ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂತ ಶ್ರೇಷ್ಠ ಕನಕದಾಸರ ಜಯಂತಿ

By *ಶರಣಪ್ಪ ,ಬಂಕಾಪುರ
|
Google Oneindia Kannada News

kanakdasa jayanthi
ಕರ್ನಾಟಕದಲ್ಲಿ ಹರಿದಾಸ ಪರಂಪರೆಗೆ ಸುಮಾರು ಐದು ನೂರು ವರ್ಷಗಳ ಭವ್ಯ ಇತಿಹಾಸವಿದೆ. ಕನಕದಾಸರಂಥ ವೈಚಾರಿಕ ಸಂತರಿಂದಾಗಿ ಸಮಾಜದ ಮೇಲು-ಕೀಳು, ಜಾತಿ-ಮತಗಳ ಸಿದ್ಧಾಂತ ಬದಿಗೆ ಸರಿಯಿತು. ದೇವಸ್ತುತಿಯೇ ಮುಖ್ಯವೆನಿಸಿದ್ದ ಭಕ್ತಿ ಪರಂಪರೆಯ ಕಾಲದಲ್ಲಿ ಧ್ರುವತಾರೆಯಂತೆ ಅವತರಿಸಿದ ಕನಕದಾಸರು ತಮ್ಮ ವೈಚಾರಿಕ ಮತ್ತು ಪ್ರತಿಭಟನಾ ನೆಲೆಗಟ್ಟಿನಿಂದ ದಾಸ ಸಾಹಿತ್ಯಕ್ಕೆ ವೈಚಾರಿಕ ಪ್ರಭೆಯನ್ನು ನೀಡಿದರು.

ದಾಸ ಸಾಹಿತ್ಯದ ಮೂಲಕ ಸಾಹಿತ್ಯವನ್ನು ಇನ್ನಷ್ಟು ಸರಳಗೊಳಿಸಿದ, ಕನ್ನಡ ಸಾಹಿತ್ಯಕ್ಕೆ ಹೊಸತನ ತುಂಬಿದ ಕನಕದಾಸರನ್ನು ಹೊಸಗನ್ನಡ ಸಾಹಿತ್ಯ ಕೋಗಿಲೆ ಎಂದು ದಾಸ ಸಾಹಿತ್ಯ ಬಸವ ಕೋಗಿಲೆ ಎಂದು ಪ್ರಾಜ್ಞರು ಕರೆದುದುಂಟು. ಕನ್ನಡ ಸಾಹಿತ್ಯದಲ್ಲಿ 16ನೇ ಶತಮಾನದ ದಾಸ ಸಾಹಿತ್ಯ ಹೆಚ್ಚು ಜನಮುಖಿಯಾದವು. ಜಾತಿ-ನೀತಿಯ ಉಡದ ಪಟ್ಟಿನ ನಡುವೆಯೂ ಕನಕದಾಸರು, ಜನತೆಯಲ್ಲಿ ಸಾಮಾಜಿಕ ಚಿಂತನೆ, ಕಾವ್ಯ ಮತ್ತು ಕೀರ್ತನೆಗಳ ಮೂಲಕ ಸಾಹಿತ್ಯ ಹಾಗೂ ಸಂಗೀತಕ್ಕೆ ಮಹತ್ತರ ಕಾಣಿಕೆ ಸಲ್ಲಿಸಿ, ದಾಸ ಸಾಹಿತ್ಯದ ತೂಕವನ್ನು ಮತ್ತಷ್ಟು ಹೆಚ್ಚಿಸಿದರು.

ವಿಶ್ವಬಂಧು, ಸಂತ ಕವಿ ಕನಕದಾಸರು
ಕನಕದಾಸರು (1508-1606) ಸಾಮಾನ್ಯವಾದ ಕುರುಬ ಜಾತಿಯಲ್ಲಿ ಹುಟ್ಟಿದರೂ ತಮ್ಮ ಸ್ವಸಾಮರ್ಥ್ಯ ಮತ್ತು ಪ್ರತಿಭೆಯಿಂದ ಹಿರಿಮೆ ಗಳಿಸಿದವರು. ಕನಕರು ಕೆಳಸ್ತರದಿಂದ ಬಂದವರಾದ್ದರಿಂದ, ಕೆಳಜಾತಿಯವರ ನೋವಿನ ಅರಿವು ಹಾಗೂ ಡಣ್ಣಾಯಕ (ಒಂದು ಪ್ರದೇಶದ ಮುಖ್ಯಸ್ಥ) ರಾಗಿದ್ದರಿಂದ ಮೇಲ್ವರ್ಗದ ಜೀವನದ ಅನುಭವ ಅವರದಾಗಿತ್ತು.

