ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಲ್ಲೇಶ್ವರಂ ಶಾಸಕ ಡಾ. ಅಶ್ವತ್ಥ ನಾರಾಯಣ ಸಂದರ್ಶನ

By ಸಂದರ್ಶನ : ಪ್ರಸಾದ ನಾಯಿಕ
|
Google Oneindia Kannada News

ಶತಮಾನಕ್ಕೂ ಹಳೆಯ ನೆನಪುಗಳನ್ನು ಹುದುಗಿಸಿಕೊಂಡಿರುವ ಬಡಾವಣೆ, ಸಿವಿ ರಾಮನ್, ಕಸ್ತೂರಿರಂಗನ್, ಪ್ರಕಾಶ್ ಪಡುಕೋಣೆ, ಅನಂತ್ ನಾಗ್, ಜಿಪಿ ರಾಜರತ್ನಂರಂಥ ದಿಗ್ಗಜರಿಗೆ ಆಶ್ರಯ ನೀಡಿದ ಆಲಯ, ಹೆಚ್ಚಾಗಿ ಮಧ್ಯಮ ಮತ್ತು ಮೇಲ್ವರ್ಗದವರ ಬದುಕಿಗೆ ಆಸರೆ ನೀಡಿದ ಲೇಔಟ್ ಮಲ್ಲೇಶ್ವರಂ ಇಂದು ಬೆಂಗಳೂರಿನ ಪ್ರತಿಷ್ಠಿತ ಬಡಾವಣೆಗಳಲ್ಲಿ ಒಂದು.

ಪುರಾತನ ಬಡಾವಣೆಯಾದರೂ ಅತ್ಯಂತ ಅಚ್ಚುಕಟ್ಟಾಗಿ ನಿರ್ಮಾಣವಾದ ಮಲ್ಲೇಶ್ವರದಲ್ಲಿ ಏನುಂಟು ಏನಿಲ್ಲ? ಭಕ್ತರಿಗಾಗಿ ಕಾಡು ಮಲ್ಲೇಶನಿದ್ದಾನೆ, ಬುದ್ಧಿವಂತರಿಗಾಗಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಇದೆ, ಸಂಸ್ಕೃತಿ ಪ್ರೇಮಿಗಳಿಗಾಗಿ ಚೌಡಯ್ಯ ಸ್ಮಾರಕವಿದೆ, ಜಾಣರಿಗಾಗಿ ಎಂಇಎಸ್‌ನಂಥ ಪ್ರತಿಷ್ಠಿತ ಕಾಲೇಜಿದೆ, ಬಡವರಿಗಾಗಿ ಕೆಸಿ ಜನರಲ್ ಆಸ್ಪತ್ರೆಯಿದೆ, ಶ್ರೀಮಂತಾತಿಶ್ರೀಮಂತರ ಅರಮನೆಯಂಥ ಮನೆಗಳಿವೆ, ಉಸಿರಾಡಲು ಪಾರ್ಕುಗಳಿವೆ, ಹರಿಶ್ಚಂದ್ರ ಘಾಟೂ ಇದೆ!

ಇಂತಿಪ್ಪ, ತೆಲುಗಿನವರಾಗಿದ್ದರೂ ಕನ್ನಡದ ಪ್ರೇಮದಿಂದಾಗಿ ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪಿಸಿದ, ಮೈಸೂರಿನ ದಿವಾನರಾಗಿದ್ದ ಹೆಬ್ಬಳಲು ವೆಲ್ಪನೂರ ನಂಜುಂಡಯ್ಯ (1860 - 1920) ಅವರು ನಿರ್ಮಿಸಿದ ಮಲ್ಲೇಶ್ವರಂನ ಈಗಿನ ಸ್ಥಿತಿಗತಿ ಹೇಗಿದೆ, ಅತೀವ ಜನದಟ್ಟಣೆಯಿಂದ ಉಸಿರಾಡಲು ಕಷ್ಟಪಡುತ್ತಿರುವ ಮಲ್ಲೇಶ್ವರಂ ಇಂದಿನ ಆರೋಗ್ಯದ ಸ್ಥಿತಿಗತಿಯ ಬಗ್ಗೆ, ಸತತ ಎರಡು ಬಾರಿ ಈ ಕ್ಷೇತ್ರವನ್ನು 2004ರಿಂದ ಪ್ರತಿನಿಧಿಸುತ್ತಿರುವ ವೈದ್ಯ ಡಾ. ಅಶ್ವತ್ಥ ನಾರಾಯಣ (45) ಅವರು ಒನ್ಇಂಡಿಯಾ ಜೊತೆ ಮಾತನಾಡಿದ್ದಾರೆ.

