ಟೀವಿ9, ಭ್ರಷ್ಟರ ವಿರುದ್ಧ ಸಮರ ಮತ್ತು ಕನ್ನಡ ಕಿರುತೆರೆ!

Subscribe to Oneindia Kannada

ಬೆಂಗಳೂರು : ಅತ್ಯಾಕರ್ಷಕ ಮತ್ತು ಬಿಸಿಬಿಸಿ ಸುದ್ದಿ ಹಂಚುವ ಟೀವಿ9 ಕನ್ನಡ ಸುದ್ದಿ ವಾಹಿನಿ, ಈಗ ಸುದ್ದಿಯ ಕೇಂದ್ರ ಬಿಂದು.

ಟೀವಿ9 ಕಚೇರಿಗೆ ನುಗ್ಗಿ ಭ್ರಷ್ಟ ಅಧಿಕಾರಿಯಾಬ್ಬರ ಬೆಂಬಲಿಗರು ನಡೆಸಿದ ದಾಂಧಲೆ, ಗುರುವಾರ ರಾಜಧಾನಿಯಲ್ಲಿ ಚರ್ಚೆಯ ವಸ್ತು. ಟೀವಿ9 ಮೇಲಿನ ದಾಳಿ ಖಂಡಿಸಿ, ರಾಜ್ಯದ ಕೆಲವೆಡೆ ಪ್ರತಿಭಟನೆಗಳು ನಡೆದಿವೆ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿಹಿಡಿಯಲು, ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ.

ದಾಂಧಲೆಗೆ ಪ್ರಮುಖ ಕಾರಣ ಎನ್ನಲಾದ ಚಂಪಕಧಾಮ ಸ್ವಾಮಿ ಮನೆ ಮುಂದೆ(ಮಹಾಲಕ್ಷ್ಮೀ ಲೇಔಟ್‌) ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿದವು. ಈ ಸಂದರ್ಭದಲ್ಲಿ ಕಿಡಿಗೇಡಿಗಳು ಕಲ್ಲುತೂರಿದ್ದರಿಂದ ಚಂಪಕಧಾಮಸ್ವಾಮಿ ಮನೆಯ ಕಿಟಕಿ ಗಾಜು ಒಡೆದುಹೋಯಿತು. ಕಿಡಿಗೋಡಿಗಳು ಕಲ್ಲುತೂರಿದ್ದನ್ನೇ ನೆಪಮಾಡಿಕೊಂಡು ಚಂಪಕಧಾಮಸ್ವಾಮಿ, ಪೊಲೀಸರಿಗೆ ದೂರು ನೀಡಿದರು. ಹೀಗಾಗಿ ಪೊಲೀಸರು ಕನ್ನಡಪರ ಕಾರ್ಯಕರ್ತರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ.

ಹಿನ್ನೆಲೆ : ಕೆಪಿಟಿಸಿಎಲ್‌ ಅಧಿಕಾರಿ ಚಂಪಕಧಾಮ ಸ್ವಾಮಿಯ ಅವ್ಯವಹಾರಗಳನ್ನು ಭಿತ್ತರಿಸಲು ಟೀವಿ9 ಪ್ರಯತ್ನಿಸಿತ್ತು. ಇದರಿಂದ ಚಂಪಕಧಾಮ ಪರ ಬೆಂಬಲಿಗರು ಟೀವಿ9 ಕಚೇರಿಗೆ ನುಗ್ಗಿ, ಅಸಭ್ಯವಾಗಿ ವರ್ತಿಸಿ, ದಾಂಧಲೆ ನಡೆಸಿದ್ದರು ಎನ್ನಲಾಗಿದೆ.

ಭಲೇ ಟೀವಿ9! : ಆರಂಭಗೊಂಡ ಕೆಲವೇ ದಿನಗಳಲ್ಲಿ ತನ್ನ ವೃತ್ತಿ ನೈಪುಣ್ಯದಿಂದ ವೀಕ್ಷಕರ ಸೆಳೆದಿರುವ ಹೆಗ್ಗಳಿಕೆಯನ್ನು ಟೀವಿ9 ಹೊಂದಿದೆ. ತನಿಖಾವರದಿ, ಭ್ರಷ್ಟರ ಬಣ್ಣ ಬಯಲುಗೊಳಿಸುವ ಕಾರ್ಯಕ್ರಮಗಳನ್ನು ಅದು ಹಮ್ಮಿಕೊಳ್ಳುತ್ತಿದೆ. ಕನ್ನಡ ಟೀವಿ ಲೋಕದಲ್ಲಿ ಇಂತಹ ಪ್ರಯತ್ನಗಳು ಅಪರೂಪ.

ಭ್ರಷ್ಟರನ್ನು ಎದುರು ಹಾಕಿಕೊಂಡು ಮುನ್ನುಗ್ಗುವುದು, ಹತ್ತಾರು ಚಾನೆಲ್‌ಗಳ ಮಧ್ಯೆ ಉಳಿವಿಗಾಗಿ ಹೋರಾಟ ನಡೆಸುವುದು ಕಷ್ಟದ ಕೆಲಸ. ಈ ನಿಟ್ಟಿನಲ್ಲಿ ಟೀವಿ9 ಪ್ರಯತ್ನ ನಡೆದಿದ್ದರೆ, ಸಂತೋಷ. ಟೀವಿ9 ಬಳಗಕ್ಕೆ ದಟ್ಸ್‌ಕನ್ನಡದಿಂದ ಶುಭ ಹಾರೈಕೆಗಳು.

(ದಟ್ಸ್‌ ಕನ್ನಡ ವಾರ್ತೆ)

ಲೋಕಸಭೆ ಚುನಾವಣೆ 2009 ಫಲಿತಾಂಶ

ಬಿಸಿಬಿಸಿ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

Please Wait while comments are loading...