ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆರೆ ಒತ್ತುವರಿ ತೆರವಿಗೆ ಎಎಪಿ ಸ್ವಾಗತ, ಆದರೆ...

By Mahesh
|
Google Oneindia Kannada News

ಬೆಂಗಳೂರು, ಏ.17: ನಗರದಲ್ಲಿ ಒತ್ತುವರಿಯಾಗಿರುವ ಸರ್ಕಾರಿ ಜಮೀನುಗಳನ್ನು, ಕೆರೆಗಳನ್ನು ಕಳೆದ ಒಂದು ವಾರದಿಂದ ನ್ಯಾಯಾಲಯದ ನಿರ್ದೇಶನದಂತೆ ತೆರವುಗೊಳಿಸಲು ಮುಂದಾಗಿರುವ ಸರ್ಕಾರದ ಕ್ರಮವನ್ನು ಆಮ್ ಆದ್ಮಿ ಪಕ್ಷ ಸ್ವಾಗತಿಸುತ್ತದೆ.

ತನ್ನ ಜವಾಬ್ದಾರಿಯನ್ನು ಕಳೆದ ಹತ್ತಾರು ವರ್ಷಗಳಿಂದ ಮರೆತು, ಅಕ್ರಮಗಳಿಗೆ ಪ್ರೋತ್ಸಾಹ ಕೊಡುತ್ತ ಬಂದಿದ್ದ ಜಿಲ್ಲಾಡಳಿತ, ಈಗ ನ್ಯಾಯಾಲಯ ನಿಂದನೆ ಪ್ರಕರಣಕ್ಕೆ ಅಂಜಿಯಾದರೂ ಇಂತಹ ದಿಟ್ಟ ಕ್ರಮ ಕೈಗೊಳ್ಳಲು ಮುಂದಾಗಿರುವುದು ಅಭಿನಂದನೀಯ.

ಆರು ತಿಂಗಳ ಹಿಂದೆ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿಯವರ ನೇತೃತ್ವದಲ್ಲಿ ಭೂಕಬಳಿಕೆ ವಿರುದ್ಧ ನಡೆದ ಸತ್ಯಾಗ್ರಹದಲ್ಲಿ ಆಮ್ ಆದ್ಮಿ ಪಕ್ಷವೂ ಪಾಲ್ಗೊಂಡಿತ್ತು.

ವಿಶೇಷ ನ್ಯಾಯಾಲಯ ಸ್ಥಾಪನೆಗೆ ಆಗ್ರಹ: ಆಗ ನಕಲಿ ದಾಖಲೆ ಸೃಷ್ಟಿಸಿ ಬೆಂಗಳೂರು ನಗರ ಒಂದರಲ್ಲೇ 22000 ಎಕರೆಗೂ ಮೀರಿದ ಸರ್ಕಾರಿ ಜಮೀನು ಕಳ್ಳತನ ಆಗಿರುವುದರ ಬಗ್ಗೆ ಕ್ರಮ ಕೈಗೊಳ್ಳಲು ಮತ್ತು ಆ ಪ್ರಕರಣಗಳ ವಿಲೇವಾರಿಗೆ ವಿಶೇಷ ನ್ಯಾಯಾಲಯಗಳ ಸ್ಥಾಪನೆಗೆ ಸರ್ಕಾರವನ್ನು ಒತ್ತಾಯಿಸಲಾಗಿತ್ತು. [ಸಾರಕ್ಕಿ ಕೆರೆ ತೆರವು: ದಿಢೀರ್ ಕುಸಿದು ಬಿದ್ದ ಕಟ್ಟಡ]

Aam Aadmi Party Bengaluru welcomes demolition drive Sarakki Lake

ಆಗ ಆ ಎಲ್ಲಾ ಬೇಡಿಕೆಗಳಿಗೆ ಒಪ್ಪಿಕೊಂಡಿದ್ದ ಸರ್ಕಾರ ಇಲ್ಲಿಯ ತನಕ ಶಾಸನಬದ್ಧ ಕ್ರಮಕ್ಕೆ ಮುಂದಾಗಿಲ್ಲ. ಸಿದ್ಧರಾಮಯ್ಯನವರ ನೇತೃತ್ವದ ಸರ್ಕಾರದ ಈ ಬೇಜವಾಬ್ದಾರಿ ನಡವಳಿಕೆಯನ್ನು ಪಕ್ಷ ತೀವ್ರವಾಗಿ ಖಂಡಿಸುತ್ತದೆ.

