ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರವಿ ಕೇಸ್: ಸಾವಿನಿಂದ ಸಿಬಿಐ ತನಿಖೆ ತನಕ ಟೈಮ್ ಲೈನ್

By Mahesh
|
Google Oneindia Kannada News

ಬೆಂಗಳೂರು, ಮಾ.24: ಐಎಎಸ್ ಅಧಿಕಾರಿ ಡಿಕೆ ರವಿ ನಿಗೂಢ ಸಾವಿನ ಪ್ರಕರಣದ ತನಿಖೆ ಸಿಐಡಿಯಿಂದ ಸಿಬಿಐಗೆ ವರ್ಗಾವಣೆಗೊಂಡಿದೆ. ಕೋರಮಂಗಲ ಬಳಿಯ ಸೈಂಟ್ ಜಾನ್ಸ್ ವುಡ್ ಅಪಾರ್ಟ್ಮೆಂಟ್ ನಿಂದ ಆಗುಂತಕರ ತನಕ, ದೊಡ್ಡಕೊಪ್ಪಲುವಿನಿಂದ ದೊಡ್ಡ ಕುಳಗಳ ತನಕ ಇಲ್ಲಿ ತನಕದ ಘಟನಾವಳಿಯ ಟೈಮ್ ಲೈನ್ ಇಲ್ಲಿದೆ.

ನ.24, 2016, ಗುರುವಾರ

* ಡಿಕೆ ರವಿ ಸಾವಿನ ಸಮಗ್ರ ತನಿಖೆ ನಡೆಸಿರುವ ಸಿಬಿಐ, ರವಿಯದ್ದು ಆತ್ಮಹತ್ಯೆ ಎಂದು ಅಂತಿಮ ಷರಾ ಬರೆದಿದೆ. [ಡಿಕೆ ರವಿಯದ್ದು ಆತ್ಮಹತ್ಯೆ : ಒಪ್ಪಲು ತಯಾರಿಲ್ಲ ತಾಯಿ ಗೌರಮ್ಮ]

ಏ.16, ಗುರುವಾರ
* ಚೆನ್ನೈನ ಸಿಬಿಐ ತಂಡ ಎಫ್ ಐಆರ್ ದಾಖಲಿಸಿಕೊಂಡು ಪ್ರಕರಣದ ತನಿಖೆ ಚುರುಕುಗೊಳಿಸಿದರು.
ಏ.14 ಮಂಗಳವಾರ
* ಹೊಸ ಅಧಿಸೂಚನೆಗೆ ಅಸ್ತು ಎಂದ ಕೇಂದ್ರ ಗೃಹ ಸಚಿವಾಲಯ. ಅದೇಶ ಪ್ರತಿ ಪಡೆದು ತನಿಖೆಗೆ ಮುಂದಾದ ಸಿಬಿಐ.
ಏ.6 ಸೋಮವಾರ
* ರವಿ ಸಾವಿನ ಪ್ರಕರಣ ಮೂರು ತಿಂಗಳಲ್ಲಿ ಮುಗಿಸುವಂತೆ ಸೂಚಿಸಿದ್ದ ಅಧಿಸೂಚನೆ ನಿಯಮಕ್ಕೆ ಸಿಬಿಐ ವಿರೋಧ, ಕೇಸ್ ವಾಪಸ್.
* ನಂತರ ಷರತ್ತು ರಹಿತ ಮುಕ್ತ ತನಿಖೆ ನಡೆಸುವಂತೆ ಸಿದ್ದರಾಮಯ್ಯ ಸರ್ಕಾರದಿಂದ ಮರು ಆದೇಶ.[ಪ್ರತಿ ಇಲ್ಲಿದೆ ಓದಿ]

ಮಾ.29 ಭಾನುವಾರ
* ರವಿ ಖಾಸಗಿ ಮಾಹಿತಿ ಲೀಕ್ ಮಾಡಿದ ಸಿದ್ದರಾಮಯ್ಯ ಸರ್ಕಾರ ವಿರುದ್ಧ ನ್ಯಾಯಾಂಗ ನಿಂದನೆ ಕೇಸ್ ದಾಖಲು. [ವಿವರ ಇಲ್ಲಿ ಓದಿ]

