ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆಮ್‌ ಆದ್ಮಿ ಪಕ್ಷದಿಂದ 'ಹಳೇ ಕಲ್ಲು, ಹೊಸ ಬಿಲ್ಲು' ಅಭಿಯಾನ

By Staff
|
Google Oneindia Kannada News

ಬೆಂಗಳೂರು, ನವೆಂಬರ್ 19 : ಉದ್ಯಾನ ನಗರಿ ಬೆಂಗಳೂರಿನಲ್ಲಿ ಎರಡು ವಾರಗಳಿಂದ ಮಳೆ ಸುರಿಯುತ್ತಿದ್ದು, ರಸ್ತೆಗಳಲ್ಲಿ ಗುಂಡಿಗಳು ಬಾಯ್ತೆರೆದು ನಿಂತಿವೆ. ಆಮ್ ಆದ್ಮಿ ಪಕ್ಷ ರಸ್ತೆಗಳ ಗುಂಡಿ ಮುಚ್ಚಲು ಬಿಬಿಎಂಪಿಗೆ ಹಲವು ಸಲಹೆಗಳನ್ನು ನೀಡಿದ್ದು, 'ಹಳೇ ಕಲ್ಲು, ಹೊಸ ಬಿಲ್ಲು' ಎಂಬ ಅಭಿಯಾನ ಆರಂಭಿಸಿದೆ.

ಬೆಂಗಳೂರು ನಗರ ಅವನತಿಯತ್ತ ಸಾಗುತ್ತಿದ್ದು, ತತಕ್ಷಣವಾಗಿ ಅವಶ್ಯಕ ಕ್ರಮಗಳನ್ನು ಕೈಗೊಳ್ಳಲು ಹಿಂದೇಟು ಹಾಕಿದರೆ, ಇಡೀ ನಗರವೇ ಕಳೆದು ಹೋಗುವುದು ಸತ್ಯ ಎಂದು ಆಪ್ ಆತಂಕ ವ್ಯಕ್ತಪಡಿಸಿದೆ. ಟ್ರಾಫಿಕ್, ಕಳಪೆ ರಸ್ತೆ, ಕಸದ ಹಾವಳಿ ಮುಂತಾದ ಸಮಸ್ಯೆಗಳು ಬೆಂಗಳೂರು ನಗರವನ್ನು ಬೆನ್ನು ಬಿಡದೆ ಕಾಡುತ್ತಿವೆ ಎಂದು ಆಪ್ ಹೇಳಿದೆ. [ಟೆಂಡರ್ ಶ್ಯೂರ್ ರಸ್ತೆಯ ವಿಶೇಷತೆಗಳು]

ಇತ್ತೀಚಿಗೆ ಆಡಳಿತಕ್ಕೆ ಬಂದ ಹೊಸ ಬಿಬಿಎಂಪಿ ಕೌನ್ಸಿಲ್‍ನಿಂದ ಸಮಸ್ಯೆಗೆ ಮುಕ್ತಿ ಸಿಗಬಹುದು ಎಂದು ಜನರಿಗೆ ನಂಬಿಕೆ ಇತ್ತು. ಆದರೆ, ಬಿಬಿಎಂಪಿ ಕೌನ್ಸಿಲ್‍ಗೂ ಹಿಂದಿದ್ದ ಕೌನ್ಸಿಲ್‍ಗೂ ಯಾವುದೇ ವ್ಯತ್ಯಾಸವಿಲ್ಲದಂತೆ ಅನ್ನಿಸುತ್ತಿದೆ. ಅಗತ್ಯವಿಲ್ಲದ ಕಾಮಗಾರಿಗಳ ಮೇಲೆ ತೆರಿಗೆ ಹಣ ಪೋಲು ಮಾಡುವುದು ಮುಂದುವರೆದಿದೆ ಎಂದು ಪಕ್ಷ ಆರೋಪಿಸಿದೆ. [2015ರ ಬಿಬಿಎಂಪಿ ಚುನಾವಣೆ ಫಲಿತಾಂಶ]

