ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುಸುಮ ರಗಳೆ; ಶಾಲೆಗೆ ರಜೆ ಇದೆ-ಇಲ್ಲ-ಗೊಂದಲ

By Srinath
|
Google Oneindia Kannada News

ಬೆಂಗಳೂರು, ಜುಲೈ 16: ವಾರದ ಆರಂಭದ ದಿನವಾದ ಇಂದು (ಸೋಮವಾರ) ಪೋಷಕರು ಮತ್ತು ಶಾಲಾ ಮಕ್ಕಳು ಗೊಂದಲಕ್ಕೆ ಸಿಲುಕಿದ್ದಾರೆ. ಅದಕ್ಕಿಂತ ಹೆಚ್ಚಾಗಿ ಈ ಗೊಂದಲಕ್ಕೆ ಕಾರಣವಾದ ಖಾಸಗಿ ಶಾಲೆಗಳ ಒಕ್ಕೂಟವೂ ಗೊಂದಲದಲ್ಲಿದೆ. ಇದಕ್ಕೆಲ್ಲ ಕಾರಣವಾಗಿರುವುದು ಕುಂಭಕರ್ಣನಂತೆ ನಿದ್ರಿಸುತ್ತಿರುವ ರಾಜ್ಯ ಸರಕಾರ.

karnataka-rte-row-schools-to-shut-or-not-confusion

ಯಾವುದೋ ಒಕ್ಕೂಟ ಬಂದ್ ಆಚರಿಸುತ್ತಿದೆಯಂತೆ. ಅದು ಯಾವುದೂ ಅಂತಲೂ ಗೊತ್ತಿಲ್ಲ. ಹಾಗಾದರೆ ನಮ್ಮ ಮಗು ಹೋಗುತ್ತಿರುವ ಶಾಲೆಗೂ ಇದು ಅನ್ವಯಿಸುತ್ತದಾ? ಅಥವಾ ಅದರದೇ ಆದ ಬೇರೆ ಶಾಲೆಗಳಿವೆಯಾ? ಸರಕಾರವೇನು ಮಾಡುತ್ತಿದೆ? ಎಂದು ಪೋಷಕರು ತಲೆಗೊಂದರಂತೆ ಪ್ರಶ್ನೆಗಳ ಸುರಿಮಳೆಗೆರೆಯುತ್ತಿದ್ದಾರೆ.

ಕಡ್ಡಾಯ ಶಿಕ್ಷಣ ಹಕ್ಕು (RTE) ಅನುಷ್ಠಾನದಲ್ಲಿ ಅಲ್ಪಸಂಖ್ಯಾತ ಶಾಲೆಗಳ ಕುರಿತ ಗೊಂದಲ ನಿವಾರಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆ ಆಗ್ರಹಿಸಿ ಕರ್ನಾಟಕ ಅನುದಾನರಹಿತ ಶಾಲೆಗಳ ಆಡಳಿತ ಮಂಡಳಿ ಸಂಘ (ಕುಸ್ಮಾ) ಜುಲೈ 16ರಿಂದ 22ರವರೆಗೆ ಶಾಲೆ ಬಂದ್ ನಡೆಸಲಿದೆ. ಈ ಮಧ್ಯೆ, ಸಿಬಿಎಸ್ಇ, ಐಸಿಎಸ್ಇ ಶಾಲೆಗಳು ತೆರೆದಿವೆ.

