ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತಿಪ್ಪಗೊಂಡನಹಳ್ಳಿ ಒಡಲು ತುಂಬುವಳೆ ಕುಮುದ್ವತಿ?

By ಪ್ರಸಾದ ನಾಯಿಕ
|
Google Oneindia Kannada News

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಡಾಬಸ್‌ಪೇಟೆ ಬಳಿಯಿರುವ ಶಿವಗಂಗೆಯ ಬೆಟ್ಟದಲ್ಲೆಲ್ಲೋ ಹುಟ್ಟಿ ಗುಪ್ತಗಾಮಿನಿಯಾಗಿ ಹರಿಯುತ್ತ ತಿಪ್ಪಗೊಂಡನಹಳ್ಳಿ ಒಡಲನ್ನು ತುಂಬುತ್ತಿದ್ದ ಕುಮುದ್ವತಿ, ಇಂದು ಹೆಸರು ಕೂಡ ನೆನಪಿನಲ್ಲುಳಿಯದ ಹಾಗೆ ನಾಮಾವಶೇಷವಾಗಿ ಹೋಗಿದ್ದಾಳೆ. ಒಂದಾನೊಂದು ಕಾಲದಲ್ಲಿ ಬೆಂಗಳೂರಿನ ಶೇ.60 ಜನರ ಬೊಗಸೆಗೆ ನೀರು ಹಾಕುತ್ತಿದ್ದ, ಮಾಗಡಿಯಲ್ಲಿರುವ ತಿಪ್ಪಗೊಂಡನಹಳ್ಳಿ ಕೆರೆ ಗತಕಾಲದ ವೈಭವ ನೆನಪಿಸಿಕೊಳ್ಳುತ್ತ ಕುಮುದ್ವತಿ ಮತ್ತು ಅರ್ಕಾವತಿ ಕಣ್ಣೀರು ಸುರಿಸುತ್ತಿವೆ.

ಗತಕಾಲದ ವೈಭವ ಏನೇ ಇರಲಿ, ಕುಮುದ್ವತಿ ಹೆಸರಿನಲ್ಲಿ ಬತ್ತುತ್ತಿರುವ ನೀರಿನ ಸೆಲೆಗೆ ಮರುಜೀವ ಕೊಡುವ, ತಿಪ್ಪಗೊಂಡನಹಳ್ಳಿ ಕೆರೆ ತುಂಬಿಸುವ ಮತ್ತು ಎಲ್ಲಾಕಾಲಕ್ಕೂ ಗ್ರಾಮಸ್ಥರಿಗೆ ನೀರನ್ನು ಒದಗಿಸುವ ಕಾರ್ಯ 2013ರ ಫೆಬ್ರವರಿಯಿಂದ ನಡೆಯುತ್ತಿದೆ. ಇದಕ್ಕಾಗಿ ಕುಮುದ್ವತಿ ನದಿಪಾತ್ರದಲ್ಲಿ ಬರುವ ಬೆಂಗಳೂರು ಗ್ರಾಮಾಂತರದ ನೆಲಮಂಗಲ, ಮಂಡ್ಯದ ನಾಗಮಂಗಲ ಮತ್ತು ರಾಮನಗರ ಜಿಲ್ಲೆಯ ಮಾಗಡಿ ಗ್ರಾಮ ಸೇರಿದಂತೆ ಒಟ್ಟು 278 ಹಳ್ಳಿಗಳನ್ನು ಈ ಯೋಜನೆಗಾಗಿ ಆಯ್ದುಕೊಳ್ಳಲಾಗಿದೆ.

