ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ರಿಮಿನಾಶಗಳ ವಿಷ ಶೇಷಾವತಾರ !

By Super
|
Google Oneindia Kannada News

ಕ್ರಿಮಿನಾಶಗಳ ವಿಷ ಶೇಷಾವತಾರ !
ಕೋಲಾ ಹಾಗಿರಲಿ, ಹಣ್ಣಿನಲ್ಲೂ ಹಾಲಾಹಲ. ವೈನು ಫಸಲು ತೆಗೆಯಲು ಹೊಯ್ಯುವ ರಾಸಾಯನಿಕಗಳ ವಿಷಶೇಷ ಫಲ- ತರಕಾರಿಗಳಲ್ಲಿ ಸೇರುತ್ತಿರುವುದು ನಿಮಗೆ ಗೊತ್ತೆ ? ಅರಿವೆಯೇ ಇಲ್ಲದೆ ವಿಷ ಉಣ್ಣಿಸುತ್ತಿರುವ ರೈತರು ಹಾಗೂ ಜನ ಸಾಮಾನ್ಯರು ಇವತ್ತು ಏನು ಮಾಡಬೇಕು ಅಂತ ರೈತರೇ ಬರೆದಿದ್ದಾರೆ...

ತಂಪು ಪಾನೀಯದಲ್ಲಿ ವಿಷಾಂಶ. ಚಾಕಲೇಟಿನಲ್ಲಿ ಹುಳು ಈಗ ಹಳೇ ಕಥೆ. ನಮ್ಮ ತರಕಾರಿ ಮತ್ತು ಹಣ್ಣುಗಳಲ್ಲಿ ಸೇರಿರುವ ರಾಸಾಯನಿಕ ವಿಷಗಳ ಬಗ್ಗೆ ನಾವು ಸ್ವಲ್ಪ ಆಲೋಚಿಸೋಣ.

'ಕುಂಬಳಕಾಯಿ ಕಳ್ಳ" ಎಂದರೆ ಹೆಗಲು ಮುಟ್ಟಿ ನೋಡಿ ಕೊಂಡನಂತೆ! - ಈ ಗಾದೆಯ ನೆನಪಾಯಿತು. ಯಾಕೆಂದರೆ ನಾನೂ ಒಬ್ಬ ವೃತ್ತಿಪರ ರೈತ. ನಾನು ಇಲ್ಲಿ ನನ್ನ ಬಂಧುಗಳನ್ನು ದೂರುತ್ತಿಲ್ಲ. ಆದರೆ ವಾಸ್ತವಾಂಶ ಮರೆಮಾಚಬಾರದಲ್ಲವೇ? ಈ ತಪ್ಪನ್ನು ನಾವು ತಿಳಿದು ಮಾಡುತ್ತಿಲ್ಲ. ಆದರೆ ನಾವುಗಳು ಮಾಡುತ್ತಿರುವ ಈ ಘೋರ ತಪ್ಪನ್ನು ತಿಳಿದುಕೊಂಡು, ನಮ್ಮ ವ್ಯವಸಾಯ ಪದ್ಧತಿಯ ಕ್ರಮಗಳನ್ನು ತ್ವರಿತವಾಗಿ ತಿದ್ದಿಕೊಳ್ಳ ಬೇಕಾದುದು ನಾವು ಕೂಡಲೇ ಮಾಡಬೇಕಾದ ಮೊದಲ ಕರ್ತವ್ಯ. ನನ್ನ ರೈತ ಬಂಧುಗಳಿಗೆ ನೇರವಾಗಿ ನಾನು ಕಂಡ ಸತ್ಯಗಳನ್ನು ಹೇಳುತ್ತಿದ್ದೇನೆ. ಒಬ್ಬ ವಿದ್ಯಾವಂತ ರೈತನಾಗಿದ್ದರೂ ಕೂಡಾ ಈ ಪರಿಣಾಮಗಳು ನನಗೆ ಬಹಳ ತಡವಾಗಿಯೇ ಅರಿವಿಗೆ ಬಂದುವು. ಇವನ್ನು ನಾನು ತಮಗೆ ಹೇಳಲೇಬೇಕಾಗಿದೆ.

