ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟಾಗೋರ್ ದ್ವಿತೀಯ ದರ್ಜೆ ನಾಟಕಕಾರ : ಕಾರ್ನಾಡ್

By Prasad
|
Google Oneindia Kannada News

Rabindranath Tagore second rate playwrite : Girish Karnad
ಬೆಂಗಳೂರು, ನ. 9 : ಸಾಹಿತ್ಯ ನೋಬೆಲ್ ಪಾರಿತೋಷಕ ವಿಜೇತ ಲೇಖಕ ವಿ.ಎಸ್. ನೈಪಾಲ್ ಅವರನ್ನು ಮುಸ್ಲಿಂ ವಿರೋಧಿ ಎಂದು ಮುಂಬೈ ಸಾಹಿತ್ಯ ಸಮ್ಮೇಳನದಲ್ಲಿ ಅವರ ಸಮ್ಮುಖದಲ್ಲೇ ಟೀಕಿಸಿ ವಿವಾದ ಸೃಷ್ಟಿಸಿದ್ದ ಜ್ಞಾನಪೀಠ ಪ್ರಶಸ್ತಿ ವಿಜೇತ ಲೇಖಕ ಗಿರೀಶ್ ಕಾರ್ನಾಡ್ ಅವರು ಭಾರತಕ್ಕೆ ರಾಷ್ಟ್ರಗೀತೆ ಕೊಟ್ಟಿರುವ ಕವಿ ರವೀಂದ್ರನಾಥ ಟಾಗೋರ್ ಅವರನ್ನು 'ಎರಡನೇ ದರ್ಜೆಯ ನಾಟಕಕಾರ' ಎಂದು ಹೇಳಿ ಮತ್ತೊಮ್ಮೆ ವಿವಾದದ ಬಿರುಗಾಳಿ ಎಬ್ಬಿಸಿದ್ದಾರೆ.

ನೋಬೆಲ್ ಪ್ರಶಸ್ತಿ ಪಡೆದಿರುವ ಪ್ರಥಮ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ರವೀಂದ್ರನಾಥ ಟಾಗೋರ್ ಅವರು, "ಅತ್ಯದ್ಭುತ ಕವಿ, ಆದರೆ, ಎರಡನೇ ದರ್ಜೆಯ ನಾಟಕಕಾರ. ಅವರ ನಾಟಕಗಳನ್ನು ಸಹಿಸಿಕೊಳ್ಳಲು ಸಾಧ್ಯವೇ ಇಲ್ಲ" ಎಂದು ಖುದ್ದು ನಾಟಕರಾರರಾಗಿರುವ 74 ವರ್ಷದ ಗಿರೀಶ್ ಕಾರ್ನಾಡ್ ಅವರು ಅಜೀಂ ಪ್ರೇಂಜಿ ಫೌಂಡೇಷನ್ ಆಯೋಜಿಸಿದ್ದ 'ಸಂಸ್ಕೃತಿ ಮತ್ತು ಮನರಂಜನೆ' ಕಾರ್ಯಕ್ರಮದಲ್ಲಿ ಗುರುವಾರ ಹೇಳಿದ್ದಾರೆ.

"ರವೀಂದ್ರನಾಥ ಟಾಗೋರ್ ಅವರು ಅತ್ಯಂತ ಕಳಪೆಮಟ್ಟದ ನಾಟಕಗಳನ್ನು ಬರೆದಿದ್ದಾರೆ. ನಾವು ಪ್ರಾಯೋಗಿಕವಾಗಿ ಯೋಚಿಸುವುದನ್ನು ಕಲಿಯಬೇಕು" ಎಂದು ಕನ್ನಡದಲ್ಲಿ ಹಯವದನ, ನಾಗಮಂಡಲ, ತುಘಲಕ್, ಅಂಜು ಮಲ್ಲಿಗೆ, ತಲೆದಂಡ ಮುಂತಾದ ಖ್ಯಾತ ನಾಟಕಗಳನ್ನು ಬರೆದಿರುವ ಗಿರೀಶ್ ಕಾರ್ನಾಡ್ ಅವರು ಮತ್ತೊಂದು ಚರ್ಚೆಗೆ ವೇದಿಕೆ ಕಲ್ಪಿಸಿದ್ದಾರೆ.

