ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಹದಾಯಿ ತೀರ್ಪು: ಕನ್ನಡಿಗರು ಗಮನಿಸಬೇಕಾದ್ದು ಏನು?

By ವಸಂತ್ ಶೆಟ್ಟಿ
|
Google Oneindia Kannada News

ಮಹದಾಯಿ ನ್ಯಾಯಾಧೀಕರಣ ಮಂಡಳಿ ತನ್ನ ಮಧ್ಯಂತರ ತೀರ್ಪು ನೀಡಿ, ಕೊನೆಯ ಪಕ್ಷ ಏಳೂವರೆ ಟಿ.ಎಮ್.ಸಿಯಷ್ಟು ಕುಡಿಯುವ ನೀರಿಗಾದರೂ ಅವಕಾಶ ಕೊಡಿ ಎಂದು ಬೇಡಿಕೊಂಡಿದ್ದ ಕರ್ನಾಟಕದ ಮನವಿಯನ್ನು ತಿರಸ್ಕರಿಸಿದೆ. ಹೀಗೆ ತಿರಸ್ಕರಿಸಲು ಕೊಟ್ಟ ಕಾರಣಗಳು ಈಗಾಗಲೇ ಎಲ್ಲ ಪತ್ರಿಕೆ, ಸುದ್ದಿ ವಾಹಿನಿಯ ತೆರೆಯಲ್ಲೂ ಇದೆ.

ಅಲ್ಲಿಗೆ ಒಂದು ವರುಶದಿಂದ ಶಾಂತಿಯುತವಾಗಿ, ಎಡಬಿಡದೇ ಕನ್ನಡಿಗರು ಪ್ರತಿಭಟಿಸಿದ್ದು ಹೊಳೆಯಲ್ಲಿ ಹುಣಸೆಹಣ್ಣು ತೊಳೆದಂತೆ ಆಗಿದೆ. [ಗ್ಯಾಲರಿ: ಮಹದಾಯಿ ತೀರ್ಪು ಖಂಡಿಸಿ ರೈತರ ಆಕ್ರೋಶ]

ಈ ಹೊತ್ತಲ್ಲಿ ಸುಪ್ರೀಂ ಕೋರ್ಟ್ ಅಲ್ಲಿ ಕುಡಿಯುವ ನೀರಿನ ಹಿನ್ನೆಲೆಯಿಟ್ಟುಕೊಂಡು ಮೇಲ್ಮನವಿ ಸಲ್ಲಿಸುವುದು, ಪ್ರಧಾನಿಯವರ ನೇತೃತ್ವದಲ್ಲಿ ನ್ಯಾಯಮಂಡಳಿಯ ಹೊರಗೆ ಮೂರು ರಾಜ್ಯಗಳ ಸಭೆ ಕರೆದು ಒಂದು ತಾತ್ಕಾಲಿಕ ರಾಜಕೀಯ ಪರಿಹಾರ ಕಂಡುಕೊಳ್ಳುವ ಆಯ್ಕೆಗಳು ಕರ್ನಾಟಕದ ಮುಂದಿವೆ. ಆದರೆ, ಈ ಹೊತ್ತಲ್ಲಿ ಕನ್ನಡಿಗರು ಗಮನಿಸಬೇಕಾದ ಕೆಲ ವಿಷಯಗಳಿವೆ. [ಮಹದಾಯಿ ನೀರು ಹಂಚಿಕೆ : ಕಥೆ ವ್ಯಥೆ ಟೈಮ್ ಲೈನ್]

ಈ ವಿವಾದವನ್ನು ಕಾಂಗ್ರೆಸ್, ಬಿಜೆಪಿ ಇಬ್ಬರೂ ಒಬ್ಬರನ್ನೊಬ್ಬರು ದೂಷಿಸಲೇ ಬಳಸುತ್ತಿದ್ದಾರೆ ಹೊರತು ಕನ್ನಡಿಗರ ಪರ ಒಂದು ದನಿಯಾಗಿ ಇಬ್ಬರೂ ನಿಲ್ಲುತ್ತಿಲ್ಲ. ಗೋವಾದಲ್ಲೂ ಹೀಗೇ ಇದೆಯೇ? ಗೋವಾದಲ್ಲಿ ಬಿಜೆಪಿ ಸರ್ಕಾರದ ಮುಖ್ಯಮಂತ್ರಿಯಾಗಿರುವ ಪಾರ್ಸೆಕರ್ ಅವರು ಕರ್ನಾಟಕದ ಜೊತೆ ಯಾವುದೇ ಮಾತುಕತೆಗೆ ಸಿದ್ಧವಿಲ್ಲ ಅನ್ನುವ ಮಾತನ್ನು ಹಿಂದಿನಿಂದಲೂ ಹೇಳುತ್ತ ಬಂದಿದ್ದಾರೆ.[ನ್ಯಾಯಾಧೀಕರಣದ ಮಧ್ಯಂತರ ತೀರ್ಪಿನಲ್ಲಿ ಏನಿದೆ? ]