Kumudvathi River Rejuvenation project by Art of Living

ಚಿದಾನಂದ ನಾಗರಾಜು ಅವರು ಹೇಳುವ ಹಾಗೆ, ಈ ಯೋಜನೆ ಕೂಡ ಸುಲಭದ್ದಾಗಿರಲಿಲ್ಲ. ಮೊದಲನೆಯದಾಗಿ ಗ್ರಾಮಸ್ಥರ ಮನವೊಲಿಸಿ ಅವರಲ್ಲಿ ಜಾಗೃತಿ ಮೂಡಿಸುವುದು ಸವಾಲಿನದಾಗಿತ್ತು. ಇಸ್ರೋ ಸಂಸ್ಥೆ ನೀಡಿರುವ ಚಿತ್ರಗಳು, ಎನ್‌ಜಿಓಗಳು, ಗ್ರಾಮ ಪಂಚಾಯತಿ ಸಹಾಯದಿಂದ ಯೋಜನೆಗೆ ಚಾಲನೆ ನೀಡಲಾಗಿದೆ. ಅಂತರ್ಜಲ ನೀರನ್ನು ರಿಚಾರ್ಜ್ ಮಾಡುವ ನಿಟ್ಟಿನಲ್ಲಿ ಬಾವಿಗಳನ್ನು ನಿರ್ಮಿಸುವ, ಕೆರೆಗಳ ಹೂಳೆತ್ತುವ, ಮಣ್ಣಿನ ಸವಕಳಿ ತಪ್ಪಿಸಲು ಗಿಡಗಳನ್ನು ನೆಡುವ ಕಾರ್ಯ ಶೇ.25ರಷ್ಟು ಪೂರ್ತಿಯಾಗಿದೆ.

ಸುಮಾರು 500ಕ್ಕೂ ಹೆಚ್ಚು ಸ್ವಯಂಸೇವಕರು ವಾರಾಂತ್ಯದ ಬಿಡುವಿನ ವೇಳೆಯಲ್ಲಿ ನೀರಿನ ಅವಶ್ಯಕತೆ ಮತ್ತು ಬಳಕೆಯ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ, ಗಿಡಮರಗಳನ್ನು ನೆಡುವ, ಕೆರೆ-ಬಾವಿ-ಕಲ್ಯಾಣಿಗಳ ಹೂಳೆತ್ತುವ ಕೆಲಸದಲ್ಲಿ ತೊಡಗಿದ್ದಾರೆ. ದಶಕಗಳ ಕಾಲ ಕಸಕಡ್ಡಿ ತುಂಬಿಕೊಂಡಿದ್ದ ಬಾವಿಗಳು, ಕಲ್ಯಾಣಿಗಳು ನೀರು ತುಂಬಿಕೊಂಡು ನಲಿದಾಡುತ್ತಿವೆ. ಅವುಗಳಲ್ಲಿ ನೀರು ಮತ್ತೆ ಪುಟಿಯುವುದನ್ನು ನೋಡಿ ಹಳ್ಳಿಗರೇ ಅಚ್ಚರಿಪಟ್ಟಿದ್ದಾರೆ ಅಂತಾರೆ ಚಿದಾನಂದ ಅವರು.

Chidananda Nagaraj

"ಸದ್ಯಕ್ಕೆ ಈ ಯೋಜನೆಯನ್ನು ನಗರಕ್ಕೆ ವಿಸ್ತರಿಸಿಲ್ಲ. ಬಿಬಿಎಂಪಿ ಮುತುವರ್ಜಿ ತೆಗೆದುಕೊಂಡು ಕೆರೆಗಳಲ್ಲಿನ ಹೂಳೆತ್ತುವ, ಗಿಡಗಳನ್ನು ನೆಡುವ, ನೀರಿನಕೊಯ್ಲು ಅಳವಡಿಸುವ ಕೆಲಸವನ್ನು ಆರಂಭಿಸಬೇಕು. ನಮ್ಮ ಗಮನವೇನಿದ್ದರೂ ಗ್ರಾಮಗಳಲ್ಲಿ ನೀರಿನ ಸೆಲೆ ಉಕ್ಕಬೇಕು, ಕೃಷಿ ಚಟುವಟಿಕೆ ಹೆಚ್ಚಬೇಕು, ಹಳ್ಳಿಗಳಲ್ಲಿನ ಯುವಕರು ನಗರಕ್ಕೆ ವಲಸೆ ಹೋಗುವುದು ನಿಲ್ಲಬೇಕು. ವಲಸೆ ಹೋಗುವುದು ನಿಂತರೆ, ಹಳ್ಳಿಗಳಲ್ಲಿ ಆರ್ಥಿಕ-ಸಾಮಾಜಿಕ ಅಭಿವೃದ್ಧಿಯಾದರೆ, ನಗರಕ್ಕೆ ಕೂಡ ಇದರಿಂದ ಅನುಕೂಲವಾಗಲಿದೆ" ಎನ್ನುವುದು ಚಿದಾನಂದ ಅವರ ಅನುಭವದ ಮಾತು.

