ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜೋಳದ ರೊಟ್ಟಿ ಎಣಗಾಯ್ ಪಲ್ಯ ಗುರೆಳ್ಳು ಚಟ್ನಿ, ವಾಹ್!

By Prasad
|
Google Oneindia Kannada News

ಬೆಂಗಳೂರು, ಮೇ. 16 : "ಏನ್ ತಗೋತಿಯಪ್ಪಾ?" ಅಂತ ಮಕ್ಕಳಿಗೆ ಕೇಳಿ ನೋಡಿ. ಮಧ್ಯಾಹ್ನದ ಊಟದ ಸಮಯದಲ್ಲೂ ಮಸಾಲೆ ದೋಸೆ, ಪೂರಿ, ಇಡ್ಲಿ ವಡಾ ಅನ್ನುವ ಪದಗಳೇ ಬರುತ್ತವೆ. ಇನ್ನು ಆ ಮಕ್ಕಳು ಉತ್ತರ ಭಾರತದ ಮಕ್ಕಳ ಸಹವಾಸ ಮಾಡಿದ್ದರೆ ಪಿಜ್ಜಾ ಬೇಕು ಅಂತ ಕೂಡುತ್ತವೆ.

ಇನ್ನು ಜೋಳದ ರೊಟ್ಟಿ, ಅಕ್ಕಿ ರೊಟ್ಟಿ, ಪತ್ರೊಡೆ, ಗೋಳಿಬಜೆ, ಎಣಗಾಯಿ ಪಲ್ಯ, ಪುಂಡಿ ಪಲ್ಯ, ಮೆಣಸಿನಕಾಯಿ ಚಟ್ನಿ, ಗುರೆಳ್ಳುಪುಡಿ ಹಿಂಡಿ, ಶೇಂಗಾ ಹೋಳಿಗೆ, ಝುಣಕದ ವಡೆ, ಕರ್ಚಿಕಾಯಿ, ಬೇಸನ್ ಲಾಡು... ಈ ಹೆಸರುಗಳನ್ನು ಹೇಳಿ ನೋಡಿ. ಮಕ್ಕಳು ಮುಖ ಸಿಂಡರಿಸಲು ಪ್ರಾರಂಭಿಸುತ್ತವೆ.

ಇದಕ್ಕೆ ದೊಡ್ಡವರು ಕೂಡ ಹೊರತೇನಲ್ಲ. ಇಂದಿನವರಿಗೆ ರುಚಿ ಕೆಟ್ಟಿದೆಯೋ, ಅಭಿರುಚಿ ಇಲ್ಲವಾಗಿದೆಯೋ... ಒಟ್ನಲ್ಲಿ ಬೆಂಗಳೂರಿನಲ್ಲಿ ಆಹಾರ ಸಂಸ್ಕೃತಿ ಬೇರೊಂದು ಸಂಪ್ರದಾಯದ ಕಡೆಗೆ ವಾಲುತ್ತಿದೆ. ವಾರಾಂತ್ಯದಲ್ಲಿ ಫುಡ್ ಜಾಯಿಂಟುಗಳಲ್ಲಿ ನಿಂತುಕೊಂಡೇ ಸಿಕ್ಕಿದ್ದು ತಿನ್ನುತ್ತಾರೆ. ಸಾಂಪ್ರದಾಯಿಕ ಭೋಜನಗಳಿಗೆ ವ್ಯಾಲ್ಯೂನೇ ಇಲ್ಲದಂತಾಗುತ್ತಿದೆ.

ಉತ್ತರ ಕರ್ನಾಟಕದ ಊಟದ ಸೊಗಸು

ಉತ್ತರ ಕರ್ನಾಟಕದ ಊಟದ ಸೊಗಸು

ಇದನ್ನೆಲ್ಲ ಮನಗಂಡಿರುವ ಸೌತ್ ರುಚೀಸ್ ಸಸ್ಯಾಹಾರಿ ಹೋಟೆಲ್ ಮಾಲಿಕರಾದ ಜಿಆರ್ ಪ್ರದೀಪ್ ಅವರು ಬೆಂಗಳೂರಿನಲ್ಲಿ ಉತ್ತರ ಕರ್ನಾಟಕ ಊಟದ ಹಬ್ಬ ಹಮ್ಮಿಕೊಂಡಿದ್ದಾರೆ. ಉತ್ತರ ಕರ್ನಾಟಕದ ಊಟದ ಸೊಗಸು ಮಾತ್ರವಲ್ಲ, ಇಡೀ ದಕ್ಷಿಣ ಭಾರತದ ರುಚಿಕಟ್ಟಾದ ತಿಂಡಿತಿನಿಸುಗಳನ್ನು ನಮ್ಮ ಜನರಿಗೆ ತಿಳಿಯಪಡಿಸುವುದು ನಮ್ಮ ಉದ್ದೇಶ ಎಂದು ಒನ್ಇಂಡಿಯಾ ಪ್ರತಿನಿಧಿಗೆ ಅವರು ಹೇಳಿದರು.

