ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಸೂರಿನ ಆಶ್ರಮದಲ್ಲಿ ಬೋನ್ಸಾಯ್ ಮರಗಳ ಲೋಕ

By * ಬಿ.ಎಂ.ಲವಕುಮಾರ್, ಮೈಸೂರು
|
Google Oneindia Kannada News

Bonsai Garden, Kishkinda Moolika, Mysore
ಮೈಸೂರಿಗೆ ಆಗಮಿಸುವ ಪ್ರವಾಸಿಗರು ಇಲ್ಲಿನ ನಂಜನಗೂಡು ರಸ್ತೆಯಲ್ಲಿರುವ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮಿಗಳ ಅವಧೂತ ದತ್ತ ಪೀಠ ಆಶ್ರಮದಲ್ಲಿರುವ ಬೋನ್ಸಾಯ್ ಗಾರ್ಡನ್‌ಗೆ ಭೇಟಿ ನೀಡದೆ ಹೋದರೆ ನಿಮ್ಮ ಪ್ರವಾಸ ಅಪೂರ್ಣವಾದಂತೆಯೇ ಸರಿ.

ಏಕೆಂದರೆ ಇಲ್ಲಿರುವ ಬೋನ್ಸಾಯ್ ಗಾರ್ಡನ್‌ನ ವೈಶಿಷ್ಟ್ಯತೆಯೇ ಹಾಗಿದೆ. ಬಹುಶಃ ಇಂತಹವೊಂದು ಅಪರೂಪದ ಗಾರ್ಡನ್ ನೀವು ಬೇರೆಲ್ಲೂ ನೋಡಲು ಸಾಧ್ಯವಿಲ್ಲ. ಇದನ್ನು ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮಿಗಳು ತಾವು ಭೇಟಿ ನೀಡಿದ ದೇಶವಿದೇಶಗಳಲ್ಲಿ ತಾವು ನೋಡಿದ ಅಪರೂಪವಾದಂತಹ ಸಸ್ಯಗಳನ್ನೆಲ್ಲಾ ತಂದು ಈ ಸುಂದರ ಕಿಷ್ಕಿಂದ ಮೂಲಿಕಾ ಬೋನ್ಸಾಯ್ ಗಾರ್ಡನ್ ನಿರ್ಮಿಸಿದ್ದಾರೆ. ಇಲ್ಲಿ ನಮ್ಮ ಸುತ್ತ ಮುತ್ತ ಕಾಣಸಿಗುವ ಬೇಲಿ ಗಿಡಗಳಿಂದ ಹಿಡಿದು ವರ್ಷದ ಎಲ್ಲಾ ಕಾಲದಲ್ಲೂ ಹೂಬಿಟ್ಟು ಕಂಗೊಳಿಸುವ ಅಪರೂಪದ "ಅಮೃತಪುಷ್ಪ"ದವರೆಗೆ ಎಲ್ಲಾ ಬಗೆಯ ಗಿಡಮರಗಳು ಇಲ್ಲಿವೆ.

ಸುಮಾರು ಒಂದು ಎಕರೆ ಪ್ರದೇಶದಲ್ಲಿ ನೆಲೆನಿಂತಿರುವ ಬೋನ್ಸಾಯ್ ಗಾರ್ಡನ್‌ಗೆ ಭೇಟಿ ನೀಡಿದವರು ಈ ಗಾರ್ಡನ್‌ನಲ್ಲಿ ಕಂಡು ಬರುವ ಸುಂದರ ದೃಶ್ಯಗಳಿಗೆ ಮನಸೋಲದಿರಲಾರರು. ಏಕೆಂದರೆ ಬೋನ್ಸಾಯ್ ಗಾರ್ಡನ್‌ನ ನಿರ್ಮಾಣವೇ ವಿಶಿಷ್ಟವಾಗಿದೆ. ಪ್ರತಿ ಸಸ್ಯ ಕುಂಡಗಳನ್ನು ಜೋಡಿಸಿಟ್ಟ ರೀತಿ ಅದ್ಭುತವಾಗಿದೆ. ಸುಂದರ ಹಚ್ಚ ಹಸುರಿನ ಹುಲ್ಲುಹಾಸಿನ ಮಧ್ಯೆ ಕೃತಕವಾಗಿ ನಿರ್ಮಿಸಿದ ತೊರೆ.

