ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕ್ರಿಸ್ಮಸ್ ವಿಶೇಷ : ವಾರ್ಷಿಕ ಕೇಕ್ ಶೋಗೆ ಬನ್ನಿ ಬನ್ನಿ!

ಸೇಂಟ್ ಜೋಸೆಫ್ ಹೈಸ್ಕೂಲ್ ಮೈದಾನದಲ್ಲಿ ಅರಳಿನಿಂತಿರುವ ವಾರ್ಷಿಕ ಕೇಕ್ ಶೋಗೆ ಬನ್ನಿ ಬನ್ನಿ ಬನ್ನಿ... ಡಿಸೆಂಬರ್ 16ರಿಂದ ಆರಂಭವಾಗಿರುವ ವಾರ್ಷಿಕ ಕೇಕ್ ಶೋ ಹೊಸವರ್ಷದ ಜನವರಿ 1ರವರೆಗೆ ಇರಲಿದೆ.

By Prasad
|
Google Oneindia Kannada News

ಬೆಂಗಳೂರು, ಡಿಸೆಂಬರ್ 19 : ಲಂಡನ್ ಬ್ರಿಜ್ ನೋಡಿದ್ದೀರಾ? ಚೀನಾದ ಕಾಲ್ಪನಿಕ ಪ್ರಾಣಿ ಡ್ರಾಗನ್ ಹೇಗೆ ಕಾಣತ್ತೆ ಗೊತ್ತಾ? ಕಾಮಿಕ್ಸ್ ಕಥೆಗಳಲ್ಲಿ ಬರುತ್ತಿದ್ದ ಅಲ್ಲಾವುದ್ದೀನನ ಮಾಂತ್ರಿಕ ದೀಪ ಎಂದಾದ್ರೂ ನೋಡಿದ್ದೀರಾ? ಅಥವಾ ಕರ್ನಾಟಕದ ಕರಾಟೆ ಕಿಂಗ್ ಶಂಕರ್ ನಾಗ್ ರನ್ನು ಭೇಟಿ ಮಾಡಿ ಹಲೋ ಹೇಳಬೇಕೆಂಬ ಆಸೆಯಾ?

ನಿಮ್ಮ ಈ ಎಲ್ಲ ಆಸೆಗಳು ಪೂರೈಕೆಯಾಗಬೇಕಿದ್ದರೆ 'ಸಂತೋಷಕ್ಕೆ ಹಾಡು ಸಂತೋಷಕ್ಕೆ...' ಎಂದು ಹಾಡಿಕೊಂಡು ಸೇಂಟ್ ಜೋಸೆಫ್ ಹೈಸ್ಕೂಲ್ ಮೈದಾನದಲ್ಲಿ ಅರಳಿನಿಂತಿರುವ ವಾರ್ಷಿಕ ಕೇಕ್ ಶೋಗೆ ಬನ್ನಿ ಬನ್ನಿ ಬನ್ನಿ... ಡಿಸೆಂಬರ್ 16ರಿಂದ ಆರಂಭವಾಗಿರುವ ವಾರ್ಷಿಕ ಕೇಕ್ ಶೋ ಹೊಸವರ್ಷದ ಜನವರಿ 1ರವರೆಗೆ ಇರಲಿದೆ.

76 ವರ್ಷದ ಹಿರಿಯ ಕೇಕ್ ಕಲಾಕಾರ, ಬೇಕರಿ ಮಾಲಿಕ ಸಿ ರಾಮಚಂದ್ರನ್ ಅವರ ಸಮರ್ಥ ಮಾರ್ಗದರ್ಶನದಲ್ಲಿ ಸಕ್ಕರೆಯಿಂದ ತಯಾರಿಸಲಾಗಿರುವ ಹಲವಾರು ಕಲಾಕೃತಿಗಳು ಮೈದಾಳಿ ನಿಂತಿವೆ. ಗಾಜಿನ ಬಾಕ್ಸಿನಲ್ಲಿ ನಯನಾಜೂಕಿನಿಂದ, ಅದ್ಭುತ ಕಲಾಕುಸುರಿಯಿಂದ ತಯಾರಾಗಿರುವ ಈ ಕಲಾಕೃತಿಗಳನ್ನು ನೋಡಲು ಜನ ಮುಗಿಬಿದ್ದು ಬರುತ್ತಿದ್ದಾರೆ.