ಬೆಂಗಳೂರಿನ 460 ಖಾಸಗಿ ಶಾಲೆಗಳೂ ಸೇರಿದಂತೆ ರಾಜ್ಯದಾದ್ಯಂತ 1800 ಶಾಲೆಗಳಲ್ಲಿ ಬಂದ್ ನಡೆಸಲಾಗುವುದು ಎಂದು 'ಕುಸ್ಮಾ' ಪ್ರಕಟಿಸಿದೆ. ಈ ಮಧ್ಯೆ, 'ಕುಸ್ಮಾ' ಬೇಡಿಕೆಗಳಿಗೆ ಸಹಮತ ಇದ್ದರೂ ಬಂದ್‌ನಲ್ಲಿ ಪಾಲೊಳ್ಳುವುದಿಲ್ಲ ಎಂದು ಖಾಸಗಿ ಶಾಲೆಗಳ ಇತರೆ ಸಂಘಟನೆಗಳೂ ಹೇಳಿವೆ. ಅಲ್ಲಿಗೆ 'ಕುಸ್ಮಾ' ವ್ಯಾಪ್ತಿಗೆ ಬರುವ ಶಾಲೆಗಳು ಮಾತ್ರವೇ ಬಂದ್ ಆಗಲಿವೆ. ಆದರೆ ಅದಕ್ಕೆ ಇತರೆ ಖಾಸಗಿ ಶಾಲೆಗಳೂ ಸಹಮತ ತೋರಿವೆ ಎಂದಾಯಿತು.

ಇನ್ನು ಈ 'ಕುಸ್ಮಾ' ವ್ಯಾಪ್ತಿಗೆ ಬರುವ ಶಾಲೆಗಳು ಯಾವುವು, ಅವುಗಳನ್ನು ಗುರುತಿಸುವುದು ಹೇಗೆ? ಅದೇ ಈಗ ವಿವಾದದ ವಸ್ತುವಾಗಿರುವುದು. ಸುಪ್ರೀಂ ಕೋರ್ಟ್ ಆದೇಶ ಪಾಲಿಸುವ ಭರದಲ್ಲಿ ರಾಜ್ಯ ಸರಕಾರವೇನೂ ಕಡ್ಡಾಯ ಶಿಕ್ಷಣ ಹಕ್ಕು (RTE) ನೀತಿಯನ್ನು ಆತುರಾತುರವಾಗಿ ಜಾರಿಗೆ ತಂದುಬಿಟ್ಟಿದೆ. ಆದರೆ ಖುದ್ದು ಸರಕಾರಕ್ಕೆ ಯಾವೆಲ್ಲ ಶಾಲೆಗಳ ಮೇಲೆ ಈ ನೀತಿಯನ್ನು ಅನ್ವಯಿಸಬೇಕು ಎಂಬುದು ಗೊತ್ತಿಲ್ಲ.

'ಹಾಗಾಗಿ, ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳ ವ್ಯಾಪ್ತಿಗೆ ಬರುವ ಶಾಲೆಗಳು ಯಾವುವು ಎಂಬುದನ್ನು ಸ್ಪಷ್ಟಪಡಿಸುವಂತೆ ಕುಸ್ಮಾ ಎರಡು ಮೂರು ತಿಂಗಳುಗಳಿಂದ ಸರಕಾರವನ್ನು ಕೇಳುತ್ತಲೇ ಬಂದಿದೆ. ಆದರೆ ಶಿಕ್ಷಣ ಇಲಾಖೆಗೆ ಗಾಢ ನಿದ್ರೆ. ಒಟ್ಟು ವಿದ್ಯಾರ್ಥಿಗಳಲ್ಲಿ ಶೇಕಡ 75 ಅಥವಾ ಅದಕ್ಕಿಂತ ಹೆಚ್ಚು ಸಂಖ್ಯೆಯಲ್ಲಿ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳನ್ನು ಹೊಂದಿರುವ ಶಾಲೆಗಳನ್ನು ಮಾತ್ರ ಶಿಕ್ಷಣ ಹಕ್ಕು ಕಾಯ್ದೆಯಡಿ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳು ಎಂದು ಪರಿಗಣಿಸಲು ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು. ಆದರೆ, ಸರ್ಕಾರದ ಆದೇಶದಲ್ಲಿ ಮತ್ತೆ ತಾರತಮ್ಯ ಎಸಗಲಾಗಿದೆ. ಜಾತಿ ಹಾಗೂ ಪ್ರಾಂತ್ಯವಾರು ಭಾಷಾ ಅಲ್ಪಸಂಖ್ಯಾತರು ಯಾರು ಎಂಬುದನ್ನು ಸ್ಪಷ್ಟಪಡಿಸಿಲ್ಲ ಎಂದು ಕುಸ್ಮಾ ಆರೋಪಿಸಿದೆ.