ಮಾ.27 ಶುಕ್ರವಾರ
* ಡಿಕೆ ರವಿ ಕಳಿಸಿದ ಕೊನೆ ವಾಟ್ಸಪ್ ಸಂದೇಶದಲ್ಲಿ ಏನಿದೆ? ಎಂಬುದು ಬಹಿರಂಗವಾಗಿತ್ತು.[ವಿವರ ಇಲ್ಲಿದೆ]

ಮಾ.24, ಮಂಗಳವಾರ
* ಚೆನ್ನೈ ಸಿಬಿಐ ತಂಡದಿಂದ ಡಿಕೆ ರವಿ ಸಾವಿನ ಪ್ರಕರಣ ತನಿಖೆ. ಬೆಂಗಳೂರಿಗೆ ಆಗಮಿಸುವ ನಿರೀಕ್ಷೆ.
* ಸಿಬಿಐ ತಂಡದಲ್ಲಿ ಕರ್ನಾಟಕ ಕೇಡರ್ ನ ಯಾವುದೇ ಅಧಿಕಾರಿ ಇರುವುದಿಲ್ಲ. ಮೂವರಿಂದ ಐದು ಜನರ ತಂಡ ರಚನೆ. [ಚೆನ್ನೈ ಸಿಬಿಐ ತಂಡದಿಂದ ತನಿಖೆ]
* ಡಿಕೆ ರವಿ ಎಂಬಾಸಿ ಗ್ರೂಪ್, ಕಾನ್ಫಿಡೆಂಟ್, ಎಎಂಜಡ್, ರಾಜೇಶ್ ಎಕ್ಸ್ ಪೋರ್ಟ್ ಸೇರಿದಂತೆ ಅನೇಕ ಸಂಸ್ಥೆ ಮೇಲೆ ದಾಳಿ ನಡೆಸಿ 129 ಕೋಟಿ ತೆರಿಗೆ ಸಂಗ್ರಹಿಸಿದ್ದರು. ಈ ಕಂಪನಿಗಳು ಕೂಡಾ ತನಿಖೆಗೆ ಒಳಪಡುವ ಸಾಧ್ಯತೆಯಿದೆ. 'ಎಂಬಾಸಿ ಗ್ರೂಪ್ ನ ಪಾಲುದಾರರಾದ ನೀವು ಏಕೆ ರಾಜೀನಾಮೆ ನೀಡುತ್ತಿಲ್ಲ' ಎಂಬ ಪತ್ರಕರ್ತರ ಪ್ರಶ್ನೆಗೆ ಗೃಹ ಸಚಿವ ಕೆಜೆ ಜಾರ್ಜ್ ಗರಂ.

ಮಾ.23, ಸೋಮವಾರ
* ಕರ್ನಾಟಕ ಸರ್ಕಾರ ಸೋಮವಾರ ಡಿಕೆ ರವಿ ಸಾವಿನ ಪ್ರಕರಣವನ್ನು ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್(ಸಿಬಿಐ)ಗೆ ವರ್ಗಾಯಿಸಿದೆ. ಚೆನ್ನೈನ ಅಪರಾಧ ವಿಭಾಗ ಘಟಕದಿಂದ ಈ ಪ್ರಕರಣದ ತನಿಖೆ. [ಡಿಕೆ ರವಿ ಕೇಸ್ ಸಿಬಿಐಗೆ : ಅನಿಸಿಕೆಗಳ ಸುರಿಮಳೆ]
* ಪ್ರಕರಣವನ್ನು ಸಿಬಿಐಗೆ ತಕ್ಷಣವೇ ನೀಡದೆ ವಿನಾಕಾರಣ ವಿಳಂಬ ಮಾಡಿದ್ದಕ್ಕೆ ವಿಪಕ್ಷಗಳಿಂದ ಆಕ್ಷೇಪ.
* ಸಿಐಡಿ ಹಾಗೂ ಸಿಬಿಐ ಬಗ್ಗೆ ಗೌರವವಿದೆ. ಯಾರನ್ನು ರಕ್ಷಿಸುತ್ತಿಲ್ಲ. ಜನರು ಹಾಗೂ ಕುಟುಂಬದ ಭಾವನೆಗೆ ಬೆಲೆ ಕೊಟ್ಟು ಸಿಬಿಐಗೆ ನೀಡುತ್ತಿದ್ದೇವೆ ಎಂದು ಸಿದ್ದರಾಮಯ್ಯ ಘೋಷಣೆ.