5ನೆಯ ಶತಮಾನದಲ್ಲಿ ವಿಜಯನಗರ ಆಡಳಿತಕ್ಕೆ ಒಳಪಟ್ಟ ಬಾಡ ಪ್ರದೇಶ (ಈಗಿನ ಹಾವೇರಿ ಜಿಲ್ಲೆಯ ಶಿಗ್ಗಾಂವ ಮತ್ತು ಬಂಕಾಪುರ ಪ್ರದೇಶ) ಅಂದಿನ 28 ಗ್ರಾಮಗಳ ಹೋಬಳಿಯಾಗಿತ್ತು. ಅದರ ನಾಡಗೌಡಿಕೆ ಮತ್ತು ಹೊಣೆಗಾರಿಕೆಯನ್ನು ವಿಜಯನಗರದ ಅರಸರು ತಿಮ್ಮಪ್ಪನ ಹೆಗಲಿಗೇರಿಸಿದರು. ಕಾಲಾಂತರದಲ್ಲಿ ಡಣ್ಣಾಯಕತ್ವ ಕನಕನ ಕೈತಪ್ಪಿ ಹೋಯಿತು. ಆದರೂ ಈತನ ನಿಯತ್ತು ನಿ:ಸ್ವಾರ್ಥತನಕ್ಕೆ ಮತ್ತೆ ಅದು ಈತನ ಮುಡಿಗೇರಿತು. ಈ ನಡುವೆ ಕನಕನಿಗೆ ಮದುವೆಯಾಗಿ, ಪುತ್ರ ಭಾಗ್ಯ ಉಂಟಾಯಿತು.

ಕಾಲನ ಆಟದಲ್ಲಿ ಕೆಲ ಕಾಲದಲ್ಲೇ ಕನಕ ಮಗು ಮತ್ತು ತಾಯಿಯನ್ನು ಕಳೆದುಕೊಂಡ. ಕನಕ ಈ ನೋವಿನಿಂದ ಹೊರಬಂದು, ಲೌಕಿಕತೆಯಿಂದ ಪಾರಮಾರ್ಥಿಕದತ್ತ ತಿರುಗಿದ. ಭೌತಿಕ, ಆಸೆ ಆಕಾಂಕ್ಷೆಗಳಿಂದ ದೂರವಾದ. ಈ ಹಂತದಲ್ಲೇ ಕನಕಪ್ಪ ಬಾಡದಿಂದ, ತಾನು ನಂಬಿ ಪೂಜಿಸುತ್ತಿದ್ದ ದೈವ ಬಾಡದ ಆದಿಕೇಶವನನ್ನು ಕಾಗಿನೆಲೆಗೆ ತಂದು ಪ್ರತಿಷ್ಠಾಪಿಸಿಯಾಗಿತ್ತು. ಆತನ ಆರಾಧನೆಯಲ್ಲಿ ಸಂತೋಷ ಕಾಣುತ್ತ, ತನ್ನ ಕಾವ್ಯ ಕೃಷಿ ಮುಂದುವರಿಸಿದರು.

