ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಾಡು ಹಕ್ಕಿ ಜಿ.ವಿ. ಅತ್ರಿ ನೆನಪಲ್ಲಿ...

By ಮಹೇಶ ಮಲ್ನಾಡ್‌, ಬೆಂಗಳೂರು
|
Google Oneindia Kannada News

ಹಾಡು ಹಕ್ಕಿ ಜಿ.ವಿ. ಅತ್ರಿ ನೆನಪಲ್ಲಿ...
ಎದೆ ತುಂಬಿ ಹಾಡುತ್ತಿದ್ದ ಹಾಡು ಹಕ್ಕಿಯ ಗಾಯನ ವಿಧಿಯ ಕೈವಾಡದಿಂದ ಅಪೂರ್ಣ ಗೊಂಡಿದೆ. ಆದರೆ ಹಾಡುಹಕ್ಕಿಯ ನೆನಪು ಮಾತ್ರ ಎಲ್ಲರಿಗೂ ಹಸಿರಾಗಿದೆ. ತುಂಗೆಯಲ್ಲಿ ಲೀನವಾದ ಕಂಚಿನ ಕಂಠದ ಗಾಯಕ ಜಿ.ವಿ.ಅತ್ರಿಗೆ ಇಲ್ಲೊಂದು ಭಾವಪೂರ್ಣ ನಮನ.

ಜಿ.ವಿ ಅತ್ರಿ, ಕನ್ನಡ ಸಂಗೀತ ಲೋಕ ಕಂಡ ಅದ್ಭುತ ಪ್ರತಿಭೆ. ಆತ ನಮ್ಮನ್ನು ಅಗಲಿ 5 ವರ್ಷಗಳು ಕಳೆದಿದೆ. ಆದರೆ ಇಂದಿಗೂ ಅತ್ರಿಯ ಗಾನ ಹೊಳೆ ಬತ್ತಿಲ್ಲ. ಕಲಾವಿದ ಮರೆಯಾದರೂ ಆತನ ಕಲೆ ಎಂದಿಗೂ ಮಾಯವಾಗುವುದಿಲ್ಲ ಎಂಬುದಕ್ಕೆ ಅತ್ರಿ ಉತ್ತಮ ಉದಾಹರಣೆಯಾಗಬಲ್ಲರು.

ಅತ್ರಿ ಸ್ಮರಣಾರ್ಥವಾಗಿ ರವೀಂದ್ರಕಲಾಕ್ಷೇತ್ರದಲ್ಲಿ ಇತ್ತೀಚೆಗೆ ನಡೆದ 'ಜಿ. ವಿ. ಅತ್ರಿ ಸವಿನೆನಪು' ಎಂಬ ಕಾರ್ಯಕ್ರಮವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಸಂಗೀತಗಂಗಾದ ರುವಾರಿಯಾದ ಹೇಮಾ ಪ್ರಸಾದ್‌ ಆಯೋಜಿಸಿದ್ದರು.

ಅತ್ರಿ ತುಂಗೆಯ ಮಡಿಲಲ್ಲಿ ಲೀನವಾದಾಗ, ಸಂಗೀತಗಂಗಾದ ಹರಿವು ಸ್ತಬ್ಧವಾಯಿತೆಂದರೆ ತಪ್ಪಾಗಲಾರದು, ಸ್ತಬ್ಧವಾದ ಈ ತುಂಗೆಗೆ ಮತ್ತೆ ಜೀವ ನೀಡಿದ್ದು ಅತ್ರಿಯ ಸೋದರಿ ಶ್ರೀಮತಿ ಹೇಮಾಪ್ರಸಾದ್‌ರವರು ತಮ್ಮನ ಕನಸಿನ ಕೂಸಾದ ಸಂಗೀತಗಂಗಾ ಸಂಸ್ಥೆಯನ್ನು ಇಂದಿಗೂ ಲಾಲಿಸಿ ಪಾಲಿಸುತ್ತಿದ್ದಾರೆ.

ದಿನವಿಡೀ ನಡೆದ ಅಂದಿನ ಕಾರ್ಯಕ್ರಮದಲ್ಲಿ ನಾಡಿನ ಅನೇಕ ಹಿರಿಯ ಕಿರಿಯ ಕಲಾವಿದರು ತಮ್ಮ ಭಾವಪೂರ್ಣ ನಮನ ಸಲ್ಲಿಸಿದ್ದು ವಿಶೇಷ.