ಪ್ರತಿವರ್ಷ ಕ್ರಿಸ್ಮಸ್ಸಿಗೂ ಮುಂಚೆ ಆಯೋಜನೆಗೊಳ್ಳುವ ಕೇಕ್ ಶೋನಲ್ಲಿ ಸಕ್ಕರೆಯ ಗೊಂಬೆಗಳ ಜೊತೆ ಇನ್ನೂ ಹಲವಾರು ಸಂಗತಿಗಳು ಆಕರ್ಷಣೆಯ ಕೇಂದ್ರಬಿಂದುವಾಗಿವೆ. ಸ್ನೇಹಿತರೊಂದಿಗೆ, ಕುಟುಂಬದವರೊಂದಿಗೆ ಬಂದು ತಿಂದುತೇಗಿ ಮಜಾ ಮಾಡಲು ಇದಕ್ಕಿಂತ ಪ್ರಶಸ್ತವಾದ ಜಾಗ ಮತ್ತು ಸಮಯ ಮತ್ತೊಂದಿಲ್ಲ.

ಪ್ರವೇಶ ದರ 49 ರುಪಾಯಿ, ಜೊತೆಗೊಂದು ಚಾಕ್ಲೇಟು

ಪ್ರವೇಶ ದರ 49 ರುಪಾಯಿ, ಜೊತೆಗೊಂದು ಚಾಕ್ಲೇಟು

ಮೂರು ವರ್ಷ ಮೇಲ್ಪಟ್ಟವರಿಗೆ 49 ರುಪಾಯಿ ಪ್ರವೇಶ ಧನ. ಇದನ್ನು ಹಳೆಯ 500 ಮತ್ತು 1000 ನೋಟುಗಳನ್ನು ಹೊರತುಪಡಿಸಿ ಯಾವ ರೀತಿಯಲ್ಲಾದರೂ ನೀಡಬಹುದು. ಹೆಚ್ಚು ಜನರು ಡೆಬಿಟ್ ಅಥವಾ ಕಾರ್ಡ್ ಮೂಲಕ ನೀಡುತ್ತಿದ್ದಾರೆ. ಹೊಸ 500 ಮತ್ತು 2000 ರುಪಾಯಿ ನೋಟುಗಳನ್ನು ಹಿಡಿದವರಿಗೂ ಕೊರತೆಯಿಲ್ಲ.

ರೋಬೋ ತಯಾರಿಸುವುದು ಹೇಗೆ?

ರೋಬೋ ತಯಾರಿಸುವುದು ಹೇಗೆ?

ಪ್ರವೇಶ ದ್ವಾರದಲ್ಲಿಯೇ ನೋವೋಟೆಕ್ ರೋಬೋ ಎಂಬ ಕಂಪನಿ ನಮ್ಮ ದೈನಂದಿನ ಕಾರ್ಯಗಳಿಗೆ ಅನುಕೂಲವಾಗುವಂತೆ ಹೇಗೆ ರೋಬೋಗಳನ್ನು ತಯಾರಿಸಬಹುದು ಎಂದು ಪ್ರಾತ್ಯಕ್ಷಿಕೆ ನೀಡುತ್ತಿದೆ. ಹಲವಾರು ಶಾಲೆಗಳನ್ನು ಈ ಕಂಪನಿ ಸಂಪರ್ಕಿಸಿದ್ದು, ಶಾಲೆಯಲ್ಲಿಯೇ ಮಕ್ಕಳಿಗೆ ಕಲಿಸುವ ಉದ್ದೇಶವನ್ನೂ ಹೊಂದಿದೆ.

ಲಂಡನ್ ಬ್ರಿಜ್ ಈಸ್ ನಾಟ್ ಫಾಲಿಂಗ್ ಡೌನ್

ಲಂಡನ್ ಬ್ರಿಜ್ ಈಸ್ ನಾಟ್ ಫಾಲಿಂಗ್ ಡೌನ್

ಈ ಕೇಕ್ ಶೋನ ಈ ಬಾರಿಯ ಆಕರ್ಷಣೆಯ ಕೇಂದ್ರಬಿಂದು 7 ಟನ್ ಸಕ್ಕರೆಯಿಂದ ತಯಾರಾಗಿ ನಿಂತಿರುವ ಲಂಡನ್ ಬ್ರಿಜ್. 14 ಅಡಿ ಅಗಲ ಮತ್ತು 8 ಅಡಿ ಎತ್ತರವಿರುವ ಈ ಕಲಾಕೃತಿಯನ್ನು ತಯಾರಿಸಲು ಮನೀಶ್ ಗೌರ್ ತಂಡದವರು 65 ದಿನಗಳನ್ನು ತೆಗೆದುಕೊಂಡಿದ್ದಾರೆ. ಇದರ ಮುಂದೆ ನಿಂತು ಜನರು ಸೆಲ್ಫಿ ತಕ್ಕೊಂಡಿದ್ದೇ ತಕ್ಕೊಂಡಿದ್ದು.

