ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪ್ರಯಾಣದರ ಇಳಿಸಲು ಆಪ್ ಪಕ್ಷದ ಸಹಿ ಅಭಿಯಾನ

By Prasad
|
Google Oneindia Kannada News

ಬೆಂಗಳೂರು, ಡಿ. 5 : ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಇಳಿಯುತ್ತಿರುವುದರಿಂದ ಡೀಸೆಲ್ ಬೆಲೆ ಇಳಿಕೆಯಾಗಿದ್ದರೂ ಪ್ರಯಾಣ ದರವನ್ನು ಸರಕಾರ ಏಕೆ ಇಳಿಸಿಲ್ಲ ಎಂಬುದು ಆಮ್ ಆದ್ಮಿ ಪಕ್ಷದ ಪ್ರಶ್ನೆ ಮಾತ್ರವಲ್ಲ ಇಡೀ ಕರ್ನಾಟಕದ ಜನತೆಯ ಪ್ರಶ್ನೆಯೂ ಆಗಿದೆ. ಈ ನಿಟ್ಟಿನಲ್ಲಿ ಬೆಲೆ ಇಳಿಸಲೇಬೇಕೆಂದು ಆಪ್ ಸಹಿ ಅಭಿಯಾನ ಆರಂಭಿಸಿದ್ದು, ಬೆಲೆ ಇಳಿಕೆಗೆ ಆಗ್ರಹಿಸಿ ಸಹಕಾರಕ್ಕೆ ಮನವಿ ಸಲ್ಲಿಸಲಿದೆ. ಈ ಕುರಿತು ಆಪ್ ಬಿಡುಗಡೆ ಮಾಡಿರುವ ಪತ್ರಿಕಾ ಹೇಳಿಕೆ ಇಲ್ಲಿದೆ.

ಇತ್ತೀಚಿನ ದಿನಗಳಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಇಳಿಕೆಯಾಗುತ್ತಲೇ ಬರುತ್ತಿದೆ. ಕಳೆದ ಆರೇಳು ತಿಂಗಳಿನಲ್ಲಿ ಇದು ಶೇ.40 ಕ್ಕಿಂತ ಹೆಚ್ಚು ಇಳಿದಿದ್ದು ಈಗ ಒಂದು ಬ್ಯಾರಲ್ ಕಚ್ಚಾ ತೈಲದ ಬೆಲೆ 66 ಡಾಲರ್ ಆಸುಪಾಸಿನಲ್ಲಿದೆ. ತತ್ಪರಿಣಾಮವಾಗಿ ದೇಶದಲ್ಲಿಯ ಪೆಟ್ರೋಲ್ ಮತ್ತು ಡೀಸಲ್ ಬೆಲೆಗಳಲ್ಲಿಯೂ ಗಣನೀಯ ಇಳಿಕೆಯಾಗಿದೆ ಮತ್ತು ಇದು ಇನ್ನಷ್ಟು ಇಳಿಯುವ ಎಲ್ಲಾ ಲಕ್ಷಣಗಳಿವೆ. [3 ಲಕ್ಷ ರು. ಇಟ್ಟು ಕೇಜ್ರಿವಾಲ್ ಜೊತೆ ಊಟ ಮಾಡಿ!]

AAP Karnataka demands price reduction

ಡೀಸಲ್ ಬೆಲೆ ಏರಿಕೆಯ ಕುಂಟುನೆಪವನ್ನು ಮುಂದಿಟ್ಟುಕೊಂಡು ಕಳೆದ ಎರಡು ವರ್ಷಗಳಲ್ಲಿ ರಾಜ್ಯದಲ್ಲಿ ಆಡಳಿತ ನಡೆಸಿದ ಬಿಜೆಪಿ ಮತ್ತು ಕಾಂಗ್ರೆಸ್ ಸರ್ಕಾರಗಳು ಕೆ‌ಎಸ್‍ಆರ್‌ಟಿಸಿ ಮತ್ತು ಬಿಎಮ್‌ಟಿಸಿ ಬಸ್ಸಿನ ಪ್ರಯಾಣ ದರಗಳನ್ನು ಏರಿಸುತ್ತ ಬಂದಿವೆ. ಈಗ ಡೀಸಲ್ ಬೆಲೆ ಗಣನೀಯವಾಗಿ ಕಡಿತವಾಗಿದ್ದರೂ ಏರಿಸಿದ್ದ ಟಿಕೆಟ್ ದರವನ್ನು ಇಳಿಸಿ, ಬೆಲೆಕಡಿತದ ಲಾಭವನ್ನು ಪ್ರಯಾಣಿಕರಿಗೆ ವರ್ಗಾಯಿಸದೆ ರಾಜ್ಯ ಸರ್ಕಾರ ಪ್ರಯಾಣಿಕರನ್ನು ಸುಲಿಯುತ್ತಿದೆ.