ಪ್ರತೀ ರೈತನೂ ತನ್ನ ಬದುಕಿಗೋಸ್ಕರ ಕೃಷಿ ಮಾಡುತ್ತಾನೆ. ನಮ್ಮ ಕೃಷಿಯಲ್ಲಿ ನಾವು ಈ ದಿನಗಳಲ್ಲಿ ರಾಸಾಯನಿಕ ಗೊಬ್ಬರ, ಕಳೆನಾಶಕ. ರೋಗನಾಶಕ ಮತ್ತು ಕೀಟ ನಾಶಕಗಳನ್ನು ವ್ಯಾಪಕವಾಗಿ ಅಲ್ಲದಿದ್ದರೂ ಸಾಮಾನ್ಯವಾಗಿ ಬಳಸುತ್ತಿದ್ದೇವೆ. ಇದು ದೊಡ್ಡ ತಪ್ಪೇನೂ ಅಲ್ಲ. ಆದರೆ ಈ ರಾಸಾಯನಿಕಗಳು ಉಂಟುಮಾಡುವ ದುಷ್ಪರಿಣಾಮಗಳ ಬಗ್ಗೆ ನಮಗೆ ಯಾವ ಅರಿವೂ ಇಲ್ಲ. ಈ ಬಗ್ಗೆ ನಮಗೆ ಯಾರೂ ಎಚ್ಚರಿಕೆ ನೀಡಿಲ್ಲ. ಈ ಬಗ್ಗೆ ರೈತನಿಗೆ ತಿಳುವಳಿಕೆ ಕೊಡುವ ವ್ಯವಸ್ಥೆ ನಮ್ಮ ಸಮಾಜದಲ್ಲಿ ಇಂದಿಗೆ ಎಲ್ಲೂ ಕಾಣುತ್ತಿಲ್ಲ. ರಸಗೊಬ್ಬರ ಬಳಕೆಯಿಂದ ಯಾವ ಹಾನಿ ಇದೆ ಎಂದು ನನಗಿನ್ನೂ ಖಚಿತವಾಗಿಲ್ಲ. ಆದರೆ ರಸಗೊಬ್ಬರ ಹಾಕಿ ಬೆಳೆದ ಬೆಳೆಗಳಿಗೆ ರೋಗ ಹಾಗೂ ಕೀಟ ಬಾಧೆ ಜಾಸ್ತಿ ಎಂದು ನನ್ನ ಅನುಭವದಿಂದ ಖಚಿತವಾಗಿ ಹೇಳಬಲ್ಲೆ. ಈ ರಾಸಾಯನಿಕ ಬಳಸಿದ ಬೆಳೆಗಳನ್ನು ಉಳಿಸಿಕೊಳ್ಳಲು ನಾವು ರೋಗ ಹಾಗೂ ಕೀಟ ನಾಶಕಗಳನ್ನು ಬಳಸಲೇ ಬೇಕಾಗುತ್ತದೆ.

ವೈಜ್ಞಾನಿಕ ತಳಿಯ ಅವೈಜ್ಞಾನಿಕ ಬಳಕೆ

ನಾವು ಈಗ ಬಳಸುತ್ತಿರುವ ತರಹೇವಾರಿ ವಿಷಗಳ ಬಗ್ಗೆ ಸರಿಯಾದ ಅರಿವಿಲ್ಲದೇ ಅವನ್ನು ನಾವು ಅವೈಜ್ಞಾನಿಕ ರೀತಿಯಿಂದ ನಮಗೇ ಅಪಾಯಕರವಾಗುವ ರೀತಿಯಲ್ಲಿ ಬಳಸುತ್ತಿದ್ದೇವೆ. ಹಣ್ಣು ಮತ್ತು ತರಕಾರಿ ಎಂಬುವು ಈಗ ಒಂದು ರೀತಿಯ 'ಕಮರ್ಷಿಯಲ್‌ ಫಾರ್ಮ್‌ ಪ್ರಾಡಕ್ಟ್‌"ಗಳು. ನಾವು ಬೆಳೆಯುವ ಹಣ್ಣು ಮತ್ತು ತರಕಾರಿಗಳು ನೋಡಲು ಆಕರ್ಷಕವಾಗಿರಬೇಕು. ಎಕರೆಗೆ ಹೆಚ್ಚಿನ ಪ್ರಮಾಣದಲ್ಲಿ ಬೆಳೆದುಬಂದು ರೈತನಿಗೆ ಬೇಸಾಯದಲ್ಲಿ ಲಾಭವನ್ನು ತಂದು ಕೊಡಬೇಕು. ಇದಕ್ಕೋಸ್ಕರ ಹೊಸ ಹೊಸ ಬೀಜಗಳ ಅಥವಾ ತಳಿಗಳ ಆವಿಷ್ಕಾರವಾಗಿದೆ. ರೈತನು ತನ್ನ ಉಳಿವಿಗೋಸ್ಕರ ಈ ಹೊಸ ತಳಿಗಳ ವ್ಯವಸಾಯಕ್ಕೆ ತೊಡಗಿದ್ದಾನೆ. ಈ ತಳಿಗಳು ಅನಿವಾರ್ಯವಾಗಿ ರಸಗೊಬ್ಬರ ಹಾಗೂ ಕ್ರಿಮಿನಾಶಕಗಳ ವ್ಯಾಪಕ ಉಪಯೋಗವನ್ನು ಬಯಸುತ್ತವೆ. ಎಲ್ಲವೂ ಲೆಕ್ಕಹಾಕಿದಂತೆ ನಡೆದರೆ ಯಾವ ಅಪಾಯವೂ ಇದರಲ್ಲಿ ಇಲ್ಲ. ಆದರೆ ಈ 'ತರಕಾರಿ ಮತ್ತು ಹಣ್ಣಿನ ಕೃಷಿ" ಈಗ ಜನ ಸಾಮಾನ್ಯನ ಜೀವನಕ್ಕೆ ಪೂರಕವಾಗದೆ, ಮಾರಕವಾಗುತ್ತಿರುವುದು ಅತೀ ಖೇದದ ವಿಚಾರ.

