ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅನೇಕ ಕನ್ನಡ ದಿನಪತ್ರಿಕೆಗಳ ಇವತ್ತಿನ ಹೆಡ್ ಲೈನುಗಳನ್ನು ಇಲ್ಲಿ ನೋಡಿ

|
Google Oneindia Kannada News

ಕರ್ನಾಟಕದಲ್ಲಿ ಬುಧವಾರದ ಮಟ್ಟಿಗೆ ಸುದ್ದಿಯಾದವರು ಇಂಧನ ಸಚಿವ ಡಿ.ಕೆ.ಶಿವಕುಮಾರ್. ಅವರ ಮನೆ-ಕಚೇರಿ, ಆಪ್ತರ ಮೇಲೆ ಕೂಡ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದರು. ಕಡೆಗೆ ಡಿಕೆ ಶಿವಕುಮಾರ್ ರ ಜ್ಯೋತಿಷಿಗಳ ಮನೆ ಮೇಲೆ ಕೂಡ ಐಟಿ ಅಧಿಕಾರಿಗಳು ದಾಳಿ ನಡೆಸಿದರು ಎಂಬ ಸುದ್ದಿ ಹರಿದಾಡಿತು.

ಈ ಎಲ್ಲ ವಿದ್ಯಮಾನಗಳಿಗೂ ತಳುಕು ಹಾಕಿಕೊಂಡಿದ್ದು ರಾಜ್ಯಸಭಾ ಚುನಾವಣೆ ಹಾಗೂ ಗುಜರಾತ್ ನ ಕಾಂಗ್ರೆಸ್ ಶಾಸಕರನ್ನು ಕರೆತಂದು ಈಗಲ್ ಟನ್ ರೆಸಾರ್ಟ್ ನಲ್ಲಿ ಇರಿಸಿಕೊಂಡ ವಿಚಾರ. ಆದರೆ ಒಬ್ಬ ಪ್ರಭಾವಿ ಸಚಿವರಿಗೆ ಸಂಬಂಧಿಸಿದಂತೆ ಇಷ್ಟು ದೊಡ್ಡ ಪ್ರಮಾಣದಲ್ಲಿ ದಾಳಿ ನಡೆಸಿದ್ದು ಮಾತನಾಡಿಕೊಳ್ಳುವಷ್ಟು ಸಲೀಸಲ್ಲ.

ಗೋವಿಂದರಾಜ್ ಡೈರಿ ಆಯ್ತು, ಈಗ ಡಿಕೆಶಿ ಲಾಕರ್ ಸರದಿಗೋವಿಂದರಾಜ್ ಡೈರಿ ಆಯ್ತು, ಈಗ ಡಿಕೆಶಿ ಲಾಕರ್ ಸರದಿ

ಈ ಘಟನೆಗೆ ಸಂಬಂಧಿಸಿದಂತೆ ಕನ್ನಡದ ಪ್ರಮುಖ ಪತ್ರಿಕೆಗಳು ಹೇಗೆ ಶೀರ್ಷಿಕೆ ನೀಡಿವೆ, ಈ ಸುದ್ದಿಯನ್ನು ಯಾವ ಆಯಾಮದಿಂದ ಗ್ರಹಿಸಲು ಪ್ರಯತ್ನ ಮಾಡಿವೆ ಎಂಬುದನ್ನು ಒನ್ಇಂಡಿಯಾ ಕನ್ನಡದ ಓದುಗರ ಮುಂದೆ ಇಡುತ್ತಿದೆ. ಏಕೆಂದರೆ, ಆದಾಯ ತೆರಿಗೆ ದಾಳಿಯ ಬೇರುಗಳು ಎಲ್ಲಿಯವರೆಗೆ ಕೂಡ ವ್ಯಾಪಿಸಬಹುದು. ಯಾವ ಪತ್ರಿಕೆಯಲ್ಲಿ ಎಂಥ ಕವರೇಜ್? ತಿಳಿಯಲು ಮುಂದೆ ಓದಿ...

