ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪತ್ತೇದಾರಿ ಕಾದಂಬರಿ: ಮೊಬೈಲ್ ಕಳ್ಳ ಸಿಕ್ಕಿಬಿದ್ದ!

ಒಂದು ಗಂಟೆಯೊಳಗೆ ನನ್ನ ಮನೆಗೆ ಬಂದ, ನಂತರ ಇಬ್ಬರೂ ಸೇರಿ ಒಬ್ಬ ಹೆಂಗಸು ಪೇದೆಯೊಂದಿಗೆ ಅವರ ಮನೆಗೆ ಹೋದೆವು. ದಾರಿಯಲ್ಲಿ ಶ್ರೇಯಸ್ ಮೋಸ ಮಾಡಿದ್ದ ಹುಡುಗಿ ಸರಳಾ ಬಗ್ಗೆ ಹುಡುಕಿದ್ದ ಮಾಹಿತಿಯನ್ನು ಹೇಳಿದ.

By ಬಸವರಾಜ್ ಕಂಠಿ
|
Google Oneindia Kannada News

ಕಂತು 3:
ಒಂದು ದಿನ ಕಳೆದಿತ್ತು. ಭೈರೇಗೌಡ ಪೋನ್ ಮಾಡಿ ಮೊಬೈಲ್ ಕಳ್ಳ ಸಿಕ್ಕ ಬಗ್ಗೆ ಹೇಳಿದ. ನನಗೆ ತುಂಬಾ ಖುಷಿಯಾಯ್ತು.

"ಸರ್... ನಿನ್ನೆ ಒಬ್ಬನ್ನ ಎಚ್.ಎ.ಎಲ್ ಸ್ಟೇಷನ್ ನಲ್ಲಿ ಎನ್ಕ್ವೈರಿ ಮಾಡ್ದಾಗ ಮೊಬೈಲ್ ಕದ್ದು, ಒಬ್ಳು ಹುಡುಗಿಗೆ ಮಾರಿದ್ದಾಗಿ ಒಪ್ಕೊಂಡಿದಾನೆ. ಆದ್ರೆ ಅವನೂ ಅವಳ ಮುಖ ನೋಡಿಲ್ವಂತೆ. ಮುಖಕ್ಕೆ ಬಟ್ಟೆ ಕಟ್ಕೊಂಡೇ ಬಂದು ದುಡ್ಡು ಕೊಟ್ಟು ಫೋನ್ ತಗೊಂಡು ಹೋಗ್ತಾ ಇದ್ಳು ಅಂತಾ ಹೇಳ್ದ".

"ಅವರಿಬ್ಬರ ಪರಿಚಯ ಹೇಗ್ ಆಯ್ತಂತೆ?"

"ನಾನೂ ಕೇಳ್ದೆ ಸರ್. ಇವ್ನು ಮನೆ ಹತ್ರ ಇರೋ ಅಂಗಡಿಯಲ್ಲಿ ಟೀ ಕುಡಿಯುವಾಗ ಅವಳೇ ಬಂದು ಮಾತಾಡ್ಸಿದಳಂತೆ. ಒಳ್ಳೇ ದುಡ್ ಕೊಡ್ತೀನಿ, ನಾನು ಹೇಳಿದಾಗೆಲ್ಲಾ ಕದ್ದು ಕೊಡಬೇಕು ಅಂತಾ ಹೇಳಿ, ಸ್ವಲ್ಪ ಅಡ್ವಾನ್ಸ್ ಕೂಡ ಕೊಟ್ಳಂತೆ. "

"ಅವ್ಳು ಅವನಿಗೆ ಫೋನ್ ನಂಬರ್ ಏನಾದ್ರೂ ಕೊಟ್ಟಿದ್ಳಂತಾ?"