"ಗ್ರಾಮಗಳಲ್ಲಿ ಆಯ್ದ ಜಾಗಗಳಲ್ಲಿ ಬಾವಿಗಳನ್ನು ತೋಡಿ, ರಿಂಗ್ ಗಳನ್ನು ಅಳವಡಿಸಿ, ಜೆಲ್ಲಿಗಳನ್ನು ಹಾಕಿ ರಿಚಾರ್ಜ್ ಬಾವಿಗಳನ್ನು ನಿರ್ಮಿಸಿ, ಹರಿಯುವ ನೀರನ್ನು ಹಿಡಿದಿಟ್ಟುಕೊಳ್ಳುವ ಕಾರ್ಯ ಭರದಿಂದ ಸಾಗಿದೆ. ಇದರಿಂದಾಗಿಯೇ ಅಂತರ್ಜಲದ ಮಟ್ಟ ಹಿಂದಿಗಿಂತಲೂ ಉತ್ತಮವಾಗಿದೆ. ಇದನ್ನು ನಗರಗಳಲ್ಲಿ ಕೂಡ ಅಳವಡಿಸಿದರೆ ಸಾಕಷ್ಟು ನೀರಿನ ತೊಂದರೆಗಳನ್ನು ನಿವಾರಿಸಬಹುದು" ಎಂದು ಅವರು ಸಲಹೆ ನೀಡುತ್ತಾರೆ.

ಹೆಚ್ಚೂ ಕಡಿಮೆ ನಿಷ್ಕ್ರಿಯವಾಗಿರುವ ಬಿಬಿಎಂಪಿಯನ್ನೇ ಮೂರು ಭಾಗ ಮಾಡಿ, ಮಾಜಿ ಐಎಎಸ್ ಅಧಿಕಾರಿ ಡಿಕೆ ರವಿ ಸಾವಿನ ಪ್ರಕರಣವನ್ನು ನಿಭಾಯಿಸಲು ಹೆಣಗಾಡುತ್ತಿರುವ ಸಿದ್ದರಾಮಯ್ಯ ನೇತೃತ್ವದ ಸರಕಾರಕ್ಕೆ, ಸಿಬಿಐ ತನಿಖೆ ಆಗಲೇಬೇಕು ಎಂದು ಪಟ್ಟುಹಿಡಿದು ಸರಕಾರದ ಬೆವರಿಳಿಸುತ್ತಿರುವ ವಿರೋಧ ಪಕ್ಷದ ಶಾಸಕರಿಗೆ, ಮಳೆನೀರು ಕೊಯ್ಲು ಅಳವಡಿಸದೆ ಸಮಯವನ್ನು ತಳ್ಳುತ್ತಿರುವ ಟ್ವೆಂಟಿ ಥರ್ಟಿ, ಥರ್ಟಿ ಫಾರ್ಟಿ, ಫಾರ್ಟಿ ಸಿಕ್ಸ್ಟಿ ಸೈಟಿನಲ್ಲಿ ಮನೆಕಟ್ಟಿಕೊಂಡಿರುವ ಮನೆ ಮಾಲಿಕರು ತಮ್ಮ ಜವಾಬ್ದಾರಿಯನ್ನು ನಿಭಾಯಿಸುವರೆ?

English summary
Water scarcity is huge in Bengaluru. No concerted effort is made to increase the level of underground water. Now, it is time to look at Kumudvati River Rejuvenation plan, which is being taken up Art of Living to revive water level in T.G. Halli dam in Magadi. Chidananda Nagaraj, who is part of Kumudvati River Rejuvenation project shares his experience on the occasion of World Water Day, on 20th March. Let's save water and save environment.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X