ಹಣ್ಣು ಹಾಗೂ ತರಕಾರಿ ಕೃಷಿ ನಮ್ಮ ರೈತರಿಗೆ ಹೊಸ ವಿಚಾರವಲ್ಲ. ಈಗ ತೊಂದರೆ ಹುಟ್ಟಿರುವುದು ಈಗಿನ ನಮ್ಮ ಅವೈಜ್ಞಾನಿಕ ರೀತಿಯ ರಾಸಾಯನಿಕ ಬಳಕೆಯಿಂದ ಮಾತ್ರ. ತಿಳುವಳಿಕೆಯಿಲ್ಲದೆ ನಮ್ಮ ರೈತರು ಬಳಸುವ ಕೀಟ ಹಾಗೂ ರೋಗ ನಿರೋಧಕ ರಾಸಾಯನಿಕ ಬೆಳೆ ಸಂರಕ್ಷಣೆಯ ವಿಧಾನಗಳಿಂದ ಈ ಕೆಟ್ಟ ಪರಿಣಾಮಗಳಾಗುತ್ತಿವೆ.

ಒಂದೆರಡು ಉದಾಹರಣೆ ಕೊಡುತ್ತೇನೆ :

ಸೀಬೇ ಹಣ್ಣು ತಿಂದ ಅಯ್ಯಯ್ಯಪ್ಪ ಅಂದ !
ಸಚಿನ್‌ ಸುಸಂಸ್ಕೃತ ವಿದ್ಯಾವಂತ ದಂಪತಿಗಳ ಮುದ್ದಿನ ಐದು ವರ್ಷ ಪ್ರಾಯದ ಕುಮಾರ. ಆತನಿಗೆ ಸೀಬೆ ಕಾಯಿ ತಿನ್ನುವ ಆಸೆಯಾಯಿತು. ಅವನ ತಂದೆತಾಯಿ ಮಗುವಿಗೆ ಎಂದೂ ಬೀದಿ ಬದಿಯ ಮಾಲು ಖರೀದಿಸಿ ಕೊಡುವ ಹವ್ಯಾಸದವರಲ್ಲ. ಆತನ ತಂದೆ ಮಾರ್ಕೆಟ್‌ನಿಂದ ಒಂದು ಕಿಲೋ ಚೆನ್ನಾಗಿ ಬಲಿತ ದೊಡ್ಡ ಸೈಜಿನ ಸೀಬೆಕಾಯಿಗಳನ್ನು ಕೊಂಡು ತಂದರು. ಮನೆಯಲ್ಲಿ ಅವನ್ನು ಚೆನ್ನಾಗಿ ತೊಳೆದು ಬಟ್ಟೆಯಿಂದ ಒರೆಸಿ ಮಗುವಿಗೆ ತಿನ್ನಲು ಕೊಟ್ಟರು. ಮಗು ಖುಷಿಯಿಂದ ಸೀಬೆಕಾಯಿ ಚಪ್ಪರಿಸಿ ತಿನ್ನುವುದನ್ನು ನೋಡಿ ಸಂತೋಷಿಸುತ್ತಾ ಅವನ ಜತೆಗೆ ಅಪ್ಪ- ಮ್ಮ ಕೂಡ ಒಂದೊಂದು ಕಾಯಿ ಕಚ್ಚಿ ತಿಂದರು.