ಒಂದು ದಿನ ಭೂಮಿ ಅಗೆಯುತ್ತಿದ್ದಾಗ, ಅಲ್ಲಿ ನಿಧಿಯೊಂದು ಸಿಕ್ಕಿತು. ಕನಕರು ಈ ನಿಧಿಯನ್ನು ದೇವಸ್ಥಾನಗಳ ಜೀರ್ಣೋದ್ಧಾರ, ಬಡಬಗ್ಗರಿಗೆ ಪ್ರಸಾದಕ್ಕೆ ಬಳಸಿ, ತಮ್ಮ ಲೋಕಕಲ್ಯಾಣ ಗುಣ ಮೆರೆದರು. ಆ ದಿನ ಕನಕಪ್ಪನನ್ನು ಬಾಡ ನಾಡಿನ ಜನ ಕನಕದಾಸನೆಂದು ಕರೆಯಲಾರಂಭಿಸಿದರು. ಕನಕರು ಬಾಳಿದ ಕಾಲ, ವಿಜಯನಗರದಲ್ಲಿ ಶ್ರೀ ಕೃಷ್ಣದೇವರಾಯ ಆಳ್ವಿಕೆ ಮಾಡುತ್ತಿದ್ದ ಕಾಲ (1509). ಕನಕರು ತಿರುಪತಿ ತಿಮ್ಮಪ್ಪನ ದರ್ಶನ ಪಡೆದು, ತಿರುಮಲೆ ತಾತಾಚಾರಿ ಅವರನ್ನು, ನಂತರ ಹಂಪಿಯಲ್ಲಿ ವ್ಯಾಸರಾಯರನ್ನು ಭೇಟಿ ಮಾಡಿದರು. ವ್ಯಾಸರಾಯರನ್ನು ಗುರುವಾಗಿ ಸ್ವೀಕರಿಸಿ, ವೇದ ಉಪನಿಷತ್ತು, ವೈಷ್ಣವ ಮತ-ಧರ್ಮ ಕುರಿತಾದ ಜ್ಞಾನ ಸಂಪಾದಿಸಿದರು. ಗುರು ವ್ಯಾಸರಾಯರು ಕನಕರ ಯೋಗ್ಯತೆಯನ್ನು ಗುರುತಿಸಿ, ಪ್ರೀತಿಯಿಂದ ಕಂಡು, ಅವರ ಯೋಗ್ಯತೆಯನ್ನು ಹಲವು ಬಾರಿ ಜಾಹಿರುಗೊಳಿಸಿದ ಅನೇಕ ಪ್ರಸಂಗಗಳು ನಡೆದವು.

ಕನಕದಾಸರು ಹರಿಭಕ್ತರಾಗಿ, ದಾಸರಾಗಿ ನಂಜನಗೂಡು, ಬೇಲೂರು, ಉಡುಪಿ ಮತ್ತಿತರೆಡೆಗಳಲ್ಲಿ ಸುತ್ತಾಡಿ, ತಮ್ಮ ಕೀರ್ತನೆಗಳ ಮೂಲಕ ಜನರ ಅಜ್ಞಾನ ಹೋಗಲಾಡಿಸುತ್ತಿದ್ದರು. ಶ್ರೀ ಕೃಷ್ಣನ ದರ್ಶನ ಮಾಡಬೇಕೆಂಬ ಇಚ್ಚೆಯಿಂದ ಕನಕದಾಸರು ಉಡುಪಿಗೆ ಬಂದಾಗ, ಅಲ್ಲಿನ ಪುರೋಹಿತರು ಕನಕದಾಸರ ಉಡುಗೆ ತೊಡುಗೆ ನೋಡಿ ಅವರೊಬ್ಬ ಕುಲೀನರೆಂಬ ಕಾರಣಕ್ಕೆ ಶ್ರೀಕೃಷ್ಣನ ದರ್ಶನಕ್ಕೆ ದೇವಸ್ಥಾನದ ಒಳಗೆ ಪ್ರವೇಶ ನಿರಾಕರಿಸಿದರು. ಆಗ ಕನಕದಾಸರು, ಶ್ರೀಕೃಷ್ಣನ ಗರ್ಭಗುಡಿ ಹಿಂಭಾಗಕ್ಕೆ ತೆರಳಿ ಹರಿಕೀರ್ತನೆ ಹೇಳುತ್ತಾ ನಿಂತಾಗ, ಗೋಡೆ ಬಿರುಕು ಬಿಟ್ಟು, ಶ್ರೀಕೃಷ್ಣನೇ ಪಶ್ಚಿಮಾಭಿಮುಖವಾಗಿ ತಿರುಗಿ, ಅವರಿಗೆ ದರ್ಶನ ನೀಡಿದನಂತೆ. ಈ ಕಥೆ, ಸಮಾಜದಲ್ಲಿನ ಮೇಲು ಕೀಳು ಎಂಬ ಅಸ್ಪೃಶ್ಯತೆಯ ಆಚರಣೆಗೆ ಇಂದಿಗೂ ಸಾಕ್ಷಿಯಾಗಿ ನಿಂತಿದೆ.