ಮುಂಜಾನೆಯ ರಾಗಮಾಲಿಕೆ : 'ಅತ್ರಿನಮನ' ಕಾರ್ಯಕ್ರಮ ಪ್ರಾರಂಭವಾಗಿದ್ದು'ತಿಂಗಾಳು ಮುಳುಗಿದಾವೊ ರಂಗೋಲಿ ಬೇಳಗಿದಾವೊ' ಎಂಬ ಚಾಮುಂಡಿದೇವಿಗೆ ನಮಿಸುವ ಜಾನಪದ ಗೀತೆಯ ಮೂಲಕ ಅದರೆ ವಿಶೇಷತೆಯೆನೆಂದರೆ ಈ ಗೀತೆಯನ್ನು ಹಾಡಿ ಕಾರ್ಯಕ್ರಮಕ್ಕೆ ಅರ್ಥಪೂರ್ಣವಾದ ಆರಂಭ ನೀಡಿದವರು ಅಮೂಲ್ಯ ಸಂಸ್ಥೆಯ ಮಾನಸಿಕ ಅಸ್ವಸ್ಥ ಮಕ್ಕಳು.

ನಂತರ ಅತಿಥಿಗಳಿಗೆ ಸ್ವಾಗತ ಮತ್ತು ಅವರ ಅತ್ರಿ ಬಗೆಗಿನ ನೆನಪಿನಗಾಥೆಯಾಂದಿಗೆ ಸಾಗಿ ಮುಂದೆ ವೀಣಾ ವಾರುಣಿಯವರ ವೀಣಾವಾದನ ನೆರದಿದ್ದ ಸಭಿಕರನ್ನು ಮುದಪಡಿಸಿತು. ಸಂಜೆಯ ಸಂಗೀತ ಸಂಜೆಗೆ ಮುನ್ನುಡಿಯಂತಿದ್ದಭಾವಗೀತೆಗಳ ಗಾಯನ ಶಂಕರ ಶಾನುಭೋಗ್‌, ಪಂಚಮ್‌ ಹಳಬಂಡಿ, ಎಂ.ಡಿ.ಪಲ್ಲವಿ, ಶಶೀಧರ್‌, ಚಂದ್ರಿಕಾಗುರುರಾಜ್‌ ರವರ ಗಾಯನ ಸಂಗೀತದ ಕಡಲಲ್ಲಿ ತೇಲುವಂತೆ ಮಾಡಿತು.

ಮತ್ತೆ ಅಪರಾಹ್ನದ ಕಾರ್ಯಕ್ರಮ ಪ್ರಾರಂಭವಾಗಿದ್ದು ಸಂಗೀತಗಂಗಾದ ಮಕ್ಕಳ ಸಮೂಹ ಗಾನದ ಮೂಲಕ, ಮುಂದೆ ನಡೆಯಬೇಕಿದ್ದ ಸಂಗೀತದಲ್ಲಿ ಹಾಸ್ಯ ಕಾರ್ಯಕ್ರಮ ಮೈಸೂರು ಆನಂದ್‌ರವರ ಗೈರುಹಾಜರಿಯಿಂದ ನಿಂತಿದ್ದು, ಶೋಕರಾಗಕ್ಕೆ ಹಾಸ್ಯದ ತಾಳ ಸರಿಹೊಂದುವುದಿಲ್ಲವೆಂಬುದರ ಸೂಚನೆಯೋ ಎಂಬಂತಿತ್ತು.