ಅದರಲ್ಲಿ ಜುಳುಜುಳು ನಿನಾದಗೈಯ್ಯುತ್ತಾ ಹರಿಯುವ ನೀರು. ಭೋರ್ಗರೆದು ಧುಮುಕುವ ಪುಟ್ಟ ಜಲಧಾರೆಗಳು... ಸ್ಪಟಿಕದಂತೆ ಹೊಳೆಯುವ ಪುಟ್ಟಕೊಳಗಳು... ಅಲ್ಲಲ್ಲಿ ಸಿಮೆಂಟ್ ಕಲ್ಲುಗಳು ಅವುಗಳ ಮೇಲೆ ಬೃಹತ್ ಕುಂಡದಲ್ಲಿ ವೀರಾಜಮಾನವಾದ ವಿವಿಧ ದೇಶಗಳ, ವಿವಿಧ ಜಾತಿಯ ಕುಬ್ಜ ಗಿಡಗಳು... ಮರಗಳು... ಗಮನಸೆಳೆಯುತ್ತವೆ. ಬೋನ್ಸಾಯ್ ಗಾರ್ಡನ್‌ನೊಳಗೊಂದು ಸುತ್ತು ಬಂದದ್ದೇ ಅದರೆ ಈ ಗಾರ್ಡನ್ ಮಹತ್ವ ಅರಿವಾಗುತ್ತದೆ.

ಈ ಗಾರ್ಡನ್‌ನಲ್ಲಿ ವಿದೇಶದ ಜಪಾನ್, ಚೀನಾ, ಅಮೇರಿಕ, ವೆಸ್ಟ್‌ಇಂಡೀಸ್, ಕೆನಡಾ, ಇಂಗ್ಲೆಂಡ್, ಮಲೇಶಿಯಾ, ಇಂಡೋನೇಶಿಯಾ, ಯುರೋಪ್ ಮೊದಲಾದ ದೇಶಗಳಿಂದ ತಂದಂತಹ ಅಪರೂಪದ ಸಸ್ಯಗಳಿವೆ. ಅವುಗಳನ್ನು ಜತನದಿಂದ ಆರೈಕೆ ಮಾಡಿಕೊಂಡು ಬರಲಾಗುತ್ತಿದೆ. ಪ್ರತಿಯೊಂದು ಗಿಡದ ಬಗ್ಗೆಯೂ ಇಲ್ಲಿ ಮಾಹಿತಿ ನೀಡಲಾಗಿದೆ. ಇದರಿಂದ ವೀಕ್ಷಿಸುವ ಪ್ರವಾಸಿಗನಿಗೆ ಸಸ್ಯದ ಪರಿಚಯ ಸುಲಭವಾಗಿ ಆಗುತ್ತದೆ.

ಗಾರ್ಡನ್ ಮಧ್ಯೆ ನಡೆದಾಡಲು ಕಾಲುದಾರಿಗಳಿದ್ದು, ಅದರಲ್ಲಿ ನಡೆಯುತ್ತಾ ಹೋದರೆ ಕಾಲುವೆಯಲ್ಲಿ ಹರಿಯುವ ನೀರು, ಪುಟ್ಟ ಜಲಧಾರೆ, ಸಣ್ಣಪುಟ್ಟ ಸುಂದರ ಕಲ್ಲುಗಳಿಂದ ನಿರ್ಮಿಸಿದ ಸುಂದರ ಕೊಳಗಳು. ಅವುಗಳನ್ನು ಹಾದುಹೋಗಲೆಂದೇ ನಿರ್ಮಾಣಗೊಂಡ ಸೇತುವೆಗಳು ಕಾಣಸಿಗುತ್ತವೆ. ಈ ಗಾರ್ಡನ್‌ನ ಮತ್ತೊಂದು ವಿಶೇಷತೆಯೆಂದರೆ ಇಲ್ಲಿನ ಸಸ್ಯವೊಂದನ್ನು ಸಮುದ್ರದಡದಿಂದ ತರಲಾಗಿದೆ. ಹಾಗಾಗಿ ಈ ಸಸ್ಯಕ್ಕೆ ಸಿಹಿ ನೀರಿನ ಬದಲಾಗಿ ಉಪ್ಪು ನೀರನ್ನೇ ನೀಡಿ ಬೆಳೆಸಲಾಗುತ್ತಿದೆ.