Malleshwaram MLA Dr Aswath Narayan interview

ಒನ್ಇಂಡಿಯಾ ಕನ್ನಡ : ಮಲ್ಲೇಶ್ವರಂ ಬೆಂಗಳೂರಿನ ಅತ್ಯಂತ ಪುರಾತನ ಬಡಾವಣೆಗಳಲ್ಲಿ ಒಂದು. ಇಲ್ಲಿ ಎಲ್ಲ ವರ್ಗದ ಜನರು ನೆಲೆಸಿದ್ದಾರೆ. ಆದರೆ ಸರ್ವರೀತಿಯಿಂದಲೂ ಮಲ್ಲೇಶ್ವರಂನ ಆರೋಗ್ಯ ಈಗ ಹೇಗಿದೆ?

ಅಶ್ವತ್ಥ ನಾರಾಯಣ : ಮಲ್ಲೇಶ್ವರ ಅತ್ಯಂತ ಆರೋಗ್ಯಕರವಾಗಿದೆಯೆಂದು ಆತ್ಮವಿಶ್ವಾಸದಿಂದ ನಾನು ಖಂಡಿತ ಹೇಳುವುದಿಲ್ಲ. ಆದರೆ, ನನ್ನಿಂದ ಏನೇನು ಸಾಧ್ಯವಾಗಿದೆಯೋ ಅದನ್ನೆಲ್ಲವನ್ನೂ ನೀಡಿದ್ದೇನೆ. ಎಲ್ಲ ಬಡಾವಣೆಗಳಿಗೆ ಪರಿಪೂರ್ಣವಾಗಿ ನೀರು ಸರಬರಾಜು ಮಾಡಲು ನನ್ನಿಂದ ಸಾಧ್ಯವಿಲ್ಲ. ವೈಜ್ಞಾನಿಕವಾಗಿ ಯಾವುದನ್ನೂ ಪ್ಲಾನ್ ಮಾಡಿಲ್ಲ. ಹೇಗೋ ಎಲ್ಲವನ್ನೂ ಸರಿದೂಗಿಸಿಕೊಂಡು ಹೋಗುತ್ತಿದ್ದೇನೆ.

ನೀವು ಹೇಳಿದಂತೆ ಮಲ್ಲೇಶ್ವರಂ ಹಳೆಯ ಲೇಔಟ್ ಆಗಿದ್ದರೂ ಆಧುನಿಕ ಬಡಾವಣೆ. ಇಲ್ಲಿ ಎಲ್ಲ ಸೌಲಭ್ಯಗಳಿದ್ದರೂ, ವಿದ್ಯಾಭ್ಯಾಸಕ್ಕೆ ಹೆಸರುವಾಸಿಯಾಗಿದ್ದರೂ, ಅತ್ಯಂತ ಜಾಣ ನಾಗರಿಕರು, ಸುಸಂಸ್ಕೃತರು ನೆಲೆಸಿದ್ದರೂ, ಹಲವಾರು ಸಮಸ್ಯೆಗಳಿಗೆ ಸಂಬಂಧಿಸಿದಂತೆ ಇನ್ನೂ ಅನಿಶ್ಚಿತತೆ ಇದ್ದೇ ಇದೆ. ಅನೇಕ ಬಾರಿ ನನ್ನನ್ನೇ ನಾನು ಕೇಳಿಕೊಂಡಿದ್ದೇನೆ. ನಾವೆಂಥ ವ್ಯವಸ್ಥೆಯಲ್ಲಿ ನಾವು ನೆಲೆಸಿದ್ದೇವೆ? ಆ ಅನಿಶ್ಚಿತತೆ ನಿವಾರಣೆಯಾಗಬೇಕು.

