ಶಿರೂರು ಶ್ರೀಗಳ ತೆಕ್ಕೆಗೆ ಅಕ್ಷಯ ಸಟ್ಟುಗ

Written by: * ರಾಮಕೃಷ್ಣ ಬನ್ನಂಜೆ

ಉಡುಪಿ, ಜ. 18 : ಧಾರ್ಮಿಕ, ಸಾಂಸ್ಕೃತಿಕ ಕ್ಷೇತ್ರಗಳ ನೆಲೆವೀಡು, ದೇವಾಲಯಗಳ ನಗರಿ ಉಡುಪಿಯಲ್ಲಿ ವಿಶ್ವವಿಖ್ಯಾತ ಪರ್ಯಾಯ ಪೀಠಾರೋಹಣ ಸಮಾರಂಭ ಕುಂಭ ಲಗ್ನ ಮುಹೂರ್ತದಲ್ಲಿ ಸೋಮವಾರ ಸಾಂಗವಾಹಿ ನೆರವೇರಿತು. ಶಿರೂರು ಮಠದ ಯತಿ ಶ್ರೀ ಲಕ್ಷ್ಮಿವರ ತೀರ್ಥರು ಮೂರನೇ ಬಾರಿಗೆ ಮುಂದಿನ ಎರಡು ವರ್ಷಗಳಿಗೆ ಶ್ರೀಕೃಷ್ಣ ಪೂಜೆಯ ಕೈಂಕರ್ಯವನ್ನು ವಿಧಿವತ್ತಾಗಿ ವಹಿಸಿಕೊಂಡರು.

ಇಂದು ಬೆಳಗ್ಗೆ ನಸುಕಿನಲ್ಲಿ ಉಡುಪಿ ಸಮೀತ ಕಾಪು ಬಳಿಯ ದಂಡತೀರ್ಥದಲ್ಲಿ ಪವಿತ್ರ ಸ್ನಾನ ಮಾಡಿ ಜೋಡುಕಟ್ಟೆ ಪ್ರವೇಶಿಸಿದ ಶಿರೂರು ಯತಿಗಳನ್ನು ಸಾರ್ವಜನಿಕರು ಮತ್ತು ಭಕ್ತಾದಿಗಳು ಅದ್ಧೂರಿಯಿಂದ ಬರಮಾಡಿಕೊಂಡರು. ಜೋಡುಕಟ್ಟೆ ವೃತ್ತದಿಂದ ರಥಬೀದಿಯವರೆಗೆ ನಡೆದ ಭವ್ಯ ಮೆರವಣಿಗೆಯಲ್ಲಿ ಉಡುಪಿಯ ವಿವಿಧ ಮಠಾಧೀಶರು ಭಾಗಹಿಸಿದ್ದರು. ಕೋಲ, ಹುಲಿವೇಷ, ನಾಗಬ್ರಹ್ಮ, ಯಕ್ಷಗಾನ ಮುಂತಾದ ಪರಶುರಾಮ ಸೃಷ್ಟಿಯ ವಿವಿಧ ಜಾನಪದ ಕಲೆಗಳನ್ನು ಬಿಂಬಿಸುವ ಸುಮಾರು 25 ಟ್ಯಾಬ್ಲೋಗಳು ಕಲಾಪ್ರದರ್ಶನ ಮಾಡಿದವು.

ರಥಬೀದಿ ಪ್ರವೇಶಿಸಿದ ಶಿರೂರು ಶ್ರೀಗಳು ಅನಂತೇಶ್ವರ ಮತ್ತು ಚಂದ್ರಮೌಳೇಶ್ವರ ದೇವರ ದರ್ಶನ ಪಡೆದು, ಸಾಂಪ್ರದಾಯಿಕವಾಗಿ ಕನಕನ ಕಿಂಡಿಯ ಮೂಲಕ ಶ್ರೀಕೃಷ್ಣನ ದರ್ಶನ ಪಡೆದರು. ನಂತರ ಶ್ರೀಕೃಷ್ಣ ಮಠ ಪ್ರವೇಶಿಸಿದ ಶ್ರೀಗಳು ಮುಖ್ಯಪ್ರಾಣ ದೇವರಿಗೆ ಪ್ರಾರ್ಥನೆ ಸಲ್ಲಿಸಿ ಪುತ್ತಿಗೆ ಮಠದ ಶ್ರೀಗಳಾದ ಸುಗುಣೇಂದ್ರ ತೀರ್ಥ ಸ್ವಾಮೀಜಿಯವರಿಂದ ಪರ್ಯಾಯ ಪೂಜಾ ಹಸ್ತಾಂತರದ ಪ್ರಮುಖ ಘಟ್ಟವಾದ ಅಕ್ಷಯ ಸಟ್ಟುಗ ಮತ್ತು ಮಠದ ಕೀಲಿ ಕೈಯನ್ನು ಸ್ವೀಕರಿಸಿದರು.

ದೇವಾಲಯ ಆವರಣದ ರಾಜಾಂಗಣದಲ್ಲಿ ನಡೆದ ಪರ್ಯಾಯ ದರ್ಬಾರ್ ನಲ್ಲಿ ಉಡುಪಿಯ ಎಲ್ಲಾ ಮಠಾಧೀಶರು, ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ, ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಗೃಹ ಸಚಿವ ವಿಎಸ್ ಆಚಾರ್ಯ, ಕೇಂದ್ರ ಸಚಿವ ಜಿತಿನ್ ಪ್ರಸಾದ್, ಉಡುಪಿ ಸಂಸದ ಸದಾನಂದ ಗೌಡ, ಶಾಸಕ ರಘುಪತಿ ಭಟ್, ಆಸ್ಕರ್ ಫರ್ನಾಂಡಿಸ್ ಮುಂತಾದ ಗಣ್ಯರು ಭಾಗವಹಿಸಿದ್ದರು. ಟಿಟಿಡಿ ಮಂಡಳಿಯ ವತಿಯಿಂದ ತಿರುಪತಿ ವೆಂಕಟೇಶ್ವರ ದೇವಾಲಯದ ಪ್ರಸಾದವನ್ನು ಶಿರೂರು ಶ್ರೀಗಳಿಗೆ ನೀಡಲಾಯಿತು. ಪರ್ಯಾಯ ದರ್ಬಾರ್ ಮುಗಿದ ನಂತರ ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ನಡೆಯಿತು. ಸುಮಾರ್ ಐದು ಲಕ್ಷ ಜನ ಪರ್ಯಾಯ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ.

Please Wait while comments are loading...