ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು, ಭಾರತದ ನೂತನ ಸ್ತನ ಕ್ಯಾನ್ಸರ್ ರಾಜಧಾನಿ!

By Prasad
|
Google Oneindia Kannada News

ಬೆಂಗಳೂರು, ಅ. 16 : ದೇಶದ ಐಟಿ ರಾಜಧಾನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಬೆಂಗಳೂರು, ಈಗ ಭಾರತದ ಸ್ತನ ಕ್ಯಾನ್ಸರ್ ರಾಜಧಾನಿ ಎಂಬ ಬಿರುದಿಗೆ ಪಾತ್ರವಾಗಿದೆ. ಬೆಂಗಳೂರಿನ ಜನರ ಬದಲಾಗುತ್ತಿರುವ ಜೀವನಶೈಲಿ, ಆಹಾರಶೈಲಿ ಸ್ತನ ಕ್ಯಾನ್ಸರ್ ರೋಗಿಗಳ ಸಂಖ್ಯೆಯನ್ನು ಪ್ರತಿವರ್ಷ ಹೆಚ್ಚಿಸುತ್ತಿದೆ ಎಂಬ ಆಘಾತಕಾರಿ ಸಂಗತಿ ನಗರದ ನಾಗರಿಕರಿಗೆ ಎಚ್ಚರಿಕೆಯ ಗಂಟೆಯಾಗಿದೆ.

ಪಾಪ್ಯುಲೇಷನ್ ಬೇಸ್ಡ್ ಕ್ಯಾನ್ಸರ್ ರಿಜಿಸ್ಟ್ರಿ (PBCR) 2013ರಲ್ಲಿ ಭಾರತದ ಪ್ರಮುಖ 11 ನಗರಗಳಲ್ಲಿ ನಡೆಸಿದ ಅಧ್ಯಯನದಿಂದ ಈ ವಿಷಯ ಬಹಿರಂಗವಾಗಿದೆ. ಒಂದು ಲಕ್ಷ ಜನರಲ್ಲಿ 36.6ರಷ್ಟು ಜನರು ಮಹಿಳೆಯರು ಸ್ತನ ರೋಗದಿಂದ ಬಳಲುತ್ತಿದ್ದಾರೆ. ಇನ್ನೂ ಆಘಾತಕಾರಿ ಸಂಗತಿಯೆಂದರೆ ಪುರುಷರು ಕೂಡ ಸ್ತನ ಕ್ಯಾನ್ಸರ್‌ಗೆ ಬಲಿಯಾಗುತ್ತಿರುವುದು!

ಪುಣೆಯಲ್ಲಿ ಅತಿ ಕಡಿಮೆ, ಅಂದರೆ ಲಕ್ಷದಲ್ಲಿ 23.3ರಷ್ಟು ಜನರು ಮಾತ್ರ ಸ್ತನ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ. ಬೆಂಗಳೂರಿನ ನಂತರ ತಿರುವನಂತಪುರಂ (35.1) ಮತ್ತು ಚೆನ್ನೈ (32.6) ಎರಡನೇ ಮತ್ತು ಮೂರನೇ ಸ್ಥಾನವನ್ನು ಆಕ್ರಮಿಸಿಕೊಂಡಿವೆ. ಜನಸಂಖ್ಯಾ ಆಧಾರಿತ ಕ್ಯಾನ್ಸರ್ ರಿಜಿಸ್ಟ್ರಿ ನಡೆಸಿದ ಅಧ್ಯಯನ ಏನು ಹೇಳುತ್ತದೆ, ವೈದ್ಯರು ಇದಕ್ಕೆ ಯಾವ್ಯಾವ ಕಾರಣಗಳನ್ನು ನೀಡಿದ್ದಾರೆ, ರೋಗ ಉಲ್ಬಣವಾಗಲು ಕಾರಣಗಳೇನು ಎಂಬುದನ್ನು ಮುಂದಿನ ಸ್ಲೈಡಿನಲ್ಲಿ ಓದಿರಿ.

