ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ ರಾಜ್ಯಕ್ಕೆ ಅಧಿಕೃತ ಬಾವುಟ ಇಲ್ಲ

By Mahesh
|
Google Oneindia Kannada News

ಬೆಂಗಳೂರು, ಅ.31: ಇಡೀ ರಾಜ್ಯದ ಜನತೆ ಗುರುವಾರ 57ನೇ ಕನ್ನಡ ರಾಜ್ಯೋತ್ಸವ ಆಚರಣೆ ಸಡಗರಕ್ಕೆ ಸಜ್ಜಾಗುತ್ತಿರುವಾಗಲೇ ರಾಜ್ಯ ಸರ್ಕಾರ ಸಣ್ಣದಾದ ಆಘಾತಕಾರಿ ಸುದ್ದಿ ಹೊರ ಹಾಕಿದೆ. ಕರ್ನಾಟಕಕ್ಕೆ ಅಧಿಕೃತ ಧ್ವಜ ಇಲ್ಲ ಹೈಕೋರ್ಟ್‌ಗೆ ಕರ್ನಾಟಕ ಸರ್ಕಾರ ಬುಧವಾರ(ಅ.31) ಪ್ರಮಾಣ ಪತ್ರ ಸಲ್ಲಿಸಿದೆ.

ಹೀಗಾಗಿ ನಾಳೆ ಸರ್ಕಾರಿ ಕಚೇರಿಗಳ ಮುಂಭಾಗ ಅಧಿಕೃತವಾಗಿ ಕನ್ನಡ ಧ್ವಜ ಹಾರುವುದಿಲ್ಲ. ಅದರೆ, ಸರ್ಕಾರದ ಈ ಹೇಳಿಕೆ ಸಾರ್ವಜನಿಕರಲ್ಲಿ ಮಾತ್ರ ಗೊಂದಲ ಹುಟ್ಟು ಹಾಕಿದ್ದು, ಹೊಸ ವಿವಾದಕ್ಕೆ ನಾಂದಿ ಹಾಡಿದೆ.

Karnataka has no Official Flag, Govt to HC

ಏನಿದು ಪ್ರಕರಣ: ವಕೀಲ ಪ್ರಕಾಶ್ ಶೆಟ್ಟಿ ಎಂಬುವರು ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ ಕನ್ನಡ ಧ್ವಜವನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಬಗ್ಗೆ ಆಕ್ಷೇಪವೆತ್ತಿದ್ದರು. ಇರುವ ಧ್ವಜಕ್ಕೆ ಮರ್ಯಾದೆ ನೀಡುವುದಕ್ಕಿಂತ ಧ್ವಜವನ್ನು ವಿರೂಪಗೊಳಿಸಿ ವ್ಯಕ್ತಿ ಪೂಜೆ ನಡೆಯುತ್ತಿದೆ ಎಂದು ತಮ್ಮ ಅರ್ಜಿಯಲ್ಲಿ ಶೆಟ್ಟಿ ಹೇಳಿದ್ದರು.

ಈ ಅರ್ಜಿಯ ವಿಚಾರಣೆ ಕೈಗೆತ್ತಿಕೊಂಡಿದ್ದ ಹೈಕೋರ್ಟ್‌ನ ಪೀಠ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿತ್ತು. ನೋಟಿಸ್‌ಗೆ ಉತ್ತರವಾಗಿ ರಾಜ್ಯ ಸರ್ಕಾರ ಪ್ರಮಾಣ ಪತ್ರ ಸಲ್ಲಿಸಿದ್ದು, ಅದರಲ್ಲಿ ಕನ್ನಡ ನಾಡಿಗೆ ಅಧಿಕೃತವಾದ ಧ್ವಜ ಇಲ್ಲ ಎಂದು ತಿಳಿಸಿದೆ.

ಇಷ್ಟು ಸಾಲದೆಂಬಂತೆ ಒಂದು ಹೆಜ್ಜೆ ಮುಂದಿಟ್ಟಿರುವ ಜಗದೀಶ್ ಶೆಟ್ಟರ್ ಅವರ ಸರ್ಕಾರ, ಈ ಹಿಂದಿನ ಮುಖ್ಯಮಂತ್ರಿ ನೀಡಿದ್ದ ಆದೇಶವನ್ನು ಹಿಂಪಡೆದಿದೆ.

ಡಿ.ವಿ.ಸದಾನಂದಗೌಡರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಎಲ್ಲಾ ಸರ್ಕಾರಿ ಕಚೇರಿ ಹಾಗೂ ಸಂಸ್ಥೆಗಳ ಮೇಲೆ ಕನ್ನಡ ಬಾವುಟ ಹಾರಿಸುವಂತೆ ಬಜೆಟ್ ಮಂಡಿಸುವ ವೇಳೆ ಸುತ್ತೋಲೆ ಹೊರಡಿಸಿದ್ದರು. ಈ ಆದೇಶವನ್ನು 4.10.2012ಕ್ಕೆ ಅನುಗುಣವಾಗಿ ವಾಪಸ್ ಪಡೆದಿರುವುದಾಗಿ ಶೆಟ್ಟರ್ ಸರ್ಕಾರ ಪ್ರಮಾಣ ಪತ್ರದಲ್ಲಿ ಸ್ಪಷ್ಟಪಡಿಸಿದೆ.

