ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಂಕೇತಿ ಉತ್ಸವ : ಗಂಡಿ ಸೀರೆಯ ಗತ್ತು ; ಒತ್ತು ಶಾವಿಗೆ ಗಮ್ಮತ್ತು

By Prasad
|
Google Oneindia Kannada News

ಬೆಂಗಳೂರು, ಜನವರಿ 06 : ಸಂಕೇತಿ ಮಹಿಳಾ ಸಮಾಜ ಟ್ರಸ್ಟ್ (ರಿ) ವತಿಯಿಂದ ಪ್ರತಿ ವರ್ಷದಂತೆ ಈ ಬಾರಿಯೂ ಸಂಕೇತಿ ಉತ್ಸವ ನಡೆಯುತ್ತಿದೆ. ಜನವರಿ 7 ಮತ್ತು 8ರಂದು ಬುಲ್ ಟೆಂಪಲ್ ರಸ್ತೆಯ ಮರಾಠಾ ಹಾಸ್ಟೆಲ್ ಛತ್ರದಲ್ಲಿ ಈ ಉತ್ಸವ ನಡೆಯಲಿದ್ದು, ಗಂಡಿ ಸೀರೆಯೊಂದಿಗೆ ಮಹಿಳೆಯರು ಕಾಣಿಸಿಕೊಳ್ಳಲಿದ್ದಾರೆ.

ಸಂಕೇತಿ ಸಮುದಾಯದವರ ಪ್ರಮುಖ ಆಹಾರ ವೈವಿಧ್ಯವಾದ ಚೋಮಾಯಿ (ಒತ್ತು ಶ್ಯಾವಿಗೆ) ಮತ್ತು ಕೊಳಕಟ್ಟೆ (ಖಾರದ ಕಡುಬು) ಉತ್ಸವದ ಪ್ರಮುಖ ಆಕರ್ಷಣೆಯಾಗಿರಲಿದೆ.

ಜನವರಿ 7ರಂದು ಬೆಳಿಗ್ಗೆ 9.30ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಕರ್ನಾಟಕ ಸಂಗೀತ ಮತ್ತು ನೃತ್ಯ ಅಕಾಡೆಮಿಯ ಅಧ್ಯಕ್ಷರಾದ ಗಂಗಮ್ಮ ಕೇಶವಮೂರ್ತಿ ಅವರು ಅಧ್ಯಕ್ಷತೆ ವಹಿಸುವರು. ಹಿರಿಯ ಪತ್ರಕರ್ತೆ, ಲೇಖಕಿ ಡಾ.ಆರ್.ಪೂರ್ಣಿಮಾ ಮುಖ್ಯ ಅತಿಥಿ. ಡಾ.ರಮ್ಯಾ ಮೋಹನ್ ವಿಶೇಷ ಆಹ್ವಾನಿತರು.

Bengaluru Sankethi Uthsav-5 : Rich tradition and Food

ಸಂಕೇತಿಗಳು ಮೂಲತಃ ಹಾಸನ ಕಡೆಯವರು. ಇದೀಗ ರಾಜ್ಯದ ಎಲ್ಲೆಡೆ ಅವರು ವ್ಯಾಪಿಸಿಕೊಂಡಿದ್ದಾರೆ. ರುಚಿಕಟ್ಟಾಗಿ ಅಡುಗೆ ಮಾಡಿ ಅದರಲ್ಲೂ 2 ಅಥವಾ 3 ಬಗೆಯ ತಿಂಡಿಯನ್ನು ಮಾಡಿ ತಿನ್ನುವುದು ಅವರ ರೂಢಿ. ಹೀಗಾಗಿಯೇ ಸಂಕೇತಿಗಳು ನಡೆಸುವ ಉತ್ಸವ ಎಂದರೆ ಜನರ ಕಿವಿ ನಿಮಿರುತ್ತದೆ. ಚೋಮಾಯಿ, ಕೊಳಕಟ್ಟೆಯಷ್ಟೇ ಅಲ್ಲ, ಇನ್ನೂ ಅನೇಕ ಬಗೆಯ ತಿಂಡಿಗಳ ವೈವಿಧ್ಯವನ್ನು ಈ ಸಂಕೇತಿಗಳಲ್ಲಿ ಕಾಣಲು ಸಾಧ್ಯ. ಸಹಜವಾಗಿಯೇ ಉತ್ಸವದಲ್ಲಿ ಇದೆಲ್ಲವೂ ಇರಲಿದೆ.