ಕನಕದಾಸರು ತಮ್ಮ ಜೀವಿತಾವಧಿಯಲ್ಲಿ ಎರಡು ಕಾವ್ಯಗಳನ್ನು ರಚಿಸಿದ್ದಾರೆ. ಮೋಹನ ತರಂಗಿಣಿ (ಶೃಂಗಾರ ರಸಕಾವ್ಯ) ಮತ್ತು ನಳ ಚರಿತ್ರೆ (ನಳ - ದಮಯಂತಿಯರ ಪ್ರೇಮ ಕಾವ್ಯ) ಅವರ ಕಾವ್ಯಶಕ್ತಿಗೆ ಹಿಡಿದ ಕನ್ನಡಿಯಂತಿದೆ. ಹರಿಭಕ್ತ ಸಾರ (ಅನುಭಾವ ಲಘುಕಾವ್ಯ) ಮತ್ತು ರಾಮಧಾನ್ಯ ಚರಿತ್ರೆ (ಸಾಮಾಜಿಕ ಆಶಯವನ್ನೊಳಗೊಂಡ ಲಘುಕಾವ್ಯ) ಗಳು ಕನಕರ ವೈವಿಧ್ಯಮಯ ಮತ್ತು ಜನಪರ ನಿಲುವಿಗೆ ಸಾಕ್ಷಿಯಂತಿದೆ.

ಕನಕರ ಮುಂಡಿಗೆಗಳು, ಜಾನಪದೀಯ ಸೊಗಡಿನ ಪದಗಳು, ಭಾಮಿನಿ ಷಟ್ಪದಿಯ ಕಾವ್ಯ ಉಲ್ಲೇಖಾರ್ಹ. ಕನಕರು ತಮ್ಮ ಎರಡೂ ಕಾವ್ಯಗಳನ್ನು ಚೆನ್ನಿಗರಾಯ ಮತ್ತು ಕಾಗಿನೆಲೆ ಆದಿಕೇಶವನಿಗೆ ಅರ್ಪಿಸಿದ್ದಾರೆ. ತಮ್ಮ ಕೀರ್ತನೆ ಮತ್ತು ಪದಗಳ ಮೂಲಕ ನಾಡಿನ ಜನರ ನಾಲಿಗೆಯ ಮೇಲೆ ಇಂದಿಗೂ ನಲಿದಾಡುತ್ತಿದ್ದಾರೆ. ಕನಕದಾಸರು ಅಂದಿನ ಸಮಾಜ ವ್ಯವಸ್ಥೆಯಲ್ಲಿ ಅನುಭವಿಸಿದ ನೋವೇ ಅವರ ಕೀರ್ತನೆ ಹಾಗೂ ಪದಗಳಲ್ಲಿ ಹಾಡಾಗಿ ಹರಿದಿದೆ. ಜಾತಿ ವ್ಯವಸ್ಥೆಯನ್ನು ವಿರೋಧಿಸಿದಂತೆ ಕನಕರು ಜನರಲ್ಲಿ ತಮ್ಮ ಕೀರ್ತನೆಗಳ ಮೂಲಕ ಆಧ್ಯಾತ್ಮಿಕ, ಸಾಮಾಜಿಕ ಹಾಗೂ ವೈಚಾರಿಕ ಪ್ರಜ್ಞೆಯನ್ನು ಬಿತ್ತಿದ್ದಾರೆ. ಕನಕದಾಸರು ದಾಸ ಪಂಥದ ವಚನಕಾರರು ಮಾತ್ರವಲ್ಲ, ಎಲ್ಲ ಮತೀಯ ಬಂಧನಗಳಿಂದ ಪಾರಾಗಿ, ಸಾಮಾಜಿಕ ಕಟ್ಟುನಿಟ್ಟುಗಳಿಂದ ಮುಕ್ತರಾಗಿ, ಆಧ್ಯಾತ್ಮ ಸಿದ್ಧಿಯ ಶಿಖರನ್ನೇರಿದ ವಿಶ್ವಬಂಧು, ಸಂತ ಕವಿ.

English summary
Kanak Jayanthi Celebrated across the state
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X