ಪಕ್ಕದಲ್ಲಿಯೇ ಐತೆ ಚೀನಾದ ಡ್ರಾಗನ್ನು

ಪಕ್ಕದಲ್ಲಿಯೇ ಐತೆ ಚೀನಾದ ಡ್ರಾಗನ್ನು

ಹಚ್ಚಹಸುರಿನ ಬಣ್ಣದಿಂದ ಲಂಡನ್ ಬ್ರಿಜ್ ಪಕ್ಕದಲ್ಲೇ ನಿಂತಿರುವ ಚೀನಾದ ಕಾಲ್ಪನಿಕ ಪ್ರಾಣಿ ಡ್ರಾಗನ್ ಅನ್ನು ನೋಡಲು ಎರಡು ಕಣ್ಣು ಸಾಲದು. ಇದನ್ನು ತಯಾರಿಸಲು ಕೂಡ 7 ಟನ್ ಸಕ್ಕರೆ ಖರ್ಚುಮಾಡಲಾಗಿದೆ. ಇದನ್ನು ಮೂರೇ ಜನ ಸೇರಿಕೊಂಡು 30 ದಿನಗಳಲ್ಲಿ ತಯಾರಿಸಿ ನಿಲ್ಲಿಸಿದ್ದಾರೆ.

ಅಲ್ಲಿ ನಿಂತವ್ರೆ ನೋಡ್ರಪ್ಪ ನಮ್ಮ ಶಂಕರ್ ನಾಗು

ಅಲ್ಲಿ ನಿಂತವ್ರೆ ನೋಡ್ರಪ್ಪ ನಮ್ಮ ಶಂಕರ್ ನಾಗು

ಆಟೋ ರಾಜ ಚಿತ್ರದಲ್ಲಿ ಕೈಯಲ್ಲಿ ಗುಲಾಬಿ ಹೂವನ್ನು ಹಿಡಿದುಕೊಂಡು 'ನಲಿವ ಗುಲಾಬಿ ಹೂವೆ, ಮುಗಿಲ ಮೇಲೇರಿ ನಗುವೆ...' ಎಂಬ ಹಾಡು ನಿಮ್ಮ ಮನಃಪಟಲದಲ್ಲಿ ಹಾದುಹೋಗದಿದ್ದರೆ ಕೇಳಿ ಈ ಶಂಕರ್ ನಾಗ್ ಪ್ರತಿಮೆಯನ್ನು ನೋಡಿ. ಇದನ್ನು ತಯಾರಿಸಬೇಕೆಂದು ಅಂದುಕೊಂಡವರಿಗೆ ಒಂದು ಸಲಾಂ ಹೊಡೆಯಲೇಬೇಕು.

ಹಣದ ಗಿವೂ ಇದೆ ಅಲ್ಲಿ

ಹಣದ ಗಿವೂ ಇದೆ ಅಲ್ಲಿ

ದೇಶದ ಎಲ್ಲೆಲ್ಲೂ ನೋಟಿನದ್ದೇ ದರ್ಬಾರು. ಕೆಲವು ಗತಕಾಲದ ಪಳಿಯುಳಿಕೆಯಾಗಿದ್ದರೆ, ಹಲವಾರು ಗರಿಗರಿ ನೋಟುಗಳು ಬಳಕೆದಾರರ ಜೇಬು ಸೇರುತ್ತಿವೆ. ದೇಶಕ್ಕೆ ದ್ರೋಹ ಬಗೆಯುವ ಕೆಲ ಮೋಸಗಾರರು ಐಟಿ, ಇಡಿ ಬಲೆಗೆ ಬೀಳುತ್ತಿದ್ದಾರೆ. ಇದನ್ನೇ ರೂಪಕವನ್ನಾಗಿಸಿ ಕೇಕ್ ಶೋನಲ್ಲಿ ಮೈದಾಳಿದೆ.