ಈ ರುಚಿಗಳ ಅಭಿರುಚಿ ಬೆಳೆಸುವುದು

ಈ ರುಚಿಗಳ ಅಭಿರುಚಿ ಬೆಳೆಸುವುದು

ಉತ್ತರ ಕರ್ನಾಟಕದ ಖಾದ್ಯಗಳ ಸೊಗಡು ಒಂದು ರೀತಿಯದಾದರೆ, ಕರ್ನಾಟಕ ಕರಾವಳಿಯ ವೈವಿಧ್ಯಮಯ ತಿನಿಸುಗಳ ಸ್ವಾದವೇ ಬೇರೆ ರೀತಿಯದು. ಇನ್ನು ಕೇರಳ, ಆಂಧ್ರ, ತಮಿಳುನಾಡು ಭೋಜನದ ಶೈಲಿಯೂ ವಿಶಿಷ್ಟವಾದದ್ದು. ಕ್ರಮೇಣ, ಜನರನ್ನು ಈ ರುಚಿಗಳ ಅಭಿರುಚಿ ಬೆಳೆಸುವುದು ಸೌತ್ ರುಚಿಯ ಮೂಲ ಉದ್ದೇಶ ಎಂದು ಬಳೆಪೇಟೆಯಲ್ಲಿ ಮತ್ತೊಂದು ಬ್ರಾಂಚ್ ಇಟ್ಟುಕೊಂಡಿರುವ ಪ್ರದೀಪ್ ಅವರ ಮಾತು.

ಅಗ್ರಹಾರ ದಾಸರಹಳ್ಳಿಯಲ್ಲಿರುವ ಸೌತ್ ರುಚೀಸ್

ಅಗ್ರಹಾರ ದಾಸರಹಳ್ಳಿಯಲ್ಲಿರುವ ಸೌತ್ ರುಚೀಸ್

ಟೋಲ್ ಗೇಟಿನಿಂದ ಸ್ವಲ್ಪ ಮುಂದೆ ಮಾಗಡಿ ರಸ್ತೆಯಲ್ಲಿ ಅಗ್ರಹಾರ ದಾಸರಹಳ್ಳಿಯಲ್ಲಿರುವ ಸೌತ್ ರುಚೀಸ್ ಹೋಟೆಲಿನಲ್ಲಿ ಉತ್ತರ ಕರ್ನಾಟಕದ ವೈವಿಧ್ಯಮಯ ತಿಂಡಿ ತಿನಿಸುಗಳ ವಾಸನೆ ಬರುತ್ತಿದೆ. ಬಾಳಕದ ಮೆಣಸಿನಕಾಯಿಯಿಂದ ಹಿಡಿದುಕೊಂಡು, ಉತ್ತರ ಕರ್ನಾಟಕದಲ್ಲಿ ತಯಾರಿಸುವ ಸಿಹಿಖಾರ ಎಲ್ಲ ತಿಂಡಿ ತಿನಿಸುಗಳು ನುರಿತ ಬಾಣಸಿಗರ ಕೈಯಲ್ಲಿ ತಯಾರಾಗುತ್ತಿವೆ.

ಗಣ್ಯರಿಂದ ಊಟದ ಮೇಳದ ಉದ್ಘಾಟನೆ

ಗಣ್ಯರಿಂದ ಊಟದ ಮೇಳದ ಉದ್ಘಾಟನೆ

ಶುಕ್ರವಾರ, ಮೇ 15ರಂದು ಮಧ್ಯಾಹ್ನ ಉದ್ಘಾಟನೆ ಸಮಾರಂಭವನ್ನು ಹಮ್ಮಿಕೊಂಡಿದ್ದರು. 'ಕಲಿತ್ತ ಹುಡುಗಿ...' ಹಾಡಿನ ಖ್ಯಾತಿಯ ಗುರುರಾಜ ಹೊಸಕೋಟೆ, ಕರ್ನಾಟಕ ಪ್ರಾದೇಶಿಕ ಹೋಟೆಲ್ ಅಸೋಸಿಯೇಷನ್ ಅಧ್ಯಕ್ಷ ಎನ್ಆರ್ ನಾರಾಯಣ ರಾವ್ ಮುಂತಾದವರು ಈ ಸರಳ ಸಮಾರಂಭದಲ್ಲಿ ಹಾಜರಿದ್ದರು. ಸಿನೆಮಾ ತಾರೆಗಳ ಅನಗತ್ಯ ಗದ್ದಲವಿರಲಿಲ್ಲ.

