ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರಳ ಸಜ್ಜನ ಸ್ಫುರದ್ರೂಪಿ ಶಿವಾಚಾರ್ಯ ಸ್ವಾಮೀಜಿ

By * ರೋಹಿಣಿ ಬಳ್ಳಾರಿ
|
Google Oneindia Kannada News

Sri Shivacharya Swamiji, Ujjain
ಜಗದ್ಗುರು ಮರುಳಸಿದ್ಧ ರಾಜದೇಶೀಕೇಂದ್ರ ಶಿವಾಚಾರ್ಯರು ಮೂಲತಃ ಆಂಧ್ರಪ್ರದೇಶದ ಹಿರೇಹಾಳ ಗ್ರಾಮದವರು. ಸಿದ್ಧಯ್ಯ ಹಾಗೂ ಚನ್ನಬಸಮ್ಮನವರ ಪುತ್ರರು. ಇವರ ಪೂರ್ವಾಶ್ರಮದ ಹೆಸರು ಬಸವರಾಜ. ಸಿರಿಗೆರೆ ಮತ್ತು ಹಿರೇಹಾಳ ಮಠದ ಪಟ್ಟಾಧ್ಯಕ್ಷರಾಗಿದ್ದ ವಿರುಪಾಕ್ಷ ಶಿವಾಚಾರ್ಯ ಸ್ವಾಮೀಜಿಯವರ ದಿವ್ಯದೃಷ್ಟಿ ಇವರ ಸನ್ಯಾಸ ಬದುಕನ್ನು ಬದಲಾಯಿಸಿ ಜಗದ್ಗುರು ಪೀಠಕ್ಕೆ ಕರೆದೊಯ್ದಿತ್ತು. 1980 ಜೂನ್ 26ರಂದು ಹಿಂದಿನ ಜಗದ್ಗುರುಗಳಾಗಿದ್ದ ಸಿದ್ಧೇಶ್ವರ ಶಿವಾಚಾರ್ಯರು ಬಸವರಾಜರನ್ನು ಆಯ್ಕೆ ಮಾಡಿ ಶ್ರೀಪೀಠಕ್ಕೆ ಪಟ್ಟಾಭಿಷೇಕ ಮಾಡಿ, ಮರುಳಸಿದ್ಧ ಶಿವಾಚಾರ್ಯ ರಾಜದೇಶೀಕೇಂದ್ರರೆಂಬ ನಾಮಾಂಕಿತ ಮಾಡಿದರು.

ಶ್ರೀಗಳು ಹುಟ್ಟೂರಾದ ಹಿರೇಹಾಳ ಗ್ರಾಮದಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪೂರೈಸಿ, ಮುಂದೆ ತುಮಕೂರಿನ ಸಿದ್ಧಗಂಗಾದಲ್ಲಿ, ನಂತರ ಕಾಶಿ ಪೀಠದ ಸಂಪೂರ್ಣಾನಂದ ಸಂಸ್ಕೃತ ವಿಶ್ವವಿದ್ಯಾಲಯ ಮತ್ತು ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆದರು. ಪದವಿ, ಸ್ನಾತಕೋತ್ತರ ಪದವಿಯನ್ನು ಪೂರೈಸಿದರು. ಜಗದ್ಗುರು ಸಿದ್ಧೇಶ್ವರ ಶಿವಾಚಾರ್ಯರ ಒತ್ತಾಯ ಹಾಗು ಅಪ್ಪಣೆಯ ಮೇರೆಗೆ ಮರುಳಸಿದ್ಧ ಶಿವಾಚಾರ್ಯರು ಉಜ್ಜಯಿನಿ ಶ್ರೀಪೀಠದ ಜವಾಬ್ದಾರಿಯನ್ನು ಹೊತ್ತರು.

ದಾವಣಗೆರೆಯಲ್ಲಿ ನಡೆದ ಪಂಚಪೀಠಾಧೀಶ್ವರರ ಧರ್ಮ ಸಭೆಯಲ್ಲಿ ಶ್ರೀಗಳನ್ನು ಉಜ್ಜಯಿನಿ ಸದ್ಧರ್ಮ ಪೀಠದ ಭಾವೀ ಜಗದ್ಗುರುಗಳೆಂದು ಆಗಲೇ ಘೋಷಿಸಲಾಯಿತು. 1995ರ ನವೆಂಬರ್ 5ರಂದು ಅಂದಿನ ಮುಖ್ಯಮಂತ್ರಿಗಳಾಗಿದ್ದ ಎಚ್.ಡಿ. ದೇವೇಗೌಡ, ಎಂ.ಪಿ. ಪ್ರಕಾಶ್ ಹಾಗೂ ಅನೇಕ ಸಚಿವರು, ಶಾಸಕರು, ಗಣ್ಯರ, ಭಕ್ತ ಸಮೂಹದ ಸಮ್ಮುಖದಲ್ಲಿ ಶ್ರೀಗಳಿಗೆ ಕಿರೀಟ ಧಾರಣೆ ಮಾಡಿ ಪೀಠದ ಮುದ್ರಾ ಉಂಗರವನ್ನು ನೀಡುವ ಮೂಲಕ ಪೀಠದ ಸ್ಥಿರ ಪೀಠಾಧ್ಯಕ್ಷರನ್ನಾಗಿ ಘೋಷಣೆ ಮಾಡಲಾಯಿತು. ಪೀಠವನ್ನು ಮುನ್ನಡೆಸುವ ಜವಾಬ್ದಾರಿ ನೀಡಲಾಯಿತು.