ಸಂಕೇತಿ ಉತ್ಸವದಲ್ಲಿ ಬೆಳಿಗ್ಗೆ 9ರಿಂದ ರಾತ್ರಿ 8 ಗಂಟೆಯವರೆಗೆ ಕರಕುಶಲ ವಸ್ತುಗಳು, ಸೀರೆಗಳು, ಸಿದ್ಧ ಉಡುಪುಗಳು, ಗೃಹೋಪಯೋಗಿ ವಸ್ತುಗಳು, ಬಗೆ ಬಗೆಯ ತಿಂಡಿ ತಿನಿಸುಗಳ ಸಹಿತ ಅನೇಕ ಬಗೆಯ ವಸ್ತುಗಳ ಪ್ರದರ್ಶನ, ಮಾರಾಟ, ಸ್ಮರ್ಧಾತ್ಮಕ ಆಟಗಳು ನಡೆಯಲಿವೆ.

8ರಂದು ಬೆಳಿಗ್ಗೆ 11.30ಕ್ಕೆ ಸಾಂಪ್ರದಾಯಿಕ ಜಡೆ ಅಲಂಕಾರ ಸ್ಪರ್ಧೆ ನಡೆಯಲಿದೆ. ಇದರಲ್ಲಿ ಯಾರು ಬೇಕಾದರೂ ಭಾಗವಹಿಸಬಹುದು. ವಿಶೇಷವಾಗಿ ಮಕ್ಕಳ ಆಟದ ಅಂಗಳ ಸಿದ್ಧಪಡಿಸಲಾಗಿದೆ.

ಗಂಡಿ ಸೀರೆ ಉಟ್ಟುಕೊಂಡ ಸಂಕೇತಿ ಮಹಿಳೆಯರನ್ನು ನೋಡುವುದೇ ಒಂದು ವಿಶಿಷ್ಟ ಅನುಭವ. ರಾಜರ ಆಳ್ವಿಕೆ ಇದ್ದ ಹಿಂದಿನ ಕಾಲದಲ್ಲಿ ಯುದ್ಧಕ್ಕೂ ಮಹಿಳೆಯರು ಸಿದ್ಧವಾಗಬೇಕಿತ್ತಂತೆ. ಆಗ ಮಹಿಳೆಯ ದೇಹ ಸುತ್ತಿಕೊಂಡ ಸೀರೆ ಯಾವ ಕಾರಣಕ್ಕೂ ಬಿಚ್ಚಿ ಹೋಗಬಾರದು ಎಂಬ ನೆಲೆಯಲ್ಲಿ ಗಂಡಿ ಸೀರೆ ಉಡುವ ಸಂಪ್ರದಾಯ ಬೆಳೆದುಬಂತಂತೆ.

ಗಂಡಿ ಸೀರೆ ಉಡುವುದಕ್ಕೆ ಕನಿಷ್ಠ 9 ಗಜ ಉದ್ದದ ಸೀರೆ ಬೇಕು. ಈಗಿನ 6 ಗಜ ಉದ್ದದ ಸೀರೆಯಲ್ಲಿ ಗಂಡಿ ಸೀರೆ ಉಡಲು ಸಾಧ್ಯವಿಲ್ಲ. 7 ಅಥವಾ 8 ಗಜ ಸೀರೆಯಲ್ಲಿ ಗಂಡಿ ಸೀರೆ ಉಡಬಹುದಾದರೂ ಮುಕ್ತವಾಗಿ ನಡೆದಾಡಲು ಕಷ್ಟವಾಗಬಹುದು. ಆದರೆ 9 ಗಜ ಸೀರೆಯಿಂದ ಗಂಡಿ ಸೀರೆ ಉಟ್ಟುಕೊಂಡರೆ ಓಡುವುದು ಸಹಿತ ಯಾವುದೇ ಬಗೆಯ ಸಾಹಸವನ್ನು ಮಾಡಿತೋರಿಸಬಹುದು. ಈ ಬಾರಿ ಉದ್ಘಾಟನಾ ಸಮಾರಂಭದಲ್ಲಿ ಗಂಡಿ ಸೀರೆಯಲ್ಲಿ ಕಾಣಿಸಿಕೊಳ್ಳಲು ಹಲವು ಮಹಿಳೆಯರು ಸಜ್ಜಾಗಿದ್ದಾರೆ.