ವಿಜಯವಾಣಿ

ವಿಜಯವಾಣಿ

ಓದುಗರಿಗೆ ದಾಟಿಸಬೇಕಾದ ಬಹಳ ವಿಷಯಗಳನ್ನು ಶೀರ್ಷಿಕೆಯಲ್ಲಿ ತರಲಾಗಿದೆ.ಮೊದಲಿಗೆ ಡಿಕೆ ಶಿವಕುಮಾರ್ ಪ್ರಭಾವಿ ಸಚಿವರು. ವಿದ್ಯುತ್ ಗೆ ಸಂಬಂಧಿಸಿದ ವಿಚಾರ ಅವರ ಸುಪರ್ದಿಗೆ ಬರುತ್ತದೆ. ಇನ್ನು ನಿನ್ನೆಯ ವಿದ್ಯಮಾನ 'ಶಾಕ್' ಅನೋದು ಹೌದು.

ಇನ್ನು ಶಿವಕುಮಾರ್ ಅವರ ಮುಂದಿನ ಹಾದಿ ಏನು? ಈ ಘಟನೆಯಿಂದ ಕಾಂಗ್ರೆಸ್ ಪಾಲಿನ ಸಾಧಕ-ಬಾಧಕಗಳೇನು? ಡಿಕೆಶಿ ಬಂಧನ ಆಗಬಹುದಾ? ಬುಧವಾರ ಇಡೀ ದಿನ ನಡೆದ ವಿದ್ಯಮಾನ..ಒಟ್ಟಾರೆ ಸುದ್ದಿ ಹಾಗೂ ವಿಶ್ಲೇಷಣೆ ಎರಡನ್ನೂ ಕಟ್ಟಿಕೊಡಲಾಗಿದೆ.

ವಿಜಯ ಕರ್ನಾಟಕ

ವಿಜಯ ಕರ್ನಾಟಕ

ಪತ್ರಕರ್ತರ ಆಲೋಚನೆ ಸಾಮಾನ್ಯವಾಗಿ ಒಂದೇ ಕಡೆ ಸಾಗುತ್ತದೆ. ವಿಜಯ ಕರ್ನಾಟಕದ ಶೀರ್ಷಿಕೆ ಕೂಡ ಪವರ್ ಹಾಗೂ ಶಾಕ್ ನ ಹೈಲೈಟ್ ಮಾಡಿದೆ. ಎಂಟು ಕಾಲಂಗಳ ಬ್ಯಾನರ್ ಹೆಡ್ ಲೈನ್ ನೀಡಲಾಗಿದೆ. ತೀರಾ ಮಹತ್ವದ ಸುದ್ದಿಯನ್ನು ಈ ರೀತಿ ಎಂಟು ಕಾಲಂಗಳ ಶೀರ್ಷಿಕೆ ಮೂಲಕ ಹೇಳಲಾಗುತ್ತದೆ.

ಸುದ್ದಿ ಹಾಗೂ ವಿಶ್ಲೇಷಣೆ ಎರಡಕ್ಕೂ ಪ್ರಾಶಸ್ತ್ಯ ಸಿಕ್ಕಿದೆ. ಏನಾಯಿತು, ಏಕಾಯಿತು, ಈ ಬೆಳವಣಿಗೆಯ ನಂತರದ ಸನ್ನಿವೇಶ...ಯಾವ ರಾಜಕಾರಣಿ ಏನೆಂದರು, ಎಲ್ಲೆಲ್ಲಿ ಐಟಿ ದಾಳಿ...ಹೀಗೆ ಪ್ಯಾಕೇಜ್ ವೊಂದನ್ನು ಮಾಡಲಾಗಿದೆ. ಅದಕ್ಕೂ ಮುಂಚಿನ ಪುಟದಲ್ಲೂ ಸಮಗ್ರವಾದ ಸುದ್ದಿ ಕಟ್ಟಿಕೊಡಲಾಗಿದೆ.

ಪ್ರಜಾವಾಣಿ

ಪ್ರಜಾವಾಣಿ

ಪ್ರಜಾವಾಣಿ ಪತ್ರಿಕೆಯು ಐಟಿ ದಾಳಿಗೆ ಮಹತ್ವ ನೀಡಿದ್ದರೂ ಲಿಂಗಾಯತ ಸ್ವತಂತ್ರ ಧರ್ಮದ ವಿಚಾರವಾಗಿ ವೀರಶೈವ ಮಹಾಸಭಾ ಕರೆದಿದ್ದ ಸಭೆಗೂ ಪ್ರಾಶಸ್ತ್ಯ ನೀಡಿದೆ. ಇಡೀ ದಿನದ ಘಟನೆ, ಆರೋಪ ಏನು, ಚುನಾವಣೆ ಆಯೋಗಕ್ಕೆ ಮೊರೆ ಸೇರಿದಂತೆ ಐಟಿ ದಾಳಿಯ ಹಿನ್ನೆಲೆಯನ್ನು ಗ್ರಹಿಸುವ ಸುಳಿವನ್ನು ನೀಡಿದೆ.

