ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮುನ್ನೋಟದಲ್ಲಿ 'ಅರಿಮೆ' ಹುಟ್ಟುಹಬ್ಬ ಹಾಗೂ ಹಿತಕರ ಚರ್ಚೆ

ಮುನ್ನೋಟ ಮಳಿಗೆಯಲ್ಲಿ ಭಾನುವಾರ(ಫೆಬ್ರವರಿ 26)ದಂದು ಅರಿಮೆ ತಾಣದ ಮೊದಲ ಹುಟ್ಟುಹಬ್ಬ ಹಾಗೂ ಹತ್ತನೆಯ ಮಾತುಕತೆ ಕಾರ್ಯಕ್ರಮ ಏರ್ಪಾಡಾಗಿದೆ. ಕನ್ನಡದಲ್ಲೇ ಸೈನ್ಸ್ ಮತ್ತು ಟೆಕ್ನಾಲಜಿಯ ಸಾಹಿತ್ಯ ಹೆಚ್ಚಿಸುವುದು ಇದರ ಉದ್ದೇಶ.

By Mahesh
|
Google Oneindia Kannada News

ಬೆಂಗಳೂರು, ಫೆಬ್ರವರಿ 22: ಲೇಖಕ ವಸಂತ್ ಶೆಟ್ಟಿ ಅವರ ಮುನ್ನೋಟ ಮಳಿಗೆಯಲ್ಲಿ ಭಾನುವಾರ(ಫೆಬ್ರವರಿ 26)ದಂದು ಹತ್ತನೆಯ ಮಾತುಕತೆ ಕಾರ್ಯಕ್ರಮ ಏರ್ಪಾಡಾಗಿದೆ. ಕನ್ನಡದಲ್ಲೇ ಸೈನ್ಸ್ ಮತ್ತು ಟೆಕ್ನಾಲಜಿಯ ಸಾಹಿತ್ಯ ಹೆಚ್ಚಿಸುವ ಉದ್ದೇಶ ಹೊಂದಿರುವ ಅರಿಮೆ ತಾಣದ ಮೊದಲ ಹುಟ್ಟುಹಬ್ಬದ ಪ್ರಯುಕ್ತ ಈ ಮಾತುಕತೆ ಹಮ್ಮಿಕೊಳ್ಳಲಾಗಿದೆ.

ಜಗತ್ತಿನ ಯಾವುದೇ ಮುಂದುವರೆದ ನಾಡುಗಳನ್ನು ನೋಡಿದರೆ ಅಲ್ಲೆಲ್ಲಾ ಎಲ್ಲಾ ಹಂತದ ಕಲಿಕೆಯು ಅದರಲ್ಲೂ ವಿಶೇಷವಾಗಿ ವಿಜ್ಞಾನ ಮತ್ತು ತಂತ್ರಜ್ಞಾನದ ಕಲಿಕೆಯು ಆಯಾ ನಾಡಿನ ನುಡಿಯಲ್ಲಿ ನಡೆಯುತ್ತಿರುವುದು ನಮಗೆ ಕಂಡುಬರುತ್ತದೆ.

ಜರ್ಮನಿ, ಫ್ರಾನ್ಸ್, ಇಸ್ರೇಲ್, ಕೊರಿಯಾ, ಜಪಾನ್, ಫಿನ್ ಲ್ಯಾಂಡ್ ಹೀಗೆ ಮುಂದುವರೆದ ಯಾವುದೇ ನಾಡಿನ ಕಲಿಕೆಯ ವ್ಯವಸ್ಥೆಯನ್ನು ಒರೆಗೆಹಚ್ಚಿದರೆ, ತಾಯ್ನುಡಿ ಮಾಧ್ಯಮದಲ್ಲಿ ಕಲಿಯುವುದು ತಮ್ಮ ನಾಡಿನ ಏಳಿಗೆಗೆ ತುಂಬಾ ಮುಖ್ಯವೆಂದು ಅವರು ಮನಗಂಡಿರುವುದು ಕಂಡುಬರುತ್ತದೆ.

ಈ ನಿಟ್ಟಿನಲ್ಲಿ ಆಯಾ ನಾಡಿನವರು ನಿರಂತರವಾಗಿ ತಮ್ಮ ನುಡಿಯನ್ನು ವಿಜ್ಞಾನದಂತಹ ಕವಲಿಗೆ ಸಜ್ಜುಗೊಳಿಸುತ್ತಾ ಬಂದಿರುವುದನ್ನೂ ಕಾಣಬಹುದು. ಜಪಾನ್‍ನಲ್ಲಿ ನುಡಿಯನ್ನು ಸಜ್ಜುಗೊಳಿಸುವ ಈ ಕೆಲಸ ಹಲವು ಶತಮಾನಗಳ ಹಿಂದೆಯೇ ರಂಗಾಕು (Rangaku) ಎಂಬ ಚಳುವಳಿಯ ಮೂಲಕ ನಡೆದರೆ, ಫಿನ್ ಲ್ಯಾಂಡ್ ನಂತಹ ನಾಡುಗಳಲ್ಲಿ ಇತ್ತೀಚಿನ ದಶಕಗಳಲ್ಲಿ ತುಂಬಾ ಕೆಲಸವಾಗಿರುವುದು ಕಂಡುಬರುತ್ತದೆ.