Kumarans Children's Home, Nandini Layout Oxford School, Aurobindo School, Carmel School, Vidyashankar School, Kengeri VES Public School ಮತ್ತು Athens School ಈ ವ್ಯಾಪ್ತಿಗೆ ಬರುವ ಕೆಲವು ಪ್ರಮುಖ ಶಾಲೆಗಳು.

'ಸಂಘಟನೆಯ ವ್ಯಾಪ್ತಿಯಲ್ಲಿ ಸಿಬಿಎಸ್‌ಇ, ಐಸಿಎಸ್‌ಇ, ರಾಜ್ಯ ಪಠ್ಯಕ್ರಮದ 1800 ಖಾಸಗಿ ಶಿಕ್ಷಣ ಸಂಸ್ಥೆಗಳು ಇವೆ. ಕಾಯ್ದೆ ಅನುಷ್ಠಾನ ಮಾಡುವಾಗ ರಾಜ್ಯ ಸರ್ಕಾರ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಈ ಕಾಯ್ದೆಯೇ ಅಪೂರ್ಣ. ಸರ್ಕಾರದ ನಿಲುವನ್ನು ಖಂಡಿಸಿ ಮೊದಲ ಹಂತದಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ. ಸರ್ಕಾರದ ಬೆದರಿಕೆ ತಂತ್ರಗಳಿಗೆ ಜಗ್ಗುವುದಿಲ್ಲ. ಪ್ರತಿಭಟನೆ ಕೈ ಬಿಡುವ ಪ್ರಶ್ನೆಯೇ ಇಲ್ಲ' ಎಂದು ಕುಸ್ಮಾ ಅಧ್ಯಕ್ಷ ಜಿಎಸ್ ಶರ್ಮ ಎಚ್ಚರಿಸಿದ್ದಾರೆ.

'ಮೂರು ತಿಂಗಳಿಂದ ಕಾಯ್ದೆಯ ಗೊಂದಲದ ಬಗ್ಗೆ ಸರ್ಕಾರಕ್ಕೆ ನಿರಂತರವಾಗಿ ಪತ್ರ ಬರೆದು ಗಮನ ಸೆಳೆಯಲಾಗಿತ್ತು. ಖಾಸಗಿ ಶಾಲೆಗಳ ಬೇಡಿಕೆಗೆ ಯಾವ ಹಂತದಲ್ಲೂ ಸ್ಪಂದಿಸಿಲ್ಲ. ಗೊಂದಲ ನಿವಾರಣೆಗೆ ಶಿಕ್ಷಣ ಇಲಾಖೆ ಒಂದೇ ಒಂದು ಸಭೆ ಕರೆದಿಲ್ಲ. ಸರ್ಕಾರದ ನೀತಿಯಿಂದ ಖಾಸಗಿ ಶಿಕ್ಷಣ ಸಂಸ್ಥೆಗಳು ಉಳಿವಿಗಾಗಿ ಹೋರಾಟ ನಡೆಸುವ ಸ್ಥಿತಿ ನಿರ್ಮಾಣವಾಗಿದೆ' ಎಂದು ಸಂಘದ ಕಾರ್ಯದರ್ಶಿ ಎ. ಮರಿಯಪ್ಪ ಆಕ್ರೋಶ ವ್ಯಕ್ತಪಡಿಸಿದರು.

