ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಂದಿ ಬೆಟ್ಟ ಉಳಿಸಲು ಮ್ಯಾರಥಾನ್ ನಲ್ಲಿ ಭಾಗವಹಿಸಿ

By Prasad
|
Google Oneindia Kannada News

ಬೆಂಗಳೂರು, ಮೇ 06 : ಆಧುನಿಕತೆಯ ಬಟ್ಟೆಯನ್ನು ಹೊದ್ದಿರುವ 'ಗಾರ್ಡನ್ ಸಿಟಿ' ಬೆಂಗಳೂರು ತನ್ನ ಮಡಿಲಿನಲ್ಲಿ ಇನ್ನೂ ನೆನಪಿನಲ್ಲಿ ಬೆಚ್ಚಗೆ ಬಚ್ಚಿಟ್ಟುಕೊಳ್ಳುವಂಥ ಹಲವಾರು ಸ್ಮಾರಕಗಳನ್ನು, ಸ್ಥಳಗಳನ್ನು ಉಳಿಸಿಕೊಂಡಿದೆ. ಅವುಗಳನ್ನು ಉಳಿಸಿ, ಇನ್ನಷ್ಟು ಕಂಗೊಳಿಸುವಂತೆ ಮಾಡುವ ಜವಾಬ್ದಾರಿ ಎಲ್ಲರ ಮೇಲಿದೆ.

ಬೆಂಗಳೂರು ಸುತ್ತಲಿರುವ ಇಂಥ ಸ್ಥಳಗಳಲ್ಲಿ ನಂದಿ ಬೆಟ್ಟ ಕೂಡ ಒಂದು. ಮಾನವನ ದಬ್ಬಾಳಿಕೆಯಿಂದ ನಂದಿ ಬೆಟ್ಟದ ಪ್ರತಿಷ್ಠೆ ಒಂದಿಷ್ಟು ಮುಕ್ಕಾಗಿದ್ದರೂ, ತನ್ನ ಅಸ್ತಿತ್ವವನ್ನು ಇನ್ನೂ ಉಳಿಸಿಕೊಂಡಿದೆ. ಚಾರಣಿಗರನ್ನು, ಪ್ರವಾಸಿಗರನ್ನು, ಪ್ರೇಮಿಗಳನ್ನು ನಂದಿ ಬೆಟ್ಟ ಕೈಬೀಸಿ ಕರೆಯುತ್ತಲೇ ಇರುತ್ತದೆ.

ನಂದಿ ಹಿಲ್ಸ್ ಅಂದ್ರೆ ಕತ್ತೆತ್ತಿ ನೋಡುವ ಬೆಟ್ಟ ಮಾತ್ರವಲ್ಲ. ಅಲ್ಲಿ ಸಸ್ಯರಾಶಿಯಿದೆ, ಪುರಾತನ ದೇವಸ್ಥಾನಗಳಿವೆ, ಎಲ್ಲಕ್ಕಿಂತ ಹೆಚ್ಚಾಗಿ ಅಲ್ಲಿ ಅರ್ಕಾವತಿ ನದಿಯ ಸೆಲೆಯಿದೆ. ಸುತ್ತಲೂ ಬತ್ತಿರುವ ಕೆರೆಕೊತ್ತಲಗಳಿವೆ, ಕಿತ್ತುಹೋದ ರಸ್ತೆಗಳಿವೆ, ಪ್ರವಾಸಿಗರು ಎಲ್ಲೆಂದರಲ್ಲಿ ಬಿಸಾಡಿರುವ ಪ್ಲಾಸ್ಟಿಕ್ ವಸ್ತುಗಳಿವೆ, ಕಾಪಾಡಿ ಎಂದು ಕರೆಯುತ್ತಿರುವ ಗಿಡಮರಗಳಿವೆ.

ಇವೆಲ್ಲವನ್ನು ಉಳಿಸುವ ಉದ್ದೇಶದಿಂದ ಜೂನ್ 12 ಭಾನುವಾರ 'ನಂದಿ ಹಿಲ್ಲಥಾನ್', ಅಂದ್ರೆ 21 ಕಿ.ಮೀ. ಉದ್ದದ ಮ್ಯಾರಥಾನ್ ಆಯೋಜಿಸಲಾಗಿದೆ. ನಂದಿ ಬೆಟ್ಟದ ಬಗ್ಗೆ, ಪಾರಂಪರಿಕ ಸೌಂದರ್ಯದ ಬಗ್ಗೆ, ಪರಿಸರದ ಬಗ್ಗೆ ಕಾಳಜಿ ಇರುವವರು ಈ ನಂದಿ ಹಿಲ್ಲಥಾನ್ ನಲ್ಲಿ ಭಾಗವಹಿಸಬಹುದು. ನಡೆಯಲಿಚ್ಛಿಸುವವರು 10 ಕಿ.ಮೀ. ನಡೆಯಬಹುದಾಗಿದೆ. [ಬೆರಳ ತುದಿಯಲ್ಲಿ ಚಿತ್ತಾಕರ್ಷಕ ನಂದಿಗಿರಿಧಾಮ]

