ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆಆರ್ ಮಾರುಕಟ್ಟೆ ಬಂದ್ ಗೆ ನಿಜ ಕಾರಣವೇನು?

|
Google Oneindia Kannada News

ಬೆಂಗಳೂರ, ಏ.7: ಕಳೆದ ಹಲವು ದಿನಗಳಿಂದ ಕೃಷ್ಣ ರಾಜೇಂದ್ರ ಮಾರುಕಟ್ಟೆ ವ್ಯಾಪಾರಿಗಳು ಮತ್ತು ಬಿಬಿಎಂಪಿ ನಡುವೆ ಇದ್ದ ವಿವಾದ ತಾರಕಕ್ಕೇರಿದ್ದು ಆಕ್ರೋಶಗೊಂಡಿರುವ ವ್ಯಾಪಾರಿಗಳು ಮಂಗಳವಾರ ವ್ಯಾಪಾರವನ್ನು ಬಂದ್ ಮಾಡಿದ್ದಾರೆ.

ಅಕ್ರಮವಾಗಿ 18 ಅಂಗಡಿಗಳನ್ನು ನಿರ್ಮಾಣ ಮಾಡಲಾಗಿದ್ದು, ಅವುಗಳನ್ನು ತೆರವು ಮಾಡಬೇಕು ಎಂದು ಪಟ್ಟು ಹಿಡಿದಿರುವ ವ್ಯಾಪಾರಿಗಳು ಒಂದೆಡೆಯಾದರೆ, ನಮ್ಮ ಹತ್ತಿರ ಅಂಗಡಿ ಲೈಸನ್ಸ್ ಇದೆ, ಇವು ಅಕ್ರಮ ಅಂಗಡಿಯಲ್ಲ , ಉದ್ದೇಶಪೂರ್ವಕವಾಗಿ ನಮ್ಮನ್ನು ತೆರವು ಮಾಡಲು ಹೀಗೆ ಮಾಡಲಾಗುತ್ತಿದೆ ಎಂಬುದು ಮತ್ತೊಂದು ಗುಂಪಿನ ಹೇಳಿಕೆ.[73 ಅಂಗಡಿಗಳಿಗೆ ಬೀಗ ಜಡಿದ ಬಿಬಿಎಂಪಿ]

ಇವೆಲ್ಲದರ ಮಧ್ಯೆ ನೀರಿಲ್ಲ, ಬೆಳಕಿಲ್ಲ, ಜನರಿಗೆ ಓಡಾಡಲು ಸರಿಯಾದ ಮಾರ್ಗವಿಲ್ಲ. ಪಾರ್ಕಿಂಗ್ ಜಾಗ ಮೂತ್ರಖಾನೆಯಾಗಿದೆ, ನಾವು ನೀಡುತ್ತಿರುವ ಬಾಡಿಗೆಯನ್ನು ಬಿಬಿಎಂಪಿ ಏನು ಮಾಡುತ್ತಿದೆ? ಎಂಬ ಪ್ರಶ್ನೆ ಒಂದೆಡೆ. ಹಾಗಾದರೆ ನಿಜಕ್ಕೂ ನಡೆದ ಘಟನಾವಳಿಗಳೇನು? ಇಲ್ಲಿದೆ ಚಿತ್ರಣ...

ಸೋಮವಾರ ರಾತ್ರಿ ಆಗಿದ್ದೇನು?

ಸೋಮವಾರ ರಾತ್ರಿ ಆಗಿದ್ದೇನು?