ಬಿಬಿಎಂಪಿ ಚುನಾವಣೆಗೆ ಮುನ್ನ 300 ಕೋಟಿ ರೂಪಾಯಿ ತೆರಿಗೆ ಹಣವನ್ನು ರಸ್ತೆ ಕಾಮಗಾರಿಗಳಿಗೆ ವೆಚ್ಚ ಮಾಡಲಾಗಿತ್ತು. ಆದರೆ, ಕೆಲ ತಿಂಗಳ ಸಮಯದಲ್ಲೇ ರಸ್ತೆಗಳು ಮತ್ತೆ ಗುಂಡಿಬಿದ್ದಿವೆ. ಈ ಬಗ್ಗೆ ಸಮಗ್ರವಾದ ತನಿಖೆಯಾಗಬೇಕು ಎಂದು ಪಕ್ಷ ಒತ್ತಾಯಿಸಿದೆ. ಬೆಂಗಳೂರಿನ ರಸ್ತೆಗಳ ಗುಂಡಿ ಸಮಸ್ಯೆ ಪರಿಹಾರಕ್ಕೆ ಆಪ್ ಕೆಲವು ಸಲಹೆಗಳನ್ನು ನೀಡಿದೆ.[ಸುಲ್ತಾನ್ ಪಾಳ್ಯ ರಸ್ತೆಯಲ್ಲಿ ಈಜಾಡಿದ ಮೊಸಳೆ!]

ಬಿಬಿಎಂಪಿಯೇ ನಿರ್ವಹಣೆ ಮಾಡುವುದು

ಬಿಬಿಎಂಪಿಯೇ ನಿರ್ವಹಣೆ ಮಾಡುವುದು

ಬಿಬಿಎಂಪಿ ಸ್ವಂತವಾಗಿ ಬೆಂಗಳೂರಿನ ಎಲ್ಲಾ ರಸ್ತೆಗುಂಡಿಗಳನ್ನು ಮುಚ್ಚುವ ಕಾಮಗಾರಿಯನ್ನು ತಾನೇ ನಿರ್ವಹಣೆ ಮಾಡುವುದು, ಇಲ್ಲವಾದಲ್ಲಿ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದಂತಹ ಸಂಸ್ಥೆಗೆ ಕಾಮಗಾರಿ ಉಸ್ತುವಾರಿ ಹಸ್ತಾಂತರಿಸುವುದು.

ಪ್ರಮಾಣ ಪತ್ರ ಪಡೆಯಿರಿ

ಪ್ರಮಾಣ ಪತ್ರ ಪಡೆಯಿರಿ

ಗುತ್ತಿಗೆದಾರರು ಗುಂಡಿಮುಚ್ಚಿದ ಕೂಡಲೇ ಸ್ಥಳೀಯ ವಾರ್ಡ್ ಇಂಜಿನಿಯರ್ ಹಾಗೂ ಸಂಚಾರಿ ಪೊಲೀಸರ ಮೂಲಕ ಪ್ರಮಾಣಪತ್ರ ಪಡೆಯಬೇಕು. ಈ ರೀತಿ ಪ್ರಮಾಣ ಪತ್ರ ಪಡೆದ ಗುತ್ತಿಗೆದಾರರ ಬಿಲ್ ತಕ್ಷಣ ಪಾವತಿಯಾಗುವಂತೆ ಮಾಡಬೇಕು. ಇದರಿಂದ ರಸ್ತೆ ದುರಸ್ತಿಗೆ ಪದೇ-ಪದೇ ಹಣ ಖರ್ಚು ಮಾಡುವುದು ತಪ್ಪಲಿದೆ.

ಅಕ್ರಮ ನಡೆದಲ್ಲಿ ಕ್ರಮ ಕೈಗೊಳ್ಳಿ

ಅಕ್ರಮ ನಡೆದಲ್ಲಿ ಕ್ರಮ ಕೈಗೊಳ್ಳಿ

ಬಿಬಿಎಂಪಿ ಚುನಾವಣೆ ಪೂರ್ವದಲ್ಲಿ ನಡೆದಿದ್ದ 300 ಕೋಟಿ ಮೊತ್ತದ ದುರಸ್ತಿ ಕಾರ್ಯದ ಸಂಪೂರ್ಣ ತನಿಖೆಯಾಗಬೇಕು. ಅಕ್ರಮ ನಡೆದ ಜಾಗದಲ್ಲಿ ಸಂಬಂಧಿತ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ವಿರುದ್ಧ ಕ್ರಮಗಳನ್ನು ಕೈಗೊಳ್ಳಬೇಕು.

