಿಷ್ಕಲ್ಮಷ ಮನಸ್ಸಿಗೆ ನಾನು ಸೋತು ಹೋಗಿರುವೆ. ನಾನು ವಾಪಸ್ ನ್ಯೂ ಜೆರ್ಸಿಗೆ ಹೊರಡುವ ಮುನ್ನ ಕೊನೆಯ ದಿನ ಮತ್ತೆ ಯಾಕೋ ಒಮ್ಮೆ ಲಕ್ಷ್ಮೀಕಾಂತ್ ರನ್ನು ನೋಡಬೇಕೆನಿಸಿತು. ಮಳಿಗೆಗೆ ಮತ್ತೆ ಭೇಟಿ ನೀಡಿದೆ. ಆದರೆ ಅಂದು ಅವರು ಮಳಿಗೆಯಲ್ಲಿ ಇರಲಿಲ್ಲ. ನನಗೆ ಅವರ ಕೆಲಸಕ್ಕೆ, ಅವರ ಕೊಡುಗೆಗೆ ಏನಾದರೂ ಸಹಾಯ ಮಾಡಲೇ ಬೇಕೆನಿಸುತ್ತಿತ್ತು. ಕೊನೆಗೆ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯುವ ಯೋಚನೆ ಮಾಡಿ, ನಾನು ಓದಿದ್ದ ಚಾಮರಾಜಪೇಟೆಯ ಸರ್ಕಾರಿ ಶಾಲೆಗೆ ಉಪಯೋಗವಾಗುವಂತಹ ಪುಸ್ತಕ ಮತ್ತು ಸಿ.ಡಿ. ಗಳನ್ನು ಟೋಟಲ್ ಕನ್ನಡ ಮಳಿಗೆಯಿಂದಲೇ ಖರೀದಿಸಿ, ನಾನು ಓದಿದ್ದ ಶಾಲೆಗೆ ನೀಡಿ ವಿಮಾನದಲ್ಲಿ ಕುಳಿತು ಅಮೆರಿಕಾ ಕಡೆಗೆ ಹೊರಟಾಗ ಏನೋ ಪಡೆದುಕೊಂಡ ಭಾವನೆ. ಆದರೆ ಲಕ್ಷ್ಮೀಕಾಂತ್ ರನ್ನು ಮತ್ತೊಮ್ಮೆ ಭೇಟಿಯಾಗಿ ಮಾತನಾಡಿಸುವ ಆಸೆ ಈಡೇರಲಿಲ್ಲ.

ಒಟ್ಟಿನಲ್ಲಿ ನನ್ನ ಈ ಬಾರಿಯ ಭಾರತದ ಪ್ರವಾಸ ವಿಶಿಷ್ಟ ಹಾಗೂ ಅತೀವ ಖುಷಿ ತಂದಿತ್ತು. ಗೆಳೆಯರೇ, ನೀವು ಭಾರತಕ್ಕೆ ಭೇಟಿ ನೀಡುವವರಿದ್ದರೆ ಹೋಗಿ, ಲಕ್ಷ್ಮೀಕಾಂತ್ ರವರ ಟೋಟಲ್ ಕನ್ನಡಕ್ಕೆ ಭೇಟಿ ನೀಡಿ. ಅವರ ಕೆಲಸಕ್ಕೆ, ಸಾಹಸಕ್ಕೆ, ಧೈರ್ಯಕ್ಕೆ, ಶ್ರಮಕ್ಕೆ ಕೈ ಮುಗಿಯಿರಿ ಹಾಗೂ ಸಾಧ್ಯವಾದರೇ ಕೈ ಜೋಡಿಸಿರಿ.

English summary
When Ramesh Sannanavar, an NRI residing in USA, came to Bengaluru few days ago, he had made up his mind to visit Total Kannada, an online Kannada book store owned by V Lakshmikanth. Ramesh write why he was so amused by the dedication of Lakshmikant.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X