Nandi Hillathon by United Way Bengaluru on 12th June

ನಂದಿ ಬೆಟ್ಟದ ಬುಡದಲ್ಲಿರುವ ಡಿಸ್ಕವರಿ ವಿಲೇಜ್ ರೆಸಾರ್ಟ್ ನಿಂದ ಮ್ಯಾರಥಾನ್ ಆರಂಭವಾಗಲಿದೆ. ನಂತರ ಅಲ್ಲಿಯೇ ಮುಕ್ತಾಯವಾಗಲಿದೆ. ಬೆಳಿಗ್ಗೆ 6 ಗಂಟೆಯಿಂದ ನೋಂದಾವಣಿಯೊಂದಿಗೆ ಆರಂಭವಾಗಿ, 10 ಗಂಟೆಗೆ ಗೆದ್ದವರಿಗೆ ಬಹುಮಾನ ವಿತರಣೆಯೊಂದಿಗೆ ಮುಕ್ತಾಯವಾಗಲಿದೆ.

ಆಯೋಜಕರು : ಬೆಂಗಳೂರಿನ ಆರೋಗ್ಯ, ಪರಿಸರ, ಶಿಕ್ಷಣ ಕ್ಷೇತ್ರಗಳಲ್ಲಿ ಬದಲಾವಣೆ ತರಲು ಸದಾ ತುಡಿಯುತ್ತಿರುವ ಲಾಭರಹಿತ ಸರಕಾರೇತರ ಸಂಸ್ಥೆ ಯುನೈಟೆಡ್ ವೇ ಆಫ್ ಬೆಂಗಳೂರು ಈ ಕಾರ್ಯಕ್ರಮವನ್ನು ಆಯೋಜಿಸಿದೆ. ಬೆಂಗಳೂರಿನ ಸಾವಿನಂಚಿನಲ್ಲಿರುವ ಕೆರೆಗಗಳ ಉಳಿಕೆಗಾಗಿಯೂ ಈ ಸಂಸ್ಥೆ ಶ್ರಮಿಸುತ್ತಿದೆ. [ಕಲವಾರಹಳ್ಳಿ ದುರ್ಗಮ ಬೆಟ್ಟಕ್ಕೆ ಟ್ರೆಕ್ಕಿಂಗ್ ಮಾರ್ಗದರ್ಶಿ]

ಮ್ಯಾರಥಾನ್ ಶುಲ್ಕ : ಓಟದಲ್ಲಿ ಭಾಗವಹಿಸುವವರು 1,000 ರು. ಮತ್ತು ನಡಿಗೆಯಲ್ಲಿ ಭಾಗವಹಿಸುವವರು 500 ರು. ಶುಲ್ಕ ಕಟ್ಟಬೇಕು. ನಂದಿ ಹಿಲ್ಲಥಾನ್ ಟಿಶರ್ಟ್ ಗಾಗಿ 300 ರು. ಹೆಚ್ಚುವರಿಯಾಗಿ ನೀಡಬೇಕು. ಬೆಂಗಳೂರಿನ ಅನರ್ಘ್ಯ ಆಸ್ತಿಯನ್ನು ಉಳಿಸಲು ಇಷ್ಟು ಮಾಡಲು ಸಾಧ್ಯವಿಲ್ಲವೆ? ಪ್ರತಿ ಪೈಸೆಯನ್ನು ನಂದಿ ಬೆಟ್ಟದ ಉಳಿಕೆಗಾಗಿ ವಿನಿಯೋಗಿಸಲಾಗುತ್ತದೆ ಎಂದು ಆಯೋಜಕರು ಹೇಳಿದ್ದಾರೆ.

ಭರ್ಜರಿ ಬಹುಮಾನ : ಇದು ಕೇವಲ ಓಟದ ಆಟವಲ್ಲ. ಓಟದಲ್ಲಿ, ನಡಿಗೆಯಲ್ಲಿ ಗೆದ್ದವರಿಗೆ ಭರ್ಜರಿ ಬಹುಮಾನವೂ ಉಂಟು. ಮ್ಯಾರಥಾನ್ ನಲ್ಲಿ ಗೆದ್ದ ಪುರುಷ ಮತ್ತು ಸ್ತ್ರೀಗೆ 37 ಸಾವಿರ ರು. ಒಂದನೇ ರನ್ನರ್ ಅಪ್ ಮತ್ತು ಎರಡನೇ ರನ್ನರ್ ಅಪ್ ಗಳಿಗೆ 25 ಸಾವಿರ ರು. ಮತ್ತು 12,500 ರು. ಕ್ರಮವಾಗಿ ನೀಡಲಾಗುತ್ತಿದೆ. [ಹೆಚ್ಚಿನ ಮಾಹಿತಿಗೆ]

English summary
Nandi Hillathon is a city wide fundraising event driven by United Way Bengaluru to protect, preserve and promote Bengaluru’s treasure Nandi Hills. Marathon and Walkathon are organized on June 12, Sunday. Attractive prizes are there to win.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X