ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜು.23ರಂದು ಇನ್ಫೋಸಿಸ್ - ಬಾಲೇಖಾನ್ ಸ್ಮರಣಾರ್ಥ ಸಂಗೀತ ಸಂಜೆ

By Prasad
|
Google Oneindia Kannada News

ಸಿತಾರ್ ನವಾಝ್ ದಿವಂಗತ ಉಸ್ತಾದ್ ಬಾಲೇಖಾನ್ (1942-2007) ಅವರ 74ನೇ ಜನ್ಮದಿನದ ಪ್ರಯುಕ್ತ, ಸಂಗೀತ ಸಂಜೆ ಹಾಗೂ ಎರಡನೇ ವಾರ್ಷಿಕ 'ಇನ್ಫೋಸಿಸ್-ಉಸ್ತಾದ್ ಬಾಲೇಖಾನ್ ಸ್ಮರಣಾರ್ಥ' ಪ್ರಶಸ್ತಿ ಪ್ರದಾನ ಸಮಾರಂಭ-2016ರನ್ನು ಬೆಂಗಳೂರಿನ ಉಸ್ತಾದ್ ಬಾಲೇಖಾನ್ ಸ್ಮರಣಾರ್ಥ ಸಂಸ್ಥೆ ಹಮ್ಮಿಕೊಂಡಿದೆ.

ಸಂಗೀತ ಸಂಜೆ ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಜುಲೈ 23ರ ಶನಿವಾರ, ಸಂಜೆ 5.15ಕ್ಕೆ ಬೆಂಗಳೂರಿನ ಜಯನಗರದ 8ನೇ ಬ್ಲಾಕ್ ನಲ್ಲಿರುವ ಜೆಎಸ್ಎಸ್ ಸಭಾಂಗಣದಲ್ಲಿ ನಡೆಯಲಿದೆ. ಈ ಸಮಾರಂಭದಲ್ಲಿ ಹಲವಾರು ಘಟಾನುಘಟಿಗಳು ಭಾಗವಹಿಸುತ್ತಿದ್ದಾರೆ.

ಸಂಗೀತ ಕಚೇರಿಯು ಅನೀಸಾಖಾನ್ ಸೌದಾಗರ್ ಮತ್ತು ಪರ್ವಿನ್ ಜೆ ಷೇಖ್ (ಉಸ್ತಾದ್ ಬಾಲೇಖಾನ್ ಅವರ ಪುತ್ರಿಯರು) ಅವರ ಪ್ರಾರ್ಥನೆಯೊಂದಿಗೆ ಆರಂಭವಾಗಲಿದೆ. ಇವರಿಗೆ ಹಾರ‍್ಮೋನಿಯಂ ಸಾಥ್ ನೀಡುವವರು ಕುಮಾರಿ ಹರ್ಷದಾ. ತಬಲಾ ಸಾಥ್ ಶೈಲೇಶ್ ಶೆಣೈ.

ಇದೇ ಸಂದರ್ಭದಲ್ಲಿ ಗ್ವಾಲಿಯರ್ ಹಾಗೂ ಕಿರಾಣಾ ಘರಾಣಾದ ಪ್ರಸಿದ್ಧ ಹಿಂದೂಸ್ತಾನಿ ಗಾಯಕರಾದ ಪದ್ಮಶ್ರೀ ಪುರಸ್ಕೃತ ಪಂಡಿತ ವೆಂಕಟೇಶ್‌ಕುಮಾರ್ ಅವರಿಗೆ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ.

Infosys - Ustad Bale Khan memorial Award - 2016

ಉಸ್ತಾದ್ ಬಾಲೇಖಾನ್ ಸ್ಮರಣಾರ್ಥ ಸಂಸ್ಥೆಯ ವತಿಯಿಂದ ಪ್ರತಿ ವರುಷದಂತೆ ಯುವ ಕಲಾವಿದರಿಗೆ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. ಈ ವರುಷ ಸಂಗೀತ ವಿದ್ಯಾರ್ಥಿನಿ ಕುಮಾರಿ ವಿಜಯಲಕ್ಷ್ಮೀ ಎಂ. ದೊಡ್ಡಮನಿ ಅವರಿಗೆ ವಿದ್ಯಾರ್ಥಿ ವೇತನ ನೀಡಲಾಗುತ್ತದೆ.