ಗೋವಾ ಮುಖ್ಯಮಂತ್ರಿ ಪಾರ್ಸೆಕರ್ ಹೇಳಿಕೆ

ಗೋವಾ ಮುಖ್ಯಮಂತ್ರಿ ಪಾರ್ಸೆಕರ್ ಹೇಳಿಕೆ

ತೀರ್ಪು ಪ್ರಕಟವಾದ ತಕ್ಷಣ "ಕದನ ಗೆದ್ದಿದ್ದೇವೆ, ಮುಂದೆ ಯುದ್ಧ ಬಾಕಿ ಇದೆ" ಅನ್ನುವ ಮಾತುಗಳನ್ನು ಆಡಿದ್ದಾರೆ. ಯುದ್ಧ ಮಾಡಲು ಕರ್ನಾಟಕವೇನು ಶತ್ರು ದೇಶವೇ? ಏನೋ ಮಾತಿಗೆ ಹಾಗೇ ಹೇಳಿದರು ಅಂದುಕೊಂಡರೂ, ನೀರಿಲ್ಲದೇ ಕಂಗೆಟ್ಟಿರುವ ಪಕ್ಕದ ರಾಜ್ಯದ ಬಗ್ಗೆ ಇಂತಹ ಮಾತನಾಡುವಾಗ ಇರಬೇಕಾದ ಸಣ್ಣ ಸೌಜನ್ಯವೂ ಇಲ್ಲಿ ಕಾಣಲಿಲ್ಲ. ಚಿತ್ರದಲ್ಲಿ ಲೇಖಕ ವಸಂತ್ ಶೆಟ್ಟಿ

ಕರ್ನಾಟಕದ ಬಿಜೆಪಿಯ ನಾಯಕರಲ್ಲಿ ಕಿಚ್ಚಿಲ್ಲ

ಕರ್ನಾಟಕದ ಬಿಜೆಪಿಯ ನಾಯಕರಲ್ಲಿ ಕಿಚ್ಚಿಲ್ಲ

ತಮಾಷೆಯ ವಿಷಯವೆಂದರೆ ಇಂತಹ ಮಾತು "ದೇಶ ಮೊದಲು" ಎಂದು ರಾಷ್ಟ್ರೀಯತೆಯ ಪಾಠ ಹೇಳುವ ಪಕ್ಷದ ನಾಯಕಯೊಬ್ಬರಿಂದ ಬಂದಿರುವುದು. ಇಂತಹುದೇ ಧೋರಣೆ ಕರ್ನಾಟಕದ ಬಿಜೆಪಿಯ ನಾಯಕರಲ್ಲಿ ಯಾಕಿಲ್ಲ? ಗೋವಾದಲ್ಲಿ ಕಾಂಗ್ರೆಸ್ ಸರ್ಕಾರವಿದ್ದಾಗಲೂ ಅಲ್ಲಿ ಇಂತಹುದೇ ವಿರೋಧ ಈ ಯೋಜನೆಗೆ ಇತ್ತು.