ಒನ್ಇಂಡಿಯಾ ಕನ್ನಡ : ಈಗ ನೀವು ಅಧಿಕಾರದಲ್ಲಿಲ್ಲ. ನಿಮ್ಮ ಸರಕಾರವೇ ಆಡಳಿತದ ಚುಕ್ಕಾಣಿ ಹಿಡಿದಿದ್ದರೆ ಇದೇ ತರಹದ ಹೇಳಿಕೆ ನೀಡುತ್ತಿದ್ದಿರಾ?

ಅಶ್ವತ್ಥ ನಾರಾಯಣ : ಸರಕಾರ ಬಿಜೆಪಿಯದ್ದೇ ಇರಲಿ, ಕಾಂಗ್ರೆಸ್ಸಿನದ್ದೇ ಇರಲಿ ಯಾವುದೇ ವ್ಯತ್ಯಾಸವಿರುವುದಿಲ್ಲ. ಕೆಲಸ ಮಾಡುವವರು ಅದೇ ಅಧಿಕಾರಿಗಳು, ಅದೇ ಸಂಸ್ಕೃತಿ, ಅದೇ ವಾತಾವರಣ. ಜನಪ್ರತಿನಿಧಿ ಯಾರೇ ಬರಲಿ ಅಂತಹ ವ್ಯತ್ಯಾಸ ಕಂಡುಬರುವುದಿಲ್ಲ.

Malleshwaram MLA Dr Aswath Narayan interview

ಒನ್ಇಂಡಿಯಾ ಕನ್ನಡ : ಬೇರೆ ಎಲ್ಲಿಯಾದರೂ ಎಂಎಲ್ಎ ಆಗಬಹುದು. ಆದರೆ, ಬೆಂಗಳೂರಿನಲ್ಲಿ ಶಾಸಕನಾಗಿರುವುದು ಬಲು ಕಷ್ಟದ ಕೆಲಸ ಅಂತ ಬೆಂಗಳೂರಿನ ಶಾಸಕರೊಬ್ಬರು ಹೇಳಿದ್ದರು. ಇದನ್ನು ಒಪ್ಪುತ್ತೀರಾ?

ಅಶ್ವತ್ಥ ನಾರಾಯಣ : ನೂರಕ್ಕೆ ನೂರು ಸತ್ಯ. ಕಾರಣ ಅತ್ಯಂತ ಸ್ಪಷ್ಟ. ಇಲ್ಲಿ ಕಡಿಮೆ ಪ್ರದೇಶದಲ್ಲಿ ಜನಸಂಖ್ಯೆ ಜಾಸ್ತಿ. ಹೀಗಾಗಿ ಸಮಸ್ಯೆಗಳೂ ಜಾಸ್ತಿ. ನೀರು, ವಿದ್ಯುತ್ ಸರಬರಾಜು, ರಸ್ತೆ, ಕಾನೂನು ಸುವ್ಯವಸ್ಥೆ, ಟ್ರಾಫಿಕ್ ನಿಯಂತ್ರಣ, ಆರೋಗ್ಯ, ಆಟದ ಮೈದಾನ, ಸಾರ್ವಜನಿಕ ಸ್ಥಳ... ಪ್ರತಿಯೊಂದರಲ್ಲೂ ಹಲವಾರು ಸಮಸ್ಯೆಗಳಿವೆ, ಸವಾಲುಗಳಿವೆ.