ಮುಖ್ಯ ಅತಿಥಿಗಳು : ಈ ಸಮಾರಂಭದಲ್ಲಿ ನ್ಯಾಯಮೂರ್ತಿ ಸಂತೋಷ ಹೆಗ್ಡೆ, ಮಾಜಿ ಸಾಲಿಸಿಟರ್ ಜನರಲ್ ಆಫ್ ಇಂಡಿಯಾ ಹಾಗೂ ಸರ್ವೋಚ್ಚ ನ್ಯಾಯಾಲಯದ ಮಾಜಿ ನ್ಯಾಯಮೂರ್ತಿ, ಮತ್ತು ಚಿರಂಜೀವಿ ಸಿಂಗ್, ಐಎಎಸ್, ಮಾಜಿ ಮುಖ್ಯಕಾರ್ಯದರ್ಶಿ-ಕರ್ನಾಟಕ ಸರ್ಕಾರ, ಹಾಗೂ ಮಾಜಿ ರಾಯಭಾರಿ - ಯುನೆಸ್ಕೊ ಇವರುಗಳು ಅತಿಥಿಗಳಾಗಿ ಭಾಗವಹಿಸುತ್ತಿದ್ದಾರೆ.

ಕಾರ್ಯಕ್ರಮದ ಮುಖ್ಯ ಅಂಗವಾದ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪುರಸ್ಕೃತ ಪದ್ಮಶ್ರೀ ಪಂ. ವೆಂಕಟೇಶಕುಮಾರ್ ಅವರ ಗಾಯನ ಕಾರ್ಯಕ್ರಮ ಸಂಗೀತ ರಸಿಕರ ಮನಸೂರೆಗೊಳ್ಳಲಿದ್ದು, ಇವರೊಂದಿಗೆ ಹಾರ‍್ಮೋನಿಯಂ ಸಾಥ್ ನೀಡುವವರು ಪಂ. ವ್ಯಾಸಮೂರ್ತಿ ಕಟ್ಟಿ ಹಾಗೂ ತಬಲಾ ಸಾಥ್ ನೀಡುವವರು ಪ್ರಸಿದ್ಧ ತಬಲಾವಾದಕ ರವೀಂದ್ರ ಯಾವಗಲ್ ಅವರು.

Infosys - Ustad Bale Khan memorial Award - 2016

ಬಾಲೇಖಾನ್ ಕುರಿತು : ಉಸ್ತಾದ್ ಬಾಲೇಖಾನ್ ಅವರು ಸಿತಾರ ರತ್ನ ರಹೀಮತ್ ಖಾನ್ ಅವರ ಸಂಗೀತ ಪರಂಪರೆಯ ಮನೆತನದ ಕುಡಿಯಾಗಿದ್ದು, ತಮ್ಮ ಹಾಡುವ ಸಿತಾರನಿಂದ ಪ್ರಸಿದ್ಧಿ ಪಡೆದಿದ್ದರು. ಅವರು ಸಿತಾರ್ ಕಲಿಕೆಯನ್ನು ತಮ್ಮ ಅಜ್ಜ ರಹೀಮತ್‌ ಖಾನ್ ಅವರಿಂದ ಆರಂಭ ಮಾಡಿದರು. ರಹೀಮತ್‌ಖಾನ್ ಅವರು ಮಧ್ಯಪ್ರದೇಶದ ಇಂದೋರ್‌ನಿಂದ 1912ರಲ್ಲಿ ಧಾರವಾಡಕ್ಕೆ ವಲಸೆ ಬಂದು, ಮೈಸೂರು ಮಹಾರಾಜರಿಂದ ಸಿತಾರ್ ರತ್ನ ಬಿರುದನ್ನು ಪಡೆದರು.

