ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಿಂದೂ ಕಿಡ್ನಿ ಮುಸ್ಲಿಂಗೆ, ಮುಸ್ಲಿಂ ಕಿಡ್ನಿ ಹಿಂದೂಗೆ!

By Prasad
|
Google Oneindia Kannada News

ಬೆಂಗಳೂರು, ಆ. 6 : "ಕುಲ ಕುಲ ಕುಲವೆಂದು ಹೊಡೆದಾಡದಿರಿ, ನಿಮ್ಮ ಕುಲದ ನೆಲೆಯನೇನಾದರು ಬಲ್ಲಿರಾ ಬಲ್ಲಿರಾ?" ಎಂದು ಕನಕ ದಾಸರು 16ನೇ ಶತಮಾನದಲ್ಲಿ ಮಾನವ ಕುಲವನ್ನು ಬಡಿದೆಚ್ಚರಿಸಿದ್ದರು. ಮಾನವನಲ್ಲಿ ಹರಿಯುವ ರಕ್ತದ, ದೇಹದ ಕಲ್ಮಶವನ್ನು ಶುದ್ಧೀಕರಿಸುವ ಮೂತ್ರಪಿಂಡದ ಕುಲ ಯಾವುದೆಂದು ಹೇಳಿರಿ ನೋಡೋಣ?

ಬದುಕಿನ ಅಳಿವು ಮತ್ತು ಉಳಿವಿನ ಪ್ರಶ್ನೆ ಬಂದಾಗ ಕುಲ ಕುಲವೆಂದು ಹೊಡೆದಾಡಲು ಆಗುತ್ತದೆಯೆ? ಮಾನವೀಯತೆಯ ಮುಂದೆ ಕುಲ ಯಾವ ಮೂಲೆಗೆ? ಹಿಂದೂವಿನ ಮೂತ್ರಪಿಂಡವನ್ನು ಮುಸ್ಲಿಂ ಬಂಧುವಿಗೆ ದಾನ ನೀಡಿ, ಮುಸ್ಲಿಂನ ಮೂತ್ರಪಿಂಡವನ್ನು ಹಿಂದೂ ಬಾಂಧವನಿಗೆ ದಾನ ನೀಡಿ ಮಾನವೀಯತೆ ಮೆರೆದ ಅಪರೂಪದ ಘಟನೆಗೆ ಬೆಂಗಳೂರಿನ ನಾರಾಯಣ ಹೆಲ್ತ್ ಆಸ್ಪತ್ರೆ ಸಾಕ್ಷಿಯಾಗಿದೆ.

ಮೂತ್ರಕೋಶದ ತೊಂದರೆಯಿಂದ ಬಳಲುತ್ತಿದ್ದ ಹಿಂದೂವಿಗೆ, ಕಿಡ್ನಿ ತೊಂದರೆಯಿಂದ ಬಳಲುತ್ತಿದ್ದ ಮುಸ್ಲಿಂ ವ್ಯಕ್ತಿಯ ಹೆಂಡತಿ ಕಿಡ್ನಿಯನ್ನು, ಹಾಗೆಯೆ, ಅದೇ ಮುಸ್ಲಿಂ ವ್ಯಕ್ತಿಗೆ, ಕಿಡ್ನಿಯನ್ನು ಪಡೆದ ಹಿಂದೂ ವ್ಯಕ್ತಿಯ ಹೆಂಡತಿಯ ಮೂತ್ರಕೋಶವನ್ನು ಅಳವಡಿಸಲಾಗಿದೆ. ಇದು ನಡೆದಿರುವುದು ಆಗಸ್ಟ್ 1ರಂದು. ಆ.6ರ ಅಂಗ ದಾನ ದಿನದಂದು ಮತ್ತು ಹೆಂಡತಿ ಗಂಡನನ್ನು ಪೂಜಿಸುವ ಭೀಮನ ಅಮಾವಾಸ್ಯೆಯ ದಿನದಂದು ನಿಮಗಾಗಿ ಈ ಅಪರೂಪದ ಕಥೆ.

Hindu kidney to Muslim and this is humanity

ಪ್ರಕರಣದ ವಿವರ : 53 ವರ್ಷದ ವಿಶ್ವನಾಥ್ ಭಟ್ ಮೂತ್ರಕೋಶದ ತೊಂದರೆಯಿಂದ ಬಳಲುತ್ತಿದ್ದರು. ಕಳೆದೆರಡು ವರ್ಷಗಳಿಂದ ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿದ್ದರು. ಅವರ ಪತ್ನಿ ಉಷಾ ಭಟ್ ತಮ್ಮ ಅಂಗವನ್ನು ದಾನ ಮಾಡಲು ಮುಂದೆ ಬಂದಿದ್ದರು. ಆದರೆ, ಅವರಿಬ್ಬರ ರಕ್ತ ಗುಂಪುಗಳ ಹೊಂದಾಣಿಕೆಯಾಗದ ಕಾರಣ ಮೂತ್ರಕೋಶ ದಾನ ಮಾಡಲಾಗಿರಲಿಲ್ಲ.

