ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೆಬ್ಬಾಳ ಅಪಘಾತದಲ್ಲಿ ಸತ್ತ ಅರ್ಪಿತಾಗೆ ಅಶ್ರು ತರ್ಪಣ

|
Google Oneindia Kannada News

ಬೆಂಗಳೂರು, ಫೆ. 27: ಒಂದೆಡೆ ಆರಿದ ಕುಟುಂಬದ ದೀಪ, ಇನ್ನೊಂದೆಡೆ ಕುಸಿದು ಬಿದ್ದ ಮನೆಯ ಆಧಾರ ಸ್ತಂಭ. ಇದು ಯಲಹಂಕ ಭೀಕರ ರಸ್ತೆ ಅಪಘಾತದಲ್ಲಿ ಸಾವಿಗೀಡಾದ ಎರಡು ಜೀವಗಳ ಕುಟುಂಬಗಳ ಶುಕ್ರವಾರದ ಚಿತ್ರಣ.

ಆಕೆಗಿನ್ನು 19ರ ಹರೆಯ. ಇನ್ನು ಅರಳಬೇಕಾಗಿದ್ದ ಜೀವ. ಬೆಳಗ್ಗೆ ಕಾಲೇಜಿಗೆ ತೆರಳಿದ್ದವಳು ಹೆಣವಾಗಿ ಮನೆ ಸೇರುತ್ತಾಳೆ ಎಂದು ಯಾರೂ ಅಂದುಕೊಂಡಿರಲಿಲ್ಲ. ಆದರೆ ವಿಧಿಯ ಆಟವೇ ಬೇರೆಯಾಗಿತ್ತು. ಮೃತ್ಯುವಾಗಿ ಬಂದ ನೀರಿನ ಟ್ಯಾಂಕರ್ ವಿದ್ಯಾರ್ಥಿನಿಯ ಪ್ರಾಣವನ್ನು ಬಲಿಪಡೆದಿತ್ತು.[ವಿದ್ಯಾರ್ಥಿಗಳ ಪ್ರತಿಭಟನೆ: ಏರ್ ಪೋರ್ಟ್ ರಸ್ತೆಯಲ್ಲಿ ಟ್ರಾಫಿಕ್ ಜಾಮ್]

arpita

ಬ್ರೇಕ್ ಫೇಲ್ ಆದ ನೀರಿನ ಟ್ಯಾಂಕರ್ ಅಡಿ ಸಿಕ್ಕ ಹೆಬ್ಬಾಳದ ಸಿಂಧಿ ಕಾಲೇಜಿನ ವಿದ್ಯಾರ್ಥಿನಿ ಅರ್ಪಿತಾ ಬಾರದ ಲೋಕಕ್ಕೆ ತೆರಳಿದ್ದು ಶುಕ್ರವಾರ ಹೆಬ್ಬಾಳದ ಚಿತಾಗಾರದಲ್ಲಿ ಆಕೆಯ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಇನ್ನು ಅರ್ಪಿತಾ ನೆನಪು ಮಾತ್ರ. ವಿದ್ಯಾರ್ಥಿನಿಯ ಅಂತ್ಯ ಸಂಸ್ಕಾರದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಂಡು ಅಂತಿಮ ನಮನ ಸಲ್ಲಿಸಿದರು.

arpita 1

ಮಗಳ ಅಗಲಿಕೆಯಿಂದ ಮನನೊಂದ ತಾಯಿ ಊಟ ತಿಂಡಿ ಬಿಟ್ಟು ಹಾಸಿಗೆ ಹಿಡಿದಿದ್ದಾಳೆ. ಅಸ್ವಸ್ಥಗೊಂಡಿರುವ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅನ್ಯಾಯವಾಗಿ ಲಾರಿ ಅಡಿ ಸಿಕ್ಕು ಪ್ರಾಣ ಕಳೆದುಕೊಂಡ ವಿದ್ಯಾರ್ಥಿನಿಯ ಜೀವಕ್ಕೆ ಸರ್ಕಾರ ಒಂದು ಬೆಲೆ ಕಟ್ಟಿ ಸುಮ್ಮನಾಗುತ್ತದೆ. ಮಗಳನ್ನು ಕಳೆದುಕೊಂಡ ತಂದೆ-ತಾಯಿಯ ನೋವಿಗೆ ಮದ್ದು ನೀಡಲು ಯಾರಿಂದಲೂ ಸಾಧ್ಯವಿಲ್ಲ. ಸ್ನೇಹಿತರ ಮತ್ತು ಬಂಧು ಬಳಗದ ಸಾಂತ್ವನದ ಮಾತುಗಳು ದುಖಃಪತ್ತ ಕುಟುಂಬಕ್ಕೆ ಕೊಂಚ ಸಮಾಧಾನ ಹೇಳಬಹುದು ಅಷ್ಟೇ.[ಬೆಂಗಳೂರು: ರಸ್ತೆ ಅಪಘಾತ: 2 ಸಾವು, ಹಲವು ನೋವು]

ಕಳಚಿದ ಕುಟುಂಬದ ಆಧಾರ ಸ್ತಂಭ
"ನೀವು ಎಷ್ಟು ದುಡ್ಡು ಕೊಟ್ಟರೇನು ಪ್ರಯೋಜನ? ನನ್ನ ಮಗ ಬದುಕಿ ವಾಪಸ್ ಬರುತ್ತಾನೆಯೇ? ನಾವೇ ಒಂದು ಕೋಟಿ ನೀಡುತ್ತೇವೆ ನನ್ನ ಮಗನನ್ನು ಹಿಂದಕ್ಕೆ ನೀಡಿ" ಎದೆಯೆತ್ತರಕ್ಕೆ ಬೆಳೆದು ನಿಂತಿದ್ದ ಮಗನ ಕಳೆದುಕೊಂಡ ತಾಯಿ ಮಾಧ್ಯಮದೆದುರು ದುಖಃ ತೋಡಿಕೊಂಡ ಪರಿ ಎಂಥವರ ಕರುಳನ್ನು ಕಲಕುವಂತಿತ್ತು.