ಉಸ್ತಾದ್ ಬಾಲೇಖಾನ್ ತಮ್ಮ ತಂದೆ ಪ್ರೊ|| ಅಬ್ದುಲ್ ಕರಿಂಖಾನ್ ಅವರಿಂದ ಸಿತಾರ್ ತರಬೇತಿ ಪಡೆದು, ಧಾರವಾಡ ಆಕಾಶವಾಣಿಯಲ್ಲಿ 1973ರಿಂದ 2002ರವರೆಗೆ ನಿಲಯ ಕಲಾವಿದರಾಗಿದ್ದರಲ್ಲದೇ, ಆಕಾಶವಾಣಿ ಹಾಗೂ ದೂರದರ್ಶನದಲ್ಲಿ ಎ ಗ್ರೇಡ್ ಕಲಾವಿದರಾಗಿದ್ದರು. ಅವರಲ್ಲದೇ ಅವರ ಕುಟುಂಬವೂ ದಕ್ಷಿಣ ಭಾರತದಲ್ಲಿ ಸಿತಾರ್ ವಾದನ ಜನಪ್ರಿಯತೆ ಗಳಿಸುವಲ್ಲಿ ಅಪಾರ ಕೊಡುಗೆ ನೀಡಿದೆ.

Infosys - Ustad Bale Khan memorial Award - 2016

ಧಾರವಾಡದಲ್ಲಿ ನೆಲೆಸಿದ್ದರೂ ಬಾಲೇಖಾನ್ ಅವರಿಗೆ ಬೆಂಗಳೂರು ಎರಡನೇ ಮನೆಯಂತಿತ್ತು. ಅವರು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಗೆ ಮೂರು ಅವಧಿಗೆ ಸದಸ್ಯರಾಗಿದ್ದರು. ಬೆಂಗಳೂರಿನಲ್ಲಿ ಹಲವಾರು ಕಚೇರಿ ನೀಡಿ, ಇಲ್ಲಿನ ಸಂಗೀತಪ್ರಿಯರ ಮನಸೂರೆಗೊಂಡಿದ್ದರು. 1970ರ ದಶಕದಿಂದ ಮೂರು ದಶಕಗಳ ಕಾಲ ಪ್ರತಿತಿಂಗಳು ಬೆಂಗಳೂರಿನಲ್ಲಿ ತರಗತಿ ನಡೆಸಿ ನೂರಾರು ವಿದ್ಯಾರ್ಥಿಗಳಿಗೆ ಸಿತಾರ್ ತರಬೇತಿ ನೀಡಿದ್ದರು.

ಅವರ 50ನೇ ಜನ್ಮದಿನದ ವರುಷದ ಪ್ರಯುಕ್ತ ಅಕ್ಟೋಬರ್ 1992ರಲ್ಲಿ ಚೌಡಯ್ಯ ಮೆಮೋರಿಯಲ್ ಸಭಾಂಗಣದಲ್ಲಿ ಅವರ ಅಪಾರ ಶಿಷ್ಯವರ್ಗ, ಅಭಿಮಾನಿವೃಂದ, ಹಾಗೂ ಸ್ನೇಹಿತರು ಅವರನ್ನು ಸನ್ಮಾನಿಸಿದ್ದರು. ಹಾಗೂ ಭಾರತ ರತ್ನ ದಿವಂಗತ ಪಂಡಿತ ಭೀಮಸೇನ ಜೋಶಿ ಅವರ ಘನ ಉಪಸ್ಥಿತಿಯಲ್ಲಿ, ಅವರ ಸಂಗೀತ ಕಚೇರಿ ಸನ್ಮಾನ ಸಮಾರಂಭವನ್ನು ಕಳೆಗಟ್ಟುವಂತೆ ಮಾಡಿತ್ತು.