ಹೆಚ್ಚಿನ ವಿವರಗಳನ್ನು ಒಳಪುಟದಲ್ಲಿ ನೀಡಿದ್ದು, ಬೆಳವಣಿಗೆ ಆಗಬಹುದಾದ ಯಾವುದೇ ಸುದ್ದಿಗೆ ಯಾವಾಗಲೂ ಹೇಗೆ ಮತ್ತು ಎಷ್ಟು ಪ್ರಾಶಸ್ತ್ಯ ನೀಡುತ್ತದೋ ಅದೇ ಪ್ರಮಾಣದಲ್ಲಿ ಪ್ರಜಾವಾಣಿ ಮಹತ್ವ ನೀಡಿದೆ.

ಕನ್ನಡ ಪ್ರಭ

ಕನ್ನಡ ಪ್ರಭ

ಎಲೆಕ್ಟ್ರಾನಿಕ್ ಮಾಧ್ಯಮಗಳ ಜತೆಗೆ ಸುದ್ದಿ-ವಿಶ್ಲೇಷಣೆ ವಿಚಾರವಾಗಿ ಮುದ್ರಣ ಮಾಧ್ಯಮ ಅಂದರೆ ಪತ್ರಿಕೆಗಳು ಸ್ಪರ್ಧೆಗೆ ಇಳಿಯಬೇಕಾದ ಅನಿವಾರ್ಯ ಎದುರಾಗಿದೆ. ಕನ್ನಡಪ್ರಭದ ಕವರೇಜ್ ಅದನ್ನು ರುಜುವಾತು ಮಾಡಿದೆ. ಸುದ್ದಿಯನ್ನು ನೀಡುವ ವಿಚಾರದಲ್ಲಿ ಆಲೋಚನೆಯೇ ವಿಭಿನ್ನವಾಗಿದೆ.

ಸಚಿವ ಡಿಕೆ ಶಿವಕುಮಾರ್ ಮೇಲೆ ಐಟಿ ದಾಳಿ ಮಾರನೇ ದಿನದ ಹೊತ್ತಿಗೆ ಸುದ್ದಿಯಾಗಿ ಉಳಿದಿರೋದಿಲ್ಲ. ಏಕೆಂದರೆ ಅದು ಹಳತಾಗಿರುತ್ತದೆ. ಆದ್ದರಿಂದಲೇ ಈ ದಾಳಿಯಿಂದ ಯಾರಿಗೆ ಲಾಭ, ನಷ್ಟ? ಸಿದ್ಧತೆ ಹೇಗೆ ನಡೆದಿತ್ತು? ಕರ್ನಾಟಕದಲ್ಲಿ ಬಿಜೆಪಿಗೆ ಇದರಿಂದ ಲಾಭ, ನಷ್ಟ ಏನು? ಕಾಂಗ್ರೆಸ್ ಗೆ ಲಾಭ-ನಷ್ಟ ಏನು? ಇತ್ಯಾದಿ ವಿಶ್ಲೇಷಣೆ ನೀಡಲಾಗಿದೆ. ಶೀರ್ಷಿಕೆ 'ಡಿಕೆಶಿಕಾರಿ' ಎಂಬುದು ಇಡೀ ಘಟನೆಯನ್ನು ಚೆನ್ನಾಗಿ ವಿವರಿಸಿದೆ.

