Englishবাংলাગુજરાતીहिन्दीമലയാളംதமிழ்తెలుగు
Filmibeat Kannada

ಕುರಿಯನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಿ

Posted by:
Updated: Friday, May 31, 2013, 12:58 [IST]
 

ಕುರಿಯನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಿ

ಹಾವೇರಿ, ಮೇ.31: ಕುರಿಯನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಿ ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಕನಕಗುರು ಪೀಠದ ಸ್ವಾಮೀಜಿ ನಿರಂಜನಾನಂದ ಪುರಿಶ್ರೀ ಗಳು ಆಗ್ರಹಿಸಿದ್ದಾರೆ.

ಟಿವಿ9 ಕನ್ನಡ ಸುದ್ದಿ ವಾಹಿನಿಯೊಂದಿಗೆ ಶುಕ್ರವಾರ(ಮೇ.31) ಮಧ್ಯಾಹ್ನ 11.45ರ ಸುಮಾರಿಗೆ ಮಾತನಾಡುತ್ತಾ, ಸರ್ಕಾರಕ್ಕೆ ಕೆಲವು ಕಿವಿಮಾತುಗಳನ್ನು ನೀಡಿದ್ದಾರೆ.

ಕುರಿ ಸರ್ವಶ್ರೇಷ್ಠವಾದ ಪ್ರಾಣಿ, ಗೋವಿಗಿಂತಲೂ ಶ್ರೇಷ್ಠವಾಗಿದೆ. ಪುರಾಣಗಳಲ್ಲಿ ಕುರಿಯ ಮಹತ್ವದ ಬಗ್ಗೆ ಉಲ್ಲೇಖವಿದೆ. ಕುರಿ ಹೆಸರನ್ನು ಜಾತಿ ಆಧಾರ ಮೇಲೆ ಸೂಚಿಸುತ್ತಿಲ್ಲ. ಕುರಿ ದೀನದಲಿತರ ನಿತ್ಯ ಸಂಗಾತಿ ಹಾಗೂ ದೈನಂದಿನ ಬದುಕಿನ ಆಸರೆಯಾಗಿದೆ ಎಂದು ನಿರಂಜನಾನಂದ ಪುರಿ ಶ್ರೀಗಳು ಹೇಳಿದ್ದಾರೆ.

ಕಡಿಮೆ ದರದಲ್ಲಿ ಮದ್ಯ ವಿತರಣೆ ಯೋಜನೆ ಜಾರಿಗೆ ತರಲು ಸಿದ್ದರಾಮಯ್ಯ ಅವರು ಯೋಜಿಸಿರುವುದು ಸರಿಯಾಗಿದೆ. ಕಳಪೆ ಮದ್ಯ ಸೇವಿಸಿ ಅನೇಕ ಜನ ಸಾವನ್ನಪ್ಪುದು ಇದರಿಂದ ತಪ್ಪುತ್ತದೆ. ಆದರೆ, ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಮದ್ಯವನ್ನು ನಿಷೇಧಿಸುವುದಾದರೆ ಸಂಪೂರ್ಣವಾಗಿ ನಿಷೇಧಿಸಲಿ ಎಂದಿದ್ದಾರೆ.

ಉಡುಪಿ ಶ್ರೀಕೃಷ್ಣ ಮಠ, ದೇಗುಲ ವಿವಾದ ಈ ಹಿಂದಿನಿಂದಲೂ ಇದೆ. ಈ ಗೊಂದಲ ಪರಿಹಾರಕ್ಕಾಗಿ ಸರ್ಕಾರ ಯತ್ನಿಸಬೇಕು. ಉಡುಪಿ ದೇಗುಲ ಹಾಗೂ ಗೋಕರ್ಣ ದೇಗುಲಗಳ ಬಗ್ಗೆ ಸಿದ್ದರಾಮಯ್ಯ ಅವರು ತೆಗೆದುಕೊಳ್ಳುವ ನಿರ್ಧಾರಕ್ಕೆ ಹಿಂದುಳಿದ ಮಠಗಳ ಬೆಂಬಲ ಇದೆ ಎಂದು ನಿರಂಜನಾಪುರಿ ಸ್ವಾಮೀಜಿ ಹೇಳಿದ್ದಾರೆ.

ಸ್ವಾಮೀಜಿ ಬಗ್ಗೆ ಒಂದಿಷ್ಟು: ನಿರಂಜನಾನಂದ ಪುರಿ ಶ್ರೀಗಳು ಹಾವೇರಿಯ ಕಾಗಿನೆಲೆಯಲ್ಲಿರುವ ದಾಸ ಶ್ರೇಷ್ಠ ಕನಕರ ಪೀಠದ ಹಾಲಿ ಅಧ್ಯಕ್ಷರಾಗಿದ್ದಾರೆ. ಬೀರೆಂದ್ರ ಕೇಶವ ತಾರಕಾನಂದ ಪುರಿ ಸ್ವಾಮೀಜಿಗಳು ಉತ್ತರಾಧಿಕಾರಿಯನ್ನು ನೇಮಿಸಿದೆ ಸ್ವರ್ಗಸ್ಥರಾಗಿದ್ದರು.

ನಂತರ 2006ರಲ್ಲಿ ಕನಕ ಗುರುಪೀಠ ಟ್ರಸ್ಟ್ ನವರು ಇಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾಂಗ್ರೆಸ್ ನಾಯಕ ಎಚ್ ವಿಶ್ವನಾಥ್ ಅವರ ನೇತೃತ್ವದ ಆಯ್ಕೆ ಸಮಿತಿ ಹಾಲಿ ಸ್ವಾಮೀಜಿಗಳನ್ನು ಪೀಠಾಧಿಪತಿಗಳನ್ನಾಗಿ ಆಯ್ಕೆ ಮಾಡಿದ್ದರು.

ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಹರ್ತಿಕೋಟೆ ಮೂಲದವರಾದ ನಿರಂಜನಾನಂದ ಪುರಿಗಳು, ಬನಾರಸ್ ನ ಸಂಪೂರ್ಣಾನಂದ ಸಂಸ್ಕೃತ ವಿದ್ಯಾಪೀಠದಿಂದ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

1992ರಲ್ಲಿ ಸ್ಥಾಪನೆಯಾದ ಕಾಗಿನೆಲೆ ಮಹಾಸಂಸ್ಥಾನ, ಬೆಂಗಳೂರು, ಮೈಸೂರು, ಗುಲ್ಬರ್ಗಾ ಹಾಗೂ ಬೆಳಗಾವಿಯಲ್ಲಿ ತನ್ನ ಶಾಖಾ ಮಠಗಳನ್ನು ಹೊಂದಿದೆ. ಈ ಶಾಖಾ ಮಠಗಳ ಸ್ವಾಮೀಜಿಗಳು ಮುಖ್ಯಮಠದ ಗುರುಪೀಠಾಧಿಪತಿಯಾಗಿ ಐದು ವರ್ಷಗಳ ಕಾಲ ಸೇವೆ ಸಲ್ಲಿಸಲು ಅವಕಾಶವಿರುತ್ತದೆ.

Story first published:  Friday, May 31, 2013, 12:10 [IST]
English summary
Kanaka peetha Seer Nirajananandapuri urges government to announce sheep as National animal of India. Seer extended his support to CM Siddramaiah's decision on regarding Udupi Krishna Mutt and Gokarna Temple
ಅಭಿಪ್ರಾಯ ಬರೆಯಿರಿ

Please read our comments policy before posting

Subscribe Newsletter
Videos You May Like