ನಗರೀಕರಣದ ಪರಮಾವಧಿ

ನಗರೀಕರಣದ ಪರಮಾವಧಿ

ಬೆಂಗಳೂರಿನ ಎಚ್‌ಸಿಜಿ ಆನ್ಕಾಲಜಿ ಆಸ್ಪತ್ರೆಯ ವೈದ್ಯ ಡಾ. ಕೆ.ಎಸ್. ಗೋಪಿನಾಥ್ ಅವರ ಪ್ರಕಾರ, ಅತಿಯಾದ ನಗರೀಕರಣದಿಂದಾಗಿ ನಗರದ ಜನರ ಜೀವನಶೈಲಿ 180 ಡಿಗ್ರಿಯಷ್ಟು ತಿರುವುಮುರುವಾಗಿದೆ. ದಶಕದ ಹಿಂದೆ ಸ್ತನ ಕ್ಯಾನ್ಸರ್‌ಗೆ ಬಲಿಯಾಗುತ್ತಿದ್ದ ಮಹಿಳೆಯರ ವಯಸ್ಸು 45ರಿಂದ 55 ಇತ್ತು. ಈಗ ಅದು 35ರಿಂದ 45ಕ್ಕೆ ಇಳಿದಿದೆ. 18 ವರ್ಷ ವಯಸ್ಸಿನ ಯುವತಿಯರು ಕೂಡ ಸ್ತನ ಕ್ಯಾನ್ಸರ್‌ಗೆ ಬಲಿಯಾಗುತ್ತಿದ್ದಾರೆ.

ಸ್ತನ್ಯಪಾನದಿಂದ ಮಹಿಳೆಯರು ದೂರ

ಸ್ತನ್ಯಪಾನದಿಂದ ಮಹಿಳೆಯರು ದೂರ

ಸೌಂದರ್ಯದ ನೆಪವೊಡ್ಡಿ ಮಹಿಳೆಯರು ಮಕ್ಕಳಿಗೆ ಸ್ತನ್ಯಪಾನ ಮಾಡಿಸುವುದರಿಂದ ಹಿಂಜರಿಯುತ್ತಿದ್ದಾರೆ. ಅಲ್ಲದೆ, ಉದ್ಯೋಗದಲ್ಲಿ ಅತಿಯಾಗಿ ನಿರತರಾಗಿರುವ ಮಹಿಳೆಯರು ಮಕ್ಕಳಿಗೆ ಸ್ತನ್ಯಪಾನ ಮಾಡಿಸುವುದರಿಂದ ವಂಚಿತರಾಗುತ್ತಿದ್ದಾರೆ. ಮಕ್ಕಳು ಹುಟ್ಟಿದ ಒಂದು ವರ್ಷದವರೆಗೆ ನಿರಂತರವಾಗಿ ಹಾಲೂಡಿಸುವುದರಿಂದ ಕ್ಯಾನ್ಸರ್ ತಡೆಗಟ್ಟಬಹುದು ಎಂಬುದು ತಿಳಿದಿದ್ದರೂ ಮಹಿಳೆಯರು ಹಿಂಜರಿಯುತ್ತಿರುವುದು ಆತಂಕಕರ ಸಂಗತಿ.

ತಡ ಮದುವೆಯಿಂದಲೂ ಸ್ತನ ಕ್ಯಾನ್ಸರ್

ತಡ ಮದುವೆಯಿಂದಲೂ ಸ್ತನ ಕ್ಯಾನ್ಸರ್

ಈ ಅಧ್ಯಯನದ ಪ್ರಕಾರ, ಮಹಿಳೆಯರು ತಡವಾಗಿ ಮದುವೆಯಾಗುತ್ತಿರುವುದು ಕೂಡ ಸ್ತನ ಕ್ಯಾನ್ಸರಿಗೆ ಕಾರಣವಾಗುತ್ತಿದೆ. ಉದ್ಯೋಗ ನೆಪವೊಡ್ಡಿ ಮಹಿಳೆಯರು ತಡವಾಗಿ ಮದುವೆಯಾಗುತ್ತಿರುವುದು ನಗರಗಳಲ್ಲಿ ಜಾಸ್ತಿಯಾಗುತ್ತಿದೆ. ಇದು ಕೂಡ ನಗರೀಕರಣದ ಪ್ರಭಾವವೆ ಎಂಬುದು ಬಿಜಿಎಸ್ ಗ್ಲೋಬಲ್ ಆಸ್ಪತ್ರೆಯ ಡಾ. ಜಯಂತಿ ಅವರ ಖಚಿತ ಅಭಿಪ್ರಾಯ.

