ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುದುರೆಮುಖ ಗಣಿಗಾರಿಕೆಗೆ ಜೀವದಾನಕ್ಕೆಪರಿಸರವಾದಿಗಳ ಒಪ್ಪಿಗೆ

By Super
|
Google Oneindia Kannada News

ಬೆಂಗಳೂರು : ಕುದುರೆಮುಖ ಕಬ್ಬಿಣ ಅದಿರು ಕಂಪನಿ(ಕೆಐಒಸಿಎಲ್‌)ಗೆ 5 ವರ್ಷಗಳ ಕಾಲ ಗಣಿಗಾರಿಕೆ ಮುಂದುವರೆಸಲು ಅವಕಾಶ ನೀಡಿ ಆನಂತರ ಕಂಪನಿಯನ್ನು ಮುಚ್ಚುವಂತೆ ಹೇಳಿರುವ ಕೇಂದ್ರ ಸರ್ಕಾರದ ಸೂಚನೆಯನ್ನು ಒಪ್ಪಿಕೊಳ್ಳಲು ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಅವರನ್ನು ಗಣಿಗಾರಿಕೆ ವಿರೋಧಿ ಆಂದೋಲನದ ಮೊದಲ ಪಂಕ್ತಿಯಲ್ಲಿ ಗುರುತಿಸಿಕೊಂಡಿರುವ ಮೂವರು ಗಣ್ಯರು ಒತ್ತಾಯಿಸಿದ್ದಾರೆ.

ಈ ಕುರಿತು ಹಿರಿಯ ಸಾಹಿತಿ ಕೆ.ಪಿ. ಪೂರ್ಣಚಂದ್ರ ತೇಜಸ್ವಿ, ಪರಿಸರ ವಿಜ್ಞಾನಿ ಡಾ.ಕೆ.ಉಲ್ಲಾಸ್‌ ಕಾರಂತ್‌ ಹಾಗೂ ಗುಡ್ಡಗಾಡು ಜನರ ಏಳಿಗೆಗಾಗಿ ದುಡಿಯುತ್ತಿರುವ ಡಾ.ಎಚ್‌.ಸುದರ್ಶನ್‌ ಅವರು ಮುಖ್ಯಮಂತ್ರಿಗಳಿಗೆ ಬರೆದಿರುವ ಪತ್ರವನ್ನು ಸೋಮವಾರ ಸುದ್ದಿಗೋಷ್ಠಿಯಲ್ಲಿ ಬಿಡುಗಡೆ ಮಾಡಲಾಯಿತು.

ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಗಣಿಗಾರಿಕೆ ಮುಂದುವರಿಸದಂತೆ ಸುಪ್ರೀಂ ಕೋರ್ಟ್‌ ಕೇಂದ್ರ ಸರಕಾರಕ್ಕೆ ಆದೇಶಿಸಿದ್ದರೂ, ಐದು ವರ್ಷಕ್ಕಿಂತ ಕಡಿಮೆ ಅವಧಿಯ ಗಣಿಗಾರಿಕೆಗೆ ಅವಕಾಶ ನೀಡುವುದಾಗಿ ಕೇಂದ್ರ ಸರಕಾರ ಭರವಸೆ ನೀಡಿರುವುದನ್ನು ಪತ್ರದಲ್ಲಿ ಸ್ಮರಿಸಲಾಗಿದ್ದು , ಪ್ರಕರಣದ ಬಗೆಗಿನ ತನ್ನ ನಿಲುವು ಕುರಿತಂತೆ ರಾಜ್ಯ ಸರ್ಕಾರ ಸುಪ್ರಿಂಕೋರ್ಟ್‌ಗೆ ಅಫಿಡವಿಟ್‌ ಸಲ್ಲಿಸಬೇಕು ಎಂದು ತಿಳಿಸಿದೆ.

ಇಷ್ಟು ಮಾತ್ರವಲ್ಲದೆ, ರಾಷ್ಟ್ರೀಯ ಉದ್ಯಾನವನಕ್ಕೆ ಸೇರಿದ 1750 ಹೆಕ್ಟೇರ್‌ ಪ್ರದೇಶವನ್ನು ನೋಟಿಫೈ ಮಾಡುವಂತೆ ರಾಜ್ಯ ಸರಕಾರಕ್ಕೆ ಮನವಿ ಮಾಡಿಕೊಳ್ಳುವುದಾಗಿ ಕೇಂದ್ರ ಸರ್ಕಾರ ಭರವಸೆ ನೀಡಿರುವುದನ್ನು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಕುದುರೆಮುಖ ಕಂಪೆನಿಗೆ ನೀಡುವ ಕೊನೆಯ ಹಂತದ ಗಣಿಗಾರಿಕಾ ಅವಧಿ ಮುಗಿಯುತ್ತಲೇ ಪ್ರಸ್ತುತ ಗಣಿಗಾರಿಕೆ ಆರಂಭಿಸಿರುವ 1452 ಹೆಕ್ಟೇರ್‌ ಪ್ರದೇಶವನ್ನು ರಾಷ್ಟ್ರೀಯ ಉದ್ಯಾನವನ ಪ್ರದೇಶಕ್ಕೆ ಸೇರಿಸುವಂತೆ ಸರಕಾರವನ್ನು ಒತ್ತಾಯಿಸಲಾಗಿದೆ.

ಕುದುರೆಮುಖ ಕಂಪೆನಿಗೆ ಗಣಿಗಾರಿಕೆ ಗುತ್ತಿಗೆ ಅವಧಿ ವಿಸ್ತರಿಸುವುದನ್ನು ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಯ ನಿವಾಸಿಗಳು, ಪರಿಸರವಾದಿಗಳು ಹಾಗೂ ಗಣ್ಯರು ವಿರೋಧಿಸುತ್ತ ಬಂದಿದ್ದರು. ಮೂರು ವರ್ಷಗಳ ಹಿಂದೆ ಕಂಪೆನಿಗೆ ನೀಡಿದ್ದ ಗುತ್ತಿಗೆ ಅವಧಿ ಮುಗಿದಿದ್ದು ಪ್ರತಿವರ್ಷ ಗುತ್ತಿಗೆಯ ನವೀಕರಣ ನಡೆಯುತ್ತಲೇ ಬಂದಿದೆ.

English summary
Ullas karanth, k.p. poornachandra thejasvi and Dr. h. sudharshan have urged Chief Minister S M Krishna to agree to the Centres suggestion to extend the lease of the Kudremukh Iron Ore Company Limited
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X