ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿಗರಿಗೆ ತಟ್ಟಲಿದೆ ಆಸ್ತಿ ತೆರಿಗೆ ಹೆಚ್ಚಳದ ಬಿಸಿ

|
Google Oneindia Kannada News

ಬೆಂಗಳೂರು, ನ.26 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆಸ್ತಿ ತೆರಿಗೆ ಹೆಚ್ಚಳದ ಪ್ರಸ್ತಾವನೆಯನ್ನು ಸಿದ್ಧಪಡಿಸಿದೆ. ಪಾಲಿಕೆ ವ್ಯಾಪ್ತಿಯಲ್ಲಿ ಮುಂದಿನ ಹಣಕಾಸು ವರ್ಷದಿಂದ ಜಾರಿಗೆ ಬರುವಂತೆ ವಸತಿ ಆಸ್ತಿಗಳಿಗೆ ಶೇ.20 ಹಾಗೂ ವಸತಿಯೇತರ ಆಸ್ತಿಗಳಿಗೆ ಶೇ.25ರಷ್ಟು ತೆರಿಗೆ ಹೆಚ್ಚಳ ಮಾಡುವ ಪ್ರಸ್ತಾವನೆ ಸಿದ್ಧವಾಗಿದ್ದು, ಇಂದು ಪಾಲಿಕೆ ಸಭೆಯಲ್ಲಿ ಇದು ಮಂಡನೆಯಾಗಲಿದೆ.

ಬುಧವಾರ ನಡೆಯುವ ಪಾಲಿಕೆಯ ಕೌನ್ಸಿಲ್ ಸಭೆಯಲ್ಲಿ ಆಸ್ತಿ ತೆರಿಗೆ ಹೆಚ್ಚಳಕ್ಕೆ ಅನುಮೋದನೆ ದೊರಕಿದರೆ, 2015ರ ಏ.1ರಿಂದಲೇ ನೂತನ ದರ ಜಾರಿಗೆ ಬರಲಿದೆ. ಪಾಲಿಕೆಯಲ್ಲಿ ಕಳೆದ ಏಳು ವರ್ಷಗಳಿಂದ ಆಸ್ತಿ ತೆರಿಗೆ ಹೆಚ್ಚಳವಾಗಿಲ್ಲ. ಇದಕ್ಕೆ ಸರ್ಕಾರದ ಹಾಗೂ ಲೆಕ್ಕಪರಿಶೋಧನಾ ವರದಿಯಲ್ಲೂ ಆಕ್ಷೇಪ ವ್ಯಕ್ತವಾಗಿದ್ದು, ತೆರಿಗೆ ಹೆಚ್ಚಳದ ಪ್ರಸ್ತಾಪ ಸಿದ್ಧಪಡಿಸಲಾಗಿದೆ.

BBMP

ಕೆಎಂಸಿ ಕಾಯ್ದೆ 108 (ಎ) (16) ಅನ್ವಯ ಪ್ರತಿ ಮೂರು ವರ್ಷಕ್ಕೊಮ್ಮೆ ಕನಿಷ್ಠ ಶೇ.15ರಿಂದ ಗರಿಷ್ಠ ಶೇ.30ರಷ್ಟು ತೆರಿಗೆ ಪರಿಷ್ಕರಣೆ ಮಾಡಲು ಅವಕಾಶವಿದೆ. 2008ರಲ್ಲಿ ತೆರಿಗೆ ಪರಿಷ್ಕರಣೆಯಾಗಿತ್ತು. ನಂತರ 2011ರ ಏ.1ರಿಂದ ಜಾರಿಗೆ ಬರುವಂತೆ ದರ ಪರಿಷ್ಕರಣೆಯಾಗಬೇಕಿತ್ತು. ಆದರೆ, ಪಾಲಿಕೆ ದರ ಹೆಚ್ಚಳ ಮಾಡಿಲ್ಲ. [ತೆರಿಗೆ ಕಟ್ಟಲು ಮೇಯರ್ ಕೊಟ್ರು ಅಂತಿಮ ಗಡುವು]