ಗೋವಾ ಒತ್ತಾಯಕ್ಕೆ ನ್ಯಾಯಾಧೀಕರಣ ಮಂಡಳಿ ಸ್ಥಾಪನೆ

ಗೋವಾ ಒತ್ತಾಯಕ್ಕೆ ನ್ಯಾಯಾಧೀಕರಣ ಮಂಡಳಿ ಸ್ಥಾಪನೆ

ಅಲ್ಲದೇ, ಗೋವಾದ ಒತ್ತಾಯದ ಮೇರೆಗೆ ಹಿಂದಿನ ಕಾಂಗ್ರೆಸ್ ಸರ್ಕಾರವೇ ನ್ಯಾಯಾಧೀಕರಣ ಮಂಡಳಿ ಸ್ಥಾಪಿಸಿದ್ದು, ಹೀಗಿರುವಾಗ ಕರ್ನಾಟಕದ ಕಾಂಗ್ರೆಸ್ ನಾಯಕರು ಯಾವ ಮುಖ ಹೊತ್ತು ಇದಕ್ಕೆ ಇನ್ನೊಬ್ಬರನ್ನು ಹೊಣೆಯಾಗಿಸಬಲ್ಲರು? ಇಲ್ಲಿ ಎರಡೂ ಪಕ್ಷಗಳ ವೈಫಲ್ಯ ಎದ್ದು ಕಾಣುವುದಿಲ್ಲವೇ? ಜೆಡಿಎಸ್ ಯಾಕೆ ಬಿಟ್ರಿ ಅಂತ ಕೇಳಬೇಡಿ.
ಅವರಿಗಿರುವ ಎರಡು ಸಂಸತ್ ಸದಸ್ಯ ಸ್ಥಾನದಿಂದ ಅವರಿಗೆ ದೆಹಲಿಯಲ್ಲಿ ಯಾವ ಪ್ರಭಾವವೂ ಇಲ್ಲ. ಇನ್ನೊಂದೆಡೆ ಅವರ ಇತ್ತೀಚೆಗಿನ ರಾಜಕೀಯದ ನಡೆಗಳನ್ನು ನೋಡಿದರೆ ಆ ಪಕ್ಷ ರಾಜಕೀಯದ ಬಗ್ಗೆ ಎಷ್ಟು ಗಂಭೀರವಾಗಿದೆ ಅನ್ನುವ ಪ್ರಶ್ನೆಯೇ ಹುಟ್ಟುತ್ತದೆ.

ಬಂದ್ ಕರೆ ಕೊಡುವುದು ಎಷ್ಟು ಸಲೀಸಾಗಿ ಹೋಗಿದೆ

ಬಂದ್ ಕರೆ ಕೊಡುವುದು ಎಷ್ಟು ಸಲೀಸಾಗಿ ಹೋಗಿದೆ

ಇನ್ನೊಂದೆಡೆ ಬಂದ್ ಕರೆ ನೀಡಲು ಯಾವಾಗಲೂ ಕಾಯುತ್ತಿರುವಂತೆ ಕಾಣುವ ವಾಟಾಳ್ ನಾಗರಾಜ್ ಅವರು ಮತ್ತೊಂದು ಬಂದ್ ಕರೆ ಕೊಟ್ಟಿದ್ದಾರೆ. ಅವರ ಗೆಳೆಯ ಸಾರಾಗೋವಿಂದು ಅವರು ತಕ್ಷಣವೇ ಚಿತ್ರರಂಗದ ಬೆಂಬಲ ಅದಕ್ಕೆ ಘೋಷಿಸಿದ್ದಾರೆ. ಇವರಿಗೆಲ್ಲ ಬಂದ್ ಕರೆ ಕೊಡುವುದು ಎಷ್ಟು ಸಲೀಸಾಗಿ ಹೋಗಿದೆ.
ಬಂದ್ ಕರೆ ಕೊಟ್ಟ ತಕ್ಷಣ ಏನಾದರೂ ಸಾಧ್ಯವಾಗುತ್ತಾ? ನಮ್ಮ ಸಂಸದರ ಮನೆಯ ಮುಂದೆ, ವಿಧಾನಸೌಧದ ಮುಂದೆ ಧರಣಿ ಕೂತು ಪ್ರಧಾನಿಯವರ ಮಧ್ಯಸ್ಥಿಕೆಯಲ್ಲಿ ಒಂದು ರಾಜಕೀಯ ಪರಿಹಾರ ಸಿಗುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂದು ಯಾಕೆ ಇವರು ಹೋರಾಡಬಾರದು.

ಕನ್ನಡಿಗರ ಒಗ್ಗಟ್ಟು ತರಿಸುವ ಕಾರಣಕ್ಕೆ ಬಂದ್ ಎಂಬ ಉತ್ತರ

ಕನ್ನಡಿಗರ ಒಗ್ಗಟ್ಟು ತರಿಸುವ ಕಾರಣಕ್ಕೆ ಬಂದ್ ಎಂಬ ಉತ್ತರ

ಬಾಯಿಯ ಮುಂದೆ ಹಿಡಿಯುವ ಮೈಕಿಗೆ ತಕ್ಷಣ ತೋಚುವುದು "ಕರ್ನಾಟಕ ಬಂದ್" ಮಾಡುತ್ತೇವೆ ಅನ್ನುವ ಸಿದ್ಧ ಉತ್ತರ. ಇವರಿಗೆ ಗೊತ್ತಿದೆ.
ಕನ್ನಡಿಗರ ಒಗ್ಗಟ್ಟು ತರಿಸುವ ಕಾರಣಕ್ಕೆ ಎಲ್ಲ ಕನ್ನಡ ಸಂಘಟನೆಗಳು, ಕನ್ನಡ ಪರರು, ಮಾಧ್ಯಮದವರು ಎಲ್ಲರು ಬಂದ್ ಕರೆಯ ಹಿಂದೆ ನಿಲ್ಲುತ್ತಾರೆ ಮತ್ತು ಬಂದ್ ಯಶಸ್ವಿಯಾಗುತ್ತೆ ಮತ್ತು ಅದರ ಕ್ರೆಡಿಟ್ಟು ನಮಗೇ ಸಲ್ಲುತ್ತದೆ ಅನ್ನುವ ಲೆಕ್ಕಾಚಾರ ಇದರ ಹಿಂದಿದೆ ಅನ್ನಿಸುವುದಿಲ್ಲವೇ? ಬಂದ್ ಅನ್ನುವ ಒಂದು ಆರ್ಥಿಕತೆ ವಿರೋಧಿ ನಡೆ.