ಘಟನೆಯಲ್ಲಿ ಜೀವ ತೆತ್ತ ಬೈಕ್ ಸವಾರ ಚಿಕ್ಕಬಳ್ಳಾಪುರದ ಗೊಲ್ಲರಹಳ್ಳಿಯ ಆನಂದ್ (25) ಚಿಕ್ಕಮ್ಮ ಆಡಿದ ಮಾತುಗಳಲ್ಲಿ ಕಣ್ಣೀರಿತ್ತು. ಮಾಡದ ತಪ್ಪಿಗೆ ಮಗನ ಜೀವ ಬಲಿಯಾಯಿತಲ್ಲ ಎಂಬ ನೋವಿತ್ತು.

anand

ಮಗನ ಸಾವಿನ ಸುದ್ದಿ ಕೇಳಿದ ಆನಂದ್ ತಾಯಿ ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ್ದಾರೆ. ತಂದೆ ಮಾತು ಹೊರಡಿಸಲಾಗದೆ ಕುಳಿತುಕೊಂಡಿದ್ದಾರೆ. ಒಬ್ಬನೆ ಮಗ ಆನಂದ್ ನನ್ನು ಬಾಗೆಪಲ್ಲಿ ಕಾಲೇಜಿನಲ್ಲಿ ಡಿಪ್ಲೋಮಾ ಓದಿಸಿದ್ದರು. ಚಿಕ್ಕಬಳ್ಳಾಪುರದಲ್ಲಿ ಚಿಕ್ಕ ಕೆಲಸ ಮಾಡುತ್ತಿದ್ದ ಆನಂದ್ ತರುತ್ತಿದ್ದ 8 ಸಾವಿರ ರೂಪಾಯಿನೇ ಕುಟುಂಬಕ್ಕೆ ಆಧಾರವಾಗಿದ್ದದ್ದು.

ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದ ಕುಟುಂಬ ಮಗನ ನೆರವಿನಲ್ಲಿ ಕೊಂಚ ಸುಧಾರಿಸಿಕೊಂಡಿತ್ತು. ಹೆಚ್ಚಿನ ಹಣ ಗಳಿಸಿ ಕುಟುಂಬದವರನ್ನು ನೆಮ್ಮದಿಯಾಗಿರಿಸೋಣ ಎಂದು ಕೆಲಸ ಅರಸಿ ಬೆಂಗಳೂರಿಗೆ ಬಂದಿದ್ದ ಆನಂದ್ ಟ್ಯಾಂಕರ್ ಅಡಿ ಸಿಕ್ಕಿ ಅಪ್ಪಚ್ಚಿಯಾಗಿದ್ದ.

anand 1

ಅಂತ್ಯ ಸಂಸ್ಕಾರಕ್ಕೆಂದು ಮಗನ ದೇಹವನ್ನು ಹುಡುಕಬೇಕಾದ ದುರ್ದೈವ ತಂದೆತಾಯಿಗಳಿಗೆ ಬಂದೊದಗಿದ್ದು ವಿಪರ್ಯಾಸ. ಲಾರಿಯಡಿ ಸಿಕ್ಕ ದೇಹ ಛಿದ್ರ ಛಿದ್ರವಾಗಿ ಬಿದ್ದಿತ್ತು. ಪೊಲೀಸರು ನೀಡಿದ ಮೃತದೇಹವನ್ನೇ ಮಣ್ಣು ಮಾಡಿದ ತಂದೆ ಮಾತು ಹೊರಳದಂತೆ ಮನೆಯ ಮೂಲೆಯಲ್ಲಿ ಕುಳಿತಿದ್ದರು.

ಪ್ರತಿಭಟನೆಗೆ ಫಲ?
ಸ್ನೇಹಿತೆಯ ಅಗಲಿಕೆಯಿಂದ ಕೆರಳಿದ ವಿದ್ಯಾರ್ಥಿಗಳು ಪ್ರತಿಭಟನೆಯನ್ನು ಮಾಡಿದ್ದಾರೆ. ಸ್ಕೈ ವಾಕ್ ನಿರ್ಮಿಸಬೇಕೆಂದು ಆಗ್ರಹ ಪಡಿಸಿದ್ದಾರೆ. ಇದಕ್ಕೆ ಒಪ್ಪಿಕೊಂಡಿರುವ ಬಿಬಿಎಂಪಿ ಶೀಘ್ರವೇ ಕೆಲಸ ಆರಂಭಿಸುವ ಭರವಸೆ ನೀಡಿದೆ. ಮಡಿದವರಿಗೆ ಒಂದಿಷ್ಟು ಪರಿಹಾರವನ್ನೇನೋ ನೀಡಲಾಗುತ್ತದೆ. ಆದರೆ ಮುಂದೆ ಮತ್ತೆ ಇಂಥದ್ದೇ ಘಟನೆಗಳು ಸಂಭವಿಸಿದರೆ ಯಾರು ಹೊಣೆ? ಉತ್ತರ ಯಾರಿಗೂ ಗೊತ್ತಿಲ್ಲ.

English summary
Arpita ( 19) B.Com student of Sindhi College, Bengaluru creamted in Hebbal Cremetorium on Friday. She was killed by a signal jumper water tanker near Esteem mall, Hebbal flyover on Thursday. Our heartfelt condolences to the breaved family members. May the passage of time heal their grief.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X