ಉದಯವಾಣಿ

ಉದಯವಾಣಿ

ಉದಯವಾಣಿಯ ಶೀರ್ಷಿಕೆಯಲ್ಲಿ ವ್ಯಂಗ್ಯದ ಮೊನಚು ಚೆನ್ನಾಗಿ ಧ್ವನಿಸಿದೆ. ಕರೆಂಟ್ ಅಕುಂಟ್ ಗೆ ಐಟಿ ಲಾಕ್ ಎಂಬುದು ಶೀರ್ಷಿಕೆ. ಕರೆಂಟ್ ಅಕೌಂಟ್ ಅನ್ನೋದು ವ್ಯಾಪಾರಿಗಳಿಗಾಗಿ ಬ್ಯಾಂಕ್ ನಲ್ಲಿ ತೆರೆಯುವ ಖಾತೆ. ಅದನ್ನೇ ಆದಾಯ ತೆರಿಗೆ ಇಲಾಖೆಯವರು ಲಾಕ್ ಮಾಡಿದ್ದಾರೆ ಎನ್ನುವಂತಿದೆ.

ಇಡೀ ದಿನದ ಬೆಳವಣಿಗೆ, ಇತರ ಯಾರ ಮೇಲೆ ಐಟಿ ದಾಳಿ ನಡೆಯಿತು, ವಿವಿಧ ಪಕ್ಷಗಳ ಮುಖಂಡರ ಹೇಳಿಕೆಗಳು, ಸಂಸತ್ ನಲ್ಲಿ ನಡೆದ ಚರ್ಚೆ, ವಿವಿಧೆಡೆ ನಡೆದ ಪ್ರತಿಭಟನೆ ಬಗ್ಗೆ ಸಮಗ್ರವಾಗಿ ಸುದ್ದಿ ಕವರ್ ಆಗಿದೆ.

ಹೊಸದಿಗಂತ

ಹೊಸದಿಗಂತ

ಐಟಿ ದಾಳಿಗೆ ಒಳಗಾದವರ ಪಟ್ಟಿ, ಏನೇನು ವಶಪಡಿಸಿಕೊಳ್ಳಲಾಯಿತು, ಎಷ್ಟು ಕಡೆ ದಾಳಿ ನಡೆಯಿತು ಇತ್ಯಾದಿ ಮಾಹಿತಿಗಳನ್ನು ಹೊಸದಿಗಂತ ಪತ್ರಿಕೆ ನೀಡಿದ್ದು, ಸುದ್ದಿಗೆ ಹೆಚ್ಚಿನ ಮಹತ್ವ ಕೊಡಲಾಗಿದೆ. ದಾಖಲೆಗಳನ್ನು ಡಿಕೆ ಶಿವಕುಮಾರ್ ಹರಿಯುತ್ತಿದ್ದರು ಎಂಬ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರ ಹೇಳಿಕೆ ಗಮನ ಸೆಳೆಯುತ್ತದೆ.

ವಿಶ್ವವಾಣಿ

ವಿಶ್ವವಾಣಿ

ಡಿಕೆ ಶಿವಕುಮಾರ್ ಮೇಲೆ ಐಟಿ ದಾಳಿಗೆ ಇದೇ ಕಾರಣ ಎಂದು ಜನರ ಮಧ್ಯೆ ನಡೆಯುತ್ತಿರುವ ಚರ್ಚೆ ಹಾಗೂ ಅದನ್ನು ಐಟಿ ಇಲಾಖೆ ನಿರಾಕರಿಸಿರುವ ವಿಚಾರ ಹೈಲೈಟ್ ಆಗಿದೆ. ಶೀರ್ಷಿಕೆಯಲ್ಲಿ ಐಟಿಯ ಕೈ ಎಲ್ಲಿಂದ ಎಲ್ಲಿಯವರೆಗೆ ಚಾಚಿದೆ ಅನ್ನೋದನ್ನು ಪರಿಣಾಮಕಾರಿಯಾಗಿ ಕಟ್ಟಿಕೊಡಲಾಗಿದೆ.

ಪುಟ ವಿನ್ಯಾಸ ಆಕರ್ಷಣೀಯವಾಗಿದ್ದು, ಡಿಕೆಶಿ ಅವರ ಫೋಟೋ, ಅವರ ಕೊರಳ ಸುತ್ತ ಉರುಳಿನಂತೆ ದಾಳಿಯ ವಿವರಗಳನ್ನು ಕಟ್ಟಿಕೊಟ್ಟಿರುವುದು ಮಾಹಿತಿಯನ್ನಷ್ಟೇ ಅಲ್ಲ, ಪರಿಸ್ಥಿತಿಯನ್ನೂ ಚೆನ್ನಾಗಿ ಬಿಂಬಿಸಿದೆ. ಅರುಣ್ ಜೇಟ್ಲಿ, ಅಹ್ಮದ್ ಪಟೇಲ್, ಪರಮೇಶ್ವರ್ ಹಾಗೂ ಸಿದ್ದರಾಮಯ್ಯ ಹೇಳಿಕೆಗಳಿದ್ದು, ಡಿಕೆಶಿ ಬಂಧನದ ಸಾಧ್ಯತೆ ಎಂಬುದನ್ನು ನೀಡಲಾಗಿದೆ.