ಸಂಸಾರ ಸಮೇತರಾಗಿ ಉಂಡು ಬನ್ನಿ

ಸಂಸಾರ ಸಮೇತರಾಗಿ ಉಂಡು ಬನ್ನಿ

ಮೇ 15ರಿಂದ 20ರವರೆಗೆ (ಉತ್ತಮ ಪ್ರತಿಕ್ರಿಯೆ ಬಂದ ಕಾರಣ ಮೇಳವನ್ನು ಮುಂದುವರಿಸಲಾಗಿದೆ) ನಡೆಯುತ್ತಿರುವ ಉತ್ತರ ಕರ್ನಾಟಕ ಊಟದ ಮೇಳದ ಮತ್ತೊಂದು ವಿಶೇಷವೇನೆಂದರೆ, ಬೃಹತ್ ಆಕಾರದ ಜೋಳದ ರೊಟ್ಟಿಯನ್ನು ಬಾಣಸಿಗರು ತಯಾರಿಸುತ್ತಿರುವುದು. ಮಧ್ಯಾಹ್ನ 12ರಿಂದ ರಾತ್ರಿ 10 ಗಂಟೆಯವರೆಗೆ ಸಂಸಾರ ಸಮೇತರಾಗಿ ಇಲ್ಲಿ ಬಂದು ತಿಂದು ತೇಗಿ ಹೋಗಬಹುದು. ದರವೂ ಕೂಡ ಹದ್ದುಬಸ್ತಿನಲ್ಲಿದೆ.

ರೊಟ್ಟಿ ತಿಂದ ಗಟ್ಟಿಗರಿಂದ ಡೋಲು ಬಾಜೆ

ರೊಟ್ಟಿ ತಿಂದ ಗಟ್ಟಿಗರಿಂದ ಡೋಲು ಬಾಜೆ

ರೊಟ್ಟಿ ತಿಂದು ಜಗಜಟ್ಟಿಯಾಗು ಎಂಬ ಮಾತಿದೆ. ತಿಂದರೆ ಯಾವುದೇ ಸೈಡ್ ಎಫೆಕ್ಟ್ ಇಲ್ಲದ ಆರೋಗ್ಯಕರ ತಿನಿಸೆಂದರೆ ಅದು ಜೋಳದ ರೊಟ್ಟಿ. ಇದರೊಂದಿಗೆ ಎಣಗಾಯಿ ಪಲ್ಯ, ಗುರೆಳ್ಳು ಚಟ್ನಿ, ಹಸಿ ಎಣ್ಣೆ, ಒಂದಿಷ್ಟು ಗಟ್ಟಿ ಮೊಸರು, ಜೊತೆಗೊಂದಿಷ್ಟು ಬಾಳಕದ ಮೆಣಸಿನ ಕಾಯಿ ಇದ್ದರಂತೂ ಅದರ ಮಜವೇ ಬೇರೆ.

89ರ ನಾರಾಯಣರಾವ್ ಆರೋಗ್ಯದ ಗುಟ್ಟು

89ರ ನಾರಾಯಣರಾವ್ ಆರೋಗ್ಯದ ಗುಟ್ಟು

89 ವರ್ಷದ 'ಯುವಕ' ನಾರಾಯಣ ರಾವ್ ಅವರು ಕೂಡ ಇದೇ ಮಾತನ್ನು ಹೇಳುತ್ತಿದ್ದರು. ಹಿತಮಿತವಾದ ಸಂಪ್ರದಾಯಬದ್ಧವಾದ ಆಹಾರ, ದಿನನಿತ್ಯದ ಓಡಾಟ, ಕಾಯಿಲೆ ಬರಿಸುವಂಥ ತಿಂಡಿತಿನಿಸುಗಳನ್ನು ತಿನ್ನದಿರುವುದು ತಮ್ಮ ದಿವಿನಾದ ಆರೋಗ್ಯದ ಗುಟ್ಟು ಎಂದು ಹೆಮ್ಮೆಯಿಂದ ಹೇಳಿಕೊಂಡು ಬೀಗುತ್ತಿದ್ದರು.

ಎಕ್ಸಿಕ್ಯೂಟಿವ್ ಮೀಲ್ಸ್ ಕೇವಲ 150 ರು.

ಎಕ್ಸಿಕ್ಯೂಟಿವ್ ಮೀಲ್ಸ್ ಕೇವಲ 150 ರು.

ಜೋಳದ ರೊಟ್ಟಿ, ಬೆಣ್ಣೆ, ಎಣ್ಣೆಗಾಯಿ ಪಲ್ಯ (ಎರಡು ತರಹದ್ದು), ದಾಲ್, ಝುಣಕ, ಚಟ್ನಿ, ಪಾಯಸ, ಹೋಳಿಗೆ, ಮತ್ತೊಂದು ಸಿಹಿ, ರಸಂ, ಅನ್ನ, ಮೊಸರು, ಹಪ್ಪಳ, ಉಪ್ಪಿನಕಾಯಿ, ಬಜ್ಜಿ ಮತ್ತು ಮಜ್ಜಿಗೆ! ಇಷ್ಟು ತಿಂದು ನೋಡಿ.

English summary
South Ruchis, a vegetarian hotel in Bengaluru has organized North Karnataka Ruchi Mela to introduce variety of dishes prepared in Uttara Karnataka. The food mela will be from 15th May to 20th May. Go with family, enjoy north Karnataka delicious food.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X