ಉತ್ಸವದಲ್ಲಿ ಕರಕುಶಲ ವಸ್ತುಗಳ, ಸೀರೆಗಳು, ಸಿದ್ಧ ಉಡುಪುಗಳು, ಗೃಹೋಪಯೋಗಿ ವಸ್ತುಗಳು, ಬಗೆ ಬಗೆಯ ತಿಂಡಿ ತಿನಿಸುಗಳು, ಸ್ಪರ್ಧಾತ್ಮಕ ಆಟಗಳು, ಅನೇಕ ಅಗತ್ಯ ವಸ್ತುಗಳ ಮಾರಾಟ ವ್ಯವಸ್ಥೆಯೂ ಇದೆ. ಜತೆಗೆ ಸಂಕ್ರಾಂತಿಗಾಗಿ ಎಳ್ಳು-ಸಕ್ಕರೆ ಅಚ್ಚುಗಳು, ಪೂಜಾ ಸಾಮಗ್ರಿಗಳೂ ಸಿಗಲಿವೆ. ಬೆಂಗಳೂರಿನ ಜನತೆಗೆ ಸಂಕೇತಿ ಸಮುದಾಯದವರ ಆಚಾರ, ವಿಚಾರ, ಸಂಸ್ಕೃತಿಯನ್ನು ಪರಿಚಯಿಸುವ ವಿಶಿಷ್ಟ ಉತ್ಸವಕ್ಕೆ ಸಿದ್ಧತೆ ನಡೆದಿದೆ.

ಟ್ರಸ್ಟ್ ಬಗ್ಗೆ

ಬೆಂಗಳೂರು ಸಂಕೇತಿ ಮಹಿಳಾ ಸಮಾಜ ಟ್ರಸ್ಟ್ ಒಟ್ಟು 430 ಸದಸ್ಯೆಯರನ್ನು ಹೊಂದಿದೆ. ಪ್ರತಿ ತಿಂಗಳ 2ನೇ ಅಥವಾ 3ನೇ ಶನಿವಾರಗಳಂದು ಮಾಸಿಕ ಮಿಲನ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ. ಪ್ರತಿ ವರ್ಷ ಗೌರಿ ಗಣೇಶ ಹಬ್ಬದ ಪ್ರಯುಕ್ತ ಸೆಪ್ಟೆಂಬರ್‌ನಲ್ಲಿ ನಡೆಸುತ್ತದೆ.

ಈ ಬಾರಿ ವಿಕೇರ್ ಡಯಾಲಿಸಿಸ್ ಎಂಬ ಕಾರ್ಯಕ್ರಮ ರೂಪಿಸಿದೆ. ಪ್ರತಿ ವರ್ಷ ಸುಮಾರು 40ರಷ್ಟು ಮಕ್ಕಳಿಗೆ ವಿದ್ಯಾರ್ಥಿವೇತ, 20 ಮಂದಿಗೆ ವೈದ್ಯಕೀಯ ಸಹಾಯ, 15 ಮಂದಿಗೆ ಮಾಸಾಶಯ ನೀಡುತ್ತಿದೆ.

ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಯುವ ಸಂಕೇತಿ ಉತ್ಸವ್‌ಗೆ ಒಂದೊಂದು ಉದ್ದೇಶ ಇರುತ್ತದೆ. ಈ ಬಾರಿ ಉತ್ಸವದಿಂದ ಬರುವ ಆದಾಯವನ್ನು ವಿದ್ಯಾಭ್ಯಾಸ ಸಹಾಯ ನಿಧಿಗೆ ಸೇರಿಸಿ ಸಹಾಯ ಮಾಡಲು ನಿರ್ಧರಿಸಲಾಗಿದೆ. ಪ್ರಯತ್ನ-ಪ್ರಾಮಾಣಿಕತೆ-ಪ್ರಗತಿ ಟ್ರಸ್ಟ್‌ನ ಬೀಜ ಮಂತ್ರ.

ಹೆಚ್ಚಿನ ಮಾಹಿತಿಗೆ ಸ್ವರ್ಣ 9448071940, 7829193195 ಸಂಪರ್ಕಿಸಬಹುದಾಗಿದೆ.

English summary
Bengaluru Sankethi Uthsav-5 organised by Bengaluru Sankethi Mahila Samaja Trust(R) . There are many unique Programs and stalls put on for public on 7th and 8th January 2017 at Maratha Hostel Choultry, 4/11, Bull Temple Road (opp. Shanthi sagar Hotel) Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X