ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭವಾನಿ ರೇವಣ್ಣಗೆ ಟಿಕೆಟ್ ಕೊಡಿ ದೇವೇಗೌಡ್ರೆ

By Mahesh
|
Google Oneindia Kannada News

HDD and Bhavani Revanna
ಹಾಸನ, ನ.20 : ಭವಾನಿ ರೇವಣ್ಣ ಅವರಿಗೆ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ನೀಡುವಂತೆ ಜೆಡಿಎಸ್ ವರಿಷ್ಠ ದೇವೇಗೌಡರ ಮೇಲೆ ದಿನೇದಿನೇ ಒತ್ತಡ ಹೆಚ್ಚಾಗುತ್ತಿದೆ. ಟಿಕೆಟ್ ಕೊಡಲು ಸಾಧ್ಯವಿಲ್ಲ. ನನ್ನನ್ನು ಕರುಣಾನಿಧಿ ಸ್ಥಿತಿಗೆ ದೂಡಬೇಡಿ ಎಂದು ಗೌಡ್ರು ಟವೆಲ್ ಕೊಡವಿಕೊಂಡು ಎದ್ದರೂ ಜೆಡಿಎಸ್‌ನ ಮಹಿಳಾ ಘಟಕ ಕೇಳುತ್ತಿಲ್ಲ.

ಹಾಸನ ಜಿಲ್ಲೆಯಲ್ಲಿ 7 ವಿಧಾನಸಭಾ ಕ್ಷೇತ್ರಗಳಿದೆ. ಈ ಪೈಕಿ ಯಾವುದಾದರೂ ಒಂದು ಕ್ಷೇತ್ರದಿಂದ ಶ್ರೀಮತಿ ಭವಾನಿ ರೇವಣ್ಣ ಅವರನ್ನು ಸ್ಪರ್ಧಿಸಲು ಅವಕಾಶ ಮಾಡಿ ಕೊಡಿ ಎಂದು ಜೆಡಿಎಸ್‌ನ ಮಹಿಳಾ ವಿಭಾಗದ ಮುಖಂಡರು ಮತ್ತು ಕಾರ್ಯ ಕರ್ತರು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರನ್ನು ಒತ್ತಾಯಿಸಿದ್ದಾರೆ.

ಗೌರಿಕೊಪ್ಪಲು ರಸ್ತೆಯ ಮೈದಾನದಲ್ಲಿ ಜೆಡಿಎಸ್ ಪಕ್ಷದ ಜಿಲ್ಲಾ, ತಾಲ್ಲೂಕು ಮತ್ತು ಗ್ರಾಮ ಪಂಚಾಯಿತಿ ಸದಸ್ಯರುಗಳಿಗೆ ಸನ್ಮಾನಿಸುವ ಕಾರ್ಯಕ್ರಮದಲ್ಲಿ ಜೆಡಿಎಸ್ ಮಹಿಳೆಯರ ದಂಡು ಭರ್ಜರಿಯಾಗಿ ಸೇರಿತ್ತು.

ಇದೇ ಸಂದರ್ಭದಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿದ ದೇವೇಗೌಡರಿಗೆ ದಾರಿ ಮಧ್ಯೆಯೇ ತಡೆದು ಭವಾನಿ ಮೇಡಂಗೆ ಜಿಲ್ಲೆಯ ಯಾವುದಾದರು ಒಂದು ಕ್ಷೇತ್ರದಲ್ಲಿ ಸ್ಪರ್ಧಿಸಲು ಅವಕಾಶ ಕಲ್ಪಿಸುವ ಮೂಲಕ ಮಹಿಳೆಯರಿಗೂ ಸಮಾನ ಸ್ಥಾನಮಾನ ನೀಡಿದಂತೆ ಆಗುತ್ತದೆ ಎಂದು ಮನವಿ ಪತ್ರವನ್ನು ಸಲ್ಲಿಸಿದರು.

ಹಠಾತ್ ಆಗಿ ಜೆಡಿಎಸ್ ಘಟಕದ ಮಹಿಳೆಯರು ಈ ರೀತಿ ಮನವಿ ಸಲ್ಲಿಸಲು ಬಂದಿರುವುದನ್ನು ಕಂಡು ದೊಡ್ಡ ಗೌಡ್ರು ಕೊಂಚ ಕಾಲ ವಿಚಲಿತರಾದರೂ ಸಾವರಿಸಿಕೊಂಡು ಮನವಿ ಪತ್ರ ಪಡೆದುಕೊಂಡರು.

ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ನಾಗಮ್ಮ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರು ಇನ್ನೊಂದು ಮಾರ್ಗದಲ್ಲಿ ಮನವಿ ಪತ್ರ ಹಿಡಿದುಕೊಂಡು ನಿಂತಿದ್ದಾರೆ ಎಂಬ ಸುದ್ದಿ ತಿಳಿದುಕೊಂಡ ದೇವೇಗೌಡರ ಬೆಂಗಾವಲಿನ ಪಡೆ ಮಾರ್ಗ ಬದಲಾಯಿಸಿ ಮತ್ತೊಂದು ಮಾರ್ಗದಲ್ಲಿ ತೆರಳಿ ಕಾರ್ಯಕ್ರಮಕ್ಕೆ ಹಾಜರಾದರು.

ಗೌರಿಕೊಪ್ಪಲು ಸಂಪರ್ಕ ರಸ್ತೆಯ ಕಲ್ಲತ್ತಗಿರಿ ವೃತ್ತದಲ್ಲಿ ಇದರಿಂದ ಸೋಮವಾರ (ನ.19) ಕೆಲ ಕಾಲ ಸಂಚಾರ ಸ್ಥಗಿತವಾಗಿತ್ತು. ದೇವೇಗೌಡರು ಕಾರ್ಯಕ್ರಮ ಮುಗಿಸಿ ಹೊರಡುವಾಗ ಮನವಿ ಸಲ್ಲಿಸುವ ಮತ್ತೊಂದು ಪ್ರಯತ್ನವೂ ಫಲಿಸಲಿಲ್ಲ. ಭವಾನಿ ಮೇಡಂಗೆ ಟಿಕೆಟ್ ಕೊಡಿ ಅಂತಾ ಮಾವ ದೇವೇಗೌಡರನ್ನು ಕೇಳಲು ಬಂದ ಒಂದು ಗುಂಪಿನ ಮಹಿಳೆಯರಿಗೆ ನಿರಾಶೆಯಾಯಿತು.

ಜಿಲ್ಲೆಯ ಯಾವುದಾದರೊಂದು ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ಕಲ್ಪಿಸಿಕೊಟ್ಟರೆ ಸಿದ್ಧರಾಗುವುದಾಗಿ ಭವಾನಿಯವರು ಕಾರ್ಯಕರ್ತರಲ್ಲಿ ಇಂಗಿತ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗಿದೆ.

ಆದರೆ, ಬೇಲೂರು ಕ್ಷೇತ್ರದಿಂದ ತಮ್ಮ ಸೊಸೆ ಭವಾನಿ ರೇವಣ್ಣ ಬರುವ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರಂತೆ ಎಂಬ ಗಾಳಿಸುದ್ದಿಯನ್ನು ದೇವೇಗೌಡರು ಅಲ್ಲಗೆಳೆದಿದ್ದರು.

ನನ್ನ ರಾಜಕೀಯ ಜೀವನದ ಕೊನೆಗಾಲದಲ್ಲಿ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಕರುಣಾನಿಧಿ ತಂದುಕೊಂಡಿರುವ ಸ್ಥಿತಿಯನ್ನು ನಾನು ತಂದುಕೊಳ್ಳಲು ಇಷ್ಟಪಡುವುದಿಲ್ಲ ಎಂದು ಹೇಳುವ ಮೂಲಕ ಕುಟುಂಬ ರಾಜಕಾರಣದಿಂದ ಹಾನಿಯೇ ಹೆಚ್ಚು ಎಂದು ದೇವೇಗೌಡರು ಸೂಚ್ಯಮಾತುಗಳಲ್ಲಿ ವ್ಯಕ್ತಪಡಿಸಿದರು.

ದೇವೇಗೌಡರ ಹೇಳಿಕೆ ನಂತರ ತಮ್ಮ ಪತ್ನಿ ಭವಾನಿ ಸ್ಪರ್ಧಿಸುವ ವಿಚಾರ ಕುರಿತಂತೆ ಪತ್ರಕರ್ತರಿಗೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿದ್ದ ಪತಿ ರೇವಣ್ಣ ಅವರು, ದೇವೇಗೌಡರು ಹೇಳಿದಂತೆ ಭವಾನಿ ಅವರು ಈಗ ಸ್ಪರ್ಧಿಸುತ್ತಿಲ್ಲ ಅಷ್ಟೇ ಇನ್ನು ಹೆಚ್ಚು ಹೇಳಲಾರೆ ಎಂದಿದ್ದರು.

English summary
JDS supremo HD Deve gowda facing hard time to reject JDS women unit's plea to give assembly ticket to Bhavani Revanna. Former Prime Minister Deve Gowda said He don't want to mess up his life like M Karunanidhi and suffer due to family politics and Bhavani will not be entering politics now.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X