ಆದರೆ, ಅಧಿಕಾರಿಗಳು ಜನರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದರೆ ಮಾತ್ರ ಈ ಸಮಸ್ಯೆಗಳ ಪರಿಹಾರ ಸಾಧ್ಯ. ನಾನು ಇದ್ದರೂ ಅಷ್ಟೆ ಇಲ್ಲದಿದ್ದರೂ ಅಷ್ಟೆ ಕೆಲಸ ಮಾಡುವವರು ಈ ಸರಕಾರಿ ನೌಕರರೇ ತಾನೆ? ಅವರಿಂದ ಕೆಲಸ ಮಾಡಿಸುವುದೊಂದೇ ನಮಗಿರುವ ಮಾರ್ಗ. ಬೀದಿಗಿಳಿದು ನಾವು ಈ ಕೆಲಸ ಮಾಡಲು ಸಾಧ್ಯವಿಲ್ಲ. ನಾವು ಕಾನೂನು ಸೃಷ್ಟಿಸುವವರು. ನಮ್ಮ ಕೆಲಸ ವಿಧಾನಸೌಧದಲ್ಲಿಯೇ ಕೇಂದ್ರೀಕೃತವಾಗಿರಬೇಕು.

ನಾವು ಜನಪ್ರತಿನಿಧಿಗಳಾಗಿ ಉಲ್ಟಾ ಕೆಲಸ ಮಾಡುತ್ತಿದ್ದೇವೆ. ವಿಧಾನಸೌಧದಲ್ಲಿ ಕುಳಿತು ಕೆಲಸ ಮಾಡುವುದಕ್ಕಿಂತ ಹೆಚ್ಚಾಗಿ ನಮ್ಮ ಕ್ಷೇತ್ರದಲ್ಲಿಯೇ ಹೆಚ್ಚು ಕಾಲ ಕಳೆಯುವಂತಾಗಿದೆ. ಜನರು ಕೂಡ, ನಾವೇ ಈ ಎಲ್ಲ ಸರಕಾರಿ ನೌಕರರನ್ನು ನಿಯಂತ್ರಿಸುತ್ತೇವೆ, ನಿರ್ಣಯಗಳನ್ನು ತೆಗೆದುಕೊಳ್ಳುತ್ತೇವೆ ಎಂಬ ಭ್ರಮೆಯಲ್ಲಿದ್ದಾರೆ. ಇದು ಮೊದಲು ನಿವಾರಣೆಯಾಗಬೇಕು. ಆದರೆ, ಅಧಿಕಾರಿಗಳೊಂದಿಗೆ ನಾನು ನಿರಂತರ ಸಂಪರ್ಕದಲ್ಲಿದ್ದೇನೆ. ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದೇನೆ. ಕ್ಷೇತ್ರದ ಎಲ್ಲ ಒಳ್ಳೆಯದಕ್ಕೆ ಕೆಟ್ಟದ್ದಕ್ಕೆ ಅವರೇ ಕಾರಣರು.

Malleshwaram MLA Dr Aswath Narayan interview

ಒನ್ಇಂಡಿಯಾ ಕನ್ನಡ : ಮಲ್ಲೇಶ್ವರಂ ಎಷ್ಟೇ ಮಾಡರ್ನ್ ಬಡಾವಣೆ ಅನ್ನಿಸಿಕೊಂಡಿದ್ದರೂ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದೆ. ಬೀದಿ ವ್ಯಾಪಾರಿಗಳ ಸಮಸ್ಯೆ, ಪಾರ್ಕಿಂಗ್ ಸಮಸ್ಯೆ, ಮಾಲ್ ಗಳಿಂದಾಗಿ ಟ್ರಾಫಿಕ್ ಸಮಸ್ಯೆ. ಬಿಬಿಎಂಪಿ, ಬಿಡಿಎ ಈ ಸಮಸ್ಯೆಗಳಿಗೆ ಪರಿಹಾರ ಹುಡುಕುತ್ತಿದೆಯಾ, ಅಡ್ಡಗಾಲಾಗಿ ನಿಂತಿದೆಯಾ?