Mobile

"ಇಲ್ಲಾ ಸರ್. ಬೇಕಾದಾಗೆಲ್ಲಾ ಅವಳೇ ಅವನ ಮೊಬೈಲ್ ಗೆ ಕಾಲ್ ಮಾಡ್ತಿದ್ಳಂತೆ. ನಾನೂ ಅವನ ಮೊಬೈಲ್ ಚೆಕ್ ಮಾಡ್ದೆ. ಎಲ್ಲಾ ಪಬ್ಲಿಕ್ ಫೋನಿನಿಂದ ಬಂದವು".

"ಸರಿ... ಅವ್ನು ಯಾವಾಗೆಲ್ಲಾ ಮೊಬೈಲು ಕದ್ದು ಕೊಟ್ಟಿದ್ದಾನೆ ಅಂತಾ ಡಿಟೇಲ್ಸ್ ತಗೊಳ್ಳಿ", ಎಂದು ಕರೆ ಮುಗಿಸಿದೆ.

ಅವತ್ತು ಸಂಜೆ ಆ ವಿವರಗಳನ್ನು ನನಗೆ ಮಿಂಚಂಚೆ ಮೂಲಕ ಭೈರೇಗೌಡ ಕಳಿಸಿಕೊಟ್ಟ. ಮೊದಲನೇ ಕೊಲೆಗೆ ಕದ್ದು ಕೊಟ್ಟಿರುವ ದಿನಗಳು ಅವನಿಗೆ ನೆನಪಿರಲಿಲ್ಲವಂತೆ. ಎರಡನೆಯದು ಹೀಗಿತ್ತು:

1. ಕೊಲೆಗಿಂತ ಹನ್ನೆರಡು ದಿನಗಳ ಹಿಂದೆ.
2. ಕೊಲೆಗಿಂತ ಹತ್ತು ದಿನಗಳ ಹಿಂದೆ.
3. ಕೊಲೆಗಿಂತ ಎಂಟು ದಿನಗಳ ಹಿಂದೆ.
4. ಕೊಲೆಯಾದ ಎರಡು ದಿನಗಳ ಹಿಂದೆ.

ಎಂಟು ಮತ್ತು ಎರಡು ದಿನಗಳ ನಡುವೆ ಕಳ್ಳನಿಗೆ ಹುಷಾರಿರಲಿಲ್ಲವಂತೆ. ನಾನು ಇದನ್ನು ಓದುತ್ತಿದ್ದಂತೆಯೇ ಭೈರೇಗೌಡ ಕರೆ ಮಾಡಿದ.

"ಸರ್, ನನ್ ಈಮೇಲ್ ಸಿಕ್ತಾ?"

"ಸಿಕ್ತು. ನಾನು ಒಂದ್ಸರಿ ರಶ್ಮಿಯ ತಂಗಿ, ನೇತ್ರಾ ಜೊತೆ ಮಾತಾಡ್ಬೇಕು. ಹಾಗೇ ಅವರಿಬ್ಬರ ರಕ್ತ, ಮತ್ತು ಫಿಂಗರ್ ಪ್ರಿಂಟ್ಸ್ ಕೂಡ ತೆಗೆದ್ಕೊಳ್ಳೋ ವ್ಯವಸ್ಥೆ ಮಾಡಿ", ಎಂದೆ.

"ಆಯ್ತು ಸರ್. ನಾನು ಈಗ್ಲೇ ಅಲ್ಲಿಗ್ ಬರ್ತೀನಿ, ಒಟ್ಟಿಗೆ ಹೋಗೋಣ".

ಒಂದು ಗಂಟೆಯೊಳಗೆ ನನ್ನ ಮನೆಗೆ ಬಂದ, ನಂತರ ಇಬ್ಬರೂ ಸೇರಿ ಒಬ್ಬ ಹೆಂಗಸು ಪೇದೆಯೊಂದಿಗೆ ಅವರ ಮನೆಗೆ ಹೋದೆವು. ದಾರಿಯಲ್ಲಿ ಶ್ರೇಯಸ್ ಮೋಸ ಮಾಡಿದ್ದ ಹುಡುಗಿ ಸರಳಾ ಬಗ್ಗೆ ಹುಡುಕಿದ್ದ ಮಾಹಿತಿಯನ್ನು ಹೇಳಿದ. ಅವಳು ಒಂದು ಮದುವೆಯಾಗಿ ಈಗ ಹೈದರಾಬಾದಿನಲ್ಲಿ ಇದ್ದಳಂತೆ, ಅವಳ ಬಗ್ಗೆ ಅನುಮಾನ ಬೇಡ ಎಂದ. ನಾನು ಒಪ್ಪಿದೆ.