70 ಶಾಲೆಗಳಿಗೆ ನೋಟಿಸ್ ಜಾರಿ:
'ಅಧಿಕಾರಿಗಳ ತಪ್ಪುಗಳನ್ನು ಮರೆಮಾಚಿ ಖಾಸಗಿ ಶಿಕ್ಷಣ ಸಂಸ್ಥೆಗಳ ಮೇಲೆ ಶಿಕ್ಷಣ ಇಲಾಖೆ ಸವಾರಿ ಮಾಡಲು ಹೊರಟಿದೆ. ಆರ್‌ಟಿಇ ಸಮರ್ಪಕ ಅನುಷ್ಠಾನ ಮಾಡಿಲ್ಲ ಎಂಬ ಕಾರಣ ನೀಡಿ ಹಾಸನ, ಬೆಂಗಳೂರು, ತುಮಕೂರು, ಬಳ್ಳಾರಿ, ಚಾಮರಾಜನಗರ, ಉಡುಪಿ, ಗದಗ ಜಿಲ್ಲೆಯ ಒಟ್ಟು 70 ಖಾಸಗಿ ಶಾಲೆಗಳಿಗೆ ಶಿಕ್ಷಣ ಇಲಾಖೆ ನೋಟಿಸ್ ಜಾರಿ ಮಾಡಿದೆ. ಶಾಲೆಗಳಿಗೆ ತಲಾ ಒಂದು ಲಕ್ಷ ರೂಪಾಯಿ ದಂಡ ವಿಧಿಸಲಾಗುವುದು. ಶಾಲಾ ಬಂದ್ ಮಾಡಿ ಜೈಲಿಗೆ ತಳ್ಳಲಾಗುವುದು ಎಂದು ಅಧಿಕಾರಿಗಳು ಬೆದರಿಕೆ ಹಾಕುತ್ತಿದ್ದಾರೆ. ಇಂತಹ ಪ್ರವೃತ್ತಿಗೆ ತಡೆಯೊಡ್ಡಲು ಬಂದ್ ಅನಿವಾರ್ಯ' ಎಂದು ಅವರು ಸ್ಪಷ್ಟಪಡಿಸಿದರು.

ಪೋಷಕರಿಗೆ ಮನವರಿಕೆ:
'ಯಾವ ಶಾಲೆಗೂ ರಜೆ ಘೋಷಿಸಿಲ್ಲ. ಬದಲು ಬಂದ್ ಮಾಡಲಾಗುತ್ತಿದೆ' ಎಂದು ಸ್ಪಷ್ಟಪಡಿಸಿರುವ ಅವರು, 'ಬಂದ್‌ಗೆ ಪೋಷಕರು ಆತಂಕ ವ್ಯಕ್ತಪಡಿಸಿ ವಿರೋಧ ವ್ಯಕ್ತಪಡಿಸಿದ್ದರು. ಅವರಿಗೆ ಸಮಸ್ಯೆಯ ಬಗ್ಗೆ ಮನವರಿಕೆ ಮಾಡಿಕೊಡಲಾಗಿದೆ. ಒಂದು ವಾರದಲ್ಲಿ 30 ಗಂಟೆಗಳ ತರಗತಿ ನಷ್ಟವಾಗಲಿದೆ. ಬಳಿಕ ವಿಶೇಷ ತರಗತಿಗಳನ್ನು ನಡೆಸುವ ಮೂಲಕ ಸರಿದೂಗಿಸಲಾಗುವುದು. ವಿದ್ಯಾರ್ಥಿಗಳಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗುವುದಿಲ್ಲ' ಎಂದು ಅವರು ವಿರಿಸಿದ್ದಾರೆ.

'ಮೂರು ತಿಂಗಳಿಂದ ಸಂಘಟನೆಯ ಜೊತೆಗೆ ಮಾತುಕತೆಗೆ ಮುಂದಾಗದ ಶಿಕ್ಷಣ ಇಲಾಖೆಯ ಅಧಿಕಾರಿಗಳು ಸೋಮವಾರ ಸಭೆ ಕರೆದು ಚರ್ಚಿಸಲಾಗುವುದು ಎಂದಿದ್ದಾರೆ. ಸಭೆಯಲ್ಲಿ ಪಾಲ್ಗೊಳ್ಳುತ್ತೇವೆ. ನಮ್ಮ ಬೇಡಿಕೆಯನ್ನು ಮುಂದಿಡಲಾಗುವುದು. ಅಧಿಕಾರಿಗಳು ಭರವಸೆ ಕೊಟ್ಟರೂ ಬಂದ್ ಹಿಂತೆಗೆದುಕೊಳ್ಳುವುದಿಲ್ಲ. ಶಾಲೆಗಳ ಮಾನ್ಯತೆ ರದ್ದುಪಡಿಸಿದರೂ ಬೆದರುವುದಿಲ್ಲ. ಸರ್ಕಾರಕ್ಕೆ ಸ್ಪಷ್ಟ ಸಂದೇಶ ಸಿಕ್ಕಿ ಎಚ್ಚರಿಕೆಯ ಗಂಟೆಯಾಗಬೇಕು ಎಂಬುದು ಬಂದ್ ಉದ್ದೇಶ' ಎಂದು ಅವರು ತಿಳಿಸಿದರು.