ನಂತರ ಖ್ಯಾತ ನಟ ಕರಿಬಸವಯ್ಯನವರು ಅತ್ರಿ ತಮ್ಮ ಚಿತ್ರದಲ್ಲಿ ಹಾಡಿದ ಬಗ್ಗೆ, ಉಮಾಶ್ರಿರವರ ಮನೆ ಗೃಹಪ್ರವೇಶದ ದಿನ ಎಲ್ಲಾ ಕಲಾವಿದರ ಜೊತೆಗೂಡಿ ಅತ್ರಿ ಹಾಡಿ ರಂಜಿಸಿದ ಬಗ್ಗೆ ಹೇಳುತ್ತಾ ತಮ್ಮ ನೆನಪಿನ ಬುತ್ತಿಯನ್ನು ಬಿಚ್ಚಿಟ್ಟರು. ನಂತರ ರಂಗಗೀತೆಗಳು, ಹಳ್ಳಿಯ ನಾಟಕದಲ್ಲಿನ ಹಾಸ್ಯ ಪ್ರಸಂಗಗಳನ್ನು ನಟಿಸಿ ಪ್ರೇಕ್ಷಕರನ್ನು ರಂಜಿಸಿದರು. ಅವರ ನಂತರ ಲಹರಿ ಸಂಸ್ಥೆಯ ವೇಲು ರವರು ತಮ್ಮ ಹಾಗು ಅತ್ರಿಯವರ ಒಡನಾಟದ ಬಗ್ಗೆ ಹೇಳುತ್ತಾ ಸುಗಮ ಸಂಗೀತ ಕ್ಯಾಸೆಟ್‌ ಲೋಕದಲ್ಲಿ ಹೊಸ ದಾಖಲೆ ಸೃಷ್ಟಿಸಿದ ಅತ್ರಿಗ್ರಾಮದ 'ಚೆಲ್ಲಿದರು ಮಲ್ಲಿಗೆಯ' ಕ್ಯಾಸೆಟ್‌ ಬಗ್ಗೆ ಹೇಳಿದರು. ಇಂದಿಗೂ ಬೇಡಿಕೆಯಲ್ಲಿರುವ ಈ ಕ್ಯಾಸೆಟ್‌ ಬಿಡುಗಡೆಯಾದ ಕೆಲ ತಿಂಗಳುಗಳಲ್ಲಿಯೇ 10,000 ಕ್ಕೂ ಹೆಚ್ಚು ಮಾರಾಟವಾಗಿ ಇತಿಹಾಸ ನಿರ್ಮಿಸಿದ್ದನ್ನು ನೆನೆದರು.

ಅಲ್ಲಿಂದ ಮುಂದಿನ ಚರಣಕ್ಕೆ ಬಂಡರೆ ಹಿಂದೂಸ್ತಾನಿ ಗಾಯನದ ಮಳೆಹರಿಸಿದವರು ಶ್ರೀಮತಿ ಸಂಗೀತ ಕಟ್ಟಿ(ಕುಲಕರ್ಣಿ)ಯವರು. ಅವರ ಗಾಯನ ಎಲ್ಲಾ ಸಭಿಕರನ್ನು ಮತ್ತೊಂದು ಲೋಕಕ್ಕೆ ಕರೆದೊಯ್ದಂತಿತ್ತು. ನಂತರ 'ಬಸಂತ್‌ ಬಹಾರ್‌' ಎಂಬ ಸುಂದರ ಹೆಸರಿನ ಸುಂದರ ಕಾರ್ಯಕ್ರಮ ಹಿಂದೂಸ್ತಾನಿ ಶೈಲಿಯ ಗಾಯನದ ಮೂಲಕ ಅಗಲಿದ ಗಾಯಕನಿಗೆ ಅರ್ಥಪೂರ್ಣ ನಮನ ಸಲ್ಲಿಸಿದಂತಿತ್ತು. ಬಸಂತ್‌ ಬಹಾರ್‌ ನಲ್ಲಿ ಗಾನ ಹೊಳೆ ಹರಿಸಿದವರು ಶ್ರೀ ಹುಸೇನ್‌ರಾಜ್‌ ಹಾಗು ಉತ್ತರ ಭಾಗದ ಹೆಚ್ಚು ಪ್ರಚಲಿತವಿರುವ ಹಿಂದೂಸ್ತಾನಿ ಗಾಯನ ಪ್ರಾಕಾರದ ಸವಿಯನ್ನು ಬೆಂಗಳೂರಿನ ಪ್ರೇಕ್ಷಕರಿಗೆ ಉಣಬಡಿಸಿದರು.

