ಶ್ರೀಲಿಪಿ, ಬರಹ, ನುಡಿ ಜೊತೆಗೆ ಕುವೆಂಪು ತಂತ್ರಾಂಶ

Subscribe to Oneindia Kannada


ಹೊಸಪೇಟೆ :ಹಂಪಿ ಕನ್ನಡ ವಿಶ್ವವಿದ್ಯಾಲಯ ಕುವೆಂಪು ಕನ್ನಡ ತಂತ್ರಾಂಶ ರಚನೆ ಪೂರ್ಣಗೊಳಿಸಿದೆ ಎಂದು ವಿವಿ ಕುಲಪತಿ ಡಾ.ಬಿ.ಎ.ವಿವೇಕ ರೈ ಹೇಳಿದ್ದಾರೆ.

ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಇತ್ತೀಚೆಗೆ ಮೈಸೂರಿನಲ್ಲಿ ಹಂಪಿ ವಿಶ್ವವಿದ್ಯಾಲಯದ ತಾಂತ್ರಿಕ ತಂಡ, ತಂತ್ರಾಂಶದ ಅಂತಿಮ ಪರಿಶೀಲನೆ ನಡೆಸಿದೆ. 15ದಿನಗಳಲ್ಲಿ ಈ ಉಚಿತ ತಂತ್ರಾಂಶವನ್ನು ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.

ಕುವೆಂಪು ಕನ್ನಡ ತಂತ್ರಾಂಶದ ಮುಖ್ಯಾಂಶಗಳು:

  • 4 ಲಿಪಿಗೂ ಹೊಂದಿಕೊಳ್ಳುವ ಪರಿವರ್ತಕ

  • ಒಂದು ಅಕ್ಷರ 25 ಬಗೆಯಲ್ಲಿ ಲಭ್ಯ

  • ಒತ್ತಕ್ಷರಕ್ಕೆ ಸರ್ಕಸ್‌ ಮಾಡುವ ಅಗತ್ಯವಿಲ್ಲ

  • 6 ತಿಂಗಳಲ್ಲಿ ಕನ್ನಡ ಯೂನಿಕೋಡ್‌

ಪರಿವರ್ತಕ : ಕನ್ನಡದಲ್ಲಿ ಚಾಲ್ತಿಯಲ್ಲಿರುವ ಪ್ರಮುಖ ಫಾಂಟ್‌(ಅಕ್ಷರ ಮಾದರಿ ಲಿಪಿ)ಗ ಳಾದ ನುಡಿ, ಬರಹ, ಶ್ರೀಲಿಪಿ ಅಕ್ಷರಗಳು ಪ್ರತ್ಯೇಕವಾಗಿದ್ದು, ಒಂದು ಇನ್ನೊಂದಕ್ಕೆ ತಾಳೆಯಾಗುವುದಿಲ್ಲ. ಇದರಿಂದ ಒಂದು ಲಿಪಿಯಲ್ಲಿ ಮಾಡಿದ ವಿಷಯಗಳು ಇನ್ನೊಂದರಲ್ಲಿ ನೋಡಲು ಕಷ್ಟವಾಗುತ್ತದೆ. ಆದರೆ, ಕುವೆಂಪು ತಂತ್ರಾಂಶದಲ್ಲಿ ನಾಲ್ಕು ಬಗೆಯ ಲಿಪಿಗಳು ಪರಿವರ್ತನೆಯಾಗುವುದಕ್ಕೆ ಅವಕಾಶವಿದೆ. ನಾಲ್ಕು ಬಗೆಯ ಲಿಪಿಯನ್ನು ಒಂದೇ ಕೀ ಬೋರ್ಡ್‌ ಮೂಲಕ ಮಾಡಲು ಅನುಕೂಲ ಕಲ್ಪಿಸಲಾಗಿದೆ.

ವೈವಿಧ್ಯ: ಮೈಸೂರಿನ ವೆಸ್ಟ್ಲಿ ಪ್ರೆಸ್‌ಸೇರಿದಂತೆ ವಿವಿಧ ಪ್ರೆಸ್‌ಗಳಲ್ಲಿ ಬಳಸುತ್ತಿದ್ದ ಅಕ್ಷರಗಳ ಮಾದರಿಯಲ್ಲಿ 25 ವಿವಿಧ ಮಾದರಿಯ ಅಕ್ಷರ ಮಾಲೆಯನ್ನು ರೂಪಿಸಿದ್ದು, ಇದರಿಂದ ಪುಸ್ತಕ, ಬಗೆ ಬಗೆಯ ಜಾಹೀರಾತು ಮುದ್ರಣಕ್ಕೆ ಸಹಕಾರಿಯಾಗಲಿದೆ. ಜೊತೆಗೆ ಆಮಂತ್ರಣ ಪತ್ರಿಕೆ ಮುಂತಾದ ವಿವಿಧ ಅಕ್ಷರ ವಿನ್ಯಾಸದ ಕೆಲಸಗಳಿಗೂ, ನೂತನ ವಿನ್ಯಾಸಗಳನ್ನು ಒದಗಿಸಲು ಇಲ್ಲಿ ಅವಕಾಶವಿದೆ .

ಸರಳೀಕರಣ: ಈಗ ಒತ್ತಕ್ಷರಗಳು ಹಾಗೂ ಸಂಯುಕ್ತಾಕ್ಷರಗಳನ್ನು ಬರೆಯಬೇಕೆಂದರೆ ಕೀ ಬೋರ್ಡ್‌ನಲ್ಲಿನ ಮೂರರಿಂದ ನಾಲ್ಕು ಕೀಲಿಮಣಿ ಟೈಪ್‌ ಮಾಡಬೇಕು. ಕುವೆಂಪು ತಂತ್ರಾಂಶದಲ್ಲಿ ಇದನ್ನು ಸರಳೀಕರಿಸಲಾಗಿದೆ.

ಸಾಹಿತಿ ಪೂರ್ಣಚಂದ್ರ ತೇಜಸ್ವಿಯವರ ಸಲಹೆ ಮೇರೆಗೆ ಡಾ.ಚಿದಾನಂದಗೌಡ ಹಾಗೂ ಪ್ರೊ. ನಾಗಭೂಷಣ ಮಾರ್ಗದರ್ಶನದಲ್ಲಿ ಒಂದು ವರ್ಷದ ಸತತ ಪರಿಶ್ರಮದಿಂದ ತಂತ್ರಾಂಶ ತಯಾರಾಗಿದೆ.

(ದಟ್ಸ್‌ ಕನ್ನಡ ವಾರ್ತೆ)

Please Wait while comments are loading...