ಅಶ್ವತ್ಥ ನಾರಾಯಣ : ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ರೂಪಿಸಿದ ಸಿಟಿ ಪ್ಲಾನಿಂಗ್ ಪ್ರಕಾರ ನಾಗರಿಕರು ವಾಸಿಸುವ ಸ್ಥಳದಲ್ಲಿ ವ್ಯಾಪಾರಿ ಚಟುವಟಿಕೆಗೆ ಅವಕಾಶವಿರಲಿಲ್ಲ. ಆದರೆ, 2015ರ ಸಿಟಿ ಪ್ಲಾನಿಂಗ್ ಪ್ರಕಾರ, ಮೂಲಭೂತ ರಚನೆಯೇ ಬದಲಾಗಿದೆ. ಜನವಾಸಿಸುವ ಸ್ಥಳವನ್ನು ವ್ಯಾಪಾರಿಗಳು ಸಾಕಷ್ಟು ಆಕ್ರಮಿಸಿಕೊಂಡಿದ್ದಾರೆ. ಮಲ್ಲೇಶ್ವರದಲ್ಲಿ ಆಗಿರುವುದೇ ಇದು. ನಿವಾಸಿಗಳಿಗೆ ಇದು ಸಾಕಷ್ಟು ತೊಂದರೆಯನ್ನು ತಂದಿದೆ. ವ್ಯಾಪಾರಿಗಳನ್ನು ವಾಸಸ್ಥಳದಿಂದ ಬೇರ್ಪಡಿಸುವುದೊಂದೇ ಸೂಕ್ತವಾದ ಮಾರ್ಗ.

ಈಗ ನೋಡಿ ಮನೆಗಳಿರುವ ಪ್ರದೇಶಗಳಲ್ಲಿ ಹೋಟೆಲ್, ನಾನಾ ತರಹದ ಅಂಗಡಿಗಳು ತೆರೆದುಕೊಂಡಿವೆ, ಬೀದಿಬದಿ ವ್ಯಾಪಾರಿಗಳು ಫುಟ್‌ಪಾತ್ ಆಕ್ರಮಿಸಿಕೊಂಡಿದ್ದಾರೆ. ಮನೆಸುತ್ತಮುತ್ತ ಇವೆಲ್ಲ ಇರುವುದು ನಿವಾಸಿಗಳಿಗೆ ಹಿತಕರ ಅನಿಸುವುದಿಲ್ಲ. ಆದರೆ, ಬಿಬಿಎಂಪಿ, ಬಿಡಿಎಗಳು ನಿಮಯಗಳನ್ನು ಜಾರಿ ತರುವಲ್ಲಿ ಸೋತಿವೆ. ನೀರಿನ ಪೈಪ್, ವಿದ್ಯುತ್, ದೂರವಾಣಿ ತಂತಿ ಅಳವಡಿಸುವಲ್ಲಿ, ರಸ್ತೆ ನಿರ್ಮಿಸುವಲ್ಲಿ, ಕಸ ವಿಲೇವಾರಿ, ಮಳೆ ಕೊಯ್ಲು ನಿರ್ವಹಿಸುವಲ್ಲಿ ಸರಿಯಾದ ಪ್ಲಾನಿಂಗ್ ಇಲ್ಲವೇ ಇಲ್ಲ.

ಒನ್ಇಂಡಿಯಾ ಕನ್ನಡ : ಮಲ್ಲೇಶ್ವರಂ ಪಶ್ಚಿಮ ಭಾಗಕ್ಕೆ ಹೋಲಿಸಿದರೆ ಸುಬ್ರಮಣ್ಯ ನಗರ, ಗಾಯತ್ರಿ ನಗರಗಳಿರುವ ಮಲ್ಲೇಶ್ವರಂ ಪೂರ್ವ ಭಾಗವನ್ನು ನಿರ್ಲಕ್ಷಿಸಲಾಗಿದೆ ಎಂಬ ಆರೋಪವಿದೆಯಲ್ಲ? ಇದಕ್ಕೇನಂತೀರಿ?