ಉಸ್ತಾದ್ ಬಾಲೇಖಾನ್ ಸ್ಮರಣಾರ್ಥ ಸಂಸ್ಥೆ - ಬೆಂಗಳೂರು, 2010ರಲ್ಲಿ ಉಸ್ತಾದ್ ಹಫೀಜ್‌ಖಾನ್ (ಬಾಲೇಖಾನ್ ಅವರ ಪುತ್ರ) ಅವರಿಂದ ಆರಂಭಗೊಂಡಿದ್ದು, ಆರು ವರುಷದಲ್ಲೇ ಉಸ್ತಾದ್ ಬಾಲೇಖಾನ್ ಸ್ಮರಣಾರ್ಥ ಏಳು ಸಂಗೀತ ಕಚೇರಿಯನ್ನು ಯಶಸ್ವಿಯಾಗಿ ನಡೆಸಿದೆ. ಪದ್ಮವಿಭೂಷಣ ಡಾ. ಎನ್. ರಾಜಮ್, ವಿದುಷಿ ಸಂಗೀತಾ ಶಂಕರ್, ಪಂಡಿತ್ ವಿನಾಯಕ್ ತೊರವಿ, ಗ್ರ್ಯಾಮಿ ಪ್ರಶಸ್ತಿ ವಿಜೇತ ಪಂಡಿತ್ ವಿಶ್ವಮೋಹನ್ ಭಟ್, ಪದ್ಮಶ್ರೀ ಉಸ್ತಾದ್ ಶಾಹಿದ್ ಪರ್ವೆಜ್, ಡಾ. ಜಯಂತಿ ಕುಮರೇಶ್, ಪಂ.ರಾಕೇಶ್ ಚೌರಾಸಿಯಾ ಹಾಗೂ ಇನ್ನಿತರರು ಕಚೇರಿ ನಡೆಸಿ ಪಾಲ್ಗೊಂಡು ಬಾಲೇಖಾನ್ ಸ್ಮರಣಾರ್ಥ ಸಂಸ್ಥೆಯ ಆಶಯವನ್ನು ಶ್ರೀಮಂತಗೊಳಿಸಿದ್ದಾರೆ.

ಪ್ರಥಮ ಇನ್ಫೋಸಿಸ್-ಉಸ್ತಾದ್ ಬಾಲೇಖಾನ್ ಸ್ಮರಣಾರ್ಥ ಪ್ರಶಸ್ತಿಯನ್ನು ಇಟಾವಾ ಘರಾಣಾದ ಉಸ್ತಾದ್, ಸಿತಾರ್ ವಾದಕ ಇರ್ಷಾದ್ ಖಾನ್ ಅವರಿಗೆ ಪ್ರದಾನ ಮಾಡಲಾಗಿದ್ದು, ಇದು ದ್ವಿತೀಯ ಪ್ರಶಸ್ತಿ ಪ್ರದಾನ ಸಮಾರಂಭವಾಗಿದೆ. ಸಂಸ್ಥೆಯು ಕಲೆ ಹಾಗೂ ಸಂಗೀತ ರಸಿಕರಿಂದ ಉದಾರ ದೇಣಿಗೆಯನ್ನು ಸ್ವಾಗತಿಸುತ್ತದೆ. ಪ್ರವೇಶ ಉಚಿತ.

ಕಾರ್ಯಕ್ರಮದ ವಿವರ

ದಿನಾಂಕ : 23 ಜುಲೈ, 2016, ಶನಿವಾರ
ಸಮಯ : 5:15 ಸಂಜೆ
ಕಚೇರಿ ನಡೆಯುವ ಸ್ಥಳ : ಜೆಎಸ್‌ಎಸ್ ಆಡಿಟೋರಿಯಂ, 8ನೇ ಬ್ಲಾಕ್, ಜಯನಗರ.


ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ಸಂಪರ್ಕಿಸಿ

ಶಾರದಾ ಶ್ರೀನಿವಾಸನ್ : 98800 88455
ಗೋಪಾಲಕೃಷ್ಣ : 98806 59800
ಉಸ್ತಾದ್ ಹಫೀಝ್ ಬಾಲೇಖಾನ್ : 98861 55663

English summary
Ustad Bale Khan memorial Trust (Bengaluru) presents second annual award ceremony of 'Infosys - Ustad Bale Khan memorial Award - 2016' to Pandit M Venkatesh Kumar, Internationally renowned vocalist of gwalior and kirana Gharana. Chief Guest : Justice Santhosh Hegde, Guest of Honour : Chiranjeeve Singh. Place : JSS Auditorium, JSS Circle, 8th Block, Jayanagar, Bangalore. Entry is Free.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X