Munnota discussion Arime website anniversary

ಕಲಿಕೆಯ ವಿಷಯಕ್ಕೆ ಬಂದಾಗ ಕನ್ನಡ ನಾಡಿನ ಪರಿಸ್ಥಿತಿ ತುಂಬಾ ದಯನೀಯವಾಗಿದೆ ಅಂತಾ ಹೇಳಿದರೆ ತಪ್ಪಾಗಲಾರದು. ನಮ್ಮಲ್ಲಿ ಇನ್ನೂ ಕೂಡ ಕಲಿಕೆಯ ಮಾಧ್ಯಮ ಯಾವುದಿರಬೇಕು ಅನ್ನುವ ಚರ್ಚೆಯೇ ನಡೆಯುತ್ತಿರುವುದು ಅಚ್ಚರಿಯ ಸಂಗತಿ.

ಜಾಗತೀಕರಣದ ಇಂದಿನ ದಿನಗಳಲ್ಲಿ ಇಂಗ್ಲೀಶ್ ನ ಪರಿಣಾಮ ನಮ್ಮ ಮೇಲೆ ಆಗುತ್ತಿರುವುದು ನಿಜವಾದರೂ ಇದನ್ನು ಎದುರಿಸಲು ಇರುವ ದಾರಿಯೆಂದರೆ ಕನ್ನಡವನ್ನು ವಿಜ್ಞಾನದಂತಹ ಕವಲಿಗೆ ಸಜ್ಜುಗೊಳಿಸುವುದೇ ಹೊರತು ಇಂಗ್ಲೀಶ್ ಮಾಧ್ಯಮಕ್ಕೆ ಅಂಟಿಕೊಳ್ಳುವುದಲ್ಲಾ ಅನ್ನುವುದನ್ನು ನಾವು ಅರಿಯಬೇಕಿದೆ.

ಕನ್ನಡದಲ್ಲಿ ವಿಜ್ಞಾನ ಬರಹಗಳನ್ನು ಬರೆಯುವ ವಾಡಿಕೆ ಇರುವುದು ಕಂಡುಬರುತ್ತಾದರೂ, ಈ ನಿಟ್ಟಿನಲ್ಲಿ ಒಂದು ನುಡಿ ಸಮುದಾಯವಾಗಿ ನಿರ್ದಿಷ್ಟವಾದ ಗುರಿಗಳನ್ನು ಇಟ್ಟುಕೊಂಡು ಇಟ್ಟ ಹೆಜ್ಜೆಗಳು ಕಡಿಮೆ ಅನ್ನಬಹುದು. ಜತೆಗೆ ವಿಜ್ಞಾನದಂತಹ ವಿಷಯವನ್ನು ತಿಳಿಸುವಾಗ ಆದಷ್ಟು ಜನಕ್ಕೆ ಹತ್ತಿರವಾಗುವ ಬಗೆಯಲ್ಲಿ ಬರೆಯುವುದರಲ್ಲೂ ನುಡಿ ಸಮುದಾಯವಾಗಿ ನಾವು ಎಡವಿದ್ದೇವೆ ಅಂದರೆ ತಪ್ಪಾಗಲಾರದು.

ತಂತ್ರಜ್ಞಾನ ಪದಗಳ ಬಳಕೆಯಲ್ಲಂತೂ ಕನ್ನಡ ಬರಹಗಳಲ್ಲಿ ಬಳಸಲಾಗುವ ಪದಗಳು ತುಂಬಾ ಕಷ್ಟ ಅಂತೆನಿಸುವುದು ಯಾರಿಗಾದರೂ ಕಂಡೀತು. ದ್ಯುತಿ, ಹೃತ್ಕುಕ್ಷಿ, ಸಂಪೀಡನ, ಅಪವರ್ತ್ಯ ಮುಂತಾದ ಪದಗಳು ಒಂದೆಡೆಯಾದರೆ ಸುಲಭವಾದ ಏರಿಕೆ, ಇಳಿಕೆ ಪದಗಳನ್ನೂ ಹೊರಗಿಟ್ಟು ಆರೋಹಣ, ಅವರೋಹಣ ಪದಗಳನ್ನು ವಿಜ್ಞಾನ ಬರಹಗಳಲ್ಲಿ ಬಳಸುತ್ತಿರುವುದನ್ನು ನಾವು ಕಾಣಬಹುದು. ಅದರಲ್ಲೂ ಪಠ್ಯಪುಸ್ತಕಗಳಲ್ಲಿ ಇಂತಹ ನಡೆ ಕಂಡುಬರುತ್ತಿರುವುದು, ನಾಡಿನ ಹೆಚ್ಚಿನ ಮಕ್ಕಳನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