Timeline: IAS officer DK Ravi mysterious death case

ಮಾ.22, ಭಾನುವಾರ

* ಡಿಕೆ ರವಿ ಸಾವಿನ ಪ್ರಕರಣಕ್ಕೆ ಸಂಬಂಧಿಸಿದ ಸಿಐಡಿ ಮಧ್ಯಂತರ ವರದಿ ಪ್ರಸಾರ ಅಥವಾ ಪ್ರಕಟಣೆ ಮಾಡದಂತೆ ಹೈಕೋರ್ಟ್ ನಿಂದ ತಡೆಯಾಜ್ಞೆ.
* ಡಿಕೆ ರವಿ ಗೆಳತಿ ಎನ್ನಲಾದ ಅಧಿಕಾರಿ ಅವರ ಪತಿಯಿಂದ ಸರ್ಕಾರದ ವಿರುದ್ಧ ರಿಟ್ ಅರ್ಜಿ ದಾಖಲು. ಕೋರ್ಟ್ ನಿಂದ ಅರ್ಜಿಗೆ ಮಾನ್ಯತೆ.
* ಸರಿಯಾಗಿ ಊಟ, ವಿಶ್ರಾಂತಿ ಇಲ್ಲದ ಕಾರಣ ಡಿಕೆ ರವಿ ಪತ್ನಿ ಕುಸುಮಾ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಸೇರಿಸಲಾಯಿತು. ಸೂಕ್ತ ಚಿಕಿತ್ಸೆ ನಂತರ ಆಸ್ಪತ್ರೆಯಿಂದ ಮನೆಗೆ ವಾಪಸ್.

ಮಾ.21, ಶನಿವಾರ
* ಶಾಸಕ ವರ್ತೂರ್ ಪ್ರಕಾಶ್ ಅವರು ಅಧಿಕಾರಿಯೊಬ್ಬರಿಗೆ ಧಮಕಿ ಹಾಕುವ ಆಡಿಯೋ ಟೇಪ್ ರಿಲೀಸ್ ಮಾಡಿದ ಜೆಡಿಎಸ್.
* ಕೋಲಾರದಲ್ಲಿ ಡಿಕೆ ರವಿ ಜಿಲ್ಲಾಧಿಕಾರಿಯಾಗಿ ಉತ್ತಮ ಕಾರ್ಯ ನಿರ್ವಹಿಸಿದ್ದರು. ಆಡಿಯೋ ಟೇಪ್ ನಲ್ಲಿ ರವಿ ಹೆಸರು ಕೂಡಾ ಉಲ್ಲೇಖ.
* ವರ್ತೂರು ಪ್ರಕಾಶ್ ಗೆ ಸಾರ್ವಜನಿಕರು ಹಾಗೂ ರಾಜಕೀಯ ಪಕ್ಷಗಳಿಂದ ಛೀಮಾರಿ.

