ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆದರೆ ಸತ್ತಂತಿಹರನ್ನು ಬಡಿದೆಚ್ಚರಿಸುವವರು ಯಾರು?

By Prasad
|
Google Oneindia Kannada News

ಬೆಂಗಳೂರು, ಏ. 18 : ಮಲ್ಲತ್ತಹಳ್ಳಿ ಬಳಿಯಿರುವ ಸಿದ್ದಪ್ಪಾಜಿ ಪೌಲ್ಟ್ರಿ ಸೆಂಟರ್ ಓನರ್, ಪಕ್ಕದಲ್ಲೇ ಕಲ್ಲಂಗಡಿ ಮಡಗಿಕೊಂಡಿರುವ ದಿವಾಕರ್, ಎನ್ಆರ್ ಕಾಲೋನಿಯಲ್ಲಿ ಬುಟ್ಟಿಯಲ್ಲಿ ಹಣ್ಣು ಮಾರುವ ಶಿವಮ್ಮ, ಕೂದಲು ಕತ್ತರಿಸುವುದನ್ನೇ ಕಾಯಕ ಮಾಡಿಕೊಂಡಿರುವ ಸಿದ್ದೇಶ್... ಇವರಿಗೆಲ್ಲ ಕರ್ನಾಟಕ ಬಂದ್ ಗಿಂತ ಹೊಟ್ಟೆಪಾಡು ಹೆಚ್ಚು ಮುಖ್ಯ.

ಹೀಗಾಗಿ ಮೇಕೆದಾಟು ಯೋಜನೆಗಾಗಿ 750 ಸಂಘಟನೆಗಳ ಬೆಂಬಲ ಸೂಚಿಸಿದ್ದರೂ ಇವರೆಲ್ಲ ಮತ್ತು ಇನ್ನೂ ಹಲವಾರು ಬೆಂಗಳೂರು ವ್ಯಾಪಾರಿಗಳು ತಮ್ಮ ಅಂಗಡಿ ಮುಂಗಟ್ಟುಗಳನ್ನು ಬಿಂದಾಸ್ ಆಗಿ ತೆರೆದುಕೊಂಡು ಕುಂತಿದ್ದಾರೆ. ಯಾಕ್ಸಾರ್ ಇಂದು ಬಂದ್ ಅಲ್ವಾ ಅಂತ ಸಿದ್ದಪ್ಪಾಜಿ ಪೌಲ್ಟ್ರಿ ಓನರನ್ನು ಕೇಳಿದರೆ, 'ನನಗೇನೋ ಬಂದ್ ಸರಿ, ಆದರೆ ಕೋಳಿ ಕೇಳಬೇಕಲ್ಲ, ಸಾರ್' ಅಂತಾನೆ!

Karnataka bandh : Why Bengalureans do not respond

ಬ್ಯಾಂಕ್ ಎಟಿಎಂ ಕೇಂದ್ರಗಳು, ಹೇರ್ ಕಟ್ಟಿಂಗ್, ಚಿಕನ್ ಸೆಂಟರ್‌ಗಳು, ಹಣ್ಣು ತರಕಾರಿ ಅಂಗಡಿಗಳು, ಅಲ್ಲಲ್ಲಿ ಕಿರಾಣಿ ಶಾಪ್‌ಗಳು ಸಾಕಷ್ಟು ಸಂಖ್ಯೆಯಲ್ಲಿ ಬೆಳಗಿನ ವ್ಯಾಪಾರವನ್ನು ಆರಂಭಿಸಿವೆ. ಕನ್ನಡಪರ ಹೋರಾಟಗಾರರು ಬಂದು ಬಲವಂತವಾಗಿ ಮುಚ್ಚಿಸಿದರೆ ಮುಚ್ಚುತ್ತವೆ, ಇಲ್ಲದಿದ್ದರೆ ಹೇಳುವವರಿಲ್ಲ ಕೇಳುವವರಿಲ್ಲ. [ಕರ್ನಾಟಕ ಬಂದ್ Live updates]