ಬಿಬಿಎಂಪಿ ಅಧಿಕಾರಿಗಳು ಮತ್ತು ಸಿಬ್ಬಂದಿ ಸೋಮವಾರ ಮಧ್ಯರಾತ್ರಿ ಕೃಷ್ಣ ರಾಜೇಂದ್ರ ಮಾರುಕಟ್ಟೆಯ ಮುಖ್ಯ ಕಟ್ಟಡದ ತಳಭಾಗದಲ್ಲಿನ ಅಂಗಡಿಯೊಂದರ ತೆರವಿಗೆ ಮುಂದಾಗಿದ್ದಾರೆ. ಇದನ್ನು ತಿಳಿದ ಅಂಗಡಿ ಮಾಲೀಕರು ಸ್ಥಳಕ್ಕೆ ಆಗಮಿಸಿದ್ದು ನಮ್ಮ ಬಳಿ ನ್ಯಾಯಾಲಯ ನೀಡಿರುವ ದಾಖಲೆಯಿದೆ. ಇದು ಅಕ್ರಮ ಅಂಗಡಿಯಲ್ಲ. ಕಳೆದ ಎಂಟು ತಿಂಗಳ ಹಿಂದೆ ಬಿಬಿಎಂಪಿಯ ಅನುಮತಿ ಪಡೆದೇ ನಿರ್ಮಿಸಿದ್ದೇವೆ ಎಂದು ತಿಳಿಸಿದ್ದಾರೆ. ಅಂಗಡಿ ತೆರವು ಕಾರ್ಯಾಚರಣೆಯನ್ನು ಅಲ್ಲಿಗೆ ಕೈ ಬಿಡಲಾಗಿದೆ.

ಬೆಳಗ್ಗೆ ಮಾರುಕಟ್ಟೆ ಬಂದ್

ಬೆಳಗ್ಗೆ ಮಾರುಕಟ್ಟೆ ಬಂದ್

ಅಕ್ರಮವಾಗಿ ನಿರ್ಮಿಸಿರುವ ಅಂಗಡಿ ತೆರವು ಮಾಡಬೇಕು, ಬಿಬಿಎಂಪಿ ಅಧಿಕಾರಿಗಳು ಲಂಚ ಪಡೆದು ಅಂಗಡಿ ನಿರ್ಮಾಣಕ್ಕೆ ಅವಕಾಶ ನೀಡುತ್ತಿದ್ದಾರೆ. ಅಲ್ಲದೇ ಇನ್ನು 30 ಅಂಗಡಿ ನಿರ್ಮಾಣಕ್ಕೆ ಅನುಮತಿ ನೀಡಲಾಗಿದೆ. ಇಲ್ಲಿನ ಪರಿಸ್ಥಿತಿಯ ಅರಿವು ಅವರಿಗಿಲ್ಲ ಎಂದು ವ್ಯಾಪಾರಿಗಳ ಗುಂಪು ಆರೋಪಿಸಿ ಅಂಗಡಿ ಮುಂಗಟ್ಟುಗಳನ್ನು ಸಂಪೂರ್ಣ ಬಂದ್ ಮಾಡಿದೆ.

ರಾಮಲಿಂಗಾ ರೆಡ್ಡಿ ಭೇಟಿ

ರಾಮಲಿಂಗಾ ರೆಡ್ಡಿ ಭೇಟಿ

ಬೆಂಗಳೂರು ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ ಮಂಗಳವಾರ ಬೆಳಗ್ಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗೊಂದಲವನ್ನು ಶೀಘ್ರ ಬಗೆಹರಿಸುವ ಭರವಸೆಯನ್ನು ನೀಡಿ ತೆರಳಿದ್ದಾರೆ. ಬಿಬಿಎಂಪಿ ಆಯುಕ್ತರಿಗೂ ಈ ಬಗ್ಗೆ ಮನವಿ ಸಲ್ಲಿಸಲಾಗಿದೆ.

ಪ್ರತಿಭಟನಾಕಾರರಿಗೆ ಕೋಡಿಹಳ್ಳಿ ಸಾಥ್

ಪ್ರತಿಭಟನಾಕಾರರಿಗೆ ಕೋಡಿಹಳ್ಳಿ ಸಾಥ್

ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಪ್ರತಿಭಟನಾ ನಿರತ ವ್ಯಾಪಾರಿಗಳಿಗೆ ಬೆಂಬಲ ನೀಡಿದ್ದಾರೆ. ಬಿಬಿಎಂಪಿ ಗೊಂದಲವನ್ನು ತಕ್ಷಣ ನಿವಾರಿಸಬೇಕು, ಮಾರುಕಟ್ಟೆಗೆ ಕುಡಿವ ನೀರು, ಬೆಳಕಿನ ವ್ಯವಸ್ಥೆ ಆಗಬೇಕು ಎಂದು ಆಗ್ರಹಿಸಿದ್ದಾರೆ. ಮಾರುಕಟ್ಟೆಗೆ ಭೇಟಿ ನೀಡಿದ ಅವರು ವ್ಯಾಪಾರಿಗಳೊಂದಿಗೆ ಸಮಾಲೋಚನೆ ನಡೆಸಿ ಬೇಡಿಕೆ ಈಡೇರುವವರೆಗೂ ಹೋರಾಟ ನಿಲ್ಲಲ್ಲ ಎಂದು ತಿಳಿಸಿದರು.