ಹತ್ತೇ ನಿಮಿಷದಲ್ಲಿ ಮಗುವಿನ ಬಾಯಿ ಸುತ್ತ ಹಾಗೂ ನಾಲಗೆಯ ಮೇಲೆ ಕೆಂಪನೆ ದಡಾರಗಳು ಕಾಣಿಸಿಕೊಂಡವು. ಅವನ ತಂದೆ ತಾಯಿಗಳಿಗೆ ಕೂಡಾ ಅದೇ ರೀತಿಯ ತೊಂದರೆ ಅಲ್ಪ ಪ್ರಮಾಣದಲ್ಲಿ ಕಾಣಿಸಿಕೊಂಡಿತು. ಹತ್ತಿರದ ಡಾಕ್ಟರನ್ನು ಕಂಡು ತಾವೆಲ್ಲರೂ ಸೀಬೆ ಕಾಯಿ ತಿಂದನಂತರ ಹೀಗಾಯಿತು ಎಂದು ತಿಳಿಸಿದರು. ಕೂಡಲೇ ಡಾಕ್ಟರರು ಮೂವರಿಗೂ ಸಾಂದ್ರ ಉಪ್ಪುನೀರು ಕುಡಿಸಿ ಕುಡಿಸಿ ವಾಂತಿ ಮಾಡಿಸಿದರು. ಹೊಟ್ಟೆ ಖಾಲಿಯಾದ ಅನಂತರ ಮೂವರಿಗೂ ಔಷಧ ಉಪಚಾರ ನೀಡಿದರು. ಡಾಕ್ಟರು ಸಚಿನ್‌ನ ತಂದೆಗೆ ಹೇಳಿದರು- 'ಸ್ಪ್ರೇ ಬಳಸಿದ ತರಕಾರಿ ಹಣ್ಣು ಉಪಯೋಗಿಸಬೇಡಿ. ಯಾವ ತರಕಾರಿ ಹಣ್ಣು ತಂದರೂ ಉಪಯೋಗಿಸುವ ಮೊದಲು ಇಪ್ಪತ್ತು ನಿಮಿಷ ಉಪ್ಪು ನೀರಿನಲ್ಲಿ ನೆನೆಸಿಟ್ಟು ಆಮೇಲೆ ಚೆನ್ನಾಗಿ ತೊಳೆದು ಉಪಯೋಗಿಸಿ. ದ್ರಾಕ್ಷಿ, ಕ್ಯಾಬೇಜು, ಕಾಲಿಫ್ಲವರ್‌ ಇವುಗಳಿಗೆ ಹೆಚ್ಚಾಗಿ ಮಾರಕ ವಿಷಗಳನ್ನು ಸ್ಪ್ರೇ ಮಾಡುತ್ತಾರೆ. ಹಿಂದಿನ ಕಾಲದಲ್ಲಿ ಎಳನೀರು ಹಾಗೂ ಹಾಲು ಶುದ್ಧ ಆಹಾರಗಳ ಪಟ್ಟಿಯಲ್ಲಿದ್ದುವು. ಆದರೆ ಇಂದು 'ನುಸಿ ಪೀಡೆ" ತಡೆಯಲು ತೆಂಗಿನ ಮರದ ಬೇರಿಗೆ ವಿಷದ ಪ್ಯಾಕೆಟ್‌ ಕಟ್ಟಿ ಇಡೀ ಮರವನ್ನೇ ವಿಷವನ್ನಾಗಿಸುತ್ತಾರೆ. ದನಗಳು ಸ್ಪ್ರೇ ಮಾಡಿದ ಹುಲ್ಲು ತಿನ್ನುತ್ತವೆ. ಪಶು ಆಹಾರದಲ್ಲಿ ಕೂಡಾ ಮಿತಿಗಿಂತ ಜಾಸ್ತಿ ಯೂರಿಯಾ ಬೆರೆಸುತ್ತಾರಂತೆ. ಅದ್ದರಿಂದ ಎಲ್ಲರೂ ಅಹಾರಕ್ಕೆ ಸೇರುವ ವಿಷಗಳ ಬಗ್ಗೆ ಜಾಗ್ರತೆಯಿಂದ ಇರಬೇಕು " ಎಂದರಂತೆ.

ಮಗು ಸಚಿನ್‌ ಈಗ ಸೀಬೆ ಕಾಯಿ ಕಂಡರೆ ಹೆದರುತ್ತಾನೆ.

ಹೊಟೇಲ್‌ ಊಟ ಮಾಡಿದ ನರಹರಿ ಅವರಿಗೆ ಎಂಥಾ ಗತಿ ಬಂತು ಗೊತ್ತೆ ?
ನರಹರಿ ಅರುವತ್ತನೇ ವಯಸ್ಸಿಗೂ ಚೂಟಿಯಾಗಿ ಜೀವನೋತ್ಸಾಹದಿಂದ ಓಡಿಯಾಡಿಕೊಂಡು ಇರುತ್ತಿದ್ದ ಒಬ್ಬ ಬ್ಯಾಂಕ್‌ ಮ್ಯಾನೇಜರ್‌. ಅವರು ಹತ್ತಾರು ವರ್ಷ ಕೆಲಸದಲ್ಲಿನ ವರ್ಗಾವಣೆ ಮೇರೆಗೆ ಮನೆಯಿಂದ ದೂರ ಉಳಿಯಬೇಕಾಯಿತು. ಆದರೆ, ಕಾಲೇಜು ಓದುತ್ತಿದ್ದ ಮಕ್ಕಳನ್ನು ಸ್ಥಳಾಂತರಿಸುವ ಹಾಗಿರಲಿಲ್ಲ. ಹೋಟೆಲ್‌ ಊಟ ಅವಲಂಬಿಸಬೇಕಾದ್ದು ಅನಿವಾರ್ಯವಾಯಿತು. ಆದರೂ ನಿತ್ಯ ವ್ಯಾಯಾಮ, ಈಜು ಹಾಗೂ ಟೆನ್ನಿಸ್‌ ಬಿಟ್ಟಿರದ ಚಟುವಟಿಕೆಯ ವ್ಯಕ್ತಿ ನರಹರಿ. ಅವರು ಬ್ಯಾಂಕ್‌ ಕೆಲಸದಿಂದ ತಮ್ಮ ಅರುವತ್ತನೇ ವರ್ಷಕ್ಕೆ ನಿವೃತ್ತರಾದರು. ನಿವೃತ್ತಿಯ ನಂತರ ಒಂದು ದಿನ ಇದ್ದಕ್ಕಿದ್ದಂತೆ ಅವರ ಎರಡು ಕಿಡ್ನಿಗಳು ಕೆಲಸ ನಿಲ್ಲಿಸಿದವು. ಈಗ ವಾರಕ್ಕೆ ಮೂರು ಡಯಾಲಿಸಿಸ್‌ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ನಿವೃತ್ತರಿಗೆ ಅವರ ಬ್ಯಾಂಕ್‌ ಏನೂ ಸಹಾಯ ಮಾಡುತ್ತಿಲ್ಲ.

