ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗಂಡನ ವಿರುದ್ಧ ಸುಳ್ಳು ದೂರು ದಾಖಲಿಸಿದರೆ ಪತ್ನಿಗೆ ಸಂಕಷ್ಟ

By Srinath
|
Google Oneindia Kannada News

False case against husband amounts to cruelty and leads to divorce high court
ಬೆಂಗಳೂರು,ಜ.7: ಪತಿಯ ವಿರುದ್ಧ ಸುಳ್ಳೇ ಸುಳ್ಳು ಆಪಾದನೆ ಮಾಡಿದರೆ ಪತ್ನಿಗೆ ಸಂಕಷ್ಟ ಎದುರಾಗಲಿದೆ- ಇದು ಯಾವುದೋ ಕಾಲದ ಸತಿ ಸತ್ಯವಾನ್ ಕಥೆಯಲ್ಲ. ಬದಲಿಗೆ ರಾಜ್ಯ ಹೈಕೋರ್ಟ್‌ ಇತ್ತೀಚೆಗೆ ನೀಡಿರುವ ಮಹತ್ವದ ತೀರ್ಪಿನ ಸಾರ.

ಇದೇ ವೇಳೆ, ಇಂತಹ ಸುಳ್ಳು ದೂರು ದಾಖಲಿದ್ದೇ ಆದರೆ ಅದನ್ನೇ ನೆಪವಾಗಿಸಿಕೊಂಡು ಪತಿರಾಯ ವಿಚ್ಛೇದನ ಪಡೆಯಬಹುದಾಗಿದೆ. ಹಾಗಾಗಿ 'ಏನೋ ಮಾಡಲು ಹೋಗಿ ಏನು ಮಾಡಿದೆ ನೀನು?' ಎಂದು ಪರಿತಪಿಸುವ ಪ್ರಮೇಯ ಸೃಷ್ಟಿಸಿಕೊಳ್ಳಬೇಡಿ ಎಂದೂ ಕೋರ್ಟ್ ಕಿವಿಮಾತು ಹೇಳಿದೆ.

ಅಷ್ಟೇ ಅಲ್ಲ 'ಓಂ ಪ್ರಥಮ!' ಎಂದು ಇಂತಹ ಪ್ರಕರಣವೊಂದರಲ್ಲಿ ದೂರು ದಾಖಲಿಸಿದ ಮಹಿಳೆಯ ವಿವಾಹವನ್ನೇ ರದ್ದುಪಡಿಸಿ, ಪತಿಗೆ ವಿಚ್ಛೇದನ ನೀಡುವ ಮೂಲಕ ಎಚ್ಚರಿಕೆಯ ಸಂದೇಶವನ್ನೂ ರವಾನಿಸಿದೆ.

ಏನಪ್ಪಾ ಅಂದರೆ 'ಸಮರ್ಪಕ ಸಾಕ್ಷ್ಯಗಳಿಲ್ಲದೆ ಪತಿಯ ವಿರುದ್ಧ ಕೌಟುಂಬಿಕ ದೌರ್ಜನ್ಯ ಮೊದಲಾದ ಗಂಭೀರ ಸ್ವರೂಪದ ಆರೋಪಗಳನ್ನು ಹೊರಿಸಿ, ದೂರು ದಾಖಲಿಸಿದರೆ ಅದು ಪತಿ ವಿರುದ್ಧ ನಡೆಸಿದ ದೌರ್ಜನ್ಯವಾಗುತ್ತದೆ' ಎಂದು ಹೈಕೋರ್ಟ್‌ ತೀರ್ಪು ನೀಡಿದೆ.

ಪತಿಯ ವಿರುದ್ಧ ವಿವಾಹೇತರ ಸಂಬಂಧದ ಬಗ್ಗೆ ಸಮರ್ಥ ಸಾಕ್ಷ್ಯಗಳಿಲ್ಲದೆ ಆರೋಪ ಮಾಡುವುದು ಹಿಂದೂ ವಿವಾಹ ಕಾಯ್ದೆಯಡಿ (Hindu Marriage Act) ದೌರ್ಜನ್ಯವಾಗುತ್ತದೆ. ಜತೆಗೆ, ಪತಿ ಹಾಗೂ ಆತನ ಕುಟುಂಬ ಸದಸ್ಯರ ವಿರುದ್ಧ ಸುಳ್ಳು ದೂರು ದಾಖಲಿಸಿ ಅವರು ಕೋರ್ಟ್‌ ಮೆಟ್ಟಿಲೇರುವಂತೆ ಮಾಡುವುದೂ ದೌರ್ಜನ್ಯವೆನಿಸುತ್ತದೆ' ಎಂದು ಹೈಕೋರ್ಟ್‌ ಆದೇಶಿಸಿದೆ.

ಪ್ರಕರಣದ ವಿವರ ತಿಳಿದರೆ ತೀರ್ಪಿನ ಮಹತ್ವ ಮನದಟ್ಟಾದೀತು :
ಬೆಂಗಳೂರಿನ ರಾಜು ಮತ್ತು ಅವರ ಪತ್ನಿ ಲಿಖಿತಾ (ಇಬ್ಬರ ಹೆಸರೂ ಬದಲಿಸಲಾಗಿದೆ) ರಾಷ್ಟ್ರೀಕೃತ ಬ್ಯಾಂಕಿನ ಉದ್ಯೋಗಿಗಳು. ಪರಸ್ಪರ ಪ್ರೀತಿಸಿ 1989ರ ಆ. 24ರಂದು ವಿವಾಹವಾಗಿದ್ದರು. ಆರು ತಿಂಗಳ ಬಳಿಕ ರಾಜು ಗುಪ್ತಾಂಗಕ್ಕೆ ಸಂಬಂಧಿಸಿದ ಸಮಸ್ಯೆಗೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.