ಅಶ್ವತ್ಥ ನಾರಾಯಣ : ಈ ಆರೋಪ ಏನಿದೆ ಇದಕ್ಕೆ ತಳಬುಡವಿಲ್ಲ. ಆದರೆ, ಒಂದು ಮಾತು ಹೇಳ್ತೀನಿ ಕೇಳಿ, 6ನೇ ರಸ್ತೆಯಿಂದದ 19ನೇ ರಸ್ತೆವರೆಗಿನ ಮಲ್ಲೇಶ್ವರ ಪಶ್ಚಿಮ ಪ್ಲಾನ್ಡ್ ಲೇಔಟ್. ರಸ್ತೆ, ನೀರು, ಪಾರ್ಕು, ಆಟದ ಮೈದಾನ, ಆಸ್ಪತ್ರೆ ಎಲ್ಲ ಸೌಕರ್ಯಗಳಿವೆ. ಆದರೆ, ಸುಬ್ರಮಣ್ಯ ನಗರ ರೆವಿನ್ಯೂ ಬೆಲ್ಟ್. ಆದರೂ ಆ ಪ್ರದೇಶ ಅತ್ಯಂತ ಕ್ಲೀನಾಗಿದೆ. ರಸ್ತೆಗಳು ಸ್ವಚ್ಛವಾಗಿವೆ, ಕಸ ವಿಲೇವಾರಿ ಯೋಜಿಸಿದಂತೆ ಸಾಗುತ್ತಿದೆ. ಉತ್ಯುತ್ತಮ ಪಾರ್ಕ್, ಆಟದ ಮೈದಾನ, ಲೈಬ್ರರಿ, ಆಸ್ಪತ್ರೆಗಳನ್ನು ಒದಗಿಸಲಾಗಿದೆ. ಕೆಳವರ್ಗದವರಿಗೆ ಬಿಪಿಎಲ್ ಕಾರ್ಡ್ ನೀಡಲಾಗಿದೆ. ನಾವು ಪ್ರತಿ ನಾಗರಿಕರನ್ನು ತಲುಪಿದ್ದೇವೆ. ಎಲ್ಲ ಸೌಕರ್ಯಗಳನ್ನು ಒದಗಿಸಿದ್ದೇವೆ.

ಒನ್ಇಂಡಿಯಾ ಕನ್ನಡ : ಕೆಲವೇ ದಿನಗಳ ಹಿಂದೆ ಚರ್ಚ್ ಸ್ಟ್ರೀಟ್ ನಲ್ಲಿ ಬಾಂಬ್ ಸ್ಫೋಟವಾಗಿ ಓರ್ವ ಮಹಿಳೆ ಸಾವಿಗೀಡಾದರು. ಮಲ್ಲೇಶ್ವರಂನ ಬಿಜೆಪಿ ಕಚೇರಿ ಎದಿರು ಭಯೋತ್ಪಾದಕರಿಂದ ಬಾಂಬ್ ದಾಳಿ ನಡೆದಿತ್ತು. ಪರಿಸ್ಥಿತಿ ಹೀಗಿರುವಾಗ, ಮಲ್ಲೇಶ್ವರಂನಂಥ ಅತ್ಯಂತ ಜನನಿಬಿಡ ಪ್ರದೇಶದಲ್ಲಿ ಜನರ ರಕ್ಷಣೆಗಾಗಿ ಏನೇನು ಎಚ್ಚರಿಕೆಯ ಕ್ರಮ ತೆಗೆದುಕೊಂಡಿದ್ದೀರಿ? ಎಲ್ಲೆಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ?