DK Ravi

ಮಾ.20, ಶುಕ್ರವಾರ
* ಡಿಕೆ ರವಿ ಅವರ ಸೋದರತ್ತೆ ಹೃದಯಾಘಾತದಿಂದ ಸಾವು. ಸೂತಕದ ಮನೆಯಲ್ಲಿ ಇನ್ನಷ್ಟು ನೋವು.
* ಸಿಐಡಿಯಿಂದ ತನಿಖೆ ಚುರುಕು. ವಿಸೇರಾ ಸ್ಯಾಂಪಲ್, ಡಿಕೆ ರವಿ ಫೋನ್ ರೆಕಾರ್ಡ್ ಪರೀಕ್ಷೆ. ಸೈಬರ್ ಪೊಲೀಸ್ ವಿಭಾಗದಿಂದ ಸ್ಮಾರ್ಟ್ ಫೋನ್, ಐಪ್ಯಾಡ್ ಹಾಗೂ ಇಮೇಲ್ ಪರೀಕ್ಷೆ. ಎಲ್ಲವೂ ಪಾಸ್ ವರ್ಡ್ ನಿಂದ ಸುರಕ್ಷಿತ. [ಕೊನೆಗೂ ಈಡೇರದ ರವಿ ದೊಡ್ಡ ಕನಸು]
* ಡಿಕೆ ರವಿ ಅವರ ಪತ್ನಿ ಕುಸುಮಾ ಹಾಗೂ ಮಾವ ಹನುಮಂತರಾಯಪ್ಪ ಅವರ ಹೇಳಿಕೆ ಪಡೆದ ಸಿಐಡಿ
* ಸಾರ್ವಜನಿಕರು ಹಾಗೂ ವಿಪಕ್ಷಗಳ ಒತ್ತಡಕ್ಕೆ ಮಣಿದು ತಡರಾತ್ರಿ ಸಭೆ ಸೇರಿದ ಸಿಎಂ ಸಿದ್ದರಾಮಯ್ಯ ಹಾಗೂ ಅವರ ಆಪ್ತರು, ಪ್ರಕರಣವನ್ನು ಸಿಬಿಐಗೆ ವಹಿಸಲು ನಿರ್ಧರಿಸಿದರು. ಅದರೆ, ಸದನದಲ್ಲಿ ಅಧಿಕೃತ ಹೇಳಿಕೆ ಸೋಮವಾರ ನೀಡಲು ನಿರ್ಧಾರ.
* ಸೋನಿಯಾ ಗಾಂಧಿ ಅವರಿಂದ ಸಿದ್ದರಾಮಯ್ಯ ಅವರಿಗೆ ಕರೆ, ಸಿಬಿಐಗೆ ಪ್ರಕರಣ ವಹಿಸುವಂತೆ ಸೂಚನೆ.

ಮಾ. 19, ಗುರುವಾರ
* ಡಿಕೆ ರವಿ ಸಾವಿನ ಪ್ರಕರಣಕ್ಕೆ ಟ್ವಿಸ್ಟ್. 2 ಪುಟಗಳ ಇ- ಆತ್ಮಹತ್ಯಾ ಪತ್ರ ಸಿಕ್ಕಿದೆ ಎಂದು ಮಾಧ್ಯಮಗಳಿಂದ ಸುದ್ದಿ ಸೋರಿಕೆ. ಸಾಮಾಜಿಕ ಜಾಲ ತಾಣಗಳಲ್ಲಿ ಈ ಬಗ್ಗೆ ಚರ್ಚೆ.
* ಸಿಬಿಐಗೆ ತನಿಖೆ ವಹಿಸಬೇಕೇ? ಬೇಡವೇ? ಎಂಬ ಚರ್ಚೆ ಮುಂದುವರಿಕೆ. ಇಬ್ಭಾಗವಾದ ಕಾಂಗ್ರೆಸ್.
* ಸೋಮವಾರ (ಮಾ.23) ದೊಳಗೆ ಪ್ರಕರಣವನ್ನು ಸಿಬಿಐಗೆ ವಹಿಸದಿದ್ದರೆ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಡಿಕೆ ರವಿ ಕುಟುಂಬದಿಂದ ಬೆದರಿಕೆ.
* ಡಿಕೆ ರವಿ ಕುಟುಂಬದಿಂದ ರವಿ ಸಮಾಧಿಗೆ ಹಾಲು ತುಪ್ಪ ಎರೆದು ಮೂರನೇ ದಿನ ವಿಧಿ ವಿಧಾನ ಪೂರ್ಣಗೊಳಿಸಿದರು. [ತಾಯಿ ಗೌರಮ್ಮನವರ ಸಂದರ್ಶನ ]
* ಡಿಕೆ ರವಿ ತಾಯಿ ಗೌರಮ್ಮ ಅವರು ರವಿ ಸಮಾಧಿ ಮುಂದೆ ಗೋಳಾಡುವ ದೃಶ್ಯ ಎಲ್ಲಾ ಮಾಧ್ಯಮಗಳಲ್ಲಿ ಪ್ರಸಾರವಾಗಿ ಹಲವರ ಕಣ್ಣು ಒದ್ದೆ ಮಾಡಿಸಿತು.