ರಶ್ಮಿ ಮನೆಗೆ ತಲುಪುವ ಹೊತ್ತಿಗೆ ರಾತ್ರಿ ಎಂಟಾಗಿತ್ತು. ನಾವು ಅವರ ಅಪಾರ್ಟ್ ಮೆಂಟಿನ ಮುಂದೆ ಗಾಡಿ ನಿಲ್ಲಿಸಿದಾಗ, ರಶ್ಮಿ ತನ್ನ ತಂಗಿಯ ಜೊತೆ ಕಾರಿನಲ್ಲಿ ಹೊರಗೆ ಹೋಗುವುದನ್ನು ಕಂಡು ಅವರನ್ನು ತಡೆದೆವು. ರಶ್ಮಿಗೆ ನಮ್ಮನ್ನು ನೋಡಿ ಅಚ್ಚರಿಯಾಯಿತು. ನಾನು ಬಂದ ಕಾರಣ ತಿಳಿಸಿದೆ. ಅವಳು ಕಾರನ್ನು ನಿಲುಗಡೆಯಲ್ಲಿ ಇರಿಸಿ, ನಮ್ಮನ್ನು ತನ್ನ ಮನೆಗೆ ಕರೆದುಕೊಂಡು ಹೋದಳು.

"ರೂಪಾ ಎಲ್ಲಿ?" ನಾನು ಕೇಳಿದೆ,

"ಅವಳು ಯಾವ್ದೋ ಪಾರ್ಟಿ ಇದೆ ಅಂತಾ ಹೋಗಿದ್ದಾಳೆ".

"ನಿಮ್ಮ ತಂಗಿಯನ್ನಾ ಒಂದೆರಡು ಪ್ರಶ್ನೆ ಕೇಳಬಹುದಾ?", ಎಂದೆ. "ಲೇಡಿ ಕಾನ್ ಸ್ಟೇಬಲ್ ಕರಕೊಂಡು ಬಂದಿದೀವಿ", ಮುಗುಳ್ನಕ್ಕೆ.

ಅವಳೂ ಮುಗುಳ್ನಕ್ಕಳು. ನಾವೆಲ್ಲಾ ಮನೆಯೊಳಗೆ ಬಂದ ಮೇಲೆ ನೇತ್ರಾ ತನ್ನ ಕೋಣೆಗೆ ಹೋಗಿದ್ದಳು. ಅವಳನ್ನ ಕರೆದುಕೊಂಡು ಬರ್ತೀನಿ ಅಂತಾ ರಶ್ಮಿ ಎದ್ದು ಕೋಣೆಯೆಡೆಗೆ ನಡೆದಳು. ಇದರ ನಡುವೆ ನಾನು ಸುತ್ತಲೂ ಕಣ್ಣು ಹಾಯಿಸಿದೆ. ಕಳೆದ ಬಾರಿ ಬಂದಾಗ ಮೇಜಿನ ಮೇಲೆ ನೋಡಿದ್ದ ಸ್ತೀವಾದಿ ಹೊತ್ತಗೆಗಳ ಜೊತೆ ಓಪ್ರಾ ಅವರ ಚಿತ್ರವೂ ಮಾಯವಾಗಿತ್ತು. ನನಗೆ ತುಸು ಗೊಂದಲವಾಗಿ ಯಾಕಿರಬಹುದು ಎಂದು ಯೋಚಿಸಿದೆ. ಅಷ್ಟರಲ್ಲಿ ರಶ್ಮಿ, ನೇತ್ರಾಳ ಜೊತೆ ಬಂದಳು.

