ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿಜಕ್ಕೂ ನಿಧಿಗಾಗಿ ನರ ಬಲಿಯಾಸೆ ಆತನಿಗಿತ್ತೇ?

By Srinath
|
Google Oneindia Kannada News

ಬೆಂಗಳೂರು‌, ಜುಲೈ 13: ರಾಜಧಾನಿಯಲ್ಲಿ 'ನಿಧಿಯಾಸೆಗಾಗಿ ನರಬಲಿಗೆ ಯತ್ನ ನಡೆದಿದೆ' ಎಂಬ ಪುಕಾರು ಎದ್ದಿದೆ. ಆದರೆ ನಿಧಿಗಾಗಿ ನರ ಬಲಿಯಾಸೆ ಪ್ರಕರಣ ನಿಜಕ್ಕೂ ನಡೆಯಿತೇ? ಅಥವಾ ಸುಮ್ಮನೇ ಹಾಗೇ ಆ ಮಗುವಿನ ಅಜ್ಜಿ ಪುಕಾರು ಎಬ್ಬಿಸಿದಳೇ? ಈ ಅನುಮಾನಗಳ ಮಧ್ಯೆ ಮಕ್ಕಳು, ಪೋಷಕರು ಆತಂಕದಿಂದ ಬೆಚ್ಚಿಬಿದ್ದಿದ್ದಾರೆ.

ನಿನ್ನೆ ಏನಾಯಿತೆಂದರೆ ಕುಮಾರಸ್ವಾಮಿ ಲೇಔಟಿನಲ್ಲಿ ವಾಸವಾಗಿರುವ ಶಿವಮೊಗ್ಗ ಮೂಲದ ಸಿ ಆರ್ ಸುಮತೀಂದ್ರ ರಾವ್ (ಪಕ್ಕದ ಚಿತ್ರದಲ್ಲಿರುವವರು) ಎಂಬ 52 ವರ್ಷ ವಯಸ್ಸಿನ ವ್ಯಕ್ತಿ ಅಜ್ಜಿಯ ಮಡಿಲಲ್ಲಿದ್ದ ವಿನಯ್ ಎಂಬ 2 ವರ್ಷದ ಬಾಲಕನನ್ನು ಬಲವಂತವಾಗಿ ಕಿತ್ತುಕೊಂಡು ಹೋಗಿ, ನರಬಲಿಗೆ ಮುಂದಾದ ಎನ್ನಲಾಗಿದೆ.

ವೃತ್ತಿಯಲ್ಲಿ ಕಾರು ಚಾಲಕನಾಗಿರುವ ರಾವ್, ಮೂರು ವರ್ಷಗಳ ಹಿಂದೆ ಇಲ್ಲಿನ ಚಂದ್ರನಗರಕ್ಕೆ ಬಂದು ಎರಡನೆಯ ಪತ್ನಿಯೊಂದಿಗೆ ವಾಸವಾಗಿದ್ದ. ಆಕೆ ಸ್ಥಳೀಯ ಕಾಲೇಜೊಂದರಲ್ಲಿ ಹೌಸ್ ಕೀಪಿಂಗ್ ಕೆಲಸದಲ್ಲಿದ್ದಾರೆ.

ಸರಿಯಾಗಿ ಕೆಲಸಕ್ಕೆ ಹೋಗದ ರಾವ್, ಪತ್ನಿಯ ಸಂಬಳದಲ್ಲೇ ಜೀವನದೂಡುತ್ತಿದ್ದ. ಅಕ್ಕಪಕ್ಕದ ಮನೆಯವರ ಜತೆ ಚೆನ್ನಾಗಿದ್ದ. ಸುತ್ತಮುತ್ತಲ ಮಕ್ಕಳನ್ನು ಪ್ರೀತಿಯಿಂದಲೇ ನೋಡಿಕೊಳ್ಳುತ್ತಿದ್ದ. ಇಂತಿಪ್ಪ ರಾವ್ ಆಂಜನೇಯ ಸ್ವಾಮಿ ಭಕ್ತ.

ಈತನ ಮನೆಯ ಸಮೀಪವಿರುವ ವಠಾರದಲ್ಲಿ ವಿನಯ್ ತಾಯಿ ನಾಗರತ್ನ ಹಾಗೂ ತಂದೆ ವಿಶ್ವನಾಥ್ ವಾಸವಾಗಿದ್ದಾರೆ. ವಿಶ್ವನಾಥ್ ಸಹ ಕಾರು ಚಾಲಕರೇ. ಇನ್ನು ನಾಗರತ್ನ ಮನೆಗೆಲಸ ಮಾಡುತ್ತಾರೆ. ಇವರಿಬ್ಬರು ಕೆಲಸಕ್ಕೆ ಹೋದಾಗ ಅಜ್ಜಿ ರಾಜಮ್ಮ ಮಗುವನ್ನು ನೋಡಿಕೊಳ್ಳುತ್ತಾರೆ.