DK Ravi
ಮಾ. 18, ಬುಧವಾರ
* ಡಿಕೆ ರವಿ ಮರಣೋತ್ತರ ಪರೀಕ್ಷೆ ಪ್ರಾಥಮಿಕ ವರದಿ ಬಹಿರಂಗ. ಉಸಿರುಗಟ್ಟಿ ಸಾವು ಎಂದು ವರದಿಯಲ್ಲಿ ಉಲ್ಲೇಖ. ಎಫ್ ಎಸ್ ಎಲ್ ಹಾಗೂ ಅಟೋಪ್ಸಿ ಪರೀಕ್ಷೆ ಇನ್ನೂ ಬಾಕಿ.[ಡಿಕೆ ರವಿ ಉಸಿರುಗಟ್ಟಿ ಸಾವು]
* ವರದಿಯಲ್ಲಿ ಬಲವಂತವಾಗಿ ಯಾರೂ ಕತ್ತು ಹಿಸುಕಿಲ್ಲ. ಯಾವುದೇ ವಿಷ ಪ್ರಾಶನ ಮಾಡಿದ ಬಗ್ಗೆ ಉಲ್ಲೇಖವಿಲ್ಲ.
* ಡಿಕೆ ರವಿ ಅಂತಿಮ ಸಂಸ್ಕಾರ ದೊಡ್ಡಕೊಪ್ಪಲುವಿನಲ್ಲಿ ನೆರವೇರಿತು. ರವಿ ಸಹದ್ಯೋಗಿಗಳು ಗೈರು ಹಾಜರಾಗಿದ್ದರು.

ಮಾ.17, ಮಂಗಳವಾರ
* ಡಿಕೆ ರವಿ ಶವದ ಮರಣೋತ್ತರ ಪರೀಕ್ಷೆ ನಡೆಯುವ ವಿಕ್ಟೋರಿಯಾ ಆಸ್ಪತ್ರೆಗೆ ಸಿಎಂ ಸಿದ್ದರಾಮಯ್ಯ ಭೇಟಿ ಮಾಡಿದ್ದು ವಿವಾದಕ್ಕೆ ನಾಂದಿ ಹಾಡಿತು.
* ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಆಗ್ರಹಿಸಿ ಬಿಜೆಪಿ ಹಾಗೂ ಜೆಡಿಎಸ್ ನಿಂದ ಸದನದಲ್ಲಿ ಅಹೋರಾತ್ರಿ ಧರಣಿ.
* ಡಿಕೆ ರವಿ ಪೋಷಕರು, ಅಕ್ಕ ಸೇರಿದಂತೆ ಪರಿವಾರ ಪೂರ್ತಿ ವಿಧಾನಸೌಧದ ಕೆಂಗಲ್ ಹನುಮಂತಯ್ಯ ಪ್ರತಿಮೆ ಬಳಿ ಸತ್ಯಾಗ್ರಹ. ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಅವರಿಂದ ಸಮಾಧಾನ ಪಡಿಸುವ ಯತ್ನ ವಿಫಲ.
* ಕೋಲಾರ, ಕುಣಿಗಲ್ ಸೇರಿದಂತೆ ನಾಡಿನ ಹಲವೆಡೆ ಸ್ವಯಂಘೋಷಿತ ಬಂದ್. ದ್ವಿತೀಯ ಪಿಯು ಗಣಿತ ಪರೀಕ್ಷೆ ಮುಂದೂಡಿಕೆ.
* ಡಿಕೆ ರವಿ ಅವರ ವೈಯಕ್ತಿಕ ಬದುಕು, ಖಾಸಗಿ ವಿಷಯಗಳನ್ನು ಆಯ್ಕೆಮಾಡಿಕೊಂಡು ವ್ಯವಸ್ಥಿತವಾಗಿ ಸಾಮಾಜಿಕ ಜಾಲ ತಾಣಗಳಲ್ಲಿ ಸೋರಿಕೆ ಮಾಡಲಾಗುತ್ತದೆ.
* ಡಿಕೆ ರವಿ ಸಾವಿನ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಕೋರಿ ಫೇಸ್ ಬುಕ್ ನಲ್ಲಿ ಫ್ಯಾನ್ ಪೇಜ್ ಹಾಗೂ ಆನ್ ಲೈನ್ ಪಿಟೀಷನ್ ಮೂಲಕ ಆಗ್ರಹ.