ಯೋಗ್ಯವಾದ ರಸ್ತೆ ನಿರ್ಮಾಣ

ಯೋಗ್ಯವಾದ ರಸ್ತೆ ನಿರ್ಮಾಣ

ಅಂತರಾಷ್ಟ್ರೀಯ ಮಾದರಿಯಲ್ಲಿ ಧೀರ್ಘಾವಧಿ ವೈಜ್ಞಾನಿಕ ವಿಧಾನವನ್ನು ರಸ್ತೆ ಪುನರ್ ನಿರ್ಮಾಣ ಯೋಜನೆಗಳಲ್ಲಿ ಬಳಸಬೇಕು. ಈ ರಸ್ತೆಗಳು ಕನಿಷ್ಟ 10 ವರ್ಷಗಳ ಕಾಲ ಬಳಕೆಗೆ ಯೋಗ್ಯವಾಗಿರಬೇಕು, ನಂತರದಲ್ಲಿ ಅಚ್ಚುಕಟ್ಟಾದ ನಿರ್ವಹಣೆ ಮಾಡಿ ಅದರ ಬಾಳಿಕೆಯನ್ನು 5+5 ವರ್ಷಗಳ ಕಾಲ ಹೆಚ್ಚಿಸಬೇಕು.

ದೂರದೃಷ್ಟಿಯ ಯೋಜನೆಯನ್ನು ರೂಪಿಸಿ

ದೂರದೃಷ್ಟಿಯ ಯೋಜನೆಯನ್ನು ರೂಪಿಸಿ

ಬೆಂಗಳೂರು ನಗರದ ಬೆಳವಣಿಗೆ ಹಾಗೂ ಚಲನಶೀಲತೆಯನ್ನು ಗಮನಿಸಿ ಅಗತ್ಯವಾದ ದೂರದೃಷ್ಠಿಯ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕು. ಟ್ರಾಫಿಕ್ ಒತ್ತಡ, ವಾಹನ ಸಾಂದ್ರತೆ, ಪಾದಚಾರಿಗಳ, ಸೈಕಲ್ ಸವಾರರ ಹಾಗೂ ಸಾರ್ವಜನಿಕ ವಾಹನ ಸೇವೆಗಳ ಅಗತ್ಯತೆ ಮನಗಂಡು ಅವುಗಳ ಆಧಾರದ ಮೇಲೆ ಯೋಜನೆಗಳನ್ನು ರೂಪಿಸಬೇಕು.

ಗುತ್ತಿಗೆಗಳು ಪಾರದರ್ಶಕವಾಗಿರಲಿ

ಗುತ್ತಿಗೆಗಳು ಪಾರದರ್ಶಕವಾಗಿರಲಿ

ರಸ್ತೆ ಕೆಲಸ ನೀಡುವ ಗುತ್ತಿಗೆಗಳು ಪಾರದರ್ಶಕವಾಗಿರಬೇಕು. ಸ್ಥಳೀಯ ಜನರ ಸೋಷಿಯಲ್ ಆಡಿಟಿಂಗ್‌ಗೆ ಒಳಪಡುವಂತಿರಬೇಕು. ಹೊಸ ರಸ್ತೆ ನಿರ್ಮಾಣ ಕಾಮಗಾರಿಗಳಿಗೆಲ್ಲಾ ಕಾಲಮಿತಿ ರಚಿಸಿ, ಅದನ್ನು ಮೀರಿದರೆ ದಂಡ ವಿಧಿಸುವ ಕ್ರಮ ಜಾರಿಗೆ ಬರಬೇಕು.

ಹೋರಾಟ ಮುಂದುವರೆಯಲಿದೆ

ಹೋರಾಟ ಮುಂದುವರೆಯಲಿದೆ

ರಸ್ತೆಗಳ ದುರಸ್ತಿ ಬಗ್ಗೆ ಸ್ಥಳೀಯ ಕೌನ್ಸಿಲ್ ಹಾಗೂ ರಾಜ್ಯ ಸರ್ಕಾರ ಪ್ರಾಮಾಣಿಕ ಶ್ರಮ ಹಾಕದಿದ್ದಲ್ಲಿ, ಹಳೇ ಕಲ್ಲು, ಹೊಸ ಬಿಲ್ಲು ಅಡಿಬರಹದಲ್ಲಿ ಅಭಿಯಾನ ಮುಂದುವರೆಸಿ ಸಾರ್ವಜನಿಕರಲ್ಲೂ ಇದರ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಪಕ್ಷ ಹಮ್ಮಿಕೊಳ್ಳಲಿದೆ ಎಂದು ಆಪ್ ಎಚ್ಚರಿಕೆ ನೀಡಿದೆ.

English summary
Bengaluru city facing traffic, poor roads, garbage issue, polluted lakes and other problems. Aam Admi Party demands for solve this issues. Otherwise AAP will create public awareness among citizens.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X