ಜಗದ್ಗುರು ಮರುಳಸಿದ್ಧರಾಜದೇಶಿಕೇಂದ್ರ ಶಿವಾಚಾರ್ಯರು ವಿದ್ವಾಂಸರು, ಸ್ಫುರದ್ರೂಪಿಗಳು, ಸರಳರು, ಸಜ್ಜನರು, ವಾಗ್ಮಿಗಳು, ಶಿಕ್ಷಣ-ಸಾಹಿತ್ಯ ಪ್ರೇಮಿಗಳು, ಶಿವಪೂಜಾನಿಷ್ಠರು, ದೂರದೃಷ್ಟಿಯುಳ್ಳವರು, ತಪೋನಿಧಿಗಳು, ಸೌಮ್ಯವಾದಿಗಳಾಗಿದ್ದರು. ಅಲ್ಪಸಮಯದಲ್ಲೇ ಶ್ರೀಪೀಠವನ್ನು ಸರ್ವತೋಮುಖವಾಗಿ ಅಭಿವೃದ್ಧಿಪಡಿಸುವಲ್ಲಿ ಅವಿರತ ಶ್ರಮಿಸಿದ್ದರು. ಶ್ರೀಮಠದಲ್ಲಿ ನಿತ್ಯದಾಸೋಹ ವ್ಯವಸ್ಥೆಯನ್ನು ಮಾಡಿ ಧರ್ಮ ಜಾಗೃತಿಗಾಗಿ ದೇಶದ ವಿವಿಧ ಭಾಗಗಳಲ್ಲಿ ಸಂಚರಿಸಿ ಧರ್ಮೋಪದೇಶ ನೀಡಿದ್ದಾರೆ. 'ಸದ್ಧರ್ಮಪ್ರಭಾ" ಎಂಬ ಮಾಸಿಕ ಪತ್ರಿಕೆಯನ್ನೂ ಶ್ರೀಪೀಠದಿಂದ ಹೊರತಂದರು. ನಿರಂತರವಾಗಿ ಶ್ರೀ ಪೀಠದಲ್ಲಿ ಪುರಾಣ - ಪ್ರವಚನ, ಧರ್ಮಗೋಷ್ಠಿ ಮುಂತಾದವುಗಳನ್ನು ನಡೆಸಿದರು.

ಹರಪನಹಳ್ಳಿ, ಕೊಟ್ಟೂರು, ಉಜ್ಜಯಿನಿಯ ತಮ್ಮ ಸಂಸ್ಥೆಯ ಅಡಿಯಲ್ಲಿ ಶಿಕ್ಷಣಕ್ಕಾಗಿ ನೂತನ ತರಗತಿಗಳನ್ನು ಆರಂಭಿಸಿದರು. ಶ್ರೀಪೀಠದ ಶ್ರೇಯೋಭಿವೃದ್ಧಿಗೆ ಶ್ರಮಿಸುವ, ಸಹಕರಿಸುವ, ರಾಜಕೀಯ ಧುರೀಣರಿಗೆ, ಸಚಿವರಿಗೆ, ಭಕ್ತರಿಗೆ, ಶ್ರೀಪೀಠದ ಚರಿತ್ರೆ ಬರೆಯುವವರಿಗೆ, ಸಾಹಿತ್ಯ, ಸಂಗೀತ, ಪುರಾಣ, ಪ್ರವಚನ ಮುಂತಾದ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡವರಿಗೆ ಗುರುರಕ್ಷೆ ನೀಡಿ ಸನ್ಮಾನಿಸುವ ಔದಾರ್ಯತೆ ಮೆರೆದವರು. ಶ್ರೀಪೀಠದ ವಿದ್ಯಾಸಂಸ್ಥೆಗಳ ಉತ್ತರೋತ್ತರ ಅಭಿವೃದ್ಧಿಗೆ ಅಹರ್ನಿಶಿ ಶ್ರಮಿಸಿದರು. ಶ್ರೀಪೀಠಕ್ಕೆ ಸಂದರ್ಶಿಸುವ ಭಕ್ತರ ಸಂಖ್ಯೆಯೂ ಅಗಣಿತ. ಸದಾ ಹಸನ್ಮುಖಿಗಳಾಗಿಯೇ ಅವರು ಭಕ್ತರಿಗೆ ಆಶೀರ್ವದಿಸುತ್ತಿದ್ದರು. ಇಂತಹ ಅಪೂರ್ವವಾದ ವ್ಯಕ್ತಿತ್ವವುಳ್ಳ ಶ್ರೀಗಳನ್ನು ಕಳೆದುಕೊಂಡ ಅಪಾರ ಭಕ್ತರು ದುಃಖಸಾಗರದಲ್ಲಿ ಮುಳುಗಿದ್ದಾರೆ.

English summary
Sri Shivacharya Jagadguru of Ujjain Sri Shivacharya is no more. He breathed his last at 8.40 pm in Mutt. He was brought to Toranagallu from Delhi on artificial ventilator. Devotees are flocking to have last darshan of the seer.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X