ಮುಗ್ಧರ ಗತಿ ಏನು?: ಈಗ ಸಾರಕ್ಕಿ ಕೆರೆಯಲ್ಲಿ ನಡೆಯುತ್ತಿರುವುದು ಒತ್ತುವರಿ ತೆರವು ಕಾರ್ಯಾಚರಣೆ. ಆದರೆ ಇದೇ ಸ್ಥಳದಲ್ಲಿ ಭೂಗಳ್ಳರು ಅಮಾಯಕ ಜನರಿಗೆ ಸರ್ಕಾರಿ ಜಮೀನನ್ನೇ ಮಾರಿರುವುದು ಕಂಡುಬಂದಿದ್ದು, ಒಂದಷ್ಟು ಜನ ಮುಗ್ಧರು ಅಲ್ಲಿ ಮನೆಗಳನ್ನೂ ಕಟ್ಟಿಕೊಂಡು ವಾಸಮಾಡುತ್ತಿದ್ದರು.

ಈ ಇಡೀ ಪಿತೂರಿಯಲ್ಲಿ ಸರ್ಕಾರದ ಕಂದಾಯ ಅಧಿಕಾರಿಗಳು, ಬಿಬಿಎಂಪಿ ಅಧಿಕಾರಿಗಳು, ಕೆಲವು ಬಲಾಢ್ಯ ರಾಜಕಾರಣಿಗಳು, ಮತ್ತು ಕ್ರಿಮಿನಲ್ ಹಿನ್ನೆಲೆಯ ಭೂಗಳ್ಳರು ಭಾಗಿಯಾಗಿದ್ದಾರೆ. ಇವರ ವ್ಯವಸ್ಥಿಯ ಪಿತೂರಿಗೆ ಬಲಿಯಾಗಿರುವುದು ಮಾತ್ರ ಅಮಾಯಕ ಬಡಜನತೆ.

ಹಾಗಾಗಿ ಈ ಕೂಡಲೆ ಜಿಲ್ಲಾಡಳಿತ ಈ ಸದರಿ ಕ್ರಿಮಿನಲ್‌ಗಳ ವಿರುದ್ಧ ಕಾರ್ಯಾಚರಣೆ ನಡೆಸಿ, ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡು, ಅವರಿಂದ ಅನ್ಯಾಯಕ್ಕೆ ಒಳಗಾಗಿರುವ ಅಮಾಯಕರಿಗೆ ಪರಿಹಾರ ಒದಗಿಸಬೇಕೆಂದು ಆಮ್ ಆದ್ಮಿ ಪಕ್ಷ ಒತ್ತಾಯಿಸುತ್ತದೆ.

ಅಪರಾಧಿಗಳಿಗೆ ಶಿಕ್ಷೆಯಾಗಲಿ: ಒತ್ತುವರಿ ತೆರವು ಮಾಡುವುದು ಸರ್ಕಾರಕ್ಕೆ ಇದ್ದದ್ದರಲ್ಲಿ ಸುಲಭವಾದ ಕೆಲಸ. ಆದರೆ ಭೂಗಳ್ಳರು ಕದ್ದಿರುವ ಜಮೀನನ್ನು ಮರುವಶಪಡಿಸಿಕೊಳ್ಳುವುದು ಮತ್ತು ಅಕ್ರಮ ಎಸಗಿರುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡುವುದೇ ನಿಜವಾದ ಅಗ್ನಿಪರೀಕ್ಷೆ.

ಒತ್ತುವರಿ ಜಮೀನುಗಳನ್ನು ತೆರವುಗೊಳಿಸುತ್ತಲೇ, ವಿಶೇಷ ನ್ಯಾಯಾಲಯ ಸ್ಥಾಪನೆಗೆ ಸರ್ಕಾರ ಈ ಕೂಡಲೆ ಮುಂದಾಗಬೇಕು ಮತ್ತು ಭ್ರಷ್ಟ, ಕ್ರಿಮಿನಲ್ ಕೆಲಸ ಮಾಡಿರುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಿ, ಅಪರಾಧಿಗಳಿಗೆ ಶಿಕ್ಷೆ ಆಗುವಂತೆ ಮಾಡಬೇಕಿದೆ.

ಸರ್ಕಾರ ಅದನ್ನೂ ಮಾಡಿ, ಈಗಾಗಲೆ ಅನ್ಯಾಯಕ್ಕೆ ಒಳಗಾಗಿರುವವರಿಗೆ ಅಪರಾಧಿಗಳಿಂದ ಮುಟ್ಟುಗೋಲು ಹಾಕಿಕೊಂಡ ಆಸ್ತಿಯಲ್ಲಿ ಪರಿಹಾರವನ್ನೂ ನೀಡಲು ವ್ಯವಸ್ಥಿತವಾಗಿ ಮತ್ತು ನೈತಿಕವಾಗಿ ಮುಂದುವರೆಯಬೇಕೆಂದು ಆಮ್ ಆದ್ಮಿ ಪಕ್ಷ ಒತ್ತಾಯಿಸುತ್ತದೆ.

English summary
Bengaluru Urban district administration launched a week-long demolition drive in and around Sarakki Lake. Thirty-four acres spread across three villages Sarakki, Puttenhalli and Jaraganahalli are encroached.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X