ಅಶ್ವತ್ಥ ನಾರಾಯಣ : ಒಂದು ಸಂಗತಿ ಸ್ಪಷ್ಟಪಡಿಸಲು ಇಷ್ಟಪಡಿಸುತ್ತೇನೆ. ಇದು ರಾಜಕಾರಣಿ ಅಥವಾ ಪೊಲೀಸ್ ಡ್ಯೂಟಿ ಮಾತ್ರವಲ್ಲ, ಪ್ರತಿಯೊಬ್ಬ ನಾಗರಿಕನೂ ಅತ್ಯಂತ ಎಚ್ಚರಿಕೆಯಿಂದ ಇರಬೇಕು. ಆಗ ಮಾತ್ರ ನಾವು ಅಂಥ ಘಟನೆಗಳನ್ನು ತಪ್ಪಿಸಲು ಸಾಧ್ಯ. ಮಾರುಕಟ್ಟೆ ಪ್ರದೇಶದಲ್ಲಿ ಯಾರು ಏನು ಇಟ್ಟಿರುತ್ತಾರೆ ಎಂದು ಊಹಿಸುವುದು ಎಂಥವರಿಗೂ ಅಸಾಧ್ಯ. ಹೀಗಾಗಿ, ಪ್ರತಿಯೊಬ್ಬರೂ ತಮ್ಮ ಎಚ್ಚರಿಕೆಯಲ್ಲಿ ತಾವಿರಬೇಕು.

ಅಲ್ಲದೆ, ಸಿಸಿಟಿವಿ ಕ್ಯಾಮೆರಾ ಅಳವಡಿಸುವ ಯೋಜನೆ ಕೂಡ ಇದೆ. ಆದರೆ, ಇಲ್ಲಿಯವರೆಗೆ ಆ ಕಾಂಟ್ರಾಕ್ಟ್ ಯಾರೂ ತೆಗೆದುಕೊಂಡಿಲ್ಲ. ಮಕ್ಕಳು ಮತ್ತು ಹೆಂಗಸರ ಭದ್ರತೆಗೆ ಹೆಚ್ಚಿನ ನಿಗಾ ವಹಿಸಬೇಕು. ಇಲ್ಲಿ ಪೊಲೀಸ್ ಸಿಬ್ಬಂದಿಯ ಕೊರತೆಯೂ ಇದೆ. ಇದ್ದವರ ಮುಖದಲ್ಲಿ ಅಂತಹ ಉತ್ಸಾಹವೂ ಇರುವುದಿಲ್ಲ. ಇದೇ ದಿನಚರಿಯಾಗಿದೆ. ಆದರೆ, ಪೈಲಟ್ ಪ್ರಾಜೆಕ್ಟಲ್ಲಿ ಎಲ್ಲ ಕಡೆಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲು 80 ಲಕ್ಷ ರು. ತೆಗೆದಿಡಲಾಗಿದೆ. ಎರಡು ವರ್ಷಗಳ ಹಿಂದೆಯೇ ಸಿಸಿಟಿವಿ ಕ್ಯಾಮೆರಾ ಅಳವಡಿಸುವ ಯೋಜನೆ ಹಾಕಿಕೊಂಡಿತ್ತಾದರೂ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಸದ್ಯದಲ್ಲಿಯೇ ಅವನ್ನು ಅಳವಡಿಸಲಾಗುವುದು.

ಒನ್ಇಂಡಿಯಾ ಕನ್ನಡ : ಮಲ್ಲೇಶ್ವರಂ ಕ್ಷೇತ್ರದ ಅಭಿವೃದ್ಧಿಗೆ ಇನ್ನೂ ಯಾವ್ಯಾವ ಯೋಜನೆಗಳನ್ನು ಹಾಕಿಕೊಂಡಿದ್ದೀರಿ?