ಇದಕ್ಕೆ ಕಾರಣವೇನು ಗೊತ್ತೆ ? ಅವರು ಒಂಟಿಯಾಗಿ ಊರೂರಲ್ಲಿ ಕೆಲಸ ಮಾಡುತ್ತಿದ್ದಾಗ ಹೋಟೆಲಿನ ಊಟವನ್ನೇ ಮಾಡುತ್ತಿದ್ದುದು. ಹೋಟೆಲಿನವರು ತರಕಾರಿಗಳನ್ನು 'ಸರಿಯಾಗಿ ತೊಳೆಯದೇ ಬಳಸುತ್ತಿದ್ದುದೇ ಹೀಗಾಗಲು ಕಾರಣ ಇರಬೇಕು" ಎಂದು ಡಾಕ್ಟರು ಈಗ ಅಭಿಪ್ರಾಯ ಪಡುತ್ತಾರೆ. ತರಕಾರಿಗಳಿಗೆ ಸ್ಪ್ರೇ ಮಾಡಲ್ಪಟ್ಟ ವಿಷ ಪದಾರ್ಥಗಳು ಅವರ ಹೊಟ್ಟೆಗೆ ಸೇರಿದುದೇ ಹಾಗಾಗಲು ಕಾರಣವಂತೆ!

ಇಂತಹ ಉದಾಹರಣೆಗಳು ನಮಗೆ ಈಗ ಸಾವಿರಾರು ಸಿಗಬಹುದು.

ಹಲವು ವರ್ಷಗಳ ಹಿಂದೆ ಮಾರ್ಕೆಟ್ಟಿನ ತರಕಾರಿಗಳಲ್ಲಿ ಅಲ್ಲಲ್ಲಿ ಹುಳುಗಳು ಕಾಣಿಸುತ್ತಿದ್ದುವು. ಈಗ ಅವರೇಕಾಯಿ, ಬಟಾಣಿ, ಬೆಂಡೇಕಾಯಿ, ಬದನೇ ಕಾಯಿಗಳಲ್ಲಿ ಹುಡುಕಿದರೂ ಹುಳಗಳೇ ಇಲ್ಲ ! ವ್ಯಾಪಕವಾಗಿರುವ ರಾಸಾಯನಿಕಗಳ ಸಿಂಪಡಣೆ ಮತ್ತು ತರಕಾರಿ ಹಾಗೂ ಹಣ್ಣುಗಳಲ್ಲಿ ಉಳಿದಿರುವಂಥ ವಿಷ ಶೇಷಗಳೇ ಇದಕ್ಕೆ ಕಾರಣ. ಕಣ್ಣಿಗೆ ಗೋಚರಿಸದ ಈ ಪಿಡುಗಿನ ಪರಿಹಾರದ ಬಗ್ಗೆ ನಾವು ಆಲೋಚಿಸೋಣ.

ತರಕಾರಿ, ಹಣ್ಣು ಮತ್ತು ಇತರೇ ಬೆಳೆಗಳನ್ನು ಕಾಡುವ ಹುಳುಗಳು ಅಥವಾ ಕ್ರಿಮಿಕೀಟಗಳು ಈ ಭೂಮಿಯ ಮೇಲಿಂದ ಮಾಯವಾಗಿ ಹೋಗಿಲ್ಲ. ರಾಸಾಯನಿಕಗಳ ಸಿಂಪಡಣೆಯು ಇವನ್ನು ಹೊಲ ಗದ್ದೆಗಳಿಂದ ದೂರವಿರಿಸಿವೆ. ಅಷ್ಟೆ ! ಆದ್ದರಿಂದ ನಮ್ಮ ರೈತ ಭಾಂದವರು ಸಸ್ಯಗಳಿಗೆ ಸಿಂಪಡಿಸುವ ರೋಗನಾಶಕ ಮತ್ತು ಕೀಟನಾಶಕಗಳನ್ನು ಉಪಯೋಗಿಸುವ ಕ್ರಮವನ್ನು ಅರಿತು, ಬಳಸಬೇಕು. ಈ ರಾಸಾಯನಿಕ ವಿಷಗಳ ಪರಿಣಾಮ ತಾವು ಕೊಯ್ಯುವ ಫಸಲಿಗೆ ಹರಿದು ಬರದಂತೆ ಜಾಗ್ರತೆವಹಿಸಿ ಅವನ್ನು ವೈಜ್ಞಾನಿಕ ರೀತಿಯಲ್ಲಿ ಬಳಸಬೇಕು.

