ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅತಿಯಾದ ವೇಗವೇ ರವಿ ಸಾವಿಗೆ ಕಾರಣವಾಯಿತೆ?

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಮಾ. 17 : ಪ್ರಾಮಾಣಿಕ, ದಕ್ಷ ಮತ್ತು ಜನಪ್ರಿಯ ಐಎಎಸ್ ಅಧಿಕಾರಿ ಡಿ.ಕೆ. ರವಿ ಅವರ ಸಾವು ಇಡೀ ಕರ್ನಾಟಕವನ್ನು ಅಲ್ಲಾಡಿಸಿಬಿಟ್ಟಿದೆ. ಅಭಿಮಾನಿಗಳು ಸಿಡಿದೆದ್ದಿದ್ದರೆ, ಕೆಲ ರಾಜಕಾರಣಿಗಳು ಪತರಗುಟ್ಟುತ್ತಿದ್ದಾರೆ, ಪೊಲೀಸ್ ಅಧಿಕಾರಿಗಳು ಹೇಳಿಕೆ ನೀಡುವಲ್ಲಿ ತಡವರಿಸುತ್ತಿದ್ದಾರೆ. ಸಾವು ಸಂಭವಿಸಿದ್ದು ಆತ್ಮಹತ್ಯೆಯಿಂದಲೋ ಅಥವಾ ಬೇರೆ ಕಾರಣದಿಂದಲೋ 'ನಿಷ್ಪಕ್ಷಪಾತ' ತನಿಖೆಯಿಂದ ಗೊತ್ತಾಗಲಿದೆ. ಆದರೆ, ಅವರ ಸಾವಿಗೆ ನಿಜವಾದ ಕಾರಣವಾದರೂ ಏನು?

ಎಲ್ಲವನ್ನು ಕ್ಷಣಾರ್ಧದಲ್ಲಿ ಸಾಧಿಸಿಬಿಡಬೇಕು ಎಂಬ ಅವರ ವೇಗವೇ ಅವರಿಗೆ ಮುಳುವಾಯಿತೆ? ಅತಿಯಾದ ಮಹತ್ವಾಕಾಂಕ್ಷೆ ಅವರನ್ನು ಸಾವಿನ ಮಡುವಿಗೆ ತಳ್ಳಿತೆ? ಮರಳು ಮಾಫಿಯಾ ಮತ್ತು ಲ್ಯಾಂಡ್ ಮಾಫಿಯಾ ಡೈನ್ಯಾಮಿಕ್ ಅಧಿಕಾರಿಯ ಬದುಕನ್ನು ಮೊಟಕುಗೊಳಿಸಿತೆ? ಯಾವುದೇ ರಾಜಕಾರಣಿಯ ಒತ್ತಡವೇ ಅವರನ್ನು ಸಾವಿನ ದವಡೆಗೆ ತಳ್ಳಿತೆ? ಅಂದುಕೊಂಡ ಕನಸುಗಳು ನನಸಾಗದೆ ಇದ್ದುದರಿಂದ ಅವರು ಭ್ರಮನಿರಸನಗೊಂಡಿದ್ದರೆ? ಅಥವಾ ಕೌಟುಂಬಿಕ ಮನಸ್ತಾಪ ದುರಂತಕ್ಕೆ ಕಾರಣವಾಯಿತೆ? [ಡಿಕೆ ರವಿ ಸಾವು : ಪ್ರಮುಖ ಬೆಳವಣಿಗೆ]

Did speed kill dynamic IAS officer DK Ravi?