ಅಶ್ವತ್ಥ ನಾರಾಯಣ : ಮೊಟ್ಟಮೊದಲನೆಯದಾಗಿ ಜನರಿಗೆ ಅಧಿಕಾರ ನೀಡುವುದು. ಇದು ಸರಕಾರ ಅತ್ಯಂತ ಪಾರದರ್ಶಕವಾಗಿ ಮತ್ತು ಪರಿಣಾಮಕಾರಿಯಾಗಿ ಮಾಡಲು ಅತ್ಯುತ್ತಮ ಟೂಲ್. ಬಿಬಿಎಂಪಿ ಆಗಲಿ, ಬಿಡಬ್ಲ್ಯೂಎಸ್ಎಸ್‌ಬಿ ಆಗಲಿ ಅಥವಾ ಮತ್ತಾವುದೇ ಇಲಾಖೆಯಾಗಲಿ, ಅದರಲ್ಲಿ ಈ-ಆಡಳಿತದ ಮುಖಾಂತರ ಆಡಳಿತದಲ್ಲಿ ಪಾರದರ್ಶಕತೆ ತರುವ ಪ್ರಯತ್ನ ನಡೆದಿದೆ. ಆಸ್ತಿ ತೆರಿಗೆ ಬಿಬಿಎಂಪಿಗೆ ಪ್ರಮುಖ ಆದಾಯ ಮೂಲ. ಶೇ.50ರಷ್ಟು ಆದಾಯ ಆಸ್ತಿ ತೆರಿಗೆಯಿಂದಲೇ ಬರುತ್ತಿದೆ.

ಬೆಂಗಳೂರಿನಲ್ಲಿ 16 ಸಾವಿರ ಲಕ್ಷಕ್ಕೂ ಹೆಚ್ಚು ಆಸ್ತಿಗಳಿವೆ. ಪ್ರಾಪರ್ಟಿ ಐಡೆಂಟಿಫಿಕೇಷನ್ ನಂಬರ್ (ಪಿಐಡಿ) ಮೂಲಕ ಆಸ್ತಿ ರೆಸಿಡೆನ್ಶಿಯಲ್ಲಾ ಅಥವಾ ಕಮರ್ಶಿಯಲ್ಲಾ, ಯಾರು ಎಷ್ಟು ತೆರಿಗೆ ಕಟ್ಟುತ್ತಿದ್ದಾರೆ, ಆಸ್ತಿಯ ವಿಸ್ತೀರ್ಣ ಎಷ್ಟು ಮುಂತಾದ ವಿವರಗಳೆಲ್ಲ ಪಾರದರ್ಶಕವಾಗಿರುತ್ತದೆ. ಪಿಐಡಿ ಅಳವಡಿಸುವ ಮುನ್ನ ವರ್ಷಕ್ಕೆ 600-700 ಕೋಟಿ ರು. ಆಸ್ತಿ ತೆರಿಗೆ ಬರುತ್ತಿತ್ತು. ಈಗ 2 ಸಾವಿರ ಕೋಟಿಗೂ ಅಧಿಕ ಹಣ ಆಸ್ತಿ ತೆರಿಗೆ ಮೂಲಕ ಬಿಬಿಎಂಪಿಗೆ ಬರುತ್ತಿದೆ. ಜನರ ಹಣ ದುರುಪಯೋಗವಾಗುವುದು ಇದರಿಂದ ತಪ್ಪಿದೆ. ಎಲ್ಲ ಇಂಜಿನಿಯರುಗಳು ಕಡ್ಡಾಯವಾಗಿ ಎಂಟ್ರಿ ಮಾಡಲೇಬೇಕು. ಇದನ್ನು ಮಲ್ಲೇಶ್ವರಂದಲ್ಲಿ ನೂರಕ್ಕೆ ನೂರರಷ್ಟು ಯಶಸ್ವಿಯಾಗಿ ಜಾರಿಗೆ ತರಲಾಗಿದೆ. ತಂತ್ರಜ್ಞಾನವನ್ನು ಕಟ್ಟುನಿಟ್ಟಾಗಿ ಬಳಸಿದರೆ ನಗರ ಎಷ್ಟೇ ದೊಡ್ಡದಾಗಿದ್ದರೂ ಸಮಸ್ಯೆಯಾಗುವುದಿಲ್ಲ, ಎಲ್ಲವೂ ಪಾರದರ್ಶಕವಾಗಿರುತ್ತದೆ.

English summary
In a candid talk with Oneindia Malleshwaram MLA, BJP leader Dr C.N. Aswath Narayan, speaks about the health of his constituency, his party's prospects in Karnataka and the entire country. Aswath Narayan has been serving as the MLA of prestigious assembly constituency Malleshwaram since 2004.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X