ನಂತರ ಪ್ರೇಕ್ಷಕರನ್ನು ರಂಜಿಸಿದ್ದು ಖ್ಯಾತ ರಂಗನಟ ಜತೂರಿ ಹಾಗು ತಂಡದವರ ರಂಗಗೀತೆಗಳು ನಾಗಮಂದಲ, ಮಂಟೆಸ್ವಾಮಿ, ತತ್ವಜ್ಞಾನ ಮುಂತಾದ ನಾಟಕಗಳ ರಂಗಗೀತೆಗಳ ಮೂಲಕ ಪ್ರೇಕ್ಷಕರ ತಲೆದೂಗುವಂತೆ ಮಾಡಿದರು. ಇವರ ಗೀತೆಗಳಿಗೆ ಪೂರಕವೋ ಎಂಬಂತೆ ಮುಂದೆ ಹಾಡಲು ಬಂಬ ಬಾಲಕನ ಗಾಯನಕ್ಕೆ ಎಲ್ಲರೂ ಮಂತ್ರಮುಗ್ದರಾದರು ಆತನ ಹೆಸರು ಮಾ।। ಮನೋಜ್‌ ಕುರುಕ್ಷೇತ್ರನಾಟಕದ 'ಬಲೇರೆ ಬಲೆ' ಎಂಬ ಗೀತೆ ಈಗಲೂ ನನ್ನ ಕಿವಿಯಲ್ಲಿ ಗುಯ್‌ು ಗುಡುತ್ತಿದೆ. ಅದ್ಬುತ ಪ್ರತಿಭೆಯುಳ್ಳ ಈ ಬಾಲಕ ಮುಂದೆ ಅಪ್ರತಿಮ ಗಾಯಕನಾದರೆ ಅಚ್ಚರಿಯೇನಿಲ್ಲ.

ಪ್ರೇಕ್ಷಕರ ಒತ್ತಯದ ಮೇರೆಗೆ ಮತ್ತೊಮ್ಮೆ ಬಂದು 'ನಂದನ ವನ' ಎಂಬ ಹಾಡು ಹಾಡಿ ರಂಜಿಸಿದ ಆಗಲಂತೂ ಖ್ಯಾತ ಗಾಯಕರಾದ ಸಾಕ್ಷಾತ್‌ ಸಿ. ಅಶ್ವತ್‌ ರವರೇ ಹಾಡಿದಂತೆ ನಮ್ಮನ್ನೆಲ್ಲ ರಂಜಿಸಿದ. ಈ ಬಾಲ ಪ್ರತಿಭೆ ಎಲ್ಲರ ಮೆಚ್ಚುಗೆಗೆ ಪಾತ್ರನಾದ ತದ ನಂತರ ಸಂಗೀತಗಂಗಾದ ಹಳೆಯ ವಿದ್ಯಾರ್ಥಿಯಾದ ಗೌರಿ ಶಂಕರ್‌ ವಿನೂತನ ರೀತಿಯಲ್ಲಿ ಶಿಳ್ಳೆ ನಾದದ ಮೂಲಕ ನಮ್ಮನ್ನು ರಂಜಿಸಿದರು.

ಭಕ್ತಿ ನಿನಾದನಂತರದ ಕಾರ್ಯಕ್ರಮವಿದ್ದದ್ದು ಕನ್ನಡ ಮತ್ತು ಸಂಸ್ಕೃತಿಯ ನಿರ್ದೇಶಕರಾದ ಶ್ರೀ ಮುದ್ದುಮೋಹನ್‌ ರವರದ್ದು ಅವರು ತಮ್ಮ ಹಾಡುಗಾರಿಕೆಯಿಂದ 'ಭಕ್ತಿನಾದ' ಕಾರ್ಯಕ್ರಮಕ್ಕೆ ಮೆರಗು ನೀಡಿದರು '

'ಅನಾದಿ ಕಾಲವು ನಾನು' ಎಂದು ಪ್ರಾರಂಭವಾದ ಭಕ್ತಿನಾದ ಪೊರೆಯಾಹರಿಯೆ ಎಂದುಹಾಡಿ ಪ್ರೇಕ್ಷಕರನ್ನು ಭಕ್ತಿ ಕಡಲಲ್ಲಿ ತೇಲುವಂತೆ ಮಾಡಿದರುನಂತರ ಕುವೆಂಪು ಗೀತೆಯಾದ ಓ...ಬನ್ನಿ ಸೋದರರೆ...ಗುಡಿ ಚರ್ಚು, ಮಸೀದಿಯನ್ನು ಬಿಟ್ಟು ಎಂಬ ಅರ್ಥಪೂರ್ಣ ಗೀತೆಯಾಂದಿಗೆ ಮುಕ್ತಾಯ ಹಾಡಿದರು.