ಈ ಮಧ್ಯೆ, 1999ರ ನಂತರ ಪತಿ ಇಂಜಿನಿಯರಿಂಗ್‌ ವಿದ್ಯಾರ್ಥಿನಿಯೊಂದಿಗೆ ಅನೈತಿಕ ಸಂಬಂಧ ಹೊಂದಿರುವುದಾಗಿ ರಾಜು ಅವರನ್ನು ಅನುಮಾನಿಸಿದ ಲಿಖಿತಾ, ಆತನಿಗೆ ಕಿರುಕುಳ ನೀಡಲಾರಂಭಿಸಿದ್ದರು. ಸಹ ಜೀವನಕ್ಕೂ ಸಮ್ಮತಿಸಲಿಲ್ಲ. ಒಮ್ಮೆ ರಾಜುವಿನ ಮುಖವನ್ನು ತಲೆದಿಂಬಿನಿಂದ ಅದುಮಿ ಕೊಲೆ ಮಾಡುವುದಕ್ಕೂ ಯತ್ನಿಸಿದ್ದಳು.

ಬೇಸತ್ತ ಪತಿರಾಯ ರಾಜು, ಲಿಖಿತಾನಿಂದ ವಿಚ್ಛೇದನ ಬಯಸಿದರು. ಅದಕ್ಕೆ ಲಿಖಿತಾ 4 ಲಕ್ಷ ರೂ ಬೇಡಿಕೆ ಇಟ್ಟಿದ್ದರು. ಅದರಂತೆ ಪತ್ನಿಗೆ 2003 ರಲ್ಲಿ 1.5 ಲಕ್ಷ ರೂ. ನೀಡಲು ರಾಜು ಮುಂದಾದರು. ಆದರೆ ಲಿಖಿತಾ, ವಿಚ್ಛೇದನ ಒಪ್ಪಂದಕ್ಕೆ ಸಹಿ ಮಾಡಲಿಲ್ಲ.

ಇದರಿಂದ ದೌರ್ಜನ್ಯದ ನೆಲೆಯಲ್ಲಿ ವಿಚ್ಛೇದನ ನೀಡುವಂತೆ ಪತಿ 2004ರಲ್ಲಿ ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲೇರಿದ್ದರು. ಪತಿಯ ಆರೋಪಗಳನ್ನು ಲಿಖಿತಾ ನಿರಾಕರಿಸಿದರು. ಹಾಗಾಗಿ, ನ್ಯಾಯಾಲಯ 2010ರಲ್ಲಿ ಪತಿಯ ಅರ್ಜಿ ವಜಾಗೊಳಿಸಿತ್ತು. ಆದರೆ, ರಾಜು ಹೈಕೋರ್ಟ್‌ ಮೆಟ್ಟಿಲೇರಿದ್ದರು.

ವಿಚಾರಣೆ ನಡೆಸಿದ ಹೈಕೋರ್ಟ್‌ ವಿಭಾಗೀಯ ಪೀಠವು, 'ಲಿಖಿತಾ ತನ್ನ ಪತಿಯ ವಿರುದ್ಧ ಬಲವಾದ ಸಾಕ್ಷ್ಯಾಧಾರವಿಲ್ಲದೆ ಅನೈತಿಕ ಸಂಬಂಧ, ಪುರುಷತ್ವದ ಬಗ್ಗೆ ಆರೋಪ ಮಾಡಿದ್ದಾರೆ. ಇನ್ನು, ಇಂಜಿನಿಯರಿಂಗ್‌ ವಿದ್ಯಾರ್ಥಿನಿಯ ಕುರಿತು ಆಕೆಗೆ ಸ್ವಲ್ಪವೂ ಮಾಹಿತಿ ಇಲ್ಲ.

ಕ್ಯಾನ್ಸರಿಗೆ ತುತ್ತಾಗುವ ಅಪಾಯವನ್ನು ಎದುರಿಸಲು ವೈದ್ಯರ ಸಲಹೆಯಂತೆ ಅನ್ಯ ಮಾರ್ಗವಿಲ್ಲದೆ ರಾಜು, ಗುಪ್ತಾಂಗದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಲಿಖಿತಾ, ಪತಿಯ ಕೊಲೆಗೂ ಯತ್ನಿಸಿದ್ದು ಕುಟುಂಬ ಸದಸ್ಯರ ಹೇಳಿಕೆಯಿಂದ ಧೃಡಪಟ್ಟಿದೆ. ಪತಿ ವಿರುದ್ಧ ಕೌಟುಂಬಿಕ ದೌರ್ಜನ್ಯದ ಸುಳ್ಳು ಪ್ರಕರಣ ಹೂಡಿರುವುದು ಕೋರ್ಟಿಗೆ ಮನದಟ್ಟಾಗಿದೆ' ಎಂದು ಅಭಿಪ್ರಾಯಪಟ್ಟ ಕೋರ್ಟ್ ಆಕೆಯ ವಿರುದ್ಧ ತೀರ್ಪು ನೀಡಿದೆ.

English summary
False case against husband amounts to cruelty and leads to divorce high court. The Karnataka high court has ruled that false complaints of dowry harassment, ill treatment, cruelty or extra-marital affairs filed against husband without evidence amount to cruelty against the husband and leads to divorce.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X