ಈ ಹಿನ್ನೆಲೆಯಲ್ಲಿ ಕಳೆದ ಒಂದು ತಿಂಗಳಿನಿಂದ ಆಮ್ ಆದ್ಮಿ ಪಕ್ಷವು ಬಸ್ ಪ್ರಯಾಣ ದರವನ್ನು ಇಳಿಸಲು ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತಿದೆ. ಬಿಎಮ್‍ಟಿಸಿ ಕಚೇರಿಯ ಬಳಿ ಎರಡು ದಿನ ಪ್ರತಿಭಟನೆಯನ್ನೂ ನಡೆಸಿ ನಮ್ಮ ಕಾರ್ಯಕರ್ತರು ಒಮ್ಮೆ ಬಂಧನಕ್ಕೂ ಒಳಗಾಗಿದ್ದರು. ಅದೇ ಸಮಯದಲ್ಲಿ ಸಾರಿಗೆ ಸಚಿವರಿಗೆ ಮತ್ತು ಬಿಎಮ್‌ಟಿಸಿ ಮುಖ್ಯಸ್ಥರಿಗೆ ಪತ್ರವನ್ನೂ ಬರೆದು, "ಸಾರ್ವಜನಿಕ ಸಾರಿಗೆ ಸಂಸ್ಥೆ ಇರುವುದು ಕೇವಲ ಲಾಭ ಮಾಡುವ ಉದ್ದೇಶಕ್ಕೆ ಅಲ್ಲ, ಇಡೀ ದೇಶದಲ್ಲಿಯೇ ಅತಿ ದುಬಾರಿ ಪ್ರಯಾಣ ದರ ರಾಜ್ಯದಲ್ಲಿದೆ, ಇಲ್ಲಿಯ ಸಾರಿಗೆ ಸಂಸ್ಥೆಗಳಲ್ಲಿಯ ಅದಕ್ಷತೆ ಮತ್ತು ಭ್ರಷ್ಟಾಚಾರದ ಕಾರಣದಿಂದಾಗಿ ಡೀಸಲ್ ಬೆಲೆ ಏರಿಕೆಯ ನೆಪ ಇಟ್ಟುಕೊಂಡು ನೀವು ದರ ಹೆಚ್ಚಿಸಿದ್ದೀರಿ, ಈಗ ಡೀಸಲ್ ಬೆಲೆ ಕಮ್ಮಿ ಆಗಿರುವ ಹಿನ್ನೆಲೆಯಲ್ಲಿ ಕೂಡಲೆ ಪ್ರಯಾಣ ದರ ಕಮ್ಮಿ ಮಾಡಿ ಈಗ ಮಾಡುತ್ತಿರುವ ಪ್ರಯಾಣಿಕರ ಸುಲಿಗೆಯನ್ನು ನಿಲ್ಲಿಸಬೇಕು" ಎಂದು ಕೋರಿದ್ದೆವು.

ಆದರೆ, ಇಲ್ಲಿಯ ತನಕ ರಾಜ್ಯ ಸರ್ಕಾರ ನಮ್ಮ ನ್ಯಾಯಯುತ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ. ಈ ಮಧ್ಯೆ ನಮ್ಮ ಪಕ್ಷದ ನೂರಾರು ಕಾರ್ಯಕರ್ತರು ಬಸ್ ಪ್ರಯಾಣ ದರ ಇಳಿಕೆಗೆ ಒತ್ತಾಯಿಸಿ ಪ್ರಯಾಣಿಕರಿಂದ ಸಹಿ-ಸಂಗ್ರಹ ಮಾಡುವ ಅಭಿಯಾನದಲ್ಲಿ ತೊಡಗಿಸಿಕೊಂಡು ಹತ್ತು ಸಾವಿರಕ್ಕೂ ಹೆಚ್ಚು ಪ್ರಯಾಣಿಕರಿಂದ ಈಗ ಸಹಿ ಸಂಗ್ರಹಿಸಿದ್ದಾರೆ. ಇದನ್ನು ನಾವು ಈಗ ಸಾರಿಗೆ ಸಚಿವರಿಗೆ ತಲುಪಿಸಲಿದ್ದು, ಸಾವಿರಾರು ಜನರ ಈ ಬೇಡಿಕೆಗೆ ಸ್ಪಂದಿಸಿ ಈ ಕೂಡಲೆ ಪ್ರಯಾಣ ದರ ಇಳಿಕೆಗೆ ಮುಂದಾಗಬೇಕು ಎಂದು ಆಗ್ರಹಿಸುತ್ತಿದ್ದೇವೆ. ಈ ಮೂಲಕ ಬೆಲೆ ಏರಿಕೆಯಿಂದ ತತ್ತರಿಸುತ್ತಿರುವ ಮಧ್ಯಮ ಮತ್ತು ಕೆಳ ಮಧ್ಯಮವರ್ಗದವರ ಹಿತ ಕಾಯಬೇಕೆಂದು ಆಮ್ ಆದ್ಮಿ ಪಕ್ಷ ಒತ್ತಾಯಿಸುತ್ತದೆ.

English summary
Since crude oil price is on the slide and Diesel price is also reduced, Aam Admi Party Karnataka is demanding reduction of ticket price in KSRTC and BMTC. People of Karnataka are also demanding the same. Will govt listen?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X