ಗರ್ಭನಿರೋಧಕಗಳ ಅತಿಯಾದ ಬಳಕೆ

ಗರ್ಭನಿರೋಧಕಗಳ ಅತಿಯಾದ ಬಳಕೆ

ಮದುವೆಯಾದ ಮೇಲೆ ಬೇಗನೆ ಮಕ್ಕಳಾಗಬಾರದು ಎಂದು ಮಹಿಳೆಯರು ಗರ್ಭನಿರೋಧಕಗಳನ್ನು ಅತಿಯಾಗಿ ಬಳಸುತ್ತಿರುವುದು ಕೂಡ ಸ್ತನ ಕ್ಯಾನ್ಸರ್ ರೋಗಕ್ಕೆ ದಾರಿ ಮಾಡಿಕೊಡುತ್ತಿದೆ. ಲಿವ್-ಇನ್-ರಿಲೇಶನ್‌ಶಿಪ್ ಇರುವವರು ಕೂಡ ಮಕ್ಕಳಾಗಬಾರದೆಂದು ಗರ್ಭನಿರೋಧಕಗಳನ್ನು ಬೇಕಾಬಿಟ್ಟಿ ಬಳಸುತ್ತಿದ್ದಾರೆ. ವೈದ್ಯರ ಪ್ರಕಾರ, ಈ ಗರ್ಭನಿರೋಧಕಗಳು ಆರೋಗ್ಯಕ್ಕೆ ಮಾರಕವಾಗಿವೆ.

ಮಕ್ಕಳ ನಿಯಂತ್ರಣ

ಮಕ್ಕಳ ನಿಯಂತ್ರಣ

ಮಕ್ಕಳಿಲ್ಲದೆ ಜೀವನ ನಡೆಸುವುದು ಸಾಧ್ಯ ಎಂಬ ಹಮ್ಮಿನಿಂದ ಹಲವಾರು ಮಹಿಳೆಯರು ಬಾಳುವೆ ನಡೆಸುತ್ತಿರುವುದರಿಂದಲೂ ಸ್ತನ ಕ್ಯಾನ್ಸರ್ ಉಲ್ಬಣವಾಗುತ್ತಿದೆ. ಜನಸಂಖ್ಯಾ ನಿಯಂತ್ರಣ ಇಂದಿನ ಜಮಾನಾದಲ್ಲಿ ಅಗತ್ಯವಿದ್ದರೂ ಮಕ್ಕಳ ನಿಯಂತ್ರಣಕ್ಕೆ ಹೆಚ್ಚಿನ ಒತ್ತು ನೀಡದೆ, ಕುಟುಂಬ ಯೋಜನೆಯನ್ನು ಬದಿಗಿಟ್ಟು ಕನಿಷ್ಠಪಕ್ಷ ಒಂದು ಮಗುವಾದರೂ ಇರಬೇಕು ಎಂಬುದು ವೈದ್ಯರ ಸಲಹೆಯಾಗಿದೆ.