ಬಂದ್ ಕರೆ ನೀಡಿದಾಗಲೆಲ್ಲ ಬೆಂಗಳೂರಿನ ಹಣೆಬರಹವೇ ಇಷ್ಟು. ನಮಗೂ ಅದಕ್ಕೂ ಸಂಬಂಧವೇ ಇಲ್ಲ ಅಂತ ಒಂದಿಷ್ಟು ಲಕ್ಷ ಜನ ಮುಗುಮ್ಮಾಗಿ ಇದ್ದುಬಿಡುತ್ತಾರೆ. ಬೆಂಗಳೂರಲ್ಲಿ ಕನ್ನಡಿಗರು ಎಷ್ಟಿದ್ದಾರೆ ಹೇಳಿ? ಕಾವೇರಿ ನೀರು ಕುಡಿದು ಜೀವನ ಸಾಗಿಸುತ್ತಿರುವವರು ಎಷ್ಟಿದ್ದಾರೆ? ಕನ್ನಡ, ಕಾವೇರಿಗಾಗಿ ಕೂಗು ಕೇಳಿಬಂದಾಗ, ಇವರೆಲ್ಲ ಕಿವಿಗೆ ಹತ್ತಿ ಇಟ್ಟು ಕುಳಿತುಬಿಡುತ್ತಾರೆ.

ಊರಿಂದ ಬಂದು ಮೆಜೆಸ್ಟಿಕ್ಕಿನಲ್ಲಿ ಇಳಿದು ಬಸ್ಸಿಗಾಗಿ ಪರದಾಡುತ್ತಿರುವವರಿಗೆ ಬಂದೂ ಬೇಕಾಗಿಲ್ಲ, ಗಿಂದೂ ಬೇಕಾಗಿಲ್ಲ. ಇನ್ನು ನಮ್ಮ ಸೋಕಾಲ್ಡ್ ಬುದ್ಧಿಜೀವಿಗಳು ಎಂಥ ತಿನಿಸಿನ ಕನವರಿಕೆಯಲ್ಲಿ ಮಲಗಿರುತ್ತಾರೋ, ಕವಿಗಳು ಯಾವ ಕವನದ ಬಗ್ಗೆ ಧೇನಿಸುತ್ತಿರುತ್ತಾರೋ, ನಿಜ ಜೀವನದಲ್ಲೂ ನಟಿಸುವ ಕಲಾವಿದರು ಅದ್ಯಾವ ತಾಣದಲ್ಲಿ ಇರುತ್ತಾರೋ? [ಮೇಕೆದಾಟು ಯೋಜನೆ: ಏನಿದು ವಿವಾದ?]

Karnataka_Bandh, Bengaluru

ಕನ್ನಡಪರ ಹೋರಾಟಗಾರರು ತಮಿಳುನಾಡಿನ ವಿರುದ್ಧ ಎಲ್ಲಿ ಧಿಕ್ಕಾರ ಕೂಗುತ್ತಾರೋ ಅಲ್ಲಿ ಮಾತ್ರ ಸಂಪೂರ್ಣ ಬಂದ್. ಇಲ್ಲದಿದ್ದರೆ ಯಥಾಪ್ರಕಾರ ಜನಜೀವನ ಸಾಮಾನ್ಯ. ಕನ್ನಡಪರ ಹೋರಾಟಕ್ಕಾಗಲಿ, ಕಾವೇರಿಗಾಗಿ ಬಡಿದಾಟಕ್ಕಾಗಲಿ ಕನ್ನಡದ ಬಗ್ಗೆ ಅಸಡ್ಡೆ ತಾಳಿರುವ ಕನ್ನಡೇತರರಿಂದ ಕವಡೆ ಕಾಸಿನ ಕಿಮ್ಮತ್ತು ಬೆಂಗಳೂರಿನಲ್ಲಿ ದೊರಕುವುದಿಲ್ಲ.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದಾಗ ಚಂದ್ರಶೇಖರ ಪಾಟೀಲ ಅವರು ಒಂದು ಮಾತು ಹೇಳಿದ್ದರು, "ಕೈಯಲ್ಲಿ ಬಾರುಕೋಲು ತೆಗೆದುಕೊಂಡಾಗ ಮಾತ್ರ ಕನ್ನಡೇತರರನ್ನು ದಾರಿಗೆ ತರಲು ಸಾಧ್ಯ". ಈಗ ಹಾಗೆ ಬಾರುಕೋಲು ಕೈಯಲ್ಲಿ ಹಿಡಿಯುವವರು ಯಾರಾದರೂ ಇದ್ದಾರಾ? ಕಚ್ಚಾಡುವವರನ್ನು ಕೂಡಿಸಿ ಒಲಿಸಬಹುದು, ಆದರೆ ಸತ್ತಂತಿಹರನ್ನು ಬಡಿದೆಚ್ಚರಿಸುವವರು ಯಾರು?

English summary
Whenever Karnataka or Bengaluru bandh is called, Bangalore does not completely respond to the call. It is life as usual to many non-Kannadigas. How many Kannadigas are here, how many people are drinking Cauvery water, how many people are bothered about Kannada and Karnataka?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X