ಬಾಯಲ್ಲಿ ನೀರೂರಿಸುವ ಕಪ್ ಕೇಕ್

ಬಾಯಲ್ಲಿ ನೀರೂರಿಸುವ ಕಪ್ ಕೇಕ್

ಡಾಲ್ಮೇಶಿಯನ್ ನಾಯಿ ಮರಿಗಳಂತೆ ಕಾಣಿಸುವ ಕಪ್ ಕೇಕ್ ಗಳು ಈ ಪ್ರದರ್ಶನದ ಮತ್ತೊಂದು ಪ್ರಮುಖ ಶೋಪೀಸ್. ನೋಡುತ್ತಿದ್ದಂತೆ ಮಕ್ಕಳು ಮಾತ್ರವಲ್ಲ ದೊಡ್ಡವರೂ ಬಾಯಿಬಿಟ್ಟುಕೊಂಡು ನಿಂತುಬಿಡುತ್ತಾರೆ. ಆದರೆ ಚಿಂತೆ ಬೇಡ, ಶೋನಿಂದ ಹೊರಬರುತ್ತಿದ್ದಂತೆ ಕಪ್ ಕೇಕ್ ಗಳು ರೆಡಿಯಾಗಿರುತ್ತವೆ. ದುಡ್ಡು ಕೊಟ್ಟು ಬೇಕಾದಷ್ಟು ತಿನ್ನಬಹುದು.

ಅಪ್ಪಂದಿರಿಗೆ ಪ್ರಾಣಸಂಕಟ

ಅಪ್ಪಂದಿರಿಗೆ ಪ್ರಾಣಸಂಕಟ

ವಾರ್ಷಿಕ ಕೇಕ್ ಶೋಗೆ ಜನ ಸಮರೋಪಾದಿಯಲ್ಲಿ ಬರುತ್ತಿದ್ದಾರೆ. ಆಯೋಜಿಸಿದವರಿಗೆ ಭರ್ತಿ ಕಮಾಯಿ. ಅಂಗಡಿ ಮುಂಗಟ್ಟು ಹಾಕಿಕೊಂಡವರಿಗೂ ಮೋಸವಿಲ್ಲ. ಹೆಂಡತಿ ಮಕ್ಕಳಿಗೆ ಕೊಳ್ಳುವ ಆಟ, ಗಂಡಂದಿರಿಗೆ ಅಪ್ಪಂದಿರಿಗೆ ಪ್ರಾಣಸಂಕಟ. ಖರ್ಚುವೆಚ್ಚಗಳ ಬಗ್ಗೆ ತಲೆಕೆಡಿಸಿಕೊಳ್ಳದೆ ಸುಮ್ನೆ ಮಜಾ ಮಾಡಿ ಬನ್ನಿ.

ಮಜಾ ಮಾಡಿ ಆದರೆ ಜೇಬಿನ ಬಗ್ಗೆ ಹುಷಾರಾಗಿರಿ

ಮಜಾ ಮಾಡಿ ಆದರೆ ಜೇಬಿನ ಬಗ್ಗೆ ಹುಷಾರಾಗಿರಿ

ಈ ಪ್ರದರ್ಶನದ್ದು ಒಂದು ಆಕರ್ಷಣೆಯಾದರೆ ಅದರಿಂದ ಹೊರಬಂದ ನಂತರ ಹೆಂಗಳೆಯರಿಗೆ, ಮಕ್ಕಳಿಗೆ ಮತ್ತೊಂದು ಬಗೆಯ ಆಕರ್ಷಣೆ. ಕೇಕ್, ವಡಾಪಾವ್, ಸ್ವೀಟ್ ಕಾರ್ನ್, ಹಪ್ಪಳ, ಪುಳಿಯೋಗರೆ, ಗಿರ್ಮಿಟ್ಟು, ಬಾಳೆಕಾಯಿ ಬಜ್ಜಿ, ತರಹೇವರಿ ಉಪ್ಪಿನಕಾಯಿ, ಇನ್ನೂ ಹಲವಾರು ಅಂಗಡಿಗಳಿಗೆ ಲೆಕ್ಕವೇ ಇಲ್ಲ. ಮಜಾ ಮಾಡಿ ಆದರೆ ಜೇಬಿನ ಬಗ್ಗೆ ಹುಷಾರಾಗಿರಿ.

English summary
India’s biggest annual cake show has begun in Bengaluru at St Joseph High school ground near UB City. The show will be open till 1st January, 2017. This show gets going during Christmas festivities every year. Just go and enjoy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X