ಗುರುವಾರ ಬೆಳಗ್ಗೆ ಅಜ್ಜಿಯ ಬಳಿಯಿದ್ದ ವಿನಯನನ್ನು ರಾವ್ ತನ್ನ ಮನೆಗೆ ಎತ್ತಿಕೊಂಡು ಹೋಗಿದ್ದಾನೆ. ಇದರಿಂದ ಗಾಬರಿಗೆ ಬಿದ್ದ ಅಜ್ಜಿ ಕೂಗಿಕೊಂಡಿದ್ದಾರೆ. ತಕ್ಷಣ ಗುಂಪುಗೂಡಿದ ಜನ ಮಗುವನ್ನು ಆತನಿಂದ ಬಿಡಿಸಿಕೊಂಡಿದ್ದಾರೆ. ಮಗುವನ್ನು ಏಕೆ ಹಾಗೆ ಮನೆಗೆ ತೆಗೆದುಕೊಂಡು ಹೋದೆ ಎಂದು ಅಜ್ಜಿ ಕೇಳಿದ್ದಕ್ಕೆ 'ನರಬಲಿ ಕೊಡುತ್ತಿದ್ದೇನೆ. ನಿಧಿ ಸಿಗುತ್ತದೆ' ಎಂದು ರಾವ್ ಒದರಿದ್ದಾನೆ.

ಹೆಚ್ಚಿನ ಸಂಖ್ಯೆಯಲ್ಲಿ ಗುಂಪುಗೂಡಿದ ಜನ ರಾವ್ ಗೆ ಸಮ ಧರ್ಮದೇಟು ಕೊಟ್ಟಿದ್ದಾರೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ರಾವ್ ನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಠಾಣೆಯಲ್ಲಿ ದಾಖಲೆಗೆ ಸಹಿ ಹಾಕುವಂತೆ ಪೊಲೀಸರು ಸೂಚಿಸಿದಾಗ 8 ಸಂಖ್ಯೆಯನ್ನು ರಾವ್ ವಿಚಿತ್ರವಾಗಿ ಬರೋಬ್ಬರಿ 20 ಬಾರಿ ಬರೆದು ಇದೇ ನನ್ನ ಸಹಿ ಅಂದನಂತೆ.

ತಲೆಚಚ್ಚಿಕೊಂಡ ಪೊಲೀಸರು 'ಹೋಗಲಿ ಹೆಬ್ಬೆಟ್ಟು ಹಾಕು ಮಾರಾಯ' ಎಂದು ಗೋಗರೆದರಂತೆ. ಆಗ ಐದು ಬೆರಳುಗಳನ್ನು ಮುಂದಿಟ್ಟು ಹೆಬ್ಬೆಟ್ಟು ಹಾಕಲು ಮುಂದಾದನಂತೆ! ಪೊಲೀಸರು ರಾವ್ 'ಅಬ್ ನಾರ್ಮನಲ್' ಎಂದು ಜೈಲಿಗೆ ಕಳಿಸಿದ್ದಾರೆ.

'ರಾವ್ ನನ್ನು ಮೂರ್ನಾಲ್ಕು ವರ್ಷದಿಂದ ನೋಡಿದ್ದೇನೆ. ಮಕ್ಕಳಿಗೆ ಬಿಸ್ಕತ್ತು, ಚಾಕೊಲೇಟು ಕೊಡುತ್ತಿದ್ದ. ತನ್ನ ಪಾಡಿಗೆ ತಾನು ಇರುತ್ತಿದ್ದ. ಕುಡಿದಾಗ ಪತ್ನಿಯ ಜತೆ ಜಗಳವಾಡುತ್ತಿದ್ದ. ಹಲವು ಸಲ ನಾವೂ ಬುದ್ಧಿವಾದ ಹೇಳಿದ್ದೇವೆ. ಅದು ಬಿಟ್ಟರೆ ಬಲಿಕೊಡುವಂತಹ ಜಾಯಮಾನದವನಲ್ಲ ಎನಿಸುತ್ತದೆ. ಮಗುವಿನ ಅಜ್ಜಿ ಹಬ್ಬಿಸಿದ ವದಂತಿಯಿಂದ ಆತ ಅನ್ಯಾಯವಾಗಿ ಜೈಲುಪಾಲಾಗಿದ್ದಾನೆ' ಎಂದು ಪಕ್ಕದ ಮನೆಯ ವಿಜಯ್ ಕುಮಾರ್ ವಾಸ್ತವಕ್ಕೆ ಕನ್ನಡಿ ಹಿಡಿಯುವಂತೆ ಮಾತನಾಡಿದ್ದಾರೆ.

ಮತ್ತೊಬ್ಬರು, 'ಹೋಗಿ ಹೋಗಿ ಯಾರಾದರೂ ಬೆಳಗ್ ಬೆಳಗ್ಗೇನೇ ಬಲಿ ಕೊಡ್ತಾರಾ? ಅದೂ ಮನೆ ಮುಂದೇನೇ? ಅದೂ ಅಜ್ಜಿ ಕಂಕುಳಲ್ಲಿರುವ ಮಗುವನ್ನು ಕಿತ್ತುಕೊಂಡು ಹೋಗಿ ಬಲಿಕೊಡುವಂತಹ ದುಸ್ಸಾಹಸ ಮಾಡೋಕ್ಕಾಗುತ್ತದಾ? ಹೋಗ್ಲಿ ಇವತ್ತೇನು ಅಮಾವಾಸ್ಯೆಯಾ? ಆಷಾಢದ ಅಮಾವಾಸ್ಯಗೆ ಇನ್ನೂ ಒಂದು ವಾರವಿದೆ? ಅಂತಹುದರಲ್ಲಿ ಬಲಿಗಿಲಿ ಅದೆಲ್ಲ ವದಂತಿಯೇ ಅಲ್ವಾ?' ಎಂದು ಕೇಳಿದ್ದಾರೆ.

English summary
A 52 year old CR Sumtheendra Rao from Shimoga tries to sacrifice child in Chandra Nagar in Kumaraswamy layout in Bangalore on July 12, 2012, Thursday. But locals say it is a rumour and the accused was not intended to committ such an act.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X