ಬದಲಾಗುತ್ತಿರುವ ಆಹಾರಶೈಲಿ

ಬದಲಾಗುತ್ತಿರುವ ಆಹಾರಶೈಲಿ

ನಗರೀಕರಣದಿಂದಾಗಿ ಜನರ ಆಹಾರ ಸೇವಿಸುವ ಶೈಲಿಯೂ ಬದಲಾಗಿದೆ. ಹಾರ್ಮೋನುಗಳ ಉತ್ಪಾದನೆಯಲ್ಲಿ ಏರುಪೇರಾಗಿ ಸ್ತನ ಕ್ಯಾನ್ಸರಿಗೆ ಮಹಿಳೆಯರು ಬಲಿಯಾಗುತ್ತಿದ್ದಾರೆ. ಯುವತಿಯರ ಋತುಮತಿ ವಯಸ್ಸು ಕಡಿಮೆಯಾಗಿದೆ ಮತ್ತು ಮೆನೊಪಾಸ್ ವಯಸ್ಸು ಏರಿಕೆಯಾಗಿದೆ. ಸ್ತನ ಕ್ಯಾನ್ಸರ್ ಬರಲು ಇದೂ ಕೂಡ ಕಾರಣವಾಗಿದೆ. ಆಹಾರಶೈಲಿಯನ್ನು ಮಾತ್ರವಲ್ಲ ಜೀವನಶೈಲಿಯನ್ನು ಬದಲಿಸಿಕೊಳ್ಳಲೇಬೇಕಾದ ಪರಿಸ್ಥಿತಿ ಬಂದಿದೆ.

ಪುರುಷರಲ್ಲಿಯೂ ಸ್ತನ ಕ್ಯಾನ್ಸರ್

ಪುರುಷರಲ್ಲಿಯೂ ಸ್ತನ ಕ್ಯಾನ್ಸರ್

ಅಚ್ಚರಿಯ ಸಂಗತಿಯೆಂದರೆ, ಮಹಿಳೆಯರಲ್ಲಿ ಮಾತ್ರವಲ್ಲ ಇತ್ತೀಚಿನ ದಿನಗಳಲ್ಲಿ ಪುರುಷರಲ್ಲಿಯೂ ಸ್ತನ ಕ್ಯಾನ್ಸರ್ ಕಾಣಿಸಿಕೊಳ್ಳುತ್ತಿದೆ. ಇದಕ್ಕೆ ಕಾರಣ ಆರೋಗ್ಯದ ತಪಾಸಣೆಯ ಬಗ್ಗೆ ನಿರ್ಲಕ್ಷ್ಯ. ಯಾವುದೇ ರೀತಿಯ ಗಂಟುಬಂದರೆ ತಡ ಮಾಡದೆ ಪುರುಷರು ಕೂಡ ತಪಾಸಣೆ ಮಾಡಿಸಿಕೊಳ್ಳಬೇಕು. ಮೊದಲು ಶೇ.1ರಷ್ಟು ಮಾತ್ರವಿದ್ದ ಸ್ತನ ಕ್ಯಾನ್ಸರ್ ಇದ್ದ ಪುರುಷರ ಸಂಖ್ಯೆ ಈಗ ಶೇ.3ಕ್ಕೇರಿದೆ.

ಕಂಚುಕದ ದುರ್ಬಳಕೆ

ಕಂಚುಕದ ದುರ್ಬಳಕೆ

ಕಂಚುಕಗಳ ದುರ್ಬಳಕೆಯಿಂದಾಗಿ ಕೂಡ ಸ್ತನ ಕ್ಯಾನ್ಸರ್ ಬರುತ್ತಿದೆ ಎಂದು ಮತ್ತೊಂದು ಅಧ್ಯಯನ ವರದಿ ಮಾಡಿದೆ. ಕಂಚುಕಗಳನ್ನು ಬಿಗಿಯಾಗಿ ಕಟ್ಟುವುದರಿಂದ ರಕ್ತಸಂಚಲನ ಏರುಪೇರಾಗಿ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಇದರ ಕುರಿತು ಜಾಗೃತಿ ಮೂಡಿಸಲೆಂದು ಅ.14ರಂದು ವಿಶ್ವದಾದ್ಯಂತ 'ಕಂಚುಕ ರಹಿತ ದಿನ' ಆಚರಿಸಲಾಯಿತು.

ಇತರ ಕಾರಣಗಳಾವುವು?

ಇತರ ಕಾರಣಗಳಾವುವು?