ಅಮೃತಪುಷ್ಪ ವಿಶೇಷತೆ: "ಅಮೃತಪುಷ್ಪ" ಹೆಸರಿನ ಸಸ್ಯದ ಮತ್ತೊಂದು ವಿಶೇಷತೆ ವರ್ಷದ ಎಲ್ಲಾ ಕಾಲದಲ್ಲಿಯೂ ತಿಂಗಳಿಗೊಮ್ಮೆ ಹೂ ಬಿಡುತ್ತದೆ. ಈ ಹೂವಿನ ಮೊತ್ತ ಒಂದು ಲಕ್ಷವಂತೆ!. ಈ ಸಸ್ಯ ಹೂ ಬಿಡುವುದು ಮಾತ್ರವಲ್ಲ ಇದರಲ್ಲಿ ಔಷಧೀಯ ಗುಣಗಳೂ ಇವೆಯಂತೆ. ಈ ಅಪರೂಪದ ಬೊನ್ಸಾಯ್ ಗಾರ್ಡನ್ ಸ್ವಾಮಿ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮಿಗಳ ಕನಸಿನ ಕೂಸು. ಇದನ್ನು ಭಾರತದಲ್ಲಿಯೇ ಪ್ರಥಮವಾಗಿ, ಅದ್ಭುತವಾಗಿ ನಿರ್ಮಿಸುವಲ್ಲಿ ಅವರ ಶ್ರಮ ನಿಜಕ್ಕೂ ಶ್ಲಾಘನೀಯ.

ಈ ಗಾರ್ಡನ್‌ನಲ್ಲಿ ಸುಮಾರು ಇನ್ನೂರಕ್ಕೂ ಹೆಚ್ಚಿನ ಸಸ್ಯಗಳಿವೆ. ಇವುಗಳಲ್ಲಿ ಸುಮಾರು ಇನ್ನೂರಕ್ಕೂ ಹೆಚ್ಚು ವರ್ಷಗಳನ್ನು ಪೂರೈಸಿದ ಗಿಡಗಳು (ಮರಗಳು) ಇವೆ ಎನ್ನುವುದೇ ವಿಸ್ಮಯ. ಜೊತೆಗೆ ಪುಟ್ಟ ಕೊಳದಲ್ಲಿ ತೇಲುವ ರಾಮಶಿಲೆ ಗಮನಸೆಳೆಯುತ್ತದೆ. ಈ ಬೋನ್ಸಾಯ್ ಗಾರ್ಡನ್‌ಗೊಂದು ಸುತ್ತುಹೊಡೆದ ಮೇಲೆ ಬೋನ್ಸಾಯ್ ಗಿಡಗಳ ಹುಟ್ಟು ಬೆಳವಣಿಗೆಗಳ ಬಗ್ಗೆ ತಿಳಿಯುವುದು ಅಗತ್ಯ.