"ನಿನ್ನ ಹೆಸರೇನಮ್ಮಾ?" ಅವಳ ಮಾತಿನ ಲಹರಿಯನ್ನು ತಿಳಿದುಕೊಳ್ಳಲು ಕೇಳಿದೆ.

"ನೇತ್ರಾ", ಎಂದಳು ಮುಗುಳ್ನಗುತ್ತಾ. ಮುದ್ದಾದ ಮುಖ, ನಗು.

"ಈ ಹುಡುಗನ್ನ ಎಲ್ಲಾದ್ರೂ ನೋಡಿದೀಯ?", ಹರೀಶನ ಚಿತ್ರವನ್ನು ತೋರಿಸಿದೆ.

ಅವಳು, "ಇಲ್ಲಾ", ಎಂದು ತಲೆ ಅಲ್ಲಾಡಿಸಿದಳು.

ಭೈರೇಗೌಡ ಫೌಂಡೇಷನ್ ಡಬ್ಬಿ ಹೊರತೆಗೆದು ತೋರಿಸಿದ, "ಇದು ನಿಂದಾ ನೇತ್ರಾ?"

ಅವಳು ಆಕಳಿಸುತ್ತಾ, "ಇಲ್ಲಾ", ಎಂದಳು.

"ತುಂಬಾ ನಿದ್ದೆ ಬರ್ತಿದ್ಯಾ?" ನಾನು ಕೇಳಿದೆ.

"ಹೂಂ... ದಿನಾ ಇಷ್ಟೊತ್ತಿಗೆ ಮಲಗಿ ಬಿಡ್ತಾ ಇದ್ದೆ".

"ಇಷ್ಟ್ ಬೇಗಾನಾ?"

"ಹೂಂ... ನಾನು ಏಳು ಗಂಟೆಗೆಲ್ಲಾ ಊಟ ಮಾಡಿ ಮಲಗ್ ಬಿಡ್ತೀನಿ, ಬೆಳಗ್ಗೆ ಬೇಗಾ ಏಳ್ಬೇಕಲ್ವಾ"

"ಯಾಕೆ ಏಳ್ಬೇಕು?"

"ಅಕ್ಕ ನಂಗೆ ಯೋಗಾಸನ ಮಾಡಿಸ್ತಾಳೆ", ಅಂದ್ಳು. ರಶ್ಮಿ ಮುಗುಳ್ನಕ್ಕಳು. ಅವಳ ಲಾಯರ್ ಗಿರಿ ಯಾಕೋ ಮಾಯವಾಗಿತ್ತು.

"ನಮಗೆ ಡಿ.ಎನ್.ಎ. ಟೆಸ್ಟ್ ಮಾಡೋದಕ್ಕೆ ನಿಮ್ಮ ಬ್ಲಡ್ ಸ್ಯಾಂಪಲ್ ಬೇಕು", ಎಂದೆ.

ಭೈರೇಗೌಡ ನನ್ನ ಮಾತು ಮುಂದುವರೆಸಿದ, "ನೀವಿಬ್ರೂ ವಿಕ್ಟೋರಿಯಾ ಹಾಸ್ಪಿಟಲ್ ಬರಬೇಕಾಗುತ್ತೆ."

"ಈಗ್ಲೆನಾ?"

"ಹೌದು. ಇದು ಅರ್ಜೆಂಟ್"

ರಶ್ಮಿ ಒಂದೆರಡು ಕ್ಷಣ ಯೋಚಿಸಿ, "ಸರಿ", ಎಂದಳು. ಭೈರೇಗೌಡ ಅವರನ್ನು ಕರೆದುಕೊಂಡು ಆಸ್ಪತ್ರೆಗೆ ಹೊರಟ. ನಾನು ಆಟೋ ಹಿಡಿದುಕೊಂಡು ಮನೆಗೆ ಹೊರಟೆ.
ಮುಂದುವರಿಯುವುದು

English summary
'Tabbaliyu neenade magale'-A murder mystery story by Basavaraj Kanthi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X