ಕೀಟನಾಶಕಗಳಲ್ಲಿ ಏನಿರುತ್ತದೆ?
'ನಾಕ್‌- ಔಟ್‌" ಪರಿಣಾಮ ಸಿಗಲಿ ಎಂದು ಹೆಚ್ಚಿನ ಪ್ರಮಾಣದಲ್ಲಿ ಪದೇ ಪದೇ 'ಓವರ್‌ ಡೋಸ್‌" ಮಿಶ್ರಣ ಮಾಡಿ ಸಿಂಪಡಿಸಬಾರದು. ತರಕಾರಿ ಹಣ್ಣುಗಳ ಕೊಯ್ಲಿಗೆ ಮೊದಲು ಇವನ್ನು ಸಿಂಪಡಿಸಕೂಡದು. ಕೀಟ ನಾಶಕಗಳಲ್ಲಿ 'ಕಾಂಟಾಕ್ಟ್‌" ಮತ್ತು 'ಸಿಸ್ಟೆಮಿಕ್‌" ಕೀಟನಾಶಕಗಳು ಎಂದು ಎರಡು ವಿಧ. 'ಕಾಂಟಾಕ್ಟ್‌" ಕೀಟನಾಶಕ ಕೀಟಕ್ಕೆ ಸೋಂಕಿದೊಡನೆ ಅದನ್ನು ಕೊಲ್ಲುತ್ತದೆ. 'ಸಿಸ್ಟೆಮಿಕ್‌" ಕೀಟನಾಶಕ ಸಸ್ಯವನ್ನೇ ವಿಷವಾಗಿಸುತ್ತದೆ. ಇದರ ವಾಸನೆ ಹಾಗೂ ಇರವು ಮನುಷ್ಯನಿಗಾಗಲೀ ಕೀಟಕ್ಕಾಗಲೀ ಮೇಲ್ನೋಟಕ್ಕೆ ಗೊತ್ತಾಗುವುದಿಲ್ಲ. ಎರಡನೆಯ ದರ್ಜೆಯದು ತುಂಬಾ ಅಪಾಯಕಾರಿ. ಇಂದಿನ ಹಲವು 'ಅತೀ ಪರಿಣಾಮಕಾರೀ ಕೀಟನಾಶಕಗಳು" ಇವೆರಡೂ ದರ್ಜೆಯ ವಿಷವಸ್ತುಗಳ ಮಿಶ್ರಣ.

ದೊಡ್ಡ ಫಸಲಿನ ಆಸೆಯಿಂದ 'ವಿಷಶೇಷ" ರೈತರಾಗಬೇಡಿ
ರೈತ ತನ್ನ ಉಳಿವಿಗಾಗಿ ಮತ್ತು ಒಳ್ಳೆಯ ಬೆಳೆ ತೆಗೆಯಬೇಕೆಂಬ ಇರಾದೆಯಿಂದ ಉತ್ತಮ ಹೈಬ್ರಿಡ್‌ ಬೀಜ ತಂದು, ಬೀಜ ಕಂಪನಿಯವರು ತಿಳಿಸಿದ ರೀತ್ಯ ರಾಸಾಯನಿಕ ಬಳಕೆ ಮಾಡಿ ಬೆಳೆ ತೆಗೆಯುವ ಪ್ರಯತ್ನ ಮಾಡುತ್ತಾನೆ. ನಾಟಿ ತಳಿಗಳಿಗೆ ರೋಗ ಹಾಗೂ ಕೀಟ ನಿರೋಧಕ ಶಕ್ತಿ ನಿಸರ್ಗದತ್ತವಾಗಿ ಇರುತ್ತದೆ. ಇವು ಹೆಚ್ಚಿನ ಪೋಷಣೆ ಬೇಡದೆ ಸಾಮಾನ್ಯ ಫಸಲು ನೀಡುತ್ತವೆ. ಇವನ್ನು ಬೆಳೆದವನಿಗೆ ಲಾಭ ಮಾತ್ರ ಕಡಿಮೆ. ಆದ್ದರಿಂದ ರೈತ ಈ ದುಬಾರಿ ಕಾಲದಲ್ಲಿ ದೊಡ್ಡ ಫಸಲನ್ನು ನಿರೀಕ್ಷಿಸುತ್ತಾ ಸಾಲ ಸೋಲ ಮಾಡಿ ಹೈಬ್ರಿಡ್‌ ಅಥವಾ ಸುಧಾರಿತ ತಳಿಗಳನ್ನು ಬೆಳೆಸುವ ಯತ್ನಮಾಡುತ್ತಾನೆ. ಈ ಸುಧಾರಿತ ತಳಿಗಳಿಗಳಿಗೆ ಕೀಟ ಹಾಗೂ ರೋಗ ಬಾಧೆ ಜಾಸ್ತಿ. ಬಿತ್ತಿದ ನಂತರ ಬೆಳೆ ಉಳಿಸಿಕೊಳ್ಳಲು ಮನಸ್ಸಿಲ್ಲದಿದ್ದರೂ ಅವನು ಬೆಳೆಗೆ ಸ್ಪ್ರೇ ಮಾಡಲೇಬೇಕು !