ಈ ಪ್ರಶ್ನೆಗಳಿಗೆ ನಿಖರವಾದ ಉತ್ತರಗಳು ಕಂಡುಕೊಳ್ಳುವುದು ಬಲು ಕಷ್ಟದ ಕೆಲಸ. ಸದ್ಯಕ್ಕೆ, ರವಿಯವರ ಸಾವು ಸಂಭವಿಸಿದಾಗ ಅವರ ಮನೆಯ ಬಳಿಯೇ ಇದ್ದ ಕಾರಿನ ಚಾಲಕನ ವಿಚಾರಣೆ ಪೊಲೀಸರು ನಡೆಸುತ್ತಿದ್ದಾರೆ. ಬಲ್ಲ ಮೂಲಗಳ ಪ್ರಕಾರ, "ಇದರ ಬಗ್ಗೆ ನನಗೇನೂ ಗೊತ್ತಿಲ್ಲ" ಎಂಬ ಹೇಳಿಕೆಯನ್ನೇ ಆತ ನೀಡುತ್ತಿದ್ದಾನೆ. ರವಿ ಪತ್ನಿ, ಕಾಂಗ್ರೆಸ್ ಮುಖಂಡ ಹನುಮಂತರಾಯಪ್ಪ ಅವರ ಮಗಳು ಕುಸುಮಾ ಅವರ ಹೇಳಿಕೆ ಕೂಡ ತನಿಖೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಒನ್ಇಂಡಿಯಾಗೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆತ್ಮಹತ್ಯೆಯೋ ಕೊಲೆಯೋ? : ಸಾವು ಹೀಗೆಯೇ ಸಂಭವಿಸಿದೆ ಎಂದು ನಿಖರವಾಗಿ ಹೇಳಲು ಸಾಧ್ಯವಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ರವಿಯವರ ಸಾವು ಸಂಭವಿಸಿದ ಸ್ಥಳದಲ್ಲಿ ಮರಣ ಪತ್ರ ದೊರೆತಿಲ್ಲ. ಮರಣಪತ್ರ ಇಟ್ಟಿರದೆ ಆತ್ಮಹತ್ಯೆಗೆ ಶರಣಾಗಿರಲೂಬಹುದು ಎಂಬ ವಾದವೂ ಕೇಳಿಬಂದಿದೆ. ಯಾರಿಂದಲಾದರೂ ಆತ್ಮಹತ್ಯೆಗೆ ಪ್ರೇರೇಪಣೆ ಬಂದಿದ್ದರೆ, ಅಂಥವರ ಹೆಸರನ್ನು ಬರೆದಿಟ್ಟು ಅವರು ಸಾವಿಗೆ ಶರಣಾಗಬಹುದಿತ್ತು. ಇದು ಅತ್ಯಂತ ಸೂಕ್ಷ್ಮವಾದ ವಿಷಯವಾದ್ದರಿಂದ ಇದಮಿತ್ಥಂ ಎಂದು ಹೇಳುವುದು ಬಲು ಕಷ್ಟ ಎಂದು ತನಿಖಾಧಿಕಾರಿ ಅಭಿಪ್ರಾಯಪಟ್ಟಿದ್ದಾರೆ. [ರವಿ ಸಾವಿಗೆ ಕಾರಣವೇನು? ಓಟ್ ಹಾಕಿ]

ಮಾವನಮನೆಯಿಂದ ನೇರ ಕಚೇರಿಗೆ : 16ನೇ ತಾರೀಖಿನಂದು ರವಿಯವರು ಮಾವನ ಮನೆಯಿಂದ ನೇರವಾಗಿ ಕಚೇರಿಗೆ ತೆರಳಿದ್ದಾರೆ. ಇತರ ದಿನಗಳಲ್ಲಿ ಮೊದಲು ಅವರು ಮನೆಗೆ ಹೋಗಿ ನಂತರ ಕಚೇರಿಗೆ ತೆರಳುತ್ತಿದ್ದರು. ನಂತರ ಕಚೇರಿಯಿಂದ ಬೇಗನೇ ಮನೆಗೆ ಮರಳಿದ್ದಾರೆ. ಆದರೆ, ಇಲ್ಲೂ ಗೊಂದಲವಿದೆ. ಕೆಲವರು ಅವರು ತಾವಾಗಿಯೇ ಮನೆಗೆ ತೆರಳಿದರು ಅಂದರೆ, ಕೆಲವರು ಡ್ರೈವರ್ ಜೊತೆ ತೆರಳಿದರು ಎಂದಿದ್ದಾರೆ. ಅಂತಿಮವಾಗಿ, ಡ್ರೈವರ್ ಸಾಕ್ಷ್ಯ ಈ ಪ್ರಕರಣಕ್ಕೆ ಬೆಳಕು ಚೆಲ್ಲಬಲ್ಲದು. ಆದರೆ, ಆತ ಮಾತ್ರ ತನಗೇನೂ ಗೊತ್ತಿಲ್ಲ ಅಂತಲೇ ಹೇಳುತ್ತಿದ್ದಾನೆ.