ಕನ್ನಡ ನಾಡಿಗೆಂದು ಅಧಿಕೃತ ಧ್ವಜ ಇಲ್ಲ. ಖಾಸಗಿಯವರು ಭಾವನಾತ್ಮಕವಾಗಿ ಧ್ವಜವನ್ನು ಹಾರಿಸುತ್ತಿದ್ದಾರೆ ಎಂದು ಸರ್ಕಾರದ ಪರ ವಕೀಲರು ಪೀಠಕ್ಕೆ ತಿಳಿಸಿದರು.

ಸರ್ಕಾರದ ಉತ್ತರದಿಂದ ಅಸಮಾಧಾನಗೊಂಡ ಹೈಕೋರ್ಟ್ ಪೀಠ, ಬಳಕೆ ಮಾಡುವುದಿದ್ದರೆ ಒಂದೇ ಧ್ವಜವನ್ನು ಎಲ್ಲೆಡೆ ಬಳಸಿ ಪ್ರತ್ಯೇಕ ಧ್ವಜ ಹಾರಿಸುವುದನ್ನು ತಡೆಯಲಾಗದಿದ್ದರೆ ನಿಮ್ಮದು ದುರ್ಬಲ ಸರ್ಕಾರವೇ ಎಂದು ಖಾರವಾಗಿ ಪ್ರಶ್ನಿಸಿತು.

ಹಾಗಾದ್ರೆ ನಾಳೆ ಧ್ವಜ ಹಾರಿಸಬಹುದೇ? ಅಥವಾ ಹಾರಿಸಬಾರದೆ? : ರಾಜ್ಯೋತ್ಸವ ಆಚರಣೆ ಆರಂಭವಾಗಿ 57 ವರ್ಷ ಕಳೆದು ರಾಜ್ಯಕ್ಕೆ ಒಂದು ಅಧಿಕೃತ ಧ್ವಜ ಇಲ್ಲ ಎನ್ನುವುದು ಬೇಸರದ ಸಂಗತಿಯಾದರೂ, ಬಳಕೆಯಲ್ಲಿರುವ ಹಳದಿ ಕೆಂಪು ಜೋಡಣೆಯ ಧ್ವಜವನ್ನೇ ಅಧಿಕೃತ ಧ್ವಜ ಎನ್ನಲು ಅನೇಕ ಕನ್ನಡಿಗರು ಸಿದ್ಧವಿದ್ದಾರೆ. ಅದು ಅಧಿಕೃತವೋ, ಅನಧಿಕೃತವೋ ಚಿಂತೆ ಮಾಡುವ ಗೋಜಿಗೆ ಯಾರು ಹೋಗಿಲ್ಲ. ಆ ರಗಳೆ ಸರ್ಕಾರಕ್ಕೆ ಮಾತ್ರ ಇದೆ.

ಸರ್ಕಾರಿ ಆದೇಶ ಪಾಲನೆಗಿಂತ ಕನ್ನಡ ಧ್ವಜ ಭಾವನಾತ್ಮಕ ಸಂಕೇತವಾಗಿರುವುದರಿಂದ ಧ್ವಜ ಹಾರಿಸುವುದರಲ್ಲಿ ತಪ್ಪೇನಿಲ್ಲ. ಕೋರ್ಟ್ ಆದೇಶ ಇರುವುದು ಎಲ್ಲಾ ಅಧಿಕೃತ ಧ್ವಜಗಳನ್ನು ಬಳಸುವುದರ ಬಗ್ಗೆ ಸಂವಿಧಾನ ಹೇಳಿರುವ ನಿಯಮಗಳೇ ಆಗಿದೆ.

ಧ್ವಜ ವಿರೂಪಗೊಳಿಸದೆ, ಧ್ವಜದ ಮಧ್ಯದಲ್ಲಿ ಪುಢಾರಿಗಳ ಚಿತ್ರ ಹಾಕಿ ಏರಿತು ಹಾರಿತು ನೋಡು ನಮ್ಮ ಬಾವುಟ ಎಂದರೆ ಮಾತ್ರ ಅದು ದ್ರೋಹವಾದೀತು ಎಚ್ಚರ.

English summary
Karnataka state has no Official Flag Karnataka Government says to High court Karnataka ahead of Kannada Rajyotsava day on Nov.1. HC today(Oct.31) heard Advocate Prakash Shetty filed PIL on misusing Kannada flag. HC issued notice to Karnataka government
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X