ಬಿಬಿಎಂಪಿ ವರೆಗೆ ಮೆರವಣಿಗೆ

ಬಿಬಿಎಂಪಿ ವರೆಗೆ ಮೆರವಣಿಗೆ

ಕೆಆರ್ ಮಾರುಕಟ್ಟೆಯಿಂದ ಹೊರಟ ಪ್ರತಿಭಟನಾಕಾರರ ಮೆರವಣಿಗೆ ಬಿಬಿಎಂಪಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿತು. ಮೆರವಣಿಗೆಯಲ್ಲಿ ಸುಮಾರು ಎರಡು ಸಾವಿರ ಅಂಗಡಿಗಳ ಮಾಲೀಕರು, ಬಾಡಿಗೆ ಪಡೆದವರು ಇದ್ದರು. ಮಹಿಳೆಯರೇ ಮುಂದಾಗಿ ಘೋಷಣೆ ಕೂಗುತ್ತಿದ್ದರು. ಮಾರುಕಟ್ಟೆ ವೃತ್ತದಲ್ಲಿ ಕೆಲ ಕಾಲ ಕುಳಿತು ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರನ್ನು ತಡೆಯಲು ಪೊಲೀಸರು ಹರಸಾಹಸ ಪಡಬೇಕಾಯಿತು.

ಬಿಡಿ ವ್ಯಾಪಾರಿಗಳ ಪರದಾಟ

ಬಿಡಿ ವ್ಯಾಪಾರಿಗಳ ಪರದಾಟ

ಬೆಂಗಳೂರಿನಾದ್ಯಂತ ಇರುವ ಬಿಡಿ ವ್ಯಾಪಾರಿಗಳಿಗೆ ಕೆಆರ್ ಮಾರಿಕಟ್ಟೆ ತಾಯಿ ಇದ್ದಂತೆ. ಇಲ್ಲಿಂದಲೇ ಹೂವು, ಹಣ್ಣುಗಳನ್ನು ತಂದು ಮಾರುವ ರಸ್ತೆ ಬದಿ ವ್ಯಾಪಾರಿಗಳಿಗೆ ಮಂಗಳವಾರದ ವಹಿವಾಟಿಗೆ ಸಾಮಗ್ರಿಗಳು ಸಿಗಲಿಲ್ಲ. ಇವರ(ವ್ಯಾಪಾರಿಗಳು-ಬಿಬಿಎಂಪಿ) ಗಲಾಟೆಯಲ್ಲಿ ನಮ್ಮ ಒಪ್ಪತ್ತಿನ ಊಟಕ್ಕೆ ತೊಂದರೆಯಾಯಿತು. ಹೆಚ್ಚಿನ ಬೆಲೆ ಕೊಟ್ಟು ಹೂವು ಹಣ್ಣು ಖರೀದಿಸಿ ತಂದಿದ್ದೇನೆ ಎನ್ನುತ್ತಾರೆ ಮಿನರ್ವ ಸರ್ಕಲ್ ಬಳಿಯ ಹಣ್ಣಿನ ವ್ಯಾಪಾರಿ ಲಕ್ಷ್ಮೀದೇವಮ್ಮ.

ಗ್ರಾಹಕರು-ಪುರೋಹಿತರಿಗೂ ಸಂಕಷ್ಟ

ಗ್ರಾಹಕರು-ಪುರೋಹಿತರಿಗೂ ಸಂಕಷ್ಟ

ಮಾರುಕಟ್ಟೆ ಬಂದ್ ಪರಿಣಾಮ ಗ್ರಾಹರು ಮತ್ತು ಪುರೋಹಿತರ ಮೇಲೂ ಆಗಿದೆ. ಪೂಜೆಗೆ ಹೂವು ಕೊಳ್ಳಲು ಬಂದವರಿಗೆ ಬಾಗಿಲು ಹಾಕಿದ ಅಂಗಡಿ ದರ್ಶನ. ಗ್ರಾಹಕರಿಗೆ ದುಬಾರಿ ಬೆಲೆ ಕೊಟ್ಟು ಖರೀದಿ ಮಾಡಿವ ಅನಿವಾರ್ಯ ಸೃಷ್ಟಿಯಾಗಿದೆ.