ಅದೇ ರೀತಿ, 60 ವರ್ಷದ ಅಬ್ದುಲ್ ಖಲೀಲ್ ಕೂಡ ಮೂತ್ರಕೋಶದ ತೊಂದರೆಯಿಂದ ಬಳಲುತ್ತಿದ್ದರು. ಅವರು ಕೂಡ 18 ತಿಂಗಳಿನಿಂದ ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿದ್ದರು. ಅವರ ಹೆಂಡತಿ ಅಬೀದಾ ಖಲೀಲ್ ಕೂಡ ತಮ್ಮ ಗಂಡನ ಜೀವ ಉಳಿಸಲು ಕಿಡ್ನಿ ದಾನ ಮಾಡಲು ತಯಾರಿದ್ದರು. ಇಲ್ಲಿ ಕೂಡ ರಕ್ತದ ಗುಂಪು ಸರಿಹೊಂದದ ಕಾರಣ ಅಂಗಕಸಿ ಸಾಧ್ಯವಾಗಿರಲಿಲ್ಲ.

ಎರಡು ಕುಟುಂಬಗಳು ಕಿಡ್ನಿ ದಾನಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾಗ, ಇಬ್ಬರೂ ಮುಖಾಮುಖಿಯಾಗಿದ್ದಾರೆ ಮತ್ತು ಮೂತ್ರಕೋಶ ಬದಲಾವಣೆಯ ಬಗ್ಗೆ ತಿಳಿದುಕೊಂಡು ನಾರಾಯಣ ಹೆಲ್ತ್ ಆಸ್ಪತ್ರೆಯನ್ನು ಸಂಪರ್ಕಿಸಿದ್ದಾರೆ. ವೈದ್ಯಕೀಯ ಪರೀಕ್ಷೆ ಮಾಡಲಾಗಿ ಹಿಂದೂವಿನ ರಕ್ತ ಮುಸ್ಲಿಂಗೆ, ಮುಸ್ಲಿಂನ ರಕ್ತ ಹಿಂದೂವಿಗೆ ಹೊಂದಿಕೊಂಡಿದೆ. ಇದನ್ನು ಏನೆಂದು ಹೇಳುತ್ತೀರಿ?

ಇಬ್ಬರೂ ಮಹಾಸಾಧ್ವಿಯರು ತಮ್ಮ ಕಿಡ್ನಿಯನ್ನು ಪರಪುರುಷನಿಗೆ ನೀಡಲು ಒಪ್ಪಿದ್ದಾರೆ. ಎಲ್ಲ ಕಾನೂನಿನ ಅಡೆತಡೆಗಳನ್ನು ನಿವಾರಿಸಿಕೊಂಡ ಮೇಲೆ ಆಗಸ್ಟ್ 1ರಂದು ಅದಲುಬದಲು ಜೋಡಿ ಅಂಗಕಸಿಯನ್ನು ಯಶಸ್ವಿಯಾಗಿ ನಾರಾಯಣ ಹೆಲ್ತ್ ಆಸ್ಪತ್ರೆಯಲ್ಲಿ ಮಾಡಲಾಗಿದೆ. ಆಸ್ಪತ್ರೆಯಲ್ಲಿ ಎಲ್ಲ ಸವಲತ್ತುಗಳು ಇದ್ದು, ಅತ್ಯಂತ ನುರಿತ ವೈದ್ಯರು ಇದ್ದರೆ ಮಾತ್ರ ಇಂಥ ಅಂಗಕಸಿ ಮಾಡಲು ಸಾಧ್ಯ ಎಂದು ವೈದ್ಯರು ಹೇಳಿದ್ದಾರೆ.

ನಾರಾಯಣ ಹೆಲ್ತ್ ಆಸ್ಪತ್ರೆಯ ಆಡಳಿತ ಮಂಡಳಿ ಶ್ರೀಮತಿ ಅಬೀದಾ ಖಲೀಲ್ ಮತ್ತು ಶ್ರೀಮತಿ ಉಷಾ ಭಟ್ ಅವರನ್ನು ಹೃದಯಪೂರ್ವಕವಾಗಿ ಅಭಿನಂದಿಸಿದ್ದಾರೆ. ಜೀವಂತವಿರಲಿ, ಜೀವಂತವಿಲ್ಲದಿರಲಿ ಜನರು ಮಾನವ ದೇಹದ ಅಂಗಗಳನ್ನು ದಾನ ಮಾಡಲು ಮುಂದೆ ಬರಬೇಕು ಮತ್ತು ಮಾನವೀಯತೆಯನ್ನು ಮೆರೆಯಬೇಕು ಎಂದು ಆಸ್ಪತ್ರೆಯ ವೈದ್ಯರು ಅಂಗ ದಾನ ದಿನದಂದು ಜನರಲ್ಲಿ ಮನವಿ ಮಾಡಿದ್ದಾರೆ. ಈಗ ಹೇಳಿ ನಿಮ್ಮ ಕಿಡ್ನಿ ಕುಲ ಯಾವುದು?

English summary
At Narayana Health, Bangalore, doctors successfully carried out a historic ‘swap kidney transplant’ involving two couples from Hindu and Muslim communities, projecting humanitarian cause being above religious and sectarian divide. Humanity has no religion. Long live humanity.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X