ನನಸಾಗದ ಕನಸುಗಳು : ಸರಳತನದಿಂದಲೇ ಅವರು ಕೆಲಸ ಮಾಡಿದಲ್ಲೆಲ್ಲ ಹೀರೋ ಆಗಿ ಮೆರೆಯುತ್ತಿದ್ದರು, ಅವ್ಯವಸ್ಥೆಯನ್ನು ಬದಲಾಯಿಸಲು ಶ್ರಮಿಸುತ್ತಿದ್ದರು. ಐಎಎಸ್ ಪರೀಕ್ಷೆ ಎಷ್ಟು ಪರಿಶ್ರಮದ್ದು ಎಂದು ತಿಳಿದಿದ್ದ ಅವರು, ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ ತರಬೇತಿ ನೀಡುತ್ತಿದ್ದರು. ತಮ್ಮಂತೆಯೇ ಪ್ರಾಮಾಣಿಕ ಅಧಿಕಾರಿಗಳು ಹುಟ್ಟುವಂತೆ ಮಾಡಬೇಕೆಂದು ಅವರು ಕನಸು ಕಂಡಿದ್ದರು. [ರವಿ ಸೂಪರ್ ಟ್ರ್ಯಾಕ್ ರೆಕಾರ್ಡ್]

ಕೋಲಾರದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಸ್ಟೇಡಿಯಂ ಕಟ್ಟಬೇಕೆಂಬುದು ಅವರ ಮಹತ್ವಾಕಾಂಕ್ಷೆಯ ಕನಸಾಗಿತ್ತು. ಅಲ್ಲಿಂದ ಅವರನ್ನು ಎತ್ತಂಗಡಿ ಮಾಡಿದ್ದರಿಂದ ಆ ಕನಸು ಕೂಡ ನನಸಾಗಲಿಲ್ಲ. ಅಕ್ಟೋಬರ್ 2014ರಿಂದ ವಾಣಿದ್ಯ ತೆರಿಗೆ ಇಲಾಖೆಯಲ್ಲಿ ಕೆಲಸ ವಹಿಸಿಕೊಂಡ ಮೇಲೆ ಭೂಗಳ್ಳರ ಮೇಲೆ, ಮರಳು ದಂಧೆಕೋರರ ಮೇಲೆ ಮುಗಿಬಿದ್ದಿದ್ದು, ಸುಮಾರು 138 ಕೋಟಿ ರು.ನಷ್ಟು ದಂಡ ವಸೂಲಿ ಮಾಡಿದ್ದರು. ಅವರ ಸಾವಿನಿಂದ ಯಾರ್ಯಾರು ಹಬ್ಬ ಮಾಡುತ್ತಿದ್ದಾರೋ? [ಮರಳು ಮಾಫಿಯಾ ಎಂದರೇನು?]

ಅತಿಯಾದ ವೇಗ : ಯಾವ ವೇಗದಿಂದ ಡಿಕೆ ರವಿಯವರು ಕೆಲಸ ಮಾಡುತ್ತಿದ್ದರೆಂದರೆ, ಅವರ ಸಹೋದ್ಯೋಗಿಗಳು ಕೂಡ ತಳಮಳಗೊಳ್ಳುತ್ತಿದ್ದರು. ವಿಭಿನ್ನವಾದ ವ್ಯವಸ್ಥೆಯ ವಿರುದ್ಧ ರವಿ ಯುದ್ಧ ಸಾರಿದ್ದರಿಂದ ವೇಗ ತಗ್ಗಿಸುವುದೇ ಉತ್ತಮ ಎಂದು ಅವರ ಅನೇಕ ಸಹೋದ್ಯೋಗಿಗಳು ಅಭಿಪ್ರಾಯಪಟ್ಟಿದ್ದರು. ಆದರೆ, ರವಿ ಅವರ ಮಾತಿಗೆ ಕಿವಿಗೊಡಲಿಲ್ಲ, ತಮಗೇನು ಸರಿ ಅನ್ನಿಸುತ್ತದೋ ಅದೇ ದಾರಿಯಲ್ಲಿ ಮುನ್ನುಗ್ಗಿದರು. ನಿಧಾನಗೊಳಿಸುವುದೆಂದರೆ ತಪ್ಪಿತಸ್ಥರ ನೊಗ ಸಡಿಲಿಸಿದಂತೆ ಎಂದು ರವಿ ತಿಳಿದಿದ್ದರು. ಆ ವೇಗ ಇದ್ದಿದ್ದರಿಂದಲೇ ಮರಳು ಮಾಫಿಯಾ ಹತ್ತಿಕ್ಕಲು ಸಾಧ್ಯವಾಯಿತು ಎಂದು ಎದೆತಟ್ಟಿಕೊಂಡು ಅವರು ಹೇಳುತ್ತಿದ್ದರು. ಈ ಅತಿಯಾದ ವೇಗವೇ ಅವರ ಸಾವಿಗೆ ಕಾರಣವಾಯಿತೆ?

English summary
Did speed kill dynamic IAS officer DK Ravi? Did unfulfilled dreams push Ravi to take extreme step? Had someone threatened him and abetted him to commit suicide? Only impartial investigation can give answers to these questions? Will the truth come out?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X