ಇದಕ್ಕೆ ಪೂರಕವಾಗಿ ಕೆಲವು ಲಾಭಬಡುಕ ವ್ಯಾಪರಸ್ಥರು ಬೇಕಿದ್ದಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಕೀಟನಾಶಕ ಹಾಗೂ ರೋಗನಾಶಕಗಳನ್ನು ರೈತನಿಗೆ ಮಾರಲು ಪ್ರಯತ್ನಿಸುತ್ತಾರೆ. ನಿರಕ್ಷರಿ ಅಥವಾ ಹೆಚ್ಚಿನ ಓದಿಲ್ಲದ ಬಡ ರೈತನು ನಿರುಪಾಯನಾಗಿ ಅವನ್ನು ಬಳಸಲೇ ಬೇಕಾಗುತ್ತದೆ. ಅದಲ್ಲದೆ ಈ ಕ್ರಿಮಿ ನಾಶಕಗಳ ಬಳಕೆಯ ಬಗ್ಗೆ ಪದೇ ಪದೇ ಆಕಾಶವಾಣಿ ಕಾರ್ಯಕ್ರಮಗಳಲ್ಲಿ ಬರುವ ಸಲಹೆಗಳನ್ನು ಕೇಳಿ ಮರುಳಾಗಿಯೂ ಇರುತ್ತಾನೆ. ಸಮಾಧಾನಕರ ಪರಿಣಾಮ ಕಾಣದಿದ್ದರೆ ಅವನ್ನೇ ಇನ್ನೊಂದು ಸುತ್ತು ಬಳಸುತ್ತಾನೆ.

ಈ ವಿಷಗಳ ಘೋರ ಪರಿಣಾಮ ನಮ್ಮ ಮುಗ್ಧ ರೈತಸಮುದಾಯಕ್ಕೆ ಖಂಡಿತಾ ತಿಳಿದಿಲ್ಲ. ಕೆಲವು ವ್ಯಾಪಾರೀ ಜನರು ಈ ದುಷ್ಪರಿಣಾಮಗಳ ಬಗ್ಗೆ ಸೊಲ್ಲೆತ್ತದೇ, 'ಈ ಔಷಧ ಹೊಡೆದು ನೋಡು ಬೋರಣ್ಣಾ ! ಕೀಟಗಳು ಕೂಡಲೇ ನಾಶವಾಗುತ್ತವೆ. ಇದರಿಂದ ನಿನಗಾಗಲೀ, ನೀನು ಕೊಯ್ಯುವ ಫಸಲಿಗಾಗಲೀ ಯಾವ ಕೆಟ್ಟ ರಾಸಾಯನಿಕ ಪರಿಣಾಮವೂ ಉಂಟಾಗುವುದಿಲ್ಲ. ಮೊದಲು ನಿನ್ನ ಬೆಳೆಯನ್ನು ಕೀಟಗಳಿಂದ ಉಳಿಸಿಕೊಳ್ಳಬೇಕಾದರೆ ಸಿಂಪಡಿಸು. ಊರವರೆಲ್ಲಾ ಸಿಂಪಡಿಸುತ್ತಿದ್ದಾರೆ - ನೀನೂ ಸಿಂಪಡಿಸು" ಎನ್ನುವರೇ ಹೊರತು, ' ಈ ರಾಸಾಯನಿಕಗಳ ಶೇಷ ಉಳಿಯುವಿಕೆಯ ಬಗ್ಗೆ ಅಥವಾ ಬಳಸುವಾಗಿನ ಮುಂಜಾಗ್ರತಾ ಕ್ರಮಗಳ ಬಗ್ಗೆ ರೈತರಿಗೆ ಯಾವ ರೀತಿಯ ತಿಳುವಳಿಕೆ ಅಥವಾ ಮುಂಜಾಗ್ರತೆಯನ್ನು ಸಾಮಾನ್ಯವಾಗಿ ನೀಡುವುದಿಲ್ಲ. ಹೀಗಾಗಿ ನಮ್ಮ ರೈತ ತನಗೆ ಅರಿವಿಲ್ಲದ್ದಂತೆ ಈ ರಾಸಾಯನಿಕ ಕೃಷಿ ಪದ್ಧತಿಯ ಬಲೆಗೆ ಬೀಳುತ್ತಾನೆ.