ನೃತ್ಯ ನಮನ : ಸಂಜೆಯ ಕಾರ್ಯಕ್ರಮದ ಅಂಗವಾಗಿ ಮೊದಲಿಗೆ ಸಂಗೀತಗಂಗಾದ ಮಕ್ಕಳಿಂದ ನೃತ್ಯ ಪ್ರದರ್ಶನವಿತ್ತು, ಮೊದಲಿಗೆ ಕು।। ಅಪೂರ್ವಳಿಂದ 'ರಕ್ಷಿಸು ಕರ್ಣಾಟಕದೇವಿ' ಎಂಬ ಹಾಡಿಗೆ ನರ್ತನ ಮಾಡಿದಳು ನಂತರ ಕು.ಶ್ರುತಿಯಾಂದಿಗೆ ಕವಿ ಡಾ. ಎಚ್‌.ಎಸ್‌. ವೆಂಕಟೇಶ್‌ ಮೂರ್ತಿ ರವರ 'ತವರೂರನೆಂದು ಮರೆಯದಿರು ತಾಯಿ ಕಾವೇರಿ' ಹಾಗೂ 'ಈ ನಾಡಿಗಾಗಿ ನಮ್ಮ ಹಿರಿಯರು ಏನು ಕೊಟ್ಟರೆಂದು ಯಾರು ಅರಿಯರಲ್ಲ' ಎಂಬ ಗೀತೆಗಳ ಆಶಯವನ್ನು ತಮ್ಮ ನೃತ್ಯದ ಮೂಲಕ ಆಭಿನಯಿಸಿದರು.

ಇನ್ನೊಂದು ವಿಶೇಷವೆಂದರೆ ಕವಿ ಎಚ್‌.ಎಸ್‌.ವೆಂಕಟೇಶ್‌ ಮೂರ್ತಿ ತಾವು ರಚಿಸಿದ ಗೀತೆಗಳನ್ನು ನೃತ್ಯರೂಪದಲ್ಲಿ ನೋದಿ ಸಂತಸಪಟ್ಟಿದ್ದು, ನಂತರ ಅತ್ರಿಯ ಬಗ್ಗೆಮಾತಾಡುತ್ತಾ ನನ್ನ ಕವನಗಳು ಇಂದು ಜನಗಳ ಬಾಯಲ್ಲಿ ನಲಿಯುತ್ತಿದ್ದರೆ ಅದಕ್ಕೆ ಅತ್ರಿ ಬಹುಮಟ್ಟಿಕೆ ಕಾರಣ ನನ್ನ ಎಷ್ಟೋ ಗೀತೆಗಳನ್ನು ಜನಪ್ರಿಯಗೊಳಿಸಿದ ಕೀರ್ತಿ ಅವನಿಗೆ ಸಲ್ಲುತ್ತದೆ. ನಮ್ಮಂತ ಹಿರಿಯರನ್ನು ಉಳಿಸಿ ಅತ್ರಿಯಂತಹ ಕಿರಿಯರನ್ನು ಕರೆದೊಯ್ದ ವಿಧಿಯನ್ನು ಜರಿದರು. ಕೊನೆಗೆ ತಮ್ಮ ಹಾಡಿಗೆ ನೃತ್ಯ ಮಾಡಿದ ಬಾಲಪ್ರತಿಭೆಗಳನ್ನು ಮನಸಾರೆ ಹೊಗಳಿದರು. ಎಂದಿಗೂ ಪ್ರಸ್ತುತವಾಗಬಲ್ಲ ಮೇಲಿನ ಗೀತೆಗಳನ್ನು ಅರಿತು ಅದರಂತೆ ನಡಿಯಿರೆಂದು ಕಿವಿ ಮಾತು ಹೇಳಿದರು.

ನೃತ್ಯ ಕಾರ್ಯಕ್ರಮವನ್ನು ಮುಂದುವರಿಸುತ್ತಾ... ಜಾನಪದ ಗೀತೆಯಾಂದಕ್ಕೆ ಕೋಲಾಟ ವಾಡಿ ನೃತ್ಯನಮನವನ್ನು ಪೂರ್ಣಗೊಳಿಸಿದರು.