ಜನಸಾಮಾನ್ಯರನ್ನು ತೊಂದರೆಯಾದ್ರೆ ಬಂದ್ ಗೆ ಬೆಲೆ ಏನು?

ಜನಸಾಮಾನ್ಯರನ್ನು ತೊಂದರೆಯಾದ್ರೆ ಬಂದ್ ಗೆ ಬೆಲೆ ಏನು?

ಅದನ್ನು ಅಪರೂಪದಲ್ಲೇ ಅಪರೂಪದ ಸಂದರ್ಭದಲ್ಲಿ ಕರೆ ನೀಡಿದರೆ ಅದಕ್ಕೊಂದು ಬೆಲೆ ಇರುತ್ತದೆ. ಹೀಗೆ ಬೇಕೆಂದಾಗಲೆಲ್ಲ ಬಂದ್ ಕರೆ ಕೊಟ್ಟು, ಜನಸಾಮಾನ್ಯರನ್ನು ತೊಂದರೆಗೀಡು ಮಾಡಿದರೆ ಅದರಿಂದ ಚಳುವಳಿಗೆ ಜನರ ಬೆಂಬಲ ಸಿಗುವುದಿಲ್ಲ ಅನ್ನುವುದು ಇವರಿಗೆ ಯಾರಾದರೂ ತಿಳಿ ಹೇಳಬೇಕು.

ಕನ್ನಡಿಗರ ಹಿತಾಸಕ್ತಿ

ಕನ್ನಡಿಗರ ಹಿತಾಸಕ್ತಿ

ಒಟ್ಟಾರೆ, ಈ ಹೊತ್ತಲ್ಲಿ ಕನ್ನಡಿಗರು ನೆನಪಿನಲ್ಲಿ ಇಟ್ಟುಕೊಳ್ಳಬೇಕಾಗಿರುವುದು ಏನೆಂದರೆ ಭಾರತದ ಒಕ್ಕೂಟದಲ್ಲಿ ಕನ್ನಡಿಗರ ಹಿತ ಕಾಯುವ ಶಕ್ತಿ ಇವತ್ತಿನ ನಮ್ಮ ರಾಜಕೀಯದ ವ್ಯವಸ್ಥೆಗೆ ಸಾಧ್ಯವಿಲ್ಲ. ನದಿ, ಗಡಿ, ನೆಲ, ರಸ್ತೆ, ರೈಲು, ಭಾಷೆ ಹೀಗೆ ಎಲ್ಲ ವಿಷಯದಲ್ಲೂ ಒಂದು ಕಾಲದಿಂದ ಕಾಲಕ್ಕೆ ಸಾಬೀತಾಗುತ್ತ ಬಂದಿದೆ.
ಹೀಗಾಗಿ ನಮ್ಮ ರಾಜಕೀಯವನ್ನು "ಕನ್ನಡಿಗರ ಹಿತಾಸಕ್ತಿ (ಕನ್ನಡಿಗ ಸೆಲ್ಫ್ ಇಂಟರೆಸ್ಟ್)" ಅನ್ನುವ ಕಣ್ಣಿನಿಂದ ಪುನರ್ ರೂಪಿಸಿಕೊಳ್ಳುವತ್ತ ನಾವು ಹೆಜ್ಜೆ ಇಡದಿದ್ದರೆ ಇಂದು ಮಹದಾಯಿಯಲ್ಲಿ ಅನ್ಯಾಯ, ನಾಳೆ ಇನ್ನಾವುದೋ ಹೊಸ ವಿಷಯದಲ್ಲಿ ಅನ್ಯಾಯ ಅನ್ನುವ ಈ ಪರಿಪಾಠ ಮುಂದುವರೆಯುತ್ತದೆ.

English summary
Mahadayi Verdict: In a major setback to Karnataka, Mahadayi river tribunal verdict on Wednesday, July 27 went against the state, while favouring Goa and Maharashtra. Here are the things Kannadigas should observe an article by Vasanth Shetty.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X