ತಿಳಿಗನ್ನಡದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಬರಹಗಳನ್ನು ಹೊರತರುವುದು ಇಂದು ತುರ್ತಾಗಿ ಆಗಬೇಕಾದ ಕೆಲಸವಾಗಿದೆ. ಈ ನಿಟ್ಟಿನಲ್ಲಿ 'ಅರಿಮೆ' (http://arime.org/) ಎಂಬ ಪೋರ್ಟಲ್ ಒಂದು ಪುಟ್ಟ ಹೆಜ್ಜೆಯಾಗಿದ್ದು, ಕಳೆದ ಒಂದು ವರುಷದಲ್ಲಿ ಕೆಲಸಗಳನ್ನು ಮಾಡುತ್ತಾ ಬಂದಿದೆ ಮತ್ತು ಮುಂದಿನ ದಿನಗಳಲ್ಲಿ ಹೆಚ್ಚಿನ ಗುರಿಗಳತ್ತ ಸಾಗುವ ಹಂಬಲ ಹೊಂದಿದೆ.

Munnota discussion Arime website anniversary

ಈ ಪೋರ್ಟಲ್ ನಲ್ಲಿ ವಿಜ್ಞಾನದ ಆಗುಹೋಗುಗಳ ಜತೆಗೆ ಶಾಲೆಯಲ್ಲಿ ಓದುತ್ತಿರುವ ಮಕ್ಕಳಿಗಾಗಿ, ಪಠ್ಯಪುಸ್ತಕಗಳಿಗೆ ಪೂರಕವಾದ ಪಾಠಗಳನ್ನು ತಿಳಿಗನ್ನಡದಲ್ಲಿ ತಿಳಿಸುವ ಪ್ರಯತ್ನ ಮಾಡಲಾಗುತ್ತಿದೆ. ಕನ್ನಡದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಪದಗಳನ್ನು ಹೊಮ್ಮಿಸುವುದೂ ಈ ತಾಣದ ಉದ್ದೇಶವಾಗಿದ್ದು, ಇಲ್ಲಿಯವರೆಗೆ ಕಟ್ಟಲಾದ ಪದಗಳ ಪಟ್ಟಿಯನ್ನು ತಾಣದಲ್ಲಿ ಜನರ ಬಳಕೆಗಾಗಿ ಇರಿಸಲಾಗಿದೆ.

ತಾಣಕ್ಕೆ ಒಂದು ವರುಷ ತುಂಬಿದ ಸಂದರ್ಭದಲ್ಲಿ ಇದರ ಮುಂದಿನ ಹೆಜ್ಜೆಗಳು, ಸವಾಲುಗಳು ಕುರಿತಾಗಿ ಇದೇ ಭಾನುವಾರ, 26.02.2017 ರಂದು ಈ ತಾಣ ನಡೆಸುತ್ತಿರುವ ಪ್ರಶಾಂತ ಸೊರಟೂರ ಅವರು ಬೆಂಗಳೂರಿನಲ್ಲಿ ಕನ್ನಡ, ಕರ್ನಾಟಕ ಮತ್ತು ಕನ್ನಡಿಗರ ಪರ ಚಿಂತನೆಯ ಪುಸ್ತಕಗಳಿಗೆಂದೇ ಮೀಸಲಾದ ಮುನ್ನೋಟ ಪುಸ್ತಕ ಮಳಿಗೆಯಲ್ಲಿ ಮಾತನಾಡಲಿದ್ದಾರೆ. ಆಸಕ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು.

ಕಾರ್ಯಕ್ರಮ ನಡೆಯುವ ಸ್ಥಳ: ಮುನ್ನೋಟ ಪುಸ್ತಕ ಮಳಿಗೆ, ಡಿವಿಜಿ ರಸ್ತೆ, ನಾಗಸಂದ್ರ ಸರ್ಕಲ್ ಬಳಿ, ಬಸವನಗುಡಿ, ಬೆಂಗಳೂರು,
ಹೊತ್ತು : ಭಾನುವಾರ, 26.02.2017ರ ಬೆಳಿಗ್ಗೆ11.30.

English summary
Arime website is celebrating its first anniversary. This website is dedicated to science and technology write ups in Kannada. A special discussion will be held at Munnota shop, Nagasandra circle, Basavanagudi, Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X