ಸಂಗೀತ ಸಂಜೆ : ಅಂದಿನ ಕೊನೆಯ ಕಾರ್ಯಕ್ರಮವಾದ 'ಸಂಗೀತಸಂಜೆ' ಗಾಗಿ ಸಾಕಷ್ಟು ಸಂಖ್ಯೆಯಲ್ಲಿ ಜನ ಸೇರಿದ್ದರು ರಜದೀನವಾದರೂ ಬೆಳಗ್ಗೆಯಿಂದ ಸಂಜೆಯವರೆಗೂ ಜನರನ್ನು ಒಂದೆಡೆ ಕಟ್ಟಿಹಾಕುವುದು ಕಷ್ಟ.ಆದರೆ ಸಂಗೀತಗಂಗ ದವರು ಈ ಕಾರ್ಯಕ್ರಮವನ್ನು ಸುಲಲಿತವಾಗಿ ಮಾಡಿ ತೋರಿಸಿದ್ದು ಅವರ ಕಾರ್ಯ ಶ್ರಧ್ಧೆಗೆ ಉತ್ತಮ ನಿದರ್ಶನ. ಸಂಗೀತಸಂಜೆಯ ಪ್ರಾರಂಭವಾದದ್ದು ಗಾಯಕ ರಮೇಶ್‌ ಚಂದ್ರರಿಂದ 'ಸರ್ವಸುಂದರ ನಾಡು ವೀರವರ್ಯರ ಬೀಡು' ಎಂಬ ಸುಂದರ ಗೀತೆಯನ್ನು ಹಾಡಿ ರಂಜಿಸಿದರು. ಇನ್ನೊಂದು ವಿಷಯ ರಮೇಶ್‌ ಚಂದ್ರರವರಿಗೆ ಈ ಬಾರಿ 'ಅತ್ರಿಯುವಪ್ರಶಸ್ತಿ' ಸನ್ಮಾನ ದೊರಕಿದೆ ಇದನ್ನು ನೀಡುತ್ತಿರುವವರು ಅತ್ರಿಯ ಮಾವನ ಮನೆ ಕಡೆಯವರು 'ಜೈ ಶಂಕರ್‌ ಯುವಕ ತಂಡ' ಹಾಗೂ ಜಿ.ವಿ ಅತ್ರಿ.

ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಅಗಲಿದ ಗಾಯಕನಿಗೆ ನೆನಪು-ನಿನಾದ' ಎಂಬ ಭಾವಪೂರ್ಣ ನಮನವನ್ನು ಶೃಂಗೇರಿಯ ಬಳಿ ಉಳುವೆಬೈಲಿನಲ್ಲಿ ನಡೆಸುತ್ತಿದಾರೆ. ಅತ್ರಿ ಸಂಸಾರವನ್ನು ತನ್ನೊಡನೆ ಕರೆದೊಯ್ದ ತುಂಗೆ ಉಳುವೆಬೈಲಿನಿಂದ ಕಾಲ್ನಡಿಗೆ ದೂರದಲ್ಲಿರುವುದು ವಿಷಾದವೋ, ವಿಪರ್ಯಾಸವೋ!! ದೇವರೇ ಬಲ್ಲ, ನದಿತಟದಲ್ಲಿ ಸುಳಿದರೆ ಅತ್ರಿಯ ನೇನಪು ಕಾಡದೆ ಬಿಡದು, ಶೃಂಗೇರಿಯಲ್ಲಿ ಈ ಕಾರ್ಯಕ್ರಮ ಕಳೆದ ಐದು ವರುಷದಿಂದ ತನ್ನದೇ ಆದ ರೀತಿಯಲ್ಲಿ ನಡೆಸಿಕೊಂಡು ಬರುತ್ತಿರುವವರು ಜೈ ಶಂಕರ್‌ ಯುವಕಸಂಘದವರು.ಜಿ.ವಿ.ಅತ್ರಿಗೆ ನಾಡಿನೆಲ್ಲೆಡೆ ಅಭಿಮಾನಿಗಳು ತಮ್ಮದೇ ಆದ ರೀತಿಯಲ್ಲಿ ನಮನ ಸಲ್ಲಿಸುತ್ತಿರುವುದು ಅತ್ರಿಯ ಬಗೆಗಿನ ಪ್ರೀತಿಗೆ ಅವರ ಅಕರ್ಷಕ ವ್ಯಕ್ತಿತ್ವಕ್ಕೆ ಹಿಡಿದ ಕನ್ನ್ನಡಿಯಾಗಿದೆ.