ಪೊಲೀಸ್ ಬಂದೋಬಸ್ತ್

ಪೊಲೀಸ್ ಬಂದೋಬಸ್ತ್

ಸೋಮವಾರ ಮಧ್ಯರಾತ್ರಿಯಿಂದಲೇ ಪೊಲೀಸರು ಸ್ಥಳದಲ್ಲಿ ಮೊಕ್ಕಾಂ ಹೀಡಿದ್ದಾರೆ. ಘಟನೆ ಹಲವಾರು ಮಜಲುಗಳನ್ನು ಪಡೆಯುವ ಸಂಭವವಿದ್ದು ಪೊಲೀಸ್ ಇಲಾಖೆ ಮತ್ತು ಬಿಬಿಎಂಪಿ ಬಹಳ ಸೂಕ್ಷಮವಾಗಿ ಪರಿಸ್ಥಿತಿಯನ್ನು ನಿಭಾಯಿಸಬೇಕಿದೆ.

ಹೋರಾಟ ನಿರಂತರ

ಹೋರಾಟ ನಿರಂತರ

ಈ ಬಗ್ಗೆ ಅನೇಕ ಸಾರಿ ಬಿಬಿಎಂಪಿಗೆ ಮನವಿ ಮಾಡಿದ್ದೇವು. ಆದರೆ ಸುಕ್ತ ಸ್ಪಂದನೆ ಸಿಕ್ಕಿಲ್ಲ. ಅಲ್ಲದೇ ಈಗ ಮತ್ತೆ ಹೊಸ ಅಂಗಡಿ ನಿರ್ಮಾಣಕ್ಕೆ ಒಪ್ಪಿಗೆ ನೀಡಲಾಗಿದೆ. ಇರುವವರಿಗೆ ಮೊದಲು ಮೂಲ ಸೌಕರ್ಯನೀಡಿ ಆಮೇಲೆ ಅನುಮತಿ ನೀಡಿ. ಅವ್ಯವಸ್ಥೆ ಬಗೆಹರಿಸುವ ಬದಲು ಬಿಬಿಎಂಪಿ ಅಧಿಕಾರಿಗಳು ಹಣ ಮಾಡಲು ಹೊರಟಿದ್ದಾರೆ ಎಂದು ವ್ಯಾಪಾರಿಗಳ ಸಂಘದ ದೇವರಾಜ್ ಗಂಭೀರ ಆರೋಪ ಮಾಡಿದ್ದಾರೆ.

ಕೂಲಿಗೇನು ಮಾಡೋದು?

ಕೂಲಿಗೇನು ಮಾಡೋದು?

ವ್ಯಾಪಾರಿಗಳೇನೋ ಬಂದ್ ಮಾಡಿಕೊಂಡು ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. ಆದರೆ ಮಧ್ಯಾಹ್ನದ ಊಟಕ್ಕೆ ನಾನೇನು ಮಾಡಲಿ? ಹಮಾಲಿ ಮಾಡಿ ಬರುತ್ತಿದ್ದ ನೂರಾರು ರೂಪಾಯಿಗೂ ಇವತ್ತು ಕತ್ತರಿ ಬಿತ್ತು ಎಂಬಂತೆ ಕೃಷ್ಣ ರಾಜೇಂದ್ರ ಮಾರುಕಟ್ಟೆಯ ಮೊದಲ ಮಹಡಿಯಲ್ಲಿ ಮಲಗಿರುವ ಅಜ್ಜ ಹೇಳಿದ್ದು ಯಾರ ಕಿವಿಗೂ ಬೀಳಲಿಲ್ಲ.

English summary
Bengaluru: Krishna Rajendra (KR) Market, which was set up in 1928, traders conducting bandh to draw the attention of Bruhat Bangalore Mahanagara Palike (BBMP) officials to the problems in the market, such as the lack of fire safety measures, illegal shops and lack of ventilation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X