ಮದ್ಯ ಮತ್ತು ಸಿಗರೇಟು ಸೇವನೆ ಕೂಡ ಸ್ತನ ಕ್ಯಾನ್ಸರ್ ಹಬ್ಬುವಂತೆ ಮಾಡುತ್ತಿದೆ. ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಪುರುಷರಿಗೆ ಸರಿಸಮನಾಗಿ ಮದ್ಯ ಮತ್ತು ಸಿಗರೇಟು ಸೇವನೆ ಮಾಡುತ್ತಿರುವುದು ಕಂಡುಬಂದಿದೆ. ಆನುವಂಶಿಕವಾಗಿ ಕೂಡ ಸ್ತನ ಕ್ಯಾನ್ಸರ್ ಬರುವ ಸಾಧ್ಯತೆಗಳಿರುತ್ತವೆ. ಮಹಿಳೆಯರು ಈಗಲೇ ಎಚ್ಚೆತ್ತುಕೊಂಡು ಮದ್ಯ ಮತ್ತು ಸಿಗರೇಟಿನಿಂದ ದೂರ ಉಳಿಯುವುದು ಉತ್ತಮ ಅಲ್ಲವೆ?

ನಿಯಮಿತ ಆರೋಗ್ಯ ತಪಾಸಣೆ ಅಗತ್ಯ

ನಿಯಮಿತ ಆರೋಗ್ಯ ತಪಾಸಣೆ ಅಗತ್ಯ

ಕುಟುಂಬದಲ್ಲಿ ಯಾವುದಾದರೂ ಹಿರಿಯರಿಗೆ ಸ್ತನ ಕ್ಯಾನ್ಸರ್ ಇದ್ದರೆ ಹತ್ತರಲ್ಲಿ ಒಬ್ಬರಿಗೆ ಸ್ತನ ಕ್ಯಾನ್ಸರ್ ಬರುವ ಸಾಧ್ಯತೆ ಇರುತ್ತದೆ. ಕುಟುಂಬದಲ್ಲಿ ಯಾರಿಗೂ ಸ್ತನ ಕ್ಯಾನ್ಸರ್ ಇಲ್ಲದಿದ್ದರೆ ಇಪ್ಪತ್ತರಲ್ಲಿ ಒಬ್ಬರಿಗೆ ಕ್ಯಾನ್ಸರ್ ಬರುವ ಸಾಧ್ಯತೆ ಇರುತ್ತದೆ. ಕೆಲ ತಿಂಗಳ ಹಿಂದೆ ಹಾಲಿವುಡ್ ನಟಿ ಏಂಜೆಲಿನಾ ಜೋಲಿ ಅವರು ತಮ್ಮ ತಾಯಿಗೆ ಸ್ತನ ಕ್ಯಾನ್ಸರ್ ಇದ್ದಿದ್ದರಿಂದ ಮುನ್ನೆಚ್ಚರಿಕೆಯಾಗಿ ಸ್ತನಗಳನ್ನೇ ತೆಗೆಸಿಕೊಂಡಿದ್ದರು. ಇದೇನೇ ಇರಲಿ, ನಿಯಮಿತವಾಗಿ ತಪಾಸಣೆ ಮಾಡಿಸಿಕೊಳ್ಳುವುದಕ್ಕೆ ಮಹಿಳೆಯರು ಹಿಂಜರಿಯಬಾರದು.

ಆರಂಭದಲ್ಲೇ ಗುರುತಿಸುವುದು ಅಗತ್ಯ

ಆರಂಭದಲ್ಲೇ ಗುರುತಿಸುವುದು ಅಗತ್ಯ

ಮಹಿಳೆಯರು ಮನೆಯಲ್ಲಿಯೇ ಆಗಾಗ ತಮ್ಮ ಸ್ತನಗಳಲ್ಲಿ ಗಂಟು ಇರುವುದನ್ನು ತಪಾಸಣೆ ಮಾಡಿಕೊಳ್ಳುತ್ತಿದ್ದರೆ ಆರಂಭದಲ್ಲಿಯೇ ಸ್ತನ ಕ್ಯಾನ್ಸರ್ ಗುರುತಿಸಿ ಚಿಕಿತ್ಸೆ ಪಡೆಯಲು ಸಾಧ್ಯ.

English summary
Bangalore is the new breast cancer capital of India, according to study done by Population Based Cancer Registry (PBCR). Doctors in Bangalore say, this has got to do with change in lifestyle, food habits, use of contraceptive, declining breastfeeding, late marriage etc.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X