ನೈಪಾಲ್ ಅವರನ್ನು ಮುಸ್ಲಿಂ ವಿರೋಧಿ ಎಂದು ವ್ಯಾಖ್ಯಾನಿಸಿ, ಅವರನ್ನು ಸನ್ಮಾನ ಮಾಡುವ ಅವಶ್ಯಕತೆಯಾದರೂ ಏನಿತ್ತು ಎಂದಿದ್ದಕ್ಕೆ ಸಾರಸ್ವತ ಲೋಕದಿಂದ ಅನೇಕ ಪರವಿರೋಧಿ ಹೇಳಿಕೆಗಳು ಬಂದಿವೆ. ಮತ್ತೊಬ್ಬ ಖ್ಯಾತ ಲೇಖಕಿ ಬಾಂಗ್ಲಾ ದೇಶದ ತಸ್ಲೀಮಾ ನಸ್ರೀನ್ ಅವರು, "ನೈಪಾಲ್ ಏನಾದರೂ ಭಾರತೀಯ ಭಾಷೆಯಲ್ಲಿ ಪುಸ್ತಕಗಳನ್ನು ಬರೆದಿದ್ದರೆ, ಭಾರತದಲ್ಲಿ ಕೂಡ ಅವರು ಗುರುತಿಸಲ್ಪಡುತ್ತಿರಲಿಲ್ಲ" ಎಂದು ಕಾರ್ನಾಡ್ ಅವರನ್ನು ಬೆಂಬಲಿಸಿ ಟ್ವೀಟ್ ಮಾಡಿದ್ದರು.

ಎಷ್ಟೇ ಟೀಕೆಗಳು ಬಂದಿದ್ದರೂ ಕಾರ್ನಾಡ್ ಅವರು ತಮ್ಮ ಹೇಳಿಕೆಯನ್ನು ಬಲವಾಗಿ ಸಮರ್ಥಿಸಿಕೊಂಡಿದ್ದರು. ಖ್ಯಾತ ಲೇಖಕ ನೈಪಾಲ್ ಅವರನ್ನು ಬಹಿರಂಗವಾಗಿ ಟೀಕಿಸಿದ್ದಕ್ಕೆ ಯಾವುದೇ ಖೇದವಿಲ್ಲ ಎಂದು ನುಡಿದಿದ್ದರು. ನನ್ನನ್ನು ಬೇಕಾದರೆ ಜಾತ್ಯತೀತ ಲೇಖಕ ಎಂದು ಜರೆಯಿರಿ, ಆದರೆ, ಮುಸ್ಲಿಂ ಸಮುದಾಯವನ್ನು ತೆಗಳುವ ಹಕ್ಕು ನೈಪಾಲ್ ಅವರಿಗೆ ಇಲ್ಲ. ಭಾರತದ ಇತಿಹಾಸದಲ್ಲಿ ಮುಸ್ಲಿಂರು ಪ್ರಮುಖ ಪಾತ್ರವಹಿಸಿದ್ದಾರೆ ಎಂಬ ಜ್ಞಾನ ಕೂಡ ನೈಪಾಲ್ ಅವರಿಗೆ ಇಲ್ಲ ಎಂದು ಗಿರೀಶ್ ಕಾರ್ನಾಡ್ ಕೆಂಡ ಕಾರಿದ್ದರು.

ಮುಂಬೈನಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ತಮ್ಮ ರಂಗಭೂಮಿಯ ಪಯಣದ ಬಗ್ಗೆ ಕಾರ್ನಾಡ್ ಅವರನ್ನು ಆಹ್ವಾನಿಸಲಾಗಿತ್ತು. ಅವರಿಗೆ ನೀಡಿದ್ದ ವಿಷಯಕ್ಕೂ ನೈಪಾಲ್‌ಗೂ ಸಂಬಂಧವೇ ಇರಲಿಲ್ಲ. ನೈಪಾಲ್ ಬಗ್ಗೆ ಟೀಕಿಸಿ ಅನಗತ್ಯ ವಿವಾದ ಸೃಷ್ಟಿಸುವ ಅವಶ್ಯಕತೆಯೇ ಇರಲಿಲ್ಲ ಎಂದು ಮುಂಬೈ ಸಾಹಿತ್ಯ ಸಮ್ಮೇಳನದ ಆಯೋಜಕ ಅನಿಲ್ ಧರಕರ್ ಅವರು ಗಿರೀಶ್ ಕಾರ್ನಾಡ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಮೊದಲು ನೈಪಾಲ್, ಈಗ ರವೀಂದ್ರನಾಥ ಟಾಗೋರ್, ಮುಂದೆ ಗಿರೀಶ್ ಕಾರ್ನಾಡ್ ಅವರ ಟೀಕೆಗೆ ಯಾರು ಗುರಿಯಾಗಲಿದ್ದಾರೆ?

English summary
It seems actor and playwright Girish Karnad is miffed with the entire literary world. After attacking Nobel Laureate VS Naipaul, Karnad has trained his gun on Nobel Laureate poet Rabindranath Tagore. Karnad has said Tagore was second rate playwrite. Do you agree?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X