ಮಾ.16, ಸೋಮವಾರ
* ವಾರಾಂತ್ಯದಲ್ಲಿ ಪತ್ನಿ ಮನೆಯಲ್ಲಿದ್ದ ಡಿಕೆ ರವಿ ಸೋಮವಾರ ಬೆಳಗ್ಗೆ ಕೋರಮಂಗಲದಲ್ಲಿರುವ ವಾಣಿಜ್ಯ ಇಲಾಖೆ ಕಚೇರಿಗೆ ತೆರಳಿದರು.
* ಹಿಂದಿನ ಎರಡು ದಿನದಿಂದ ಆಗುಂತಕರೊಬ್ಬರಿಂದ ಕರೆಗಳು ಬರತೊಡಗಿತ್ತು. ಬೆಳಗ್ಗೆ 10.30ರ ಸುಮಾರಿಗೆ ಕಚೇರಿ ತೊರೆದ ರವಿ ತಾವರೆಕೆರೆ ಸಮೀಪದ ಸೈಂಟ್ ಜಾನ್ ವುಡ್ ಅಪಾರ್ಟ್ಮೆಂಟ್ ಗೆ ಬರುತ್ತಾರೆ.
* ಡಿಕೆ ರವಿ ಅವರು ತಮ್ಮ ಗೆಳತಿಗೆ 11.22ರ ಸುಮಾರಿಗೆ ಕರೆ ಮಾಡುತ್ತಾರೆ. 2 ನಿಮಿಷದ ಕರೆಯ ಕೊನೆಯಲ್ಲಿ 'ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ' ಎಂದು ರವಿ ಹೇಳಿದ್ದಾರೆ ಎನ್ನಲಾಗಿದೆ. [ರವಿ ಸೂಪರ್ ಟ್ರ್ಯಾಕ್ ರೆಕಾರ್ಡ್]
* we will unite in heaven ಎಂದು 11.25ರ ಸುಮಾರಿಗೆ ರವಿ ತನ್ನ ಗೆಳತಿಗೆ ಸಂದೇಶ ಕಳಿಸುತ್ತಾರೆ. ಬಹುಶಃ ಇದೇ ಕೊನೆ ಸಂದೇಶವಾಗಿದೆ.
* ಅಪಾರ್ಟ್ಮೆಂಟ್ ಹೊರಗೆ ಡಿಕೆ ರವಿ ಕಾರಿನ ಚಾಲಕ ಕಾಯುತ್ತಾ ನಿಂತಿರುತ್ತಾನೆ.