ಬೋನ್ಸಾಯ್ ಪುರಾಣ:ಹಾಗೆ ನೊಡಿದರೆ ಬೋನ್ಸಾಯ್ ಹುಟ್ಟೇ ರೋಚಕ. ಇತಿಹಾಸದ ಪುಟಗಳನ್ನು ತಿರುವಿ ಹಾಕಿದರೆ ಹಲವು ಮಾಹಿತಿಗಳು ಲಭ್ಯವಾಗುತ್ತವೆ. ಕ್ರಿ.ಶ. ಮೂರನೇ ಶತಮಾನದಲ್ಲಿಯೇ ಬೋನ್ಸಾಯ್ ಗಿಡಗಳು ಇದ್ದವೆನ್ನಲಾಗಿದೆ. "ಬೋನ್" ಎಂದರೆ ಕುಂಡ "ಸಾಯ್" ಎಂದರೆ ಮರ ಎಂದು ಹೇಳಲಾಗುತ್ತಿದೆ. ಬೋನ್ಸಾಯ್ ಪದ್ಧತಿಯಲ್ಲಿ ಬೆಳೆಸುವ ಮರಗಳಿಗೆ "ಕುಬ್ಜವೃಕ್ಷ" ಎಂದು ಕರೆಯಲಾಗುತ್ತದೆ. ಚೀನಾ ದೇಶದಲ್ಲಿ ಈ ಕುಬ್ಜ ವೃಕ್ಷಗಳನ್ನು ಬೆಳೆಸಲಾಗುತ್ತಿತ್ತು ಎನ್ನುವುದಕ್ಕೆ ಆಧಾರಗಳಿವೆ.

ಪ್ರಾಚೀನ ಚೀನಿ ವೈದ್ಯರು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಂಚರಿಸುತ್ತಿದ್ದಾಗ ಜೀವಂತ ಔಷಧಿ ಸಸ್ಯಗಳನ್ನು ಕೊಂಡೊಯ್ಯಲು ಅನುಕೂಲವಾಗುವ ದೃಷ್ಟಿಯಿಂದ ಬೋನ್ಸಾಯ್ ಕಲೆಯನ್ನು ಕರಗತ ಮಾಡಿಕೊಂಡಿದ್ದರು ಎನ್ನಲಾಗಿದೆ. ಮತ್ತೊಂದು ಮೂಲದ ಪ್ರಕಾರ ಚೀನಿ ವೈದ್ಯರು ಔಷಧಿಗಾಗಿ ಸಸ್ಯಗಳನ್ನು ಒಂದೆಡೆಯಿಂದ ಮತ್ತೊಂದೆಡೆ ಕೊಂಡೊಯ್ಯುತ್ತಿದ್ದರಲ್ಲದೆ, ಆಗಾಗ್ಗೆ ಅದರ ಎಲೆಗಳನ್ನು ಔಷಧಿಗೆ ಬಳಸುತ್ತಿದ್ದರಿಂದ ಕಾಂಡ ಮತ್ತು ಬೇರುಗಳು ದಪ್ಪವಾಗಿ ಬೆಳೆಯುತ್ತಿದ್ದವು. ಇದನ್ನು ಗಮನಿಸಿದ ಗಿಡಮೂಲಿಕಾ ವೈದ್ಯರು ಬೋನ್ಸಾಯ್ ಹುಟ್ಟಿಗೆ ಕಾರಣರಾದರು ಎಂದು ಹೇಳಲಾಗುತ್ತದೆ.

ಇಂದು ಬಹಳಷ್ಟು ಗಿಡಮೂಲಿಕೆಗಳು ಕಣ್ಮರೆಯಾಗುತ್ತಿವೆ. ಅವುಗಳನ್ನು ಮುಂದಿನ ತಲೆಮಾರಿಗೆ ಉಳಿಸಿಕೊಳ್ಳಬೇಕಾದ ಅಗತ್ಯವಿದೆ. ಆದುದರಿಂದ ಬೋನ್ಸಾಯ್ ಗಾರ್ಡನ್ ಮೂಲಕ ಆ ಕಾರ್ಯವನ್ನು ನಾವು ಮಾಡಬಹುದು ಎಂಬುವುದನ್ನು ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮಿಗಳು ತಮ್ಮ ಕಿಷ್ಕಿಂದ ಮೂಲಿಕಾ ಬೋನ್ಸಾಯ್ ಗಾರ್ಡನ್ ಮೂಲಕ ತೋರಿಸಿಕೊಟ್ಟಿದ್ದಾರೆ.

English summary
Kishkinda Moolika Bonsai garden in Mysore is an exquisite collection of more than 450 carefully shaped and miniaturized trees. Ganapathi Sachchidananda Swamiji"s love for greenery and ecology made Aavadhoota Datta Peetham to wear a green look from past three decades.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X