ಸಂಗೀತಸಂಜೆಯ ಕಾರ್ಯಕ್ರಮವನ್ನು ಮುಂದುವರಿಸುತ್ತಾ... ಮುಂದಿನ ಗೀತೆಯನ್ನು ಹಾಡಿದವರು ಶಮೀತ ಮಲ್ನಾಡ್‌ 'ಹೇಗೆ ತಿಳಿದೆನೆ ಹೇಳೆ ಸಖಿ' ಎಂಬ ಗೀತೆ ಪ್ರೇಕ್ಷಕರನ್ನು ರಂಜಿಸಿತು. ನಂತರ ಡಾ. ಎಚ್‌.ಎಸ್‌.ವೆಂಕಟೇಶ್‌ ಮೂರ್ತಿರವರ 'ಈ ಆಗಸ, ಈ ತಾರೆ' ಎಂಬ ಗೀತೆಯನ್ನು ಸುಶ್ರಾವ್ಯವಾಗಿ ಹಾಡಿದವರು ನಗರ ಶ್ರೀನಿವಾಸ ಉಡುಪರವರು, ಮುಂದಿನ ಗೀತೆಯನ್ನು ಅತ್ರಿಯ ಶಿಷ್ಯೆಯಾದ ಶಿವಮೊಗ್ಗ ನಿವಾಸಿ ಶಾಂತಶೆಟ್ಟಿಯವರು 'ಗಗನದಿ ಸಾಗಿದೆ ಬಾಗಿದೆ ಮೋಡ' ಎಂದು ಚನ್ನವೀರ ಕಣವಿ ಯವರ ರಚನೆಯನ್ನು ಭಾವಪೂರ್ಣವಾಗಿ ಹಾಡಿದರು.

ನಂತರದ ಸರದಿ ರಾಜೇಂದ್ರ ಬೆಂಡೆಯವರದ್ದು 'ತಾಯಿ ನಿನ್ನ ಮಡಿಲಲ್ಲಿ' ಎಂಬ ಲಕ್ಷ್ಮಿನಾರಾಯನ ಭಟ್ಟರ ಗೀತೆಗೆ ಜೀವ ತುಂಬಿದರೆ, ಚಿಕ್ಕಮಗಳೂರಿನ ಸಂಗೀತಗಂಗಾದ ಪಾಲಕರಾದ ಬಿ.ಸಿ.ಜಯರಾಂರವರು ಬಾಗೂರು ಮಾರ್ಕಾಂಡೇಯರ 'ಎನ್ನ ರಾಧಿಕೆ ಅವಳು' ಎಂದು ಹಾಡಿ ಪ್ರೇಕ್ಷಕರಿಗೆ ರಸಾನುಭವ ನೀಡಿದರು. ಸಂಗೀತ ಗಂಗಾದ ವಿದ್ಯಾರ್ಥಿಗಳು ಹಾಡಿದ ಬಹುಜನಪ್ರಿಯ ಗೀತೆ 'ಧರಣಿಮಂಡಲ ಮಧ್ಯದೊಳಗೆ' ಎಲ್ಲರೂ ತಮ್ಮ ಶಾಲಾದಿಗಳನ್ನು ನೆನೆಯುವಂತೆ ಮಾಡಿತು.