'ಬಂದ್ ಶಿಕ್ಷಣ ಹಕ್ಕು ಕಾಯ್ದೆಯ ಉಲ್ಲಂಘನೆಯಾಗಿದ್ದು, ಮಕ್ಕಳ ಶಿಕ್ಷಣ ಹಕ್ಕನ್ನು ಕಸಿದುಕೊಂಡಂತೆ ಆಗುತ್ತದೆ. ಇದಕ್ಕೆ ಶಾಲೆಗಳ ಆಡಳಿತ ಮಂಡಳಿ ಮತ್ತು ಮುಖ್ಯ ಶಿಕ್ಷಕರು ನೇರ ಹೊಣೆಗಾರರಾಗುತ್ತಾರೆ. ಖಾಸಗಿ ಶಾಲೆಗಳು ತಮ್ಮ ಸಮಸ್ಯೆಯನ್ನು ಲಿಖಿತವಾಗಿ ತಿಳಿಸಿದರೆ ಕಾನೂನಿನ ಇತಿಮಿತಿಯಲ್ಲಿ ಪರಿಶೀಲಿಸಲಾಗುವುದು' ಎಂದು ಬೆಂಗಳೂರು ಗ್ರಾಮಾಂತರ ಡಿಡಿಪಿಐ ಎಚ್.ವಿ.ವೆಂಕಟೇಶಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇಂದು ಮಹತ್ವದ ಸಭೆ
ಕರ್ನಾಟಕ ಅನುದಾನರಹಿತ ಶಾಲೆಗಳ ಆಡಳಿತ ಮಂಡಳಿ ಒಕ್ಕೂಟ (ಕುಸ್ಮಾ) ಶಾಲಾ ಬಂದ್ ನಡೆಸುತ್ತಿರುವ ಕಾರಣ ಸಂಘಟನೆಯ ಪದಾಧಿಕಾರಿಗಳ ಜೊತೆಗೆ ಚರ್ಚಿಸಿ ಸಮಸ್ಯೆಗೆ ಪರಿಹಾರ ಕಂಡು ಹಿಡಿಯಲು ಶಿಕ್ಷಣ ಇಲಾಖೆ ಸೋಮವಾರ ಮಧ್ಯಾಹ್ನ 3 ಗಂಟೆಗೆ ನಗರದ ಸರ್ವ ಶಿಕ್ಷಣ ಅಭಿಯಾನದ ಕಚೇರಿಯಲ್ಲಿ ಸಭೆ ಕರೆದಿದೆ.

ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಜಿ. ಕುಮಾರ್ ನಾಯಕ್, ಪ್ರಾಥಮಿಕ ಶಿಕ್ಷಣ ಇಲಾಖೆ ನಿರ್ದೇಶಕ ಎ. ದೇವಪ್ರಕಾಶ್ ಸಭೆಯಲ್ಲಿ ಭಾಗವಹಿಸುವರು. ಕುಸ್ಮಾ ಪದಾಧಿಕಾರಿಗಳನ್ನು ಸಭೆಗೆ ಆಹ್ವಾನಿಸಲಾಗಿದೆ ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

English summary
Karnataka RTE row schools to shut or not. Confusion prevails. Starting today (July 16), 480 schools across the city will be closed as part of the state-wide bandh called by the Karnataka Unaided Schools Management Association (KUSMA).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X