ಸಂಯುಕ್ತ ಕರ್ನಾಟಕ

ಸಂಯುಕ್ತ ಕರ್ನಾಟಕ

ಬುಧವಾರದ ದಿನ ನಡೆದ ವಿದ್ಯಮಾನ, ಎಲ್ಲೆಲ್ಲಿ ದಾಳಿ ನಡೆಯಿತು, ಜಾರಿ ನಿರ್ದೇಶನಾಲಯದ ಕಣ್ಣು ಇದೆ. ಬಂಧನದ ಭೀತಿ ಎದುರಾಗಿರುವ ಸುದ್ದಿಯನ್ನು ನೋಡಿದ ತಕ್ಷಣ ಕಾಣುವಂತೆ ಹೈಲೈಟ್ ಮಾಡಲಾಗಿದೆ. ಐಟಿಯ 'ಬ್ರಹ್ಮಾಸ್ತ್ರ' ಎಂಬ ಪದ ಏಕೆ ಕೊಟ್ಟಿದ್ದು ಎಂಬುದು ವಿಶ್ಲೇಷಣೆಗೆ ಸೂಕ್ತವಾದದ್ದು.

ಪ್ರಭಾವಿ ಸಚಿವರಾದ ಡಿಕೆ ಶಿವಕುಮಾರ್ ರ ಮೇಲೆ ಪ್ರಬಲವಾದ ಅಸ್ತ್ರವನ್ನೇ ಪ್ರಯೋಗಿಸಿದ್ದಾರೆ ಎಂಬರ್ಥದಲ್ಲಿ ತೆಗೆದುಕೊಳ್ಳಬಹುದು. ಸಂಯುಕ್ತ ಕರ್ನಾಟಕ ಕೂಡ ಮಾಹಿತಿಗೆ ಹೆಚ್ಚಿನ ಆದ್ಯತೆ ನೀಡಿದೆ.

ವಾರ್ತಾ ಭಾರತಿ

ವಾರ್ತಾ ಭಾರತಿ

ಏನು ಸುದ್ದಿ, ಆ ನಂತರದ ಬೆಳವಣಿಗೆ ಏನು ಎಂಬುದಕ್ಕೆ ವಾರ್ತಾ ಭಾರತಿ ಪತ್ರಿಕೆ ಪ್ರಾಶಸ್ತ್ಯ ನೀಡಿದೆ. ಎಷ್ಟು ಕಡೆ ದಾಳಿ ನಡೆಯಿತು, ಈ ವಿದ್ಯಮಾನಕ್ಕೆ ಬಿಜೆಪಿ ವಿರುದ್ಧ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿರುವುದನ್ನು ಹೈಲೈಟ್ ಮಾಡಿದೆ.

ಇದೇ ವಿಚಾರ ಸಂಸತ್ ನಲ್ಲಿ ಚರ್ಚೆಗೆ ಕಾರಣವಾಗಿದ್ದು, ಕಾಂಗ್ರೆಸ್ ಪ್ರಮುಖ ನಾಯಕರ ಹೇಳಿಕೆಗಳು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರತಿಕ್ರಿಯೆಗೆ ಮುಖಪುಟದಲ್ಲಿ ಸ್ಥಾನ ಸಿಕ್ಕಿದೆ. ಒಟ್ಟಾರೆ ಸುದ್ದಿಯನ್ನು ಸುದ್ದಿಯಂತೆ ನೀಡಲಾಗಿದೆ.

English summary
Coining Banner headlines : How Kannada news papers show-cased the IT raid news on Karnataka Power minister D K Shivakumar? Editions dated 3rd August 2017. Vijayavani, Vijaya Karnataka, Prajavani, Kannada Prabha, Udayavani, Vishwavani, Samyukta Karnataka, Hosa Diganta, Vaarta Bharati.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X