ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೈಗಂಬರರ ಅವಹೇಳನ, ಮಮ್ತಾಜ್ ಅಲಿ ಖಾನ್ ಗೆ ಮುತ್ತಿಗೆ

By Staff
|
Google Oneindia Kannada News

ಶಿವಮೊಗ್ಗ, ಫೆ. 23 : ಆರೋಗ್ಯ ಸಚಿವ ಶ್ರೀರಾಮುಲು ಅವರನ್ನು ಪ್ರವಾದಿ ಮೊಹ್ಮದ್ ಪೈಗಂಬರ ಅವರಿಗೆ ಹೋಲಿಸಿ ಮಾತನಾಡುವ ಮೂಲಕ ಇಸ್ಲಾಂ ಧರ್ಮಕ್ಕೆ ಅವಹೇಳನ ಮಾಡಿದ್ದಾರೆ ಎಂದು ಮುಸ್ಲಿಂ ಸಂಘಟನೆಗಳು ಇಂದು ಕಾರ್ಮಿಕ ಹಾಗೂ ವಕ್ಫ್ ಖಾತೆ ಸಚಿವ ಮಮ್ತಾಜ್ ಅಲಿ ಖಾನ್ ಅವರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ ಪ್ರಸಂಗ ಇಂದು ಶಿವಮೊಗ್ಗದಲ್ಲಿ ನಡೆದಿದೆ.

ಕಳೆದ ಶನಿವಾರ ಬಳ್ಳಾರಿ ಪ್ರವಾಸದಲ್ಲಿದ್ದ ಸಚಿವ ಮಮ್ತಾಜ್ ಅಲಿ ಖಾನ್ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಆರೋಗ್ಯ ಸಚಿವ ಶ್ರೀರಾಮುಲು ಬಡವರ ಬಂಧು, ಜಾತಿ ಮತ ಎಣಿಸದೆ ಎಲ್ಲ ವರ್ಗದವರಿಗೂ ಸಹಾಯ ಮಾಡುತ್ತಿರುವ ಅವರು ಪ್ರವಾದಿ ಮೊಹ್ಮದ್ ಪೈಗಂಬರ್ ಇದ್ದ ಹಾಗೆ ಎಂದು ಹೇಳಿದರು ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಸಚಿವರ ಈ ಹೇಳಿಕೆ ಮುಸ್ಲಿಂ ಸಮುದಾಯದಲ್ಲಿ ಆಕ್ರೋಶಕ್ಕೆ ಕಾರಣವಾಗಿತ್ತು. ರಾಜ್ಯದ ವಿವಿಧೆಡೆ ಮುಸ್ಲಿಂ ಸಂಘಟನೆಗಳು ಸಚಿವರ ವಿರುದ್ಧ ಪ್ರತಿಭಟನೆ ನಡೆಸಿದ್ದವು.

ಇಂದು ಶಿವಮೊಗ್ಗಕ್ಕೆ ತೆರಳಿರುವ ಸಚಿವ ಮಮ್ತಾಜ್ ಅಲಿಖಾನ್ ಅವರಿಗೆ ಮುಸ್ಲಿಂ ಸಂಘಟನೆಗಳು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದವು. ಒಬ್ಬ ಸಾಮಾನ್ಯ ಸಚಿವರನ್ನು ಮುಸ್ಲಿಂ ಜನಾಂಗದ ಧರ್ಮ ಗುರು ಪ್ರವಾದಿ ಮೊಹ್ಮದ್ ಪೈಗಂಬರರಿಗೆ ಹೋಲಿಸುವುದು ಖಂಡನೀಯ ಕೆಲಸ. ಆದ್ದರಿಂದ ಸಚಿವರು ತಮ್ಮ ಹೇಳಿಕೆ ವಾಪಸ್ಸು ಪಡೆದುಕೊಂಡು ಕ್ಷಮೆಯಾಚಿಸಬೇಕು ಎಂದು ಪಟ್ಟು ಹಿಡಿದರು. ಸಚಿವರು ಎಷ್ಟೇ ಸಾಂತ್ವನ ಹೇಳಿದರೂ ಪ್ರತಿಭಟನಾಕಾರರು ತಮ್ಮ ಪಟ್ಟು ಸಡಿಲಿಸಲಿಲ್ಲ. ಪೊಲೀಸರು ಪ್ರತಿಭಟನಾಕಾರರ ಸಮಾಧಾನಗೊಳಿಸಲು ಹರಸಾಹಸ ಮಾಡಬೇಕಾಯಿತು.

ನಂತರ ಮಾಧ್ಯಮವರೊಂದಿಗೆ ಮಾತನಾಡಿದ ಸಚಿವ ಮಮ್ತಾಜ್ ಅಲಿ ಖಾನ್, ನಾನು ಪೈಗಂಬರರಿಗೂ, ಸಚಿವ ಶ್ರೀರಾಮುಲುಗೂ ಹೋಲಿಕೆ ಮಾಡಿಲ್ಲ. ಬಳ್ಳಾರಿ ಮಾಧ್ಯಮ ಪ್ರತಿನಿಧಿಗಳು ತಪ್ಪಾಗಿ ವರದಿ ಪ್ರಕಟಸಿದ್ದಾರೆ. ನಾನು ಅಂದು ಹೇಳಿದ್ದು, ಸದಾ ಬಡವರಿಗೆ ಸಹಾಯ ಹಸ್ತ ಚಾಚುತ್ತಿದ್ದ ಪೈಗಂಬರರ ಪ್ರಭಾವ ಸಚಿವ ಶ್ರೀರಾಮುಲು ಮೇಲೆ ಬಿದ್ದಿದೆ. ಇದರಿಂದ ಇವರು ಯಾವಾಗಲೂ ಬಡವರ ಕೆಲಸ ಮಾಡುತ್ತಾರೆ ಎಂದು ಹೇಳಿರುವೆ. ಆದರೆ, ಮಾಧ್ಯಮ ತಪ್ಪಾಗಿ ಪ್ರಕಟಿಸಿದೆ ಎಂದು ಅವರು ಆರೋಪಿಸಿದರು. ನಾನು ಪೈಗಂಬರರಿಗೆ ಹೋಲಿಕೆ ಮಾಡಿ ಮಾತನಾಡಿರುವುದು ಸಾಬೀತಾದರೆ, ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಅವರು ಹೇಳಿದರು.

(ದಟ್ಸ್ ಕನ್ನಡ ವಾರ್ತೆ)
ಶ್ರೀರಾಮುಲು ಪೈಗ೦ಬರರ ಪ್ರತಿರೂಪ, ಎಂಎ ಖಾನ್

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X