ಸಾವಯವ ಕೃಷಿಯೇ ಚೆನ್ನ, ಬಿಸಾಕು ರಾಸಾಯನಿಕವನ್ನ !
ನಮ್ಮ ರೈತರಿಗೆ ತಾವು 'ವಿಷಪೂರಿತ ಹಣ್ಣು ತರಕಾರಿಗಳನ್ನು ಬೆಳೆದು ಮಾರುತ್ತಿದ್ದೇವೆ " ಎಂಬ ಕಲ್ಪನೆ ಕೂಡಾ ಇಲ್ಲ. ನಮ್ಮ ರೈತರು ಈ ವಿಚಾರದಲ್ಲಿ ಅಮಾಯಕರು. 'ಏನೂ ಅರಿಯದ ಹಸುಳೆ ಸಚಿನ್‌ ಅಥವಾ ನರಹರಿ ಅವರಂಥಹ ಅಮಾಯಕರಿಗೆ ವಿಷ ಉಣ್ಣಿಸುವಂತಹ ಕಟುಕರು ಅವರಲ್ಲ ". ಈ ರಾಸಾಯನಿಕ ವಿಷಶೇಷದ ಪರಿಣಾಮದಿಂದ ಹೀಗಾಗುತ್ತದೆ ಎಂಬ ಅರಿವೂ ಅವರಿಗಿಲ್ಲ. ಸರಿಯಾದ ತಿಳುವಳಿಕೆ ಅವರುಗಳಿಗೆ ಇಲ್ಲದುದೇ ಇದಕ್ಕೆಲ್ಲಾ ಕಾರಣ.

ಅಂತೂ ವೈಜ್ಞಾನಿಕ ರೀತಿಯಲ್ಲಿ ಈ ಕೀಟ ಹಾಗೂ ರೋಗನಾಶಕ ರಾಸಾಯನಿಕಗಳು ನಮ್ಮಲ್ಲಿ ಉಪಯೋಗಿಸಲ್ಪಡುತ್ತಿಲ್ಲ. ಈ ಬಗ್ಗೆ ನಮ್ಮ ಕೃಷಿ ಇಲಾಖೆ ಹಾಗೂ ವಿಜ್ಞಾನಿಗಳು ತಕ್ಕ ನಿರ್ದೇಶನವನ್ನು ರೈತ ಸಮುದಾಯಕ್ಕೆ ಕೊಡಲೇ ಬೇಕು. ವಿಷಪೂರಿತ ರಾಸಾಯನಿಕಗಳನ್ನು ಬಳಸುವಾಗ ಕೈಗೊಳ್ಳಬೇಕಾದ ಮುಂಜಾಗ್ರತೆ ಹಾಗೂ ರಾಸಾಯನಿಕಗಳ ದುಷ್ಪರಿಣಾಮಗಳ ಬಗ್ಗೆ ನಮ್ಮ ನಾಡಿನ ರೈತರು ತಿಳಿದುಕೊಳ್ಳಲೇ ಬೇಕು.

ರಾಸಾಯನಿಕ ಬೇಸಾಯದ ಕೆಟ್ಟ ಪರಿಣಾಮಗಳನ್ನು ಮನಗಂಡು ನಮ್ಮ ರೈತ ಸಮುದಾಯ 'ಸಾವಯವ" ಕೃಷಿಯತ್ತ ಸಾಗಲೇ ಬೇಕಾದ ದಿನಗಳು ಸನ್ನಿಹಿತವಾಗಿವೆ. ನೈಸರ್ಗಿಕ ಕೀಟನಾಶಕಗಳು ಹಾಗೂ ಸಾವಯವ ಗೊಬ್ಬರಗಳ ಉಪಯೋಗದ ಬಗ್ಗೆ ನಮ್ಮ ರೈತ ಆಲೋಚಿಸಬೇಕು. ರೋಗ ಹಾಗೂ ಕೀಟ ನಿರೋಧಕ ಶಕ್ತಿಯುಳ್ಳ ಸಾಂಪ್ರದಾಯಿಕ ಬೆಳೆಗಳತ್ತ ಒಲವು ತೋರಬೇಕು.

'ಹೊಸಾ ಬೀಜಗಳ ಬೆನ್ನತ್ತಿ ಸಾಲ ಸೋಲ ಮಾಡಿ ರಾಸಾಯನಿಕ ಬೆಳೆ ಬೆಳೆದು ಕೊನೆಗೆ ತನ್ನ ಕೈಯಲ್ಲಿ ಎಷ್ಟು ಉಳಿಯುತ್ತೆ ?" ಎಂಬ ಬಗ್ಗೆ ಆಲೋಚಿಸಿದರೆ ಆತ ಖಂಡಿತವಾಗಿ ಸಾವಯವ ಕೃಷಿಯತ್ತ ಒಲವು ಹರಿಸಿ ಎಲ್ಲರಿಗೂ ಆರೋಗ್ಯಕರವಾದ ತರಕಾರಿ ಹಣ್ಣು ಬೆಳೆದು ಕೊಡುವ ಪ್ರಯತ್ನ ಮಾಡುತ್ತಾನೆ.ನಾನ್ಯಾಕೆ ನನ್ನ ಹೆಗಲು ಮುಟ್ಟಿಕೊಂಡೆ ಅಂತ ಈಗ ಗೊತ್ತಾಯಿತೇ?

English summary
Why more vegetables and fruits these days have pesticides? Madhusudana Pajathaya writes...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X