ಚಿಂತನಪಲ್ಲಿ ಶ್ರೀನಿವಾಸರವರು ಹಾಡಿದ 'ಶ್ರೀಚನ್ನಕೇಶವ ಶೃಂಗಾರಭಾವ' ಎಂಬ ಡಿ.ವಿ.ಜಿಯವರ ಗೀತೆ ಭಕ್ತಿ ರಸವನ್ನು ಹರಿಸಿದರೆ, ಫಲ್ಗುಣ ಮತು ಶ್ರೀಮತಿ ಹೇಮ ಪ್ರಸಾದ್‌ ರವರು ಹಾಡಿದ 'ಬಾ ... ಮಲ್ಲ್ಲಿಗೆ... ಬಾ ಮೆಲ್ಲಗೆ...' ಎಂಬ ಯುಗಳ ಗೀತೆ ಮುದನೀಡಿತು. ಆದರೆ ಸಂಗೀತ ಸಂಜೆಗೆ ಕಾವೇರಿದ್ದು ಅಪ್ಪುಗೆರೆ ತಿಮ್ಮರಾಜುರವರ ಜಾನಪದಗೀತೆಯಿಂದ 'ಎಲ್ಲೋ ಜೋಗಪ್ಪ ನಿನ್ನ ಅರಮನೆ' ಎಂದು ತಮ್ಮ ಎಂದಿನ ವಿಶಿಷ್ಟ ಧಾಟಿಯಲ್ಲಿಹಾಡಿ ಪ್ರೇಕ್ಷಕರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದರು.

ನಂತರ ಸಂಗೀತಗಂಗಾದ ಯುವ ಪ್ರತಿಭೆಗಳಾದ ಧನಂಜಯ, ಶ್ರೀಕಾಂತ್‌ ರವರು ಕನ್ನಡದ ಹಿರಿಮೆಯ ಕುರಿತು ಹಾಡಿದರೆ ನಂತರ ಸಂತೆಯ ಎಲ್ಲಾ ಹಿರಿಯ , ಕಿರಿಯರು ಒಟ್ಟುಗೂಡಿ ದ.ರಾ.ಬೇಂದ್ರೆರವರ ವಿಶ್ವಮಾತೆಯನ್ನು ವಂದಿಸುವ ಗೀತೆಯಾಂದಿಗೆ ಅಂದಿನ ಎಲ್ಲಾ ಕಾರ್ಯಕ್ರಮಕ್ಕೆ ಮುಕ್ತಾಯ ಹಾಡಿದರು. ನಂತರ ಮನಸಿಲ್ಲದಮನಸ್ಸಿನಿಂದ ವಿದಾಯ ಹೇಳಿ ಎಲ್ಲರೂ ಹೊರನಡೆದರು.

ಅಂದು ನಾಡಿನ ಅನೇಕ ಗಣ್ಯರು, ಕಲಾವಿದರು ಸಂಸ್ಥೆಯ ಅಭಿಮಾನಿದ ಕರೆಗೆ ಓಗೊಟ್ಟು ಬಂದಿದ್ದು ಸಂತಸದ ಸಂಗತಿ. ಅಂದಿನ ಕಾರ್ಯಕ್ರಮಕ್ಕೆ ಸಹಕಾರ ನೀಡಿದ ಎಲ್ಲಾ ಹಿರಿಯ, ಕಿರಿಯ ಹಿತೈಷಿಗಳನ್ನು ಸಂಸ್ಥೆ ವತಿಯಿಂದ ಗೌರವಿಸಲಾಯಿತು. ದಿನವಿಡೀ ನಡೆದ ಸಮಾರಂಭವನ್ನು ಅಚ್ಚುಕಟ್ಟಾಗಿ ನಿರೂಪಿಸಿ, ಪ್ರೇಕ್ಷಕರಿಗೆ ಎಲ್ಲೂಬೇಸರವಾಗದಂತೆ ಆಗಾಗ ಹಾಸ್ಯದ ಪ್ರಸಂಗವನ್ನು ಹೇಳುತ್ತಾ, ಎಲ್ಲ್ಲರ ಮೆಚ್ಚುಗೆಗೆ ಪಾತ್ರರಾದವರು ನಿರೂಪಕ ಹರೀಶ್‌. ಆತ್ರಿಯ ಸಾಧನೆ ಎಲ್ಲರಿಗೂ ಅನುಕರಣೀಯ ಎಂದು ಹೇಳಿದ ಲ.ನ.ಭಟ್ಟರ ಮಾತನ್ನು ನೆನೆಯುತ್ತ ಅದರಂತೆ ನಡೆಯೋಣ.

English summary
Sweet Memories of G.V.Atri Programme held at Ravindra Kalakshetra in Bangalore. Event Report by Mahesh Malnad, Bangalore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X