DK Ravi

* ಬೆಳಗ್ಗಿನಿಂದ ತಮ್ಮ ಕರೆ ಸ್ವೀಕರಿಸುತ್ತಿಲ್ಲ ಏಕೆ? ಎಂದು ಗಾಬರಿಗೊಂಡ ಡಿಕೆ ರವಿ ಪತ್ನಿ ಕುಸುಮಾ ಅವರು ಡ್ರೈವರ್ ಗೆ ಕರೆ ಮಾಡಿದಾಗ ಅಪಾರ್ಟ್ಮೆಂಟ್ ಗೆ ಬಂದಿರುವುದು ತಿಳಿಯುತ್ತದೆ.
* ಸಂಜೆ 5 ರಿಂದ 6 ಗಂಟೆ ಸುಮಾರಿಗೆ ಕುಸುಮಾ ಹಾಗೂ ಅವರ ತಂದೆ ಹನುಮಂತರಾಯಪ್ಪ ಅವರು ಅಪಾರ್ಟ್ಮೆಂಟ್ ಗೆ ಬಂದು ನಕಲಿ ಕೀ ಬಳಸಿ ಬಾಗಿಲು ತೆಗೆದು ಒಳಹೊಕ್ಕುತ್ತಾರೆ. ರೂಮಿನಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ರವಿಯನ್ನು ನೋಡಿ ಕುಸುಮಾ ಚೀರಿಕೊಳ್ಳುತ್ತಾರೆ.
* ವಿಷಯ ಸ್ಥಳೀಯ ಪೊಲೀಸರಿಗೆ ಮುಟ್ಟುತ್ತದೆ. ಮಡಿವಾಳ ಪೊಲೀಸ್ ಠಾಣೆಯಿಂದ ಇನ್ಸ್ ಪೆಕ್ಟರ್ ಇಬ್ಬರು ಪೇದೆಗಳು ಸ್ಥಳಕ್ಕೆ ಬರುತ್ತಾರೆ.
* ಸಮಯ 6.30 ರ ಸುಮಾರಿಗೆ ಸ್ಥಳಕ್ಕೆ ಬಂದ ಪೊಲೀಸ್ ಆಯುಕ್ತ ಎಂಎನ್ ರೆಡ್ಡಿ ಅವರು ಮೇಲ್ನೊಟಕ್ಕೆ ಇದು ಆತ್ಮಹತ್ಯೆ ಎಂದು ಕಂಡು ಬಂದಿದೆ ಎನ್ನುವ ಮೂಲಕ ವಿವಾದಕ್ಕೆ ನಾಂದಿ ಹಾಡುತ್ತಾರೆ.
* ಡಿಕೆ ರವಿ ಅಪಾರ್ಟ್ಮೆಂಟ್ ಗೆ ಬಂದಿದ್ದ ಮೂವರು ಆಗುಂತಕರು ಯಾರು? ಮಡಿವಾಳ ಠಾಣೆಯ ಪೊಲೀಸರು ನೀಡಿದ ಮೊದಲ ಹೇಳಿಕೆ ಏನು? ಚಾಲಕ ನೀಡಿದ ಹೇಳಿಕೆ ಎಂಬುದು ಎಲ್ಲೂ ಉಲ್ಲೇಖವಾಗಿಲ್ಲ. [ಮರಳು ಮಾಫಿಯಾ ಎಂದರೇನು? ಏನಿದರ ಮರ್ಮ?]
* ಡಿಕೆ ರವಿ ಅವರ ಸಾಧನೆ ಬಗ್ಗೆ ಅವರ ಆಡಳಿತದ ಬಗ್ಗೆ ಎಲ್ಲರ ಗಮನ ಸೆಳೆಯುವಲ್ಲಿ ಮಾಧ್ಯಮಗಳು ಯಶಸ್ವಿಯಾಗುತ್ತವೆ.
* ಮರಳು ಹಾಗೂ ಭೂ ಮಾಫಿಯಾದಿಂದ ರವಿ ಮೇಲೆ ಒತ್ತಡ ಹೇರಲಾಗಿತ್ತು. ಇದರಿಂದ ಅವರ ಸಾವು ಸಂಭವಿಸಿದೆ ಎಂಬ ಸುದ್ದಿ ಎಲ್ಲೆಡೆ ಹರಡತೊಡಗಿತು.

ಒನ್ ಇಂಡಿಯಾ ಸುದ್ದಿ

English summary
A 35-year-old 2009-batch IAS officer DK Ravi was found hanging at his apartment in Bengaluru on the evening of Monday, March 16.the Chief Minister Siddaramaih-led Karnataka government on Monday entrusted the CBI to further investigate the case in a free and fair manner.Here is the Timeline of the crucial developments that have taken place into DK Ravi's death case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X