2014ರ ಏ.1ರಿಂದ ಜಾರಿಗೆ ಬರುವಂತೆ ಆಸ್ತಿ ತೆರಿಗೆ ದರ ಪರಿಷ್ಕರಣೆಯಾಗಬೇಕಿತ್ತು. ಆದರೆ, 2014ರ ಜ.28ರಂದು ನಡೆದ ಪಾಲಿಕೆ ಸಭೆಯಲ್ಲಿ ಪ್ರಸ್ತಾವ ಕೈಬಿಡುವ ನಿರ್ಧಾರ ಕೈಗೊಳ್ಳಲಾಯಿತು. ಆದ್ದರಿಂದ ಪಾಲಿಕೆ ಏಳು ವರ್ಷಗಳಿಂದ ದರ ಪರಿಷ್ಕರಣೆ ಮಾಡಿಲ್ಲ, ಈ ಬಾರಿಯ ಸಭೆಯಲ್ಲಿ ಪ್ರಸ್ತಾವನೆಗೆ ಒಪ್ಪಿಗೆ ಸಿಗುವ ಸಾಧ್ಯತೆ ಇದೆ. [ಬಿಬಿಎಂಪಿ: ಆಸ್ತಿ ತೆರಿಗೆ ಪಾವತಿ ಮಾಡುವುದು ಹೇಗೆ?]

ಸರ್ಕಾರದ ಅಸಮಾಧಾನ : ಪಾಲಿಕೆ ಆರ್ಥಿಕ ಸ್ಥಿತಿ ಹದಗೆಟ್ಟು ಹಣಕಾಸು ಸಂಸ್ಥೆಗಳಿಂದ ಸಾಲ ಪಡೆಯಲು ಪ್ರತಿಷ್ಠಿತ ಕಟ್ಟಡಗಳನ್ನು ಅಡಮಾನವಿಡಬೇಕಾದ ಸ್ಥಿತಿ ನಿರ್ಮಾಣವಾಗಿದ್ದರೂ, ತೆರಿಗೆ ಪರಿಷ್ಕರಣೆ ಅವಧಿ ವಿಸ್ತರಿಸುವುದು ಸಮಂಜಸವಲ್ಲ ಎಂದು ನಗರಾಭಿವೃದ್ಧಿ ಇಲಾಖೆ ಪಾಲಿಕೆ ಆಯುಕ್ತರಿಗೆ ಪತ್ರ ಬರೆದಿದೆ. ಆದ್ದರಿಂದ ಇಂದಿನ ಕೌನ್ಸಿಲ್ ಸಭೆಯಲ್ಲಿ ಆಸ್ತಿ ತೆರಿಗೆ ಹೆಚ್ಚಳಕ್ಕೆ ಅನುಮೋದನೆ ದೊರೆಯಲಿದೆ ಎಂದು ನಿರೀಕ್ಷಿಸಲಾಗಿದೆ.

ಇಂದಿನ ಸಭೆಯಲ್ಲಿ ಆಸ್ತಿ ತೆರಿಗೆ ಹೆಚ್ಚಳಕ್ಕೆ ಒಪ್ಪಿಗೆ ದೊರೆತರೆ ಏ.1ರಿಂದ ಜಾರಿಗೆ ಬರುವಂತೆ ವಸತಿ ಆಸ್ತಿಗಳಿಗೆ ಶೇ.20 ಹಾಗೂ ವಸತಿಯೇತರ ಆಸ್ತಿಗಳಿಗೆ ಶೇ.25ರಷ್ಟು ತೆರಿಗೆ ಹೆಚ್ಚಳವಾಗಲಿದೆ. ದರ ಹೆಚ್ಚಳದಿಂದ ಪಾಲಿಕೆ ಬೊಕ್ಕಸಕ್ಕೆ ಸುಮಾರು 500 ಕೋಟಿ ರೂ. ಆದಾಯ ಸಂಗ್ರಹವಾಗಬಹುದು ಎಂದು ಅಂದಾಜಿಸಲಾಗಿದೆ.

English summary
Bruhat Bangalore Mahanagara Palike (BBMP) has proposed to increase the property tax rate for the financial year 2